ADVERTISEMENT

ರೆಡ್ ಬುಲ್ ಕ್ರಿಕೆಟ್ ಸರಣಿಗೆ ಗೌತಮ್ ಸಾಥ್

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 19:30 IST
Last Updated 15 ಮಾರ್ಚ್ 2012, 19:30 IST

ಕ್ರಿಕೆಟ್ ಎಂದರೆ ಯುವಕರಿಗೆ ಅದೇನೋ ಆಕರ್ಷಣೆ. ಕಾಲೇಜು ವಿದ್ಯಾರ್ಥಿಗಳಿಗಂತೂ ಕ್ರಿಕೆಟ್ ಬಗ್ಗೆ ಎಲ್ಲಿಲ್ಲದ ಕ್ರೇಜ್.

ಕ್ರಿಕೆಟ್ ಆಡಲು ಆಸಕ್ತಿ ಇರುವವರಿಗೆಂದೇ ಅವಕಾಶ ಕಲ್ಪಿಸಲು ಮುಂದಾಗಿದೆ ರೆಡ್ ಬುಲ್. ರೆಡ್ ಬುಲ್ ಜೊತೆ ಕೈಜೋಡಿಸಿರುವವರು ಖ್ಯಾತ ಕ್ರಿಕೆಟಿಗ ಗೌತಮ್ ಗಂಭೀರ್.
 
ಈ ಮೂಲಕ  ಗಂಭೀರ್ ಹಾಗೂ ರೆಡ್‌ಬುಲ್ ಸೇರಿ ಅತ್ಯುತ್ತಮ ಎಡಗೈ ಬ್ಯಾಟ್ಸ್‌ಮನ್ ಸೃಷ್ಟಿಸಲೂ ನಿರ್ಧರಿಸಿವೆ. ಕ್ರಿಕೆಟಿಗರ ಕನಸನ್ನು ನನಸು ಮಾಡಿಕೊಳ್ಳಲು ರೆಡ್‌ಬುಲ್ `ಏಷ್ಯನ್ ಟ್ರೈ ನೇಷನ್ ಕಾಲೇಜು ಕ್ರಿಕೆಟ್ ಸರಣಿ~ಯನ್ನು ಹಮ್ಮಿಕೊಂಡಿದೆ.

ಈ ಸ್ಪರ್ಧೆ ಭಾರತ, ಪಾಕಿಸ್ತಾನ ಮತ್ತು ಶ್ರಿಲಂಕಾ ಕಾಲೇಜುಗಳ  ತಂಡಗಳನ್ನು ಒಳಗೊಂಡಿರುತ್ತದೆ. ಪಂದ್ಯಗಳು ಟಿ-20 ಮಾದರಿಯಲ್ಲಿ ನಡೆಯುತ್ತದೆ. ಸ್ಪರ್ಧೆ ಮುಂಬೈ, ಪುಣೆ, ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ, ಚಂಡೀಗಡ, ದೆಹಲಿ ನಗರಗಳಲ್ಲಿ ನಡೆಯುತ್ತದೆ.

8 ನಗರಗಳ ವಿಜೇತರು ಏಪ್ರಿಲ್ 3 ರಿಂದ 6ರವರೆಗೆ ಮುಂಬೈನಲ್ಲಿ ನಡೆಯುವ ರಾಷ್ಟ್ರೀಯ ಫೈನಲ್‌ನಲ್ಲಿ ಸೆಣಸುತ್ತಾರೆ. ಭಾರತೀಯ ವಿಜೇತರು ಶ್ರಿಲಂಕಾ ಮತ್ತು ಪಾಕಿಸ್ತಾನದ ಅತ್ಯುತ್ತಮ ತಂಡಗಳೊಂದಿಗೆ ಸ್ಪರ್ಧಿಸುವರು. ಅತ್ಯುತ್ತಮ ಪ್ರದರ್ಶನ ತೋರಿದವರಿಗೆ ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನಲ್ಲಿ ಆಡುವ ಅಪೂರ್ವ ಅವಕಾಶವನ್ನೂ ನೀಡಲಾಗುತ್ತದೆ.

ಚಾಂಪಿಯನ್‌ಷಿಪ್ ಕುರಿತು ಮಾತನಾಡಿದ ಗೌತಮ್ ಗಂಭೀರ್, ಭಾರತದ ಕಾಲೇಜುಗಳಲ್ಲಿ ಕ್ರಿಕೆಟ್‌ನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಹೀಗಾಗಿ ರೆಡ್‌ಬುಲ್ ಮತ್ತು ನಾನು ಈ ಸರಣಿ ಆಯೋಜಿಸಲು ನಿರ್ಧರಿಸಿದ್ದೇವೆ. ಕಾಲೇಜುಗಳಲ್ಲಿ ಶ್ರೇಷ್ಠ ಆಟಗಾರರಿದ್ದಾರೆ. ಆದರೆ ಅವರಿಗೆ  ಸೂಕ್ತ ವೇದಿಕೆ ಸಿಗುತ್ತಿಲ್ಲ.
 
ಹೀಗಾಗಿ ಇದೊಂದು ಉತ್ತಮ ಅವಕಾಶ. ಇಲ್ಲಿ ವಿಜೇತರಾದವರಿಗೆ ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನಲ್ಲಿ ಆಡುವ ಅವಕಾಶ ಕೂಡ ಲಭಿಸಲಿದೆ ಎಂದರು.
 
ಯುವ ಕ್ರಿಕೆಟಿಗರು, ಮಾಜಿ ಆಟಗಾರ ದಿನೇಶ್ ಮೊಂಗಿಯಾ, ಯುವ ಪ್ರತಿಭೆ ವರುಣ್ ಆರನ್, ಸಚಿನ್ ತೆಂಡೂಲ್ಕರ್ ಫಿಟ್‌ನೆಸ್ ತರಬೇತುದಾರ ಅಮೋಘ್ ಪಂಡಿತ್ ಮತ್ತು ರೆಡ್‌ಬುಲ್ ಕ್ಯಾಂಪಸ್ ಕ್ರಿಕೆಟ್‌ನ ಮುಖ್ಯ ಸಲಹೆಗಾರ ಹಾಗೂ ಕರ್ನಾಟಕದ ಮಾಜಿ ಆಟಗಾರ ಅಶ್ವಿನ್‌ಪೂಂಜಾ ತರಬೇತಿ ನೀಡಲಿದ್ದಾರೆ. 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.