ADVERTISEMENT

ವರ್ಣ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 19:30 IST
Last Updated 28 ಅಕ್ಟೋಬರ್ 2011, 19:30 IST

ಖ್ಯಾತ ಕಲಾವಿದರಾದ ಬಿ.ಪಿ.ಕಾರ್ತಿಕ್, ಎಚ್. ಎಂ. ಬಸವಪ್ರಭು, ಎಫ್.ವಿ.ಚಿಕ್ಕಮಠ, ದಯಾನಂದ್ ಕಾಮ್ಕರ್, ರಮೇಶ್ ಹರಿ ಪಚ್ಚಪಾಂಡೆ ಹಾಗೂ ಸುಧೀರ್ ವಿ.ಫಡ್ನಿಸ್ ಅವರ ಅಪರೂಪದ `ವರ್ಣ ಸಂಭ್ರಮ~ ಚಿತ್ರಕಲಾಕೃತಿ ಪ್ರದರ್ಶನ ಸೋಮವಾರದ ವರೆಗೆ ನಡೆಯಲಿದೆ.

ಕಾರ್ತಿಕ್ ಅವರದು ಅಮೂರ್ತ ಕಲಾಕೃತಿ. ಇದು ಯಾವುದೇ ವಿಷಯಾಧಾರಿತವಾಗಿಲ್ಲ. ಆಗಸದಲ್ಲಿ ಮೋಡ ಚದುರುತ್ತಾ, ಚದುರುತ್ತಾ ಯಾವ ಆಕಾರ ಪಡೆಯುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಆ ರೀತಿಯಲ್ಲಿವೆ ಇವರ ಕಲಾಕೃತಿಗಳು. ಭೂಮಿಯನ್ನು ಅಗೆದಂತೆಲ್ಲಾ ಕಾಣಸಿಗುವ ಪದರಗಳ ರಚನೆಯು ಸಹ ಇವರ ಕಲಾಕೃತಿಗೆ ಸ್ಫೂರ್ತಿ ನೀಡಿದೆ.

ಇವರ ಎಲ್ಲ ಕಲಾಕೃತಿಗಳ ಒಳಗೂ ಅಧ್ಯಾತ್ಮದ ಸೆಲೆಯಿದೆ. ಜಗತ್ತಿನಲ್ಲಿ ಶಾಂತಿ ನೆಲಸಬೇಕಾದರೆ ಬುದ್ಧನ ತತ್ವಗಳು ಎಲ್ಲೆಡೆ ಸಾಕಾರಗೊಳ್ಳಬೇಕು ಎಂಬುದನ್ನು ಬಿಂಬಿಸುತ್ತವೆ. ಬುದ್ಧ ಹಾಗೂ ಬಸವಣ್ಣನವರ ವಿಶ್ವಪಥ ಬಗ್ಗೆ ಚಿಂತನೆ ನಡೆಯಬೇಕು ಎಂಬುದನ್ನು ಸೂಚಿಸುತ್ತವೆ.

ಖ್ಯಾತ ಕಲಾವಿದ ರಮೇಶ್ ಹರಿ ಪಚ್ಚಪಾಂಡೆ ಅವರ ಕಲಾಕೃತಿಗಳು ಬೆರಗು ಹುಟ್ಟಿಸುತ್ತವೆ. ಮುರಳಿಯ ಕೊಳಲಿನ ನಿನಾದಕ್ಕೆ ತಲೆದೂಗುತ್ತಿರುವ ಪಶುಗಳು, ದನಗಾಹಿ ಕೃಷ್ಣ ಗೋಪಿಕೆಯೊಂದಿಗೆ ಇರುವ ಸನ್ನಿವೇಶ ಮನಸ್ಸಿಗೆ ಮುದನೀಡುತ್ತವೆ. ಮನಸ್ಸಿನ ಭಾವನೆಗಳನ್ನು ಮುಖದಲ್ಲಿ ಬಿಂಬಿಸುವ ಕಲೆ ಇವರಿಗೆ ಸಿದ್ಧಿಸಿದೆ.
 
ಜತೆಗೆ ಕಲೆಯಲ್ಲಿ ವಿಭಿನ್ನ ಪ್ರಯೋಗಗಳನ್ನು ಮಾಡುವ ಮೂಲಕ ತಮ್ಮ ಸೃಜನಶೀಲತೆ ಮೆರೆದಿದ್ದಾರೆ. ಇವರ ಕಲಾಕೃತಿಗಳಲ್ಲಿ ಹಳ್ಳಿಯ ಸೊಗಡಿದೆ, ಜನಪದದ ಸ್ಪರ್ಶವಿದೆ.

ಕಲಾವಿದ ಎಚ್.ಎಂ. ಬಸವಪ್ರಭು ಅವರ ಕಲಾಕೃತಿಗಳು ಭೂರಮೆಯ ಹೊರಮೈನ ಚಿತ್ರಣವನ್ನು ಬಿಂಬಿಸಿವೆ. ಪ್ರಕೃತಿಯ ಚೆಲುವು, ವನದೇವತೆಯ ಹಸಿರು, ನೀಲಾಕಾಶ, ಜುಳುಜುಳು ಹರಿಯುವ ನದಿಯ ನಿನಾದ ಇವೆಲ್ಲವೂ ಸಾದೃಶವಾಗಿ ಚಿತ್ರಿತಗೊಂಡಿವೆ.

ಎಫ್.ಎಂ. ಚಿಕ್ಕಮಠ ಹಾಗೂ ದಯಾನಂದ್ ಕಾಮ್ಕರ್ ಅವರು ಮನುಷ್ಯನ ಆಕೃತಿಯನ್ನು ಇರಿಸಿಕೊಂಡು ತಮ್ಮ ಸೃಜನಶೀಲತೆಯನ್ನು ಮೆರೆದಿದ್ದಾರೆ. ಕಲಾವಿದ ಸುಧೀರ್ ಅವರ ಕಲಾಕೃತಿಗಳಲ್ಲಿ ಶ್ಲೋಕಗಳು ಕಲಾಕೃತಿಯ ಸೊಬಗು ಪಡೆದುಕೊಂಡಿವೆ.
ಸ್ಥಳ: ಚಿತ್ರಕಲಾ ಪರಿಷತ್ತು. ಬೆಳಿಗ್ಗೆ 10 ರಿಂದ ಸಂಜೆ 7. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.