ADVERTISEMENT

ರಾಮಧಾನ್ಯ ಚರಿತೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2017, 19:30 IST
Last Updated 2 ಜುಲೈ 2017, 19:30 IST
ಯಶಸ್‌ ಸೂರ್ಯ
ಯಶಸ್‌ ಸೂರ್ಯ   

ಕನಕದಾಸರು ಭಕ್ತಿ ಪರಂಪರೆಯಲ್ಲಿ ಅಗ್ರಗಣ್ಯರು. ಅವರು ರಚಿಸಿದ ‘ರಾಮಧಾನ್ಯ ಚರಿತೆ’ಯಲ್ಲಿ ರಾಗಿ– ಭತ್ತದ ನಡುವಿನ ವಾದ ಚಿತ್ರಿತವಾಗಿದೆ.
ಅಲ್ಲಿ ಭತ್ತ ಹಾಗೂ ರಾಗಿ ರೂಪಕಗಳಾಗಿ ಕಾಣುತ್ತವೆ. ಆದರೆ, ಅಲ್ಲಿ ಅನ್ನ– ಅನ್ನಗಳ ನಡುವೆ ವಾಗ್ವಾದ ನಡೆಯುತ್ತದೆ. ಅನ್ನ ಕೇವಲ ಸಂಕೇತವಾಗದೆ ಹಸಿವಿನ ಪ್ರಶ್ನೆಗೆ ಉತ್ತರವಾಗಬೇಕು ಎನ್ನುವ ಆಶಯ ಅಲ್ಲಿ ಅಡಗಿದೆ.

ಕನಕದಾಸರ ಬಗ್ಗೆ ಕನ್ನಡದಲ್ಲಿ ಈಗ ಮತ್ತೊಂದು ಚಿತ್ರ ಸೆಟ್ಟೇರಿದೆ. ಟಿ.ಎನ್. ನಾಗೇಶ್ ‘ರಾಮಧಾನ್ಯ ಚರಿತೆ’ಯನ್ನು ತೆರೆಗೆ ತರಲು ಸಜ್ಜಾಗಿದ್ದಾರೆ.

‘ರಾಮಧಾನ್ಯ ಚರಿತೆ’ ಸಿನಿಮಾ ಆಗಿ ಮೂಡಿಬರುತ್ತಿರುವುದು ಇದೇ ಮೊದಲು. ಆದರೆ, ಅದರ ನಾಟಕ ರೂಪ ನೂರಾರು ಪ್ರದರ್ಶನ ಕಂಡಿದೆ.

ADVERTISEMENT

ರಂಗಕರ್ಮಿ ಕೆ.ಎಸ್.ಡಿ.ಎಲ್ ಚಂದ್ರು ನಿರ್ದೇಶನದಲ್ಲಿ ರೂಪಾಂತರ ತಂಡ ಪ್ರದರ್ಶಿಸಿದ ನಾಟಕ ವೀಕ್ಷಿಸಿದ ನಿರ್ದೇಶಕ ನಾಗೇಶ್ ಅವರು, ಈ ಸಿನಿಮಾ ಮಾಡಲು ಹೊರಟಿದ್ದಾರೆ. ಇದರ ನಾಟಕ ರೂಪಕ್ಕೆ ಕೆಲಸ ಮಾಡಿದ್ದ ಸಾಹಿತಿ ಬಸವರಾಜ್ ಸೂಳೇರಿಪಾಳ್ಯ ಚಿತ್ರಕತೆ ಬರೆಯುತ್ತಿದ್ದಾರೆ.

‘ಈ ಸಿನಿಮಾ ಮೂರು ತಲೆಮಾರಿಗೆ ಸಂಬಂಧಿಸಿದೆ. ಕತೆಯ ರೂಪಾಂತರದ ಮೂಲಕ ಆಗಿನ ಕಾಲಕ್ಕೂ ಮತ್ತು ಈಗಿನ ಸಂದರ್ಭಕ್ಕೂ ಸಂಬಂಧ ಬೆಸೆಯಲಿದೆ. ಹಾಗಾಗಿ, ಇದು ಸಮಕಾಲೀನ ಚಿತ್ರ’ ಎಂದರು ಬಸವರಾಜ್ ಸೂಳೇರಿಪಾಳ್ಯ.

ರಂಗಕರ್ಮಿ ಕೆ.ಎಸ್.ಡಿ.ಎಲ್. ಚಂದ್ರು, ‘ರಾಮಧಾನ್ಯ ಚರಿತೆಯಲ್ಲಿ ಕನಕದಾಸರು ಭತ್ತ ಮತ್ತು ರಾಗಿಯ ಮೂಲಕ ಬಡವ ಮತ್ತು ಶ್ರೀಮಂತರ ನಡುವಿನ ಅಂತರದ ಬಗ್ಗೆ ಹೇಳಿದ್ದಾರೆ. ಇದು ಎಲ್ಲ ಕಾಲಕ್ಕೂ ಸಲ್ಲುತ್ತದೆ. ಅದನ್ನೇ ಮೂರು ಕಾಲಘಟ್ಟದಲ್ಲಿ ಹೇಳುವ ಪ್ರಯತ್ನ ಮಾಡಲಿದ್ದೇವೆ' ಎಂದರು.

ನಟ ಯಶಸ್ ಸೂರ್ಯ ಕನಕದಾಸರಾಗಿ ಅಭಿನಯಿಸಲಿದ್ದಾರೆ. ‘ಪಾತ್ರಕ್ಕೆ ನಾಲ್ಕು ಶೇಡ್‌ಗಳಿವೆ. ಇಲ್ಲಿ ನಟನೆಗೆ ಹೆಚ್ಚು ಅವಕಾಶ ಇದೆ’ ಎಂದು ಖುಷಿ ಹಂಚಿಕೊಂಡರು.

ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಹಂಸಲೇಖ ಅವರ ಶಿಷ್ಯ ದೇಸಿ ಮೋಹನ್ ಅವರದು.

‘ಪ್ರಸ್ತುತ ಪ್ರಚಲಿತವಾಗಿರುವ ಕನಕದಾಸರ ಸಾಹಿತ್ಯಕ್ಕೆ ಸಂಗೀತ ನೀಡಬೇಕಿದೆ. ಬೇರೆಯೇ ಆದ ರೀತಿಯಲ್ಲಿ ಸಂಗೀತ ನೀಡಬೇಕಿದೆ. ಹಾಗಾಗಿ, ಇದೊಂದು ಸವಾಲು’ ಎಂದರು ಮೋಹನ್.

ನಿರ್ದೇಶಕ ನಾಗೇಶ್ ಜತೆಗೆ ವೆಂಕಟೇಶ್, ಸಂತೋಷ್, ಗೋವಿಂದರಾಜು ಹಾಗೂ ಸಮಾನ ಮನಸ್ಕ ಹತ್ತು ನಿರ್ಮಾಪಕರು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಬೆನಕರಾಜ್ ಅವರ ಛಾಯಾಗ್ರಹಣವಿದೆ. ಶ್ರೀರಂಗಪಟ್ಟಣ, ಮೈಸೂರು, ಕನಕದಾಸರ ಹುಟ್ಟೂರು ಕಾಗಿನೆಲೆಯಲ್ಲಿ ಚಿತ್ರೀಕರಣಕ್ಕೆ ಸಿದ್ಧತೆ ನಡೆದಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.