ADVERTISEMENT

ರಂಗದ ಮೇಲೆ ರಾಜಕುಮಾರಿ!

ಮಂಜುಶ್ರೀ ಎಂ.ಕಡಕೋಳ
Published 8 ಜೂನ್ 2018, 19:30 IST
Last Updated 8 ಜೂನ್ 2018, 19:30 IST
‘ದಿ ಟೇಲ್ ಆಫ್ ಕ್ವಾರೆಲ್ಸ್’ ನಾಟಕದ ದೃಶ್ಯ
‘ದಿ ಟೇಲ್ ಆಫ್ ಕ್ವಾರೆಲ್ಸ್’ ನಾಟಕದ ದೃಶ್ಯ   

ಅರಮನೆಯ ಸುಖದ ಸುಪ್ಪತ್ತಿಗೆ, ಆಳು–ಕಾಳು ಇದ್ದರೂ ಮುಷ್ಟಿಯಷ್ಟು ಪ್ರೀತಿಗಾಗಿ ಹಂಬಲಿಸಿದವಳು ರಾಜಕುಮಾರಿ ಡಯಾನಾ. ಪ್ರಿನ್ಸ್ ಚಾರ್ಲ್ಸ್‌ ಜತೆಗಿನ ಮಧುರ ಕ್ಷಣಗಳ ಜತೆಗೆ ದಾಂಪತ್ಯದ ಕಹಿಯನ್ನೂ ಉಂಡಾಕೆ. ಅಪ್ರತಿಮ ಚೆಲುವು ಮತ್ತು ಸಾಮಾಜಿಕ ಕಳಕಳಿಯ ಕಾರಣಕ್ಕಾಗಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದ ಆಕೆ ಪ್ರೀತಿಯ ಅರಸುತ್ತಲೇ ದುರಂತ ಸಾವಿಗೀಡಾದವಳು. ಡಯಾನಾ ಸಾವಿಗೀಡಾಗಿ ಎರಡು ದಶಕಗಳೇ ಕಳೆದರೂ ಅವಳ ಕುರಿತು ಸುದ್ದಿಗಳಿಗೆ ಬರವಿಲ್ಲ. ಅದರ ಮುಂದುವರಿದ ಭಾಗವೆಂಬಂತೆ ನಿವೃತ್ತ ಐಎಎಸ್ ಅಧಿಕಾರಿ ವೀಣಾ ಎಸ್. ರಾವ್ ರಚಿಸಿರುವ ‘ದಿ ಟೇಲ್ ಆಫ್ ಕ್ವಾರಲ್ಸ್‌’– ದಿ ಪ್ರಿನ್ಸ್ ಹೂ ಫೇಲ್ಸ್ ಕೃತಿಯಾಗಿ ರಂಗರೂಪವಾಗಿದೆ.

ಬೆಂಗಳೂರಿನಲ್ಲಿ ನೆಲೆಸಿರುವ ವೀಣಾ ಅವರಿಗೆ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿದ್ದು ಕಾಲೇಜು ದಿನಗಳಲ್ಲಿ. ವೃತ್ತಿಯ ನಡುವೆ ಸಾಹಿತ್ಯ ಕೃಷಿಯತ್ತ ಗಮನ ಕೊಡಲಾಗಲಿಲ್ಲ ಎನ್ನುವ ಅವರು ಎರಡು ವರ್ಷಗಳ ಹಿಂದೆ ಮೊದಲ ಕಾದಂಬರಿ ಪ್ರಕಟಿಸಿದ್ದಾರೆ. ‘ದಿ ಟೇಲ್ ಆಫ್ ಕ್ವಾರಲ್ಸ್‌’ ನಾಟಕ, ವೀಣಾ ಅವರ ಎರಡನೇ ಕೃತಿ.

‘ನಾನು ಕೊಡಗು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ, ಅಂದರೆ ಮೂರು ದಶಕಗಳ ಹಿಂದೆ ಇಂಗ್ಲೆಂಡ್‌ನ ರಾಜಮನೆತನಕ್ಕೆ ಸೊಸೆಯಾಗಿ ಹೋದ ಡಯಾನಾ ಆಗ ತಮ್ಮ ಸೌಂದರ್ಯದಿಂದಲೇ ಸುದ್ದಿಯಾಗಿದ್ದರು. ಟೆಲಿವಿಷನ್‌ನ ಆರಂಭಿಕ ದಿನಗಳಲ್ಲಿ ಆಕೆಯನ್ನು ಚೆಲುವು ತುಂಬಿಕೊಳ್ಳಲು ಜನರು ಕಾತರಿಸುತ್ತಿದ್ದರು. ಮದುವೆಯಾದ ಕೆಲವೇ ವರ್ಷಗಳಲ್ಲಿ ಅರಮನೆಯಲ್ಲಿ ಸರಣಿ ವಿಚ್ಛೇದನಗಳ ಪರ್ವವೇ ಆರಂಭವಾಯಿತು. ಇದೊಂದು ರೀತಿಯಲ್ಲಿ ಆ ಮನೆತನಕ್ಕೆ ಶಾಪವೇ ಎಂಬಂತಾಯಿತು. ಅದರ ಮುಂದುವರಿದ ಭಾಗವೆಂಬಂತೆ ಡಯಾನಾ ಮತ್ತು ಚಾರ್ಲ್ಸ್ ದಾಂಪತ್ಯದಲ್ಲೂ ಬಿರುಕು ಮೂಡಲಾರಂಭಿಸಿತು.

ADVERTISEMENT

‘ಪನೋರಮಾ’ದ ಸಂದರ್ಶನವೊಂದರಲ್ಲಿ ಡಯಾನಾ ತನ್ನ ಮುರಿದು ಬಿದ್ದ ಸಂಸಾರದ ಬಗ್ಗೆ ದೀರ್ಘವಾಗಿ ಮಾತನಾಡಿದ್ದಳು. ಇದನ್ನೆಲ್ಲಾ ಗಮನಿಸಿದ್ದ ನನಗೆ ಆಕೆಯ ಸಾವಿನ ನಂತರ ನಾಟಕ ಬರೆಯಬೇಕೆನಿಸಿತು’ ಎಂದು ನಾಟಕ ರಚನೆಯ ಹಿಂದಿರುವ ಕಾರಣವನ್ನು ಹಂಚಿಕೊಳ್ಳುತ್ತಾರೆ ವೀಣಾ ರಾವ್.

‘ಇಡೀ ನಾಟಕವನ್ನು ಶೇಕ್ಸ್‌ಪಿಯರ್ ಶೈಲಿಯಲ್ಲಿ ಬರೆದಿದ್ದೇನೆ. ಅಲ್ಲಲ್ಲಿ ಶೇಕ್ಸ್‌ಪಿಯರ್ ಪ್ರಭಾವ ಕಾಣುತ್ತದೆ. ಅವರ ನಾಟಕಗಳ ಸಾಲುಗಳನ್ನೂ ಉಲ್ಲೇಖಿಸಿದ್ದೇನೆ. ನಾಟಕದಲ್ಲಿ ವಾಸ್ತವಕ್ಕೆ ಹತ್ತಿರವಾದ ಸಂಗತಿಗಳ ಜತೆಗೆ ಕಾಲ್ಪನಿಕ ಸಂಗತಿಗಳೂ ಇವೆ. ಅದರಿಂದಾಲೇ ನಾಟಕ ನವರಸ ತುಂಬಿಕೊಂಡಿದೆ. ದುರಂತ ಕಥನದ ಜತೆಗೆ ರಾಜಮನೆತನದ ಉಳಿದರ್ಧ ವಾಸ್ತವಕ್ಕೆ ಹತ್ತಿರವಾಗಿದೆ. ಆ್ಯಂಡ್ಯೂ ಮೊರ್ಟನ್ಸ್‌ ಅವರ ಡಯಾನಾ–ಹರ್ ಟ್ರೂ ಸ್ಟೋರಿ ಪುಸ್ತಕದಿಂದ ಪ್ರೇರಿತವಾಗಿದೆ. ರಾಜಮನೆತನದ ವಿಡಂಬನೆ ಇದೆ. ಇಂಗ್ಲೆಂಡ್‌ನಲ್ಲಿ ಈಗಾಗಲೇ ಡಯಾನಾ ಕುರಿತು ಧಾರಾವಾಹಿಗಳ ಸರಣಿಯೇ ಬಂದುಬಿಟ್ಟಿದೆ. ಆದರೆ, ನಾಟಕ ರೂಪದಲ್ಲಿ ಬಹುಶಃ ಬಂದಿರುವ ಮೊದಲ ಕೃತಿ ಇದಾಗಿದೆ’ ಎಂದು ತಮ್ಮ ನಾಟಕದ ವಿಶೇಷ ಗುಣಗಳನ್ನು ಬಿಚ್ಚಿಡುತ್ತಾರೆ ಅವರು.

‘ಖ್ಯಾತ ನಟ ಮತ್ತು ರಂಗನಿರ್ದೇಶಕ ಟಾಮ್ ಆಲ್ಟರ್ ಮೊದಲ ಬಾರಿಗೆ ಈ ಕೃತಿಯನ್ನು ರಂಗದ ಮೇಲೆ ತಂದರು. ಆದರೆ, ಅವರ ಅಕಾಲಿಕ ಸಾವಿನ ನಂತರ ಇದನ್ನು ರಂಗಕ್ಕೆ ಒಗ್ಗಿಸಿದವರು ಮತ್ತೊಬ್ಬ ನಿರ್ದೇಶಕ ಡಾ.ಸಯೀದ್ ಆಲಂ. ಅವರಿಬ್ಬರೂ ಈ ನಾಟಕದ ಯಶಸ್ಸಿಗೆ ಅಪಾರವಾಗಿ ಶ್ರಮಿಸಿದ್ದಾರೆ. ಈಗಾಗಲೇ ಈ ನಾಟಕ ದೆಹಲಿಯಲ್ಲಿ ಪ್ರದರ್ಶನ ಕಂಡಿದ್ದು, ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಗಳಿಸಿದೆ. ಇದೀಗ ಕನ್ನಡದ ನೆಲದಲ್ಲಿ ಈ ಇಂಗ್ಲಿಷ್ ನಾಟಕ ಮೊದಲ ಬಾರಿಗೆ ಪ್ರದರ್ಶನಗೊಳ್ಳುತ್ತಿರುವುದು ನನಗೆ ಸಂತಸ ತಂದಿದೆ’ ಎನ್ನುತ್ತಾರೆ ವೀಣಾ.

**

‘ದಿ ಟೇಲ್ ಆಫ್ ಕ್ವಾರೆಲ್ಸ್‌’ ರಾಜಕುಮಾರಿ ಡಯಾನಾ ಕುರಿತು ನಾಟಕ ಪ್ರದರ್ಶನ: ಪ್ರಸ್ತುತಿ– ಪೈರೊಟ್ಸ್ ಟ್ರೂಪ್, ರಚನೆ– ವೀಣಾ ಎಸ್.ರಾವ್, ನಿರ್ದೇಶನ–ಟಾಮ್ ಆಲ್ಟರ್, ಸಹ ನಿರ್ದೇಶನ–ಡಾ.ಸಯೀದ್ ಎಂ. ಆಲಂ. ಉದ್ಘಾಟನೆ–ನಿವೃತ್ತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ. ಸ್ಥಳ–ಡಾ.ಬಿ.ಆರ್.ಅಂಬೇಡ್ಕರ್ ಭವನ, ವಸಂತ ನಗರ, ಶನಿವಾರ ರಾತ್ರಿ 7.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.