ADVERTISEMENT

‘ರಾಜಕುಮಾರ’ನ ಸಿನಿಮಾ ಪ್ರವರ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2017, 19:30 IST
Last Updated 27 ಫೆಬ್ರುವರಿ 2017, 19:30 IST
‘ರಾಜಕುಮಾರ’ನ ಸಿನಿಮಾ ಪ್ರವರ
‘ರಾಜಕುಮಾರ’ನ ಸಿನಿಮಾ ಪ್ರವರ   

ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಪತ್ರಕರ್ತರ ಕೈಗೆ ಸಿಗುವುದೇ ಕಡಿಮೆ. ಅಪರೂಪಕ್ಕೆ  ಸಿಕ್ಕರೂ ‘ಮೌನವೇ ಆಭರಣ, ಮುಗುಳ್ನಗೆ ಶಶಿಕಿರಣ’ ಎಂಬುದು ಅವರ ಸ್ವಭಾವ.

ಇತ್ತೀಚೆಗೆ ವಿ.ವಿಜಯೇಂದ್ರಪ್ರಸಾದ್‌ ನಿರ್ದೇಶನದ ‘ಶ್ರೀವಲ್ಲಿ’ ಸಿನಿಮಾದ ಧ್ವನಿಸುರಳಿ ಕಾರ್ಯಕ್ರಮಕ್ಕೆ ಕೊಂಚ ಮುಂಚಿತವಾಗಿಯೇ ಬಂದಿದ್ದ ಪುನೀತ್‌,  ಮಾತಿಗೆ ಸಿಕ್ಕಿದರು. ‘ನನಗೆ ಸಿನಿಮಾ ಬಗ್ಗೆ ಮಾತನಾಡಲು ಗೊತ್ತಾಗುವುದಿಲ್ಲ. ಏನೂ ಕೇಳಬೇಡಿ’ ಎನ್ನುತ್ತಲೇ ಇದ್ದರು. ಆದರೂ ಕೆದಕಿ ಕೆದಕಿ ಕೇಳಿದಾಗ ಅಷ್ಟಿಷ್ಟು ಮಾತಾಡಿದರು.

ಪುನೀತ್‌ರ ‘ರಾಜಕುಮಾರ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚೆಗೆ ಯುಟ್ಯೂಬ್‌ನಲ್ಲಿ ಬಿಡುಗಡೆಯಾದ ಆ ಸಿನಿಮಾದ ಒಂದು ಹಾಡನ್ನು ಅಪಾರ ಸಂಖ್ಯೆಯ ಅಭಿಮಾನಿಗಳು ನೋಡಿ ಮೆಚ್ಚಿಕೊಂಡಿದ್ದಾರೆ. ಸಂತೋಷ್‌ ಆನಂದರಾಮ್‌ ನಿರ್ದೇಶನದ ಈ ಸಿನಿಮಾದ ಬಗ್ಗೆ ಪುನೀತ್‌ ಅವರಿಗೂ ಸಾಕಷ್ಟು ನಿರೀಕ್ಷೆಗಳಿವೆ.

‘ರಾಜಕುಮಾರ’ ಎಂಬ ಹೆಸರೇ ಈ ಸಿನಿಮಾದ ಬಗೆಗಿನ ಕುತೂಹಲವನ್ನು ಹೆಚ್ಚಿಸಿದೆ. ಆದರೆ ಈ ಸಿನಿಮಾಕ್ಕೂ ತನ್ನ ಅಪ್ಪಾಜಿಗೂ ಯಾವುದೇ ಸಂಬಂಧ ಇಲ್ಲ ಎನ್ನುವುದು ಅಪ್ಪು ಅಂಬೋಣ.



‘ನನ್ನ ಹೆಸರಿನ ಜತೆಗೆ ತಂದೆಯ ಹೆಸರೂ ಸೇರಿಕೊಂಡಿರುವುದರ ಬಗ್ಗೆ ನನಗೆ ಹೆಮ್ಮೆಯಿದೆ. ಆದರೆ ‘ರಾಜಕುಮಾರ’ ಸಿನಿಮಾಗೂ ತಂದೆಯವರ ಹೆಸರಿಗೂ ಸಂಬಂಧವಿಲ್ಲ.  ಅಪ್ಪಾಜಿಯ ಯಾವ ಛಾಯೆಯೂ ಸಿನಿಮಾದಲ್ಲಿ ಇರುವುದಿಲ್ಲ. ರಾಜಕುಮಾರ ಎಂಬುದು ಸಾಮಾನ್ಯ ಹೆಸರಷ್ಟೆ’ ಎನ್ನುತ್ತಾರೆ ಅವರು.

‘ರಾಜಕುಮಾರ’ ಚಿತ್ರದ ಕಥೆಯ ಎಳೆಯನ್ನು ಬಿಟ್ಟುಕೊಡಲು ಅವರು ಸುತಾರಾಂ ಒಪ್ಪಲಿಲ್ಲ. ‘ಇದು ಕೌಟುಂಬಿಕ ಕಥನ. ಕನ್ನಡ ಚಿತ್ರರಂಗದ ಹಲವು ನಟರು ನಟಿಸಿದ್ದಾರೆ. ಅವರೆಲ್ಲರ ಜತೆ ನಟಿಸಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ’ ಎಂದಷ್ಟೇ ಹೇಳಿ ಮಾತು ತೇಲಿಸಿದರು.

ಈ ಶೀರ್ಷಿಕೆ ಇಟ್ಟಿದ್ದರಿಂದ ಜನರ ನಿರೀಕ್ಷೆ ಜಾಸ್ತಿಯಾಗಿದೆಯಲ್ಲವೇ? ಎಂಬ ಪ್ರಶ್ನೆಗೆ ‘ಜನರ ನಿರೀಕ್ಷೆ ಜಾಸ್ತಿ ಆಗಲಿ ಎಂದೇ ಈ ಹೆಸರು ಇಟ್ಟಿರುವುದು’ ಎಂದು ನಕ್ಕರು. ಸಿನಿಮಾ ಅವರ ನಿರೀಕ್ಷೆಯ ಮಟ್ಟಕ್ಕಿಂತ ಚೆನ್ನಾಗಿ ಬಂದಿದೆಯಂತೆ.

‘ರಾಜಕುಮಾರ’ ಸಿನಿಮಾ ಈಗಾಗಲೇ ಪೂರ್ತಿಗೊಂಡು ಬಿಡುಗಡೆಗೆ ಸಜ್ಜಾಗಿದೆ. ಪುನೀತ್‌ ಮುಂದಿನ ಸಿನಿಮಾ ‘ಅಂಜನೀಪುತ್ರ’. ಹರ್ಷ ನಿರ್ದೇಶನದ ಈ ರಿಮೇಕ್‌ ಸಿನಿಮಾದಲ್ಲಿ ‘ಕಿರಿಕ್‌ ಪಾರ್ಟಿ’ ನಾಯಕಿ ರಶ್ಮಿಕಾ ಮಂದಣ್ಣ ಅಪ್ಪುತೆ ಜತೆಯಾಗಲಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ.

‘ಹರ್ಷ ಒಳ್ಳೆಯ ನಿರ್ದೇಶಕ. ಅವರ ಜತೆ ಕೆಲಸ ಮಾಡುವುದು ಖುಷಿಯಾಗುತ್ತಿದೆ. ‘ಆಕಾಶ್‌’ ಸಿನಿಮಾದಲ್ಲಿ ಹರ್ಷ ಅವರ ಜತೆ ಕೆಲಸ ಮಾಡಿದ್ದೇನೆ’ ಎಂದು ಪುನೀತ್‌ ಖುಷಿ ಹಂಚಿಕೊಂಡರು.

ಅಂಜನೀಪುತ್ರ ನಂತರ ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ ಇನ್ನೊಂದು ಸಿನಿಮಾಕ್ಕೆ ಪುನೀತ್‌ ಒಪ್ಪಿಕೊಂಡಿದ್ದಾರೆ.

ಈ ನಡುವೆ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ನಿರ್ದೇಶಕ ಹೇಮಂತ್‌ ರಾವ್‌ ಅವರ ಹೊಸ ಸಿನಿಮಾವನ್ನು ನಿರ್ಮಾಣದ ಹೊಣೆಗಾರಿಕೆಯನ್ನೂ ಅವರು ಹೊತ್ತಿದ್ದಾರೆ. ‘ಹೇಮಂತ್‌ ಅವರ ಕಥೆ ಎಳೆ ತುಂಬ ಇಷ್ಟವಾಯ್ತು. ಹೊಸಬರ ತಂಡ. ಸಿನಿಮಾ ಚಿತ್ರೀಕರಣ ಮೇ, ಜೂನ್‌ನಲ್ಲಿ ಆರಂಭವಾಗುತ್ತದೆ’ ಎಂದಷ್ಟೇ ಮಾಹಿತಿಯನ್ನು ಹಂಚಿಕೊಂಡರು.

ನಂತರ ಮಾತು ಹರಿದಿದ್ದು ಫಿಟ್‌ನೆಸ್‌ ಬಗ್ಗೆ. ಫಿಟ್‌ನೆಸ್‌ ವಿಷಯಕ್ಕೆ ಬಂದರೆ ಅವರು ‘ವರ್ಕ್‌ಔಟ್‌ ಮಾಡುತ್ತಲೇ ಇರುವುದು ತುಂಬ ಮಹತ್ವದ್ದು’ ಎನ್ನುತ್ತಾರೆ.
‘ನಾನು ತುಂಬ ತಲೆಕೆಡಿಸಿಕೊಳ್ಳಲ್ಲ. ಸಿಕ್ಕಾಪಟ್ಟೆ ನೀರು  ಕುಡಿತೀನಿ’ ಎನ್ನುವ ಅವರಿಗೆ ‘ಸಣ್ಣಗಾಗುವುದೇ ಹೆಚ್ಚು ಸವಾಲಿನ ಸಂಗತಿ’ ಅನಿಸಿದೆ. ‘ಊಟ ತಿನ್ನುವುದಲ್ಲ, ವಾಸನೆ ತೆಗೆದುಕೊಂಡರೇ ದಪ್ಪಗಾಗಿಬಿಡ್ತೀನಿ’ ಎಂದು ತಮ್ಮನ್ನು ತಾವೇ ತಮಾಷೆ ಮಾಡಿಕೊಂಡು ನಗುತ್ತಾರೆ.

‘ಪ್ರತಿದಿನ ಸುಮಾರು ಒಂದೂವರೆ ಗಂಟೆ ವರ್ಕ್‌ಔಟ್‌, ವಾರದಲ್ಲಿ ಎರಡು ದಿನ ಯೋಗ ಮಾಡುತ್ತೇನೆ. ಬ್ಯಾಡ್ಮಿಂಟನ್ ಆಡುವುದು ತುಂಬಾ ಇಷ್ಟ. ಆದರೆ ಸಮಯ ಸಿಗುತ್ತಿಲ್ಲ. ಸೈಕ್ಲಿಂಗ್‌ ಕೂಡ ಇಷ್ಟ. ಆಗೀಗ ಮಾಡುತ್ತಲೇ ಇರುತ್ತೇನೆ. ಇಷ್ಟೇ  ನೋಡಿ ನನ್ನ ಫಿಟ್‌ನೆಸ್ ಗುಟ್ಟು’ ಎಂದು ಮುಗುಳ್ನಗೆ ಸೂಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT