ADVERTISEMENT

ವರ್ಣಚೈತ್ರದಲ್ಲಿ ದಕ್ಷಯಜ್ಞ

​ಪ್ರಜಾವಾಣಿ ವಾರ್ತೆ
Published 25 ಜನವರಿ 2013, 19:59 IST
Last Updated 25 ಜನವರಿ 2013, 19:59 IST
ಕಲಾಕೃತಿ ರಚನೆಯಲ್ಲಿ ಹಿರಿಯ ಕಲಾವಿದ ಕೆ.ಎನ್. ರಾಮಚಂದ್ರನ್
ಕಲಾಕೃತಿ ರಚನೆಯಲ್ಲಿ ಹಿರಿಯ ಕಲಾವಿದ ಕೆ.ಎನ್. ರಾಮಚಂದ್ರನ್   

ರಾಜರಾಜೇಶ್ವರಿ ನಗರದ ಬಾಲಕೃಷ್ಣ ಬಯಲು ರಂಗಮಂದಿರದಲ್ಲಿ ಇತ್ತೀಚೆಗೆ `ಕೊಬಾಲ್ಟ್ ವರ್ಣಚೈತ್ರ' ಎಂಬ ವೈವಿಧ್ಯಮದ ಸಾಂಸ್ಕೃತಿಕ ಕಾರ್ಯಕ್ರಮ, ಚಿತ್ರಕಲಾ ಸ್ಪರ್ಧೆ ಮತ್ತು ಪ್ರದರ್ಶನ ಹಾಗೂ ಯಕ್ಷಗಾನ ನಡೆಯಿತು.

ಚಿತ್ರಕಲಾ ಸ್ಪರ್ಧೆಯಲ್ಲಿ ಸುಮಾರು 350ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದು, ಕೊಬಾಲ್ಟ್ ಕಲಾ ಪ್ರದರ್ಶನದಲ್ಲಿ 200ಕ್ಕೂ ಕಲಾಕೃತಿಗಳಿದ್ದವು. ಹಿರಿಯ ಮತ್ತು ಯುವಕಲಾವಿದರಿಂದ ಕಲಾ ಶಿಬಿರ ನಡೆದಿತ್ತು. ಹಿರಿಯ ಕಲಾವಿದರಾದ ಕೆ.ಎನ್. ರಾಮಚಂದ್ರನ್ ರಚಿಸಿದ ಕಂದೀಲು ಹಿಡಿದು ಸಾಗುತ್ತಿರುವ ರೈತನ ಚಿತ್ರ ಮಾತ್ತು ಕಾಂತರಾಜ ರಚಿಸಿದ `ವೃಕ್ಷ ಮತ್ತು ರೇ' ಎಲ್ಲರ ಗಮನ ಸೆಳೆಯಿತು. ಚಿತ್ರಕಲಾ ಪ್ರದರ್ಶನ ಮತ್ತು ಕಲಾ ಶಿಬಿರವನ್ನು ಸಾವಿರಾರು ಜನರು ವೀಕ್ಷಿಸಿದರು.

ಸಾಯಂಕಾಲ ನಡೆದ ಸಭಾ ಕಾರ್ಯಕ್ರಮವನ್ನು ನಟ ವಿಜಯಕಾಶಿ ಅವರು ಉದ್ಘಾಟಿಸಿದರು. ಜೀವನದಲ್ಲಿ ಕಲೆಯ ಮಹತ್ವದ ಬಗ್ಗೆ ಮಾತನಾಡಿದ ವಿಜಯಕಾಶಿ, `ಜನರ ಪ್ರೋತ್ಸಾಹ ಕಲೆಗೆ ಅತಿ ಮುಖ್ಯ' ಎಂದರು. ಸ್ಥಳೀಯ ಮುಖಂಡ ರಾಜಕುಮಾರ್ ಅವರು ಮಿತ್ರ ಎನರ್ಜಿ ಇಂಡಿಯಾ ಲಿಮಿಟೆಡ್‌ನ ಅಸೋಸಿಯೆಟ್ ಪ್ರೆಸಿಡೆಂಟ್ ಗುರುಪಾದ ಹೆಗಡೆ, ರೇಡಿಯಾಲಜಿ ತಜ್ಞ ಮಾಧವ ಹೆಗಡೆ ಅತಿಥಿಗಳಾಗಿ ಭಾಗವಹಿಸಿದ್ದರು.

ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ಹಾಗೂ `ಕೊಬಾಲ್ಟ್' ಪ್ರಶಸ್ತಿಯನ್ನು ಕೊಬಾಲ್ಟ್ ವತಿಯಿಂದ ನೀಡಲಾಯಿತು. ಲಲಿತಾ ಹೆಗಡೆ ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮದ ಬಳಿಕ ಪೂರ್ಣಚಂದ್ರ ಯಕ್ಷಗಾನ ಪ್ರತಿಷ್ಠಾನ ಕೊಂಡದಕುಳಿ ಪ್ರಸ್ತುತಪಡಿಸಿದ ಯಕ್ಷಗಾನ ಪ್ರಸಂಗ `ದಕ್ಷಯಜ್ಞ'ವು ವರ್ಣ ಚೈತ್ರದ ಪ್ರಮುಖ ಆಕರ್ಷಣೆಯಾಯಿತು.

ದಕ್ಷನಾಗಿ ಪ್ರವೇಶಿಸಿದ ಗಣಪತಿ ಹೆಗಡೆ ತೋಟಮನೆ ಸಭೆಯಲ್ಲಿದ್ದವರನ್ನು ಮಾತನಾಡಿಸಿದ ರೀತಿ ಅತ್ಯುತ್ತಮವಾಗಿತ್ತು. `ಈ ಸಕಲ ಸಭೆಯೆದ್ದಿದಿರ್ಗೊಂಡುದೆನ್ನನು ಈಶ ತಾನೇಳದಿಹನು' ಎನ್ನುವ ಪದ್ಯಕ್ಕೆ ಅವರು ಅಭಿನಯಿಸಿದ ರೀತಿ, ಒಟ್ಟು ಅಭಿನಯವು ಅವರ ಅನುಭವಕ್ಕೆ ಕೈಗನ್ನಡಿಯಂತಿತ್ತು. ಲಲಿತಕಲಾ ಅಕಾಡೆಮಿ ಅಧ್ಯಕ್ಷರಾದ ಚಿ. ಸು. ಕೃಷ್ಣಸೆಟ್ಟಿಯವರು ಕಲಾವಿದರನ್ನು ಗೌರವಿಸಿದರು. ಚಿತ್ರ ಕಲಾವಿದ ಗಣಪತಿ ಎಸ್. ಹೆಗಡೆ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.