ರಾಯಲ್ ಇನ್ ಫೀಲ್ಡ್ ಹೆಸರಿನೊಂದಿಗೆ ರಾಜ ಗಾಂಭೀರ್ಯ, ಬೃಹತ್ ಆಕೃತಿ, ಸದ್ದು, ವಿನ್ಯಾಸ ತಳುಕು ಹಾಕಿಕೊಂಡಿದೆ. ರಾಯಲ್ ಎನ್‌ಫೀಲ್ಡ್ ಎಂಬ ಬುಲೆಟ್ ಗಾಡಿ 1955ರಲ್ಲಿ ಭಾರತಕ್ಕೆ ಕಾಲಿಟ್ಟಿತ್ತು. ಆ ಕಾಲದಲ್ಲಿ ನಮ್ಮವರು ಗತ್ತು ಗೈರತ್ತನ್ನು ತೋರಿಸಲಿಕ್ಕಾಗಿ ಈ ಬುಲೆಟ್ ಖರೀದಿಸಿರಲಿಲ್ಲ. ಬದಲಾಗಿ ಸೈನಿಕರ ಅವಶ್ಯಕತೆಗಾಗಿ ಬುಲೆಟ್ ಬೈಕ್ ಖರೀದಿಸಲಾಗಿತ್ತು.
ಮೊದಲು 500 ಸಿಸಿ ಸಾಮರ್ಥ್ಯದ 800 ಬುಲೆಟ್‌ಗಳನ್ನು ಭಾರತ ಖರೀದಿಸಿತ್ತು. ಆದರೆ ಭಾರತದಿಂದ ಹೆಚ್ಚಿನ ಬೇಡಿಕೆಗಳು ಬರತೊಡಗಿದಾಗ, 1957ರಲ್ಲಿ ಇಂಗ್ಲೆಂಡ್‌ನ ಎನ್‌ಫೀಲ್ಡ್ ಕಂಪೆನಿ ಮದ್ರಾಸ್‌ನಲ್ಲಿ (ಈಗಿನ ಚೆನ್ನೈ) ಉತ್ಪಾದನಾ ಕೇಂದ್ರ ಆರಂಭಿಸಿತು.
ಬುಲೆಟ್‌ನ ಫ್ಯುಯೆಲ್ ಟ್ಯಾಂಕ್ ಮೇಲಿರುವ ಕಂಚಿನ ಬಣ್ಣದ ಗೆರೆಗಳು ಮದ್ರಾಸ್ ಗೆರೆಗೆಳೆಂದೇ ಖ್ಯಾತಿ ಪಡೆದಿವೆ. ಈ ಬಗ್ಗೆ ರಾಯಲ್ ಎನ್‌ಫೀಲ್ಡ್ ತನ್ನ ಫೇಸ್‌ಬುಕ್ ಪುಟದಲ್ಲಿ ವಿಡಿಯೊ ಶೇರ್ ಮಾಡಿದೆ.
1957ರಲ್ಲಿ ತಿರುವಟ್ಟಿಯೂರ್‌ನಲ್ಲಿ ಆರಂಭವಾದ ಈ ಉತ್ಪಾದನಾ ಕೇಂದ್ರದಲ್ಲಿ ಅಂದಿನಿಂದ ಇಂದಿನವರೆಗೆ ಗೆರೆಗಳನ್ನು ಬರೆಯುವ ಕಾಯಕದಲ್ಲಿ ತೊಡಗಿರುವ ಕುಟುಂಬವೊಂದಿದೆ.
ತಾವು ಯಾವ ರೀತಿಯಲ್ಲಿ ಈ ಗೆರೆಗಳನ್ನು ಬರೆಯುತ್ತೇವೆ ಎಂದು ವಿವರಿಸುವ ಎಸ್.ಜಯಕುಮಾರ್, 1957ರಿಂದ 2010ರ ವರೆಗೆ ನನ್ನ ಚಿಕ್ಕಪ್ಪ ಈ ಕೆಲಸ ಮಾಡುತ್ತಿದ್ದರು. ಆಮೇಲೆ ನನ್ನ ಅಣ್ಣನಿಂದ ನಾನಿದನ್ನು ಕಲಿತು ಕಳೆದ 22 ವರ್ಷಗಳಿಂದ ಈ ಕಾಯಕ ಮಾಡುತ್ತಿದ್ದೇನೆ. ಒಂದೇ ಬ್ರಶ್ ಬಳಸಿ ದಪ್ಪ ಮತ್ತು ತೆಳು ಗೆರೆಗಳನ್ನು ನಾವು ಬರೆಯುತ್ತೇವೆ. ನಾನಿನ್ನೂ ವಿದ್ಯಾರ್ಥಿ, ಕೋಚ್ ಅಲ್ಲ ಎಂದು ಅವರು ಹೇಳುವ ವಿಡಿಯೊ ಮದ್ರಾಸ್ ಸ್ಟೈಪ್ಸ್ ಬಗ್ಗೆಯಿರುವ ಪುಟ್ಟ ಝಲಕ್.
ಈ ವಿಡಿಯೋವನ್ನು 5.19 ಲಕ್ಷ ಸಾವಿರ ಜನರು ವೀಕ್ಷಿಸಿದ್ದು, ಫೇಸ್‌ಬುಕ್‌ನಲ್ಲಿ 2,586 ಜನರು ಶೇರ್ ಮಾಡಿದ್ದಾರೆ.
ಆಸಕ್ತರು facebook.com/royalenfield ಕೊಂಡಿ ಬಳಸಿ ವಿಡಿಯೋ ನೋಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.