ADVERTISEMENT

ಲೇಪಾಕ್ಷಿಯ ಅನಾವರಣ

ಸುಚೇತನಾ ನಾಯ್ಕ
Published 21 ಮಾರ್ಚ್ 2011, 19:30 IST
Last Updated 21 ಮಾರ್ಚ್ 2011, 19:30 IST

ಕಲಾವಿದರ ಕಲ್ಪನೆ ಇಲ್ಲಿ ಶಿಲ್ಪದ ರೂಪದಲ್ಲಿ ಅನಾವರಣಗೊಂಡಿದೆ. ಬಿದಿರಿಗೆ ಬೊಂಬೆಯ ರೂಪು ದೊರೆತಿದೆ. ವಿವಿಧ ಜಾತಿಯ ಕಟ್ಟಿಗೆಗಳ ತೆಳ್ಳನೆಯ ಹಾಳೆಗಳು ದೈವ ಸ್ವರೂಪ ಪಡೆದುಕೊಂಡಿದ್ದರೆ, ಕಂಚಿಗೆ ಪುತ್ಥಳಿಯ ಮೆರಗು ದೊರೆತಿದೆ. ಇದು ‘ಲೇಪಾಕ್ಷಿ’ ಎಫೆಕ್ಟ್!

ಚಿತ್ರಕಲಾ ಪರಿಷತ್‌ನಲ್ಲಿ ‘ಲೇಪಾಕ್ಷಿ’ ವತಿಯಿಂದ ಈಗ ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಮೇಳ ನಡೆಯುತ್ತಿದ್ದು, ಕಲಾ ಸಂಪತ್ತನ್ನು ಒಂದೇ ಸೂರಿನಡಿ ನೋಡುವುದಷ್ಟೇ ಅಲ್ಲ, ನೂರಾರು ಬಗೆಯ ಕಲಾಕೃತಿಗಳನ್ನು ಕೊಳ್ಳುವ ಅವಕಾಶವೂ ಇಲ್ಲಿದೆ.ಅಷ್ಟೆ ಅಲ್ಲದೆ ವಿವಿಧ ಬಗೆಯ ಬೆಡ್‌ಷೀಟ್, ಚೂಡಿದಾರ್ ಸೆಟ್, ಡ್ರೆಸ್ ಮೆಟೀರಿಯಲ್ ಕೂಡ ಇಲ್ಲುಂಟು. ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಗುಜರಾತ್ ರಾಜ್ಯಗಳ ಕುಶಲಕರ್ಮಿಗಳು ಇಲ್ಲಿ ತಮ್ಮ ರಾಜ್ಯದ ಸಿರಿಯನ್ನು ಬೆಂಗಳೂರಿಗರಿಗೆ ಉಣಬಡಿಸಲು ಬಂದಿದ್ದಾರೆ.

ವಸ್ತ್ರಪ್ರಿಯರಿಗಂತೂ ಇಲ್ಲಿ ಹಬ್ಬವೇ ಹಬ್ಬ. ಕಣ್ಣು ಹಾಯಿಸಿದಲ್ಲೆಲ್ಲ ವಸ್ತ್ರಗಳದ್ದೇ ಕಾರುಬಾರು. ಕಲಂಕಾರಿ, ಮಂಗಲಗಿರಿ, ಪೋಚಂಪಲ್ಲಿ, ವೆಂಕಟಗಿರಿ, ಸಿದ್ದಿಪೇಟ್, ನಾರಾಯಣಪೇಟ್, ಚಿರಾಲಾ, ಗದ್ವಾಲ್ ಅಬ್ಬಬ್ಬಾ... ಎಷ್ಟೊಂದು ಬಗೆಯ ವಸ್ತ್ರವೈವಿಧ್ಯಗಳು ಇಲ್ಲಿವೆ. ಮಹಿಳೆಯರಿಗಾಗಿಯೇ ಒಡವೆಗಳ ಭಂಡಾರ ಇಲ್ಲಿದೆ. ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ ಸುಂದರ ಕಿವಿಯ ಓಲೆ, ಬಳೆಗಳು, ಸರಗಳು, ಹೈದರಾಬಾದ್ ಮುತ್ತುಗಳು, ಮೆಟಲ್ ಆಭರಣಗಳು ಇಲ್ಲಿವೆ. ಬ್ಯಾಗ್‌ಗಳು, ಚರ್ಮದ ಸಾಮಗ್ರಿ, ವೈವಿಧ್ಯಮಯ ಶೈಲಿಯ ಬಣ್ಣಬಣ್ಣದ ಪಾದರಕ್ಷೆಗಳು, ಕೊಂಡಪಲ್ಲಿ ಆಟಿಕೆಗಳ ವಿಶೇಷ ಸಂಗ್ರಹವೂ ಇದೆ.

ಹಾಂ.. ಹಾಗೆಯೇ ಒಂದು ಮಾತು. ವಸ್ತ್ರಗಳ ವಿಷಯದಲ್ಲಿ ಸ್ವಲ್ಪ ಕಡಿಮೆ ಬೆಲೆ ಇದ್ದರೂ, ಉಳಿದ ಸಾಮಗ್ರಿಗಳಿಗೆ ಈ ಮಾತು ಅನ್ವಯಿಸುವುದಿಲ್ಲ. ಆದರೆ ಮಾರುಕಟ್ಟೆ ಬೆಲೆಗಿಂತ ಕಡಿಮೆ ಎಂದು ಮುಲಾಜಿಲ್ಲದೆ ಹೇಳಬಹುದು. ಮಾ.27ರ ವರೆಗೂ ಬೆಳಿಗ್ಗೆ 11ರಿಂದ ರಾತ್ರಿ 7ರ ಮಧ್ಯೆ ಈ ಪ್ರದರ್ಶನ ಮತ್ತು ಮಾರಾಟ ಮೇಳ ತೆರೆದಿರುತ್ತದೆ. ಸ್ಥಳ: ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.