ನೀವು ಪ್ರತಿ ನಿತ್ಯ ಯೋಗ ಮಾಡುತ್ತೀರಾ? ಯೋಗ ಮಾಡುತ್ತಿದ್ದರೇ ಒಂದೇ ಥರದ ಯೋಗ ಮಾಡಿ ಬೋರ್ ಆಗಿದೀಯಾ? ಹಾಗಿದ್ದರೆ ಮಾಜಿ ವಿಶ್ವ ಸುಂದರಿ, ಬಾಲಿವುಡ್ ಲಾರಾ ದತ್ತ ಹೊಸ ಪ್ರಯೋಗ ಮಾಡಿದ್ದಾರೆ. ಅದನ್ನು ನೀವು ಅನುಸರಿಸಬಹುದು. ಇದು ನಿಮಗೆ ಫಿಟ್‌ನೆಸ್ ಜತೆ ಮಜಾ ನೀಡಲಿದೆ.
ಲಾರಾ ದತ್ತ ತಮ್ಮ ಪವರ್ ಪ್ಲೇ ಯೋಗ ಸಿರೀಸ್‌ನ ಎರಡನೇ ಆವೃತ್ತಿಯ ಡಿವಿಡಿಯನ್ನು ಬೆಂಗಳೂರಿನ ರಿಲಯನ್ಸ್ ಟೈಮ್‌ಔಟ್‌ನಲ್ಲಿ ಲೋಕಾರ್ಪಣೆ ಮಾಡಿದರು. ಗಾಢ ಹಳದಿ ಫ್ರಾಕ್ ಧರಿಸಿದ್ದ ಆಕೆ ಮುಖದ ತುಂಬ ನಗು ತುಂಬಿಕೊಂಡಿದ್ದರು. ಎರಡು ವಾರಗಳ ಹಿಂದಷ್ಟೇ ಟೆನಿಸ್ ಆಟಗಾರ ಮಹೇಶ್ ಭೂಪತಿ ಅವರನ್ನು ವರಿಸಿರುವ ಲಾರಾ ಮುಖ ಅವರ ಹಳದಿ ಬಣ್ಣದ ಉಡುಪಿಗೆ ಸ್ಪರ್ಧೆ ನೀಡುವಂತೆ ಮಿಂಚುತ್ತಿತ್ತು.
ಈ ಹಿಂದೆ ರಿಲಯನ್ಸ್ ಹೋಮ್ ವಿಡಿಯೋ ಸಹಯೋಗದಲ್ಲಿ ಯೋಗದ ಮೂಲಕ ಪುನಃ ಆರೋಗ್ಯ ಗಳಿಸುವುದು ಮತ್ತು ನವ ಯೌವನ ಪಡೆಯುವುದು ಹೇಗೆ ಎಂಬುದರ ಬಗ್ಗೆ ಡಿವಿಡಿ ಹೊರ ತಂದಿದ್ದರು. ಯೋಗದ ಮೂಲಕ ಆರೋಗ್ಯ, ವ್ಯಾಯಾಮ ಮತ್ತು ದೀಘಾಯಸ್ಸು ಪಡೆಯುವುದು ಹೇಗೆ ಎಂಬುದನ್ನು ಈ ಹೊಸ ಡಿವಿಡಿಯಲ್ಲಿ ವಿವರಿಸಿದ್ದಾರೆ.
ದೈಹಿಕ ಸಾಮರ್ಥ್ಯ ವೃದ್ಧಿಸಿಕೊಳ್ಳುವುದು ಹಾಗೂ ಹೃದಯದ ಮಾಂಸಖಂಡಗಳನ್ನು ಬಲಪಡಿಸುವ ವ್ಯಾಯಾಮಗಳು ಈ ಡಿವಿಡಿಯಲ್ಲಿ ಇವೆ. ಎಲ್ಲಾ ವಯೋಮಾನದವರು ಇದನ್ನು ಅಳವಡಿಸಿಕೊಳ್ಳಬಹುದಾಗಿದ್ದು ಆಟದ ಮಜಾ ಇದರಲ್ಲಿದೆ.
ಪ್ರತಿನಿತ್ಯ ನಾವು ಚಟುವಟಿಕೆಯಿಂದ ಇರಲು ವ್ಯಾಯಾಮ ಅತ್ಯಗತ್ಯ. ಫಿಟ್‌ನೆಸ್ ಕಾಯ್ದುಕೊಳ್ಳಲು ಯೋಗ ತುಂಬಾ ಮುಖ್ಯ. ತೂಕ ಕಡಿಮೆ ಮಾಡಿಕೊಳ್ಳುವ ಹಾಗೂ ಫಿಟ್‌ನೆಸ್ ಕಾಪಾಡುವ ಗುಟ್ಟು ಇದರಲ್ಲಿದೆ ಇದೆ ಎಂದು ಹೂನಗು ಬೀರಿದರು ಈ ಮಾಜಿ ವಿಶ್ವಸುಂದರಿ.
ನಾನು ಬೆಂಗಳೂರಿನವಳು ಎನ್ನುತ್ತಾ ನೆರೆದಿದ್ದವರ ಮನಗೆದ್ದರು. ವಿವಾಹದ ಬಗ್ಗೆ ಮನಬಿಚ್ಚಿ ಮಾತನಾಡಿದರು. ಮದುವೆಯಾದ ನಂತರ ತುಂಬಾ ಸಂತೋಷದಿಂದ ಇದ್ದೇನೆ. ಐ ಯಾಮ್ ಲಕ್ಕಿ ಅಂತ ನಗು ನಗುತ್ತಲೇ ಹೇಳಿದರು. ಅವರನ್ನು ನೋಡಲು ಯುವಕ ಯುವತಿಯರು ಮುಗಿಬಿದ್ದಿದ್ದರು. ಆಟೋಗ್ರಾಫ್ ಕೇಳಿದವರಿಗೆಲ್ಲಾ ಸಂತೋಷದಿಂದಲೇ ಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.