ADVERTISEMENT

ರಜಾ ದಿನ ವಿಜ್ಞಾನ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 19:30 IST
Last Updated 18 ಮಾರ್ಚ್ 2014, 19:30 IST
ಆದಿತ್ಯ ಜಿ.ತಿಳಿ ಮಾಡಿದ ಜ್ವಾಲಾಮುಖಿ ಪ್ರಾತ್ಯಕ್ಷಿಕೆ ವೀಕ್ಷಿಸುತ್ತಿರುವ ಮಕ್ಕಳು
ಆದಿತ್ಯ ಜಿ.ತಿಳಿ ಮಾಡಿದ ಜ್ವಾಲಾಮುಖಿ ಪ್ರಾತ್ಯಕ್ಷಿಕೆ ವೀಕ್ಷಿಸುತ್ತಿರುವ ಮಕ್ಕಳು   

ನಗರದ ಈಸ್ಟ್‌ ವುಡ್‌ ಲೇಔಟ್‌ನಲ್ಲಿ ಈಚೆಗೆ ಸಂಡೆ ಸೈನ್ಸ್‌ ಸ್ಕೂಲ್‌ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ವಿಜ್ಞಾನ ಸಂಯೋಜಕಿ ಹಾಗೂ ಕಾರ್ಯಕ್ರಮ ನಿರ್ದೇಶಕಿ ಶಿವಲೀಲಾ ಚೂಡಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ವರ್ಷವಿಡೀ ವಿಜ್ಞಾನ ಮಾದರಿಗಳ ನಿರ್ಮಾಣ ಮತ್ತು ವಿಜ್ಞಾನ ಸಂಬಂಧಿ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದ ಮಕ್ಕಳು ತಮ್ಮ ಅನುಭವವನ್ನು ಹಂಚಿಕೊಂಡರು.‘ಪಠ್ಯಪುಸ್ತಕದಲ್ಲಿರುವ ವಿಜ್ಞಾನದ ಮಾದರಿಗಳನ್ನು ಮಾಡುವುದು ಸಂತಸವೆನಿಸಿತು. ಓದುವುದಕ್ಕಿಂತಲೂ ಮಾದರಿ ನಿರ್ಮಾಣದಿಂದಲೇ ಹೆಚ್ಚು ಆಸಕ್ತಿ ಮೂಡಿತು’ ಎಂದು  ಅದಿತಿ ತನ್ನ ಅನುಭವ ಹಂಚಿಕೊಂಡಳು.
ಹೈಡ್ರೊ ಎಲೆಕ್ಟ್ರಿಸಿಟಿ ಮಾದರಿ ನಿರೂಪಿಸಿದ ಅದಿತಿ, ವಿದ್ಯುತ್‌ ಪೋಲು ಮಾಡುವುದನ್ನು ಬಿಟ್ಟಿರುವುದಾಗಿ ಹೇಳಿದರು.

ಸೋಲಾರ್‌ ಕಾರ್‌ ಮಾಡಿದ ಕಿಯಾನ್‌ ಶರ್ಮಾಗೆ ಅಸಾಂಪ್ರದಾಯಿಕ ಇಂಧನಗಳ ಬಗ್ಗೆ ಆಸಕ್ತಿ ಮೂಡಿದ್ದು, ಸಂಡೆ ಸೈನ್ಸ್‌ ಸ್ಕೂಲ್‌ನಿಂದ ಎಂದು ಹೇಳಿದ.

ಆದಿತ್ಯ ಜಿ.ತಿಳಿ, ಭೂಮಿಯ ಚಲನೆ ಮತ್ತು ಜ್ವಾಲಾಮುಖಿಯ ಬಗ್ಗೆ ಮಾದರಿ ಮಾಡಿದ್ದು, ವಿವರಣೆ ನೀಡುತ್ತಲೇ ಸಂಡೆ ಸೈನ್ಸ್‌ ಸ್ಕೂಲ್‌ನ ಬಗ್ಗೆ ಒಲವು ಮೂಡಲು ಕಾರಣವನ್ನೂ ಹೇಳಿದ.

‘ಶಾಲೆಗಳಲ್ಲಿ ರಸಾಯನ ಶಾಸ್ತ್ರವನ್ನು ಕಲಿಸುತ್ತಾರೆ. ಲ್ಯಾಬ್‌ಗೆ ಕರೆದೊಯ್ದರೂ ಯಾವುದೇ ಲವಣ ಮತ್ತಿತರ ರಾಸಾಯನಿಕಗಳನ್ನು ಮುಟ್ಟಲು ಬಿಡುತ್ತಿರಲಿಲ್ಲ. ಆದರೆ ಇಲ್ಲಿ ಮುಕ್ತವಾಗಿ ವಾಸನೆ ನೋಡಲು, ಮಿಶ್ರಣ ಮಾಡಿ ನೋಡಲು ಹೇಳುತ್ತಿದ್ದರು. ವಿಜ್ಞಾನದೊಂದಿಗೆ ಆಟವಾಡಬಹುದು ಎಂದು ತಿಳಿದು ಬಂತು. ಇದೇ ಕಾರಣಕ್ಕಾಗಿ ಭಾನುವಾರಕ್ಕಾಗಿ ಕಾಯುತ್ತಿದ್ದೆ’ ಎಂದು ತಿಳಿಸಿದ.

ಅದಿತಿಯ ಅಮ್ಮ ವೀಣಾ ರಾವ್‌, ‘ಮೂಲ ವಿಜ್ಞಾನದಲ್ಲಿ ಆಸಕ್ತಿ ಮೂಡಿಸಿದ ಕಾರ್ಯಕ್ರಮ ಇದಾಗಿತ್ತು. ಪ್ರತಿವಾರವೂ ಒಂದೊಂದು ಮಾದರಿ ಮಾಡಿದಾಗಲೂ ಮನೆಯಲ್ಲೊಂದು ಮರಿ ವಿಜ್ಞಾನಿ ಇದ್ದಂತೆ ಅನಿಸುತ್ತಿತ್ತು’ ಎಂದರು.

ಆದಿತ್ಯನ ಅಮ್ಮ ಶಿವಗೀತಾ ಗಿರೀಶ್‌, ‘ವಿಜ್ಞಾನ ಪ್ರತಿಕೃತಿಗಳ ನಿರ್ಮಾಣದಲ್ಲಿ ಮಾತ್ರ ಆಸಕ್ತಿ ಅಲ್ಲ, ವಿಜ್ಞಾನವನ್ನು ಓದುತ್ತಲೇ ಅದರಿಂದ ಯಾವ ಮಾದರಿ, ಹೇಗೆ ಮಾಡಬಹುದು ಎಂದು ಚರ್ಚಿಸುತ್ತಿದ್ದ. ಓದಿ ಮರೆಯುವ ಬದಲು, ಓದುತ್ತಲೇ ಚಿಂತನೆಗೆಳೆಯುವ ವಿಜ್ಞಾನ ಶಾಲೆಯ ಈ ಪರಿಕಲ್ಪನೆಯೇ ಹೊಸತು. ಎಳೆಯ ಮಕ್ಕಳ ಮನಸಿನಲ್ಲಿ ಪ್ರಶ್ನೆಗಳನ್ನೂ ಹುಟ್ಟಿಸುತ್ತದೆ. ಜೊತೆಗೆ ಪರಿಹಾರವನ್ನು ಹುಡುಕುವ ಕೌಶಲವನ್ನೂ ನೀಡುತ್ತದೆ ಎಂದರು. ಆದಿತ್ಯನೊಂದಿಗೆ ನಮ್ಮಲ್ಲಿಯೂ ಜ್ಞಾನವನ್ನು ಆನ್ವಯಿಕವಾಗಿ ಬಳಸುವ ಬಗ್ಗೆ ಜಿಜ್ಞಾಸೆ ಹುಟ್ಟಿಸುತ್ತಿತ್ತು’ ಎಂದು ಹೇಳಿದರು.

ಈ ತರಗತಿಯಿಂದಾಗಿ ಭೌತವಿಜ್ಞಾನ, ಪರಿಸರ ವಿಜ್ಞಾನಗಳಲ್ಲಿ ಆಸಕ್ತಿ ಮೂಡಿತು. ಸೌರ ಲೋಕದ ಬಗ್ಗೆಯೂ ಪುಸ್ತಕ ಕೊಂಡು ಓದುವಂತೆ ಮಾಡಿತು ಎಂದು ಸಂಜೀತ್‌ ಹೇಳಿದ. ಮಾಹಿತಿಗೆ: 99863 73182
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.