ರೂಪಾಂತರ ಹವ್ಯಾಸಿ ರಂಗ ತಂಡದಿಂದ ಬುಧವಾರ ಮಹಾಕವಿ ಕನಕದಾಸರ ಅಪೂರ್ವ ಕಾವ್ಯ ಆಧಾರಿತ `ರಾಮಧಾನ್ಯ~ ನಾಟಕ ಪ್ರದರ್ಶನ.
ಕನಕದಾಸರು ರಚಿಸಿದ `ರಾಮಧಾನ್ಯ ಚರಿತ್ರೆ~ ಕನ್ನಡದ ಶ್ರೇಷ್ಠ ಮಹಾಕಾವ್ಯ. ರಾಮಾಯಣ, ಮಹಾಭಾರತಗಳ ಕಾಲದಿಂದ ವರ್ಣಬೇಧ ಮತ್ತು ಜಾತಿ ವೈಷಮ್ಯಗಳು ಭರತ ಖಂಡದ ಅಸ್ತಿತ್ವಕ್ಕೆ ಧಕ್ಕೆ ತರುತ್ತಿರುವುದು ಸಾರ್ವಕಾಲಿಕ ಸತ್ಯ. ಸತ್ಯವನ್ನು ಅಸತ್ಯವೆಂದು, ಅಸತ್ಯವನ್ನು ಸತ್ಯವೆಂದು. ಜಳ್ಳನ್ನು ತಿರುಳೆಂದು, ತಿರುಳನ್ನು ಜಳ್ಳೆಂದು ವಿಪರ‌್ಯಾಸ ಕ್ರಮದಿಂದ ಜೀವನದ ಮೌಲ್ಯಗಳನ್ನು ಅಳೆಯುವ ಪರಿಪಾಠ ಈ ಸಮಾಜದಲ್ಲಿ ಬೇರೂರಿದೆ.
ಈ ಅಂಶ ರಾಮಧಾನ್ಯ ಕಾವ್ಯದ ಮೂಲಕ ಅಭಿವ್ಯಕ್ತವಾಗಿದೆ. ಕನಕದಾಸರ ಸಾಮಾಜಿಕ ಪ್ರಜ್ಞೆಗೆ ಸಾಕ್ಷಿಯಾಗಿ ಬತ್ತ ಪ್ರತಿಷ್ಠಿತರ ಆಹಾರವಾಗಿ ಜನಸಾಮಾನ್ಯರಿಗೆ ನಿಲುಕದ ಗಗನ ಕುಸುಮವಾಗಿತ್ತು. ರಾಗಿ ಬಡವರ ಕನಿಷ್ಠ ಆಹಾರವಾಗಿತ್ತು.
ಆ ಕಾಲದ ಸಾಮಾಜಿಕ ತಾರತಮ್ಯವನ್ನು ಧಾನ್ಯಗಳ ರೂಪಕದ ಮೂಲಕ ಅಪೂರ್ವ ಕಾವ್ಯವನ್ನು ಕನಕದಾಸರು ರಚಿಸಿದ್ದಾರೆ. ಶ್ರೀರಾಮನಿಂದ ರಾಗಿಗೆ ಸಂದ ಗೌರವದ ಕತೆಯೇ `ರಾಮಧಾನ್ಯ~.
ರಾಮಕೃಷ್ಣ ಮರಾಠೆ ರಂಗ ರೂಪ ನೀಡಿದ್ದು, ಕೆ.ಎಸ್.ಡಿ.ಎಲ್ ಚಂದ್ರು ನಿರ್ದೇಶನ ಮಾಡಿದಾರೆ. ಸ್ಥಳ: ರಂಗ ಶಂಕರ, ಜೆ.ಪಿ.ನಗರ 2ನೇ ಹಂತ. ಸಂಜೆ 7.30.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.