ADVERTISEMENT

ವಿಜೇತರ ಗೆಲುವು ನಲಿವು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 19:30 IST
Last Updated 24 ಫೆಬ್ರುವರಿ 2012, 19:30 IST
ವಿಜೇತರ ಗೆಲುವು ನಲಿವು
ವಿಜೇತರ ಗೆಲುವು ನಲಿವು   

`ಕ್ವಿಜ್ ಇಸ್ ಅವರ್ ಪ್ಯಾಷನ್~ ಎನ್ನುವಾಗ ಐಐಎಂಬಿ ವಿದ್ಯಾರ್ಥಿಗಳ ಕಣ್ಣುಗಳಲ್ಲಿ ಹೊಳಪು ಕಾಣಿಸುತ್ತಿತ್ತು. ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆ ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್‌ನಲ್ಲಿ ಆಯೋಜಿಸಿದ್ದ ಅಂತರ ಕಾಲೇಜು ರಸಪ್ರಶ್ನೆ ಸ್ಪರ್ಧೆ `ಬ್ರೇನ್ಸ್ ಬೀಟ್~ನಲ್ಲಿ ಜಯಗಳಿಸಿದ ವಿಶ್ವಾಸ್, ಕಲೈ ಹಾಗೂ ನಿಶಾಂತ್ ಅವರು ಪ್ರಥಮ ಸ್ಥಾನ ಪಡೆದ ಖುಷಿಯಲ್ಲಿ ಆಡಿದ ಮಾತುಗಳಿವು...

`ನಾವು ಮೂವರು ಐಐಎಂಬಿಯ  ಪ್ರಥಮ ವರ್ಷದ ವಿದ್ಯಾರ್ಥಿಗಳು. ಕಲೈ ಚೆನ್ನೈನಿಂದ ಬಂದವನು. ತುಂಬಾ ಬುದ್ಧಿವಂತ ಹುಡುಗ. ನಿಶಾಂತ್ ಪುಣೆ ಹುಡುಗ, ವಿಶ್ವಾಸ್ ಬೆಂಗಳೂರಿನವ. ನಮಗೆ ನಿಯತಕಾಲಿಕಗಳು, ಮ್ಯಾಗಝಿನ್ಸ್ ಹಾಗೂ ಪುಸ್ತಕಗಳನ್ನು ಓದುವುದೆಂದರೆ ತುಂಬಾ ಇಷ್ಟ. ಮೂವರಿಗೂ ಕ್ರಿಕೆಟ್ ಅಂದರೆ ತುಂಬಾ ಕ್ರೇಜ್. ಕಲೈ ಟಾಟಾ ಕ್ರೂಸಿಬಲ್ ಕ್ವಿಜ್‌ನಲ್ಲಿ ಭಾಗವಹಿಸಿದ್ದ. ಅವನು ರಾಷ್ಟ್ರ ಮಟ್ಟದ ಅನೇಕ ಕ್ವಿಜ್‌ಗಳಲ್ಲಿ ಭಾಗವಹಿಸಿದ್ದಾನೆ. ವಿಶ್ವಾಸ್‌ಗೆ ವಲಯ ಮಟ್ಟದ ಅನೇಕ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಭಾಗವಹಿಸಿದ ಅನುಭವವಿದೆ.

ನಿಶಾಂತ್ ತುಂಬಾ ಸಪೋರ್ಟಿವ್. ನಾವು ಪ್ರತಿ ನಿತ್ಯ ಪತ್ರಿಕೆ, ನ್ಯೂಸ್ ಚಾನೆಲ್ ನೋಡುವ ಮೂಲಕ ನಮ್ಮ ಜ್ಞಾನವನ್ನು ಅಪ್‌ಡೇಟ್ ಮಾಡಿಕೊಳ್ಳುತ್ತೇವೆ. ಇವೆಲ್ಲಕ್ಕಿಂತ ನಮಗೆ ಪುಸ್ತಕಗಳೆಂದರೇ ಅಚ್ಚುಮೆಚ್ಚು. ಪದವಿ ಮುಗಿದ ನಂತರ ನಾವು ಮೂವರು ಮ್ಯಾನೇಜ್‌ಮೆಂಟ್ ಕನ್ಸಲ್ಟಿಂಗ್‌ನಲ್ಲಿ ಕೆರಿಯರ್ ರೂಪಿಸಿಕೊಳ್ಳಬೇಕು ಅಂದುಕೊಂಡಿದ್ದೇವೆ.

ಆದರೆ ಕಲೈಗೆ ಮಾತ್ರ ಮೆಕ್ಯಾನಿಕಲ್ ಎಂಜಿನಿಯರ್ ಆಗಬೇಕು ಎಂಬ ಆಸೆ...
ಸ್ಪರ್ಧೆಯಲ್ಲಿ ಗೆದ್ದ ಖುಷಿಯಲ್ಲಿ ಮೂವರು ವಿದ್ಯಾರ್ಥಿಗಳು ತಮ್ಮ ತಂಡದ ಗೆಳೆಯರ ಗುಣಗಾನ ಮಾಡುತ್ತಿದ್ದುದು ಹೀಗೆ.

`ಈ ರಸಪ್ರಶ್ನೆ ಕಾರ್ಯಕ್ರಮ ನಮ್ಮ ಪ್ರತಿಭೆ ಅನಾವರಣಕ್ಕೆ ಒಂದು ಉತ್ತಮ ವೇದಿಕೆ ಕಲ್ಪಿಸಿತು. ನನಗೆ ಸಿನಿಮಾ ನೋಡುವುದು ಹಾಗೂ ಪುಸ್ತಕ ಓದುವುದೆಂದರೆ ತುಂಬಾ ಇಷ್ಟ. ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಕೇಳಿದ ಬಹುತೇಕ ಪ್ರಶ್ನೆಗಳು ಇದನ್ನೇ ಅವಲಂಬಿಸಿದ್ದರಿಂದ ನಾವು ಸ್ಪರ್ಧೆಯಲ್ಲಿ ಗೆಲ್ಲಲು ಸುಲಭವಾಯಿತು.

ನಮ್ಮ ಮೂವರ ನಡುವಿನ ಹೊಂದಾಣಿಕೆ ಕೂಡ ಚೆನ್ನಾಗಿತ್ತು. ಈ ಸ್ಪರ್ಧೆ ನಮ್ಮ ಜ್ಞಾಪಕ ಶಕ್ತಿಗೆ ಸಾಣೆ ಹಿಡಿಯುವುದರ ಜತೆಗೆ ಸಾಕಷ್ಟು ಮನರಂಜನೆ ಕೂಡ ನೀಡಿತು. ಇಂತಹ ಉತ್ತಮ ಅವಕಾಶ ಕಲ್ಪಿಸಿಕೊಟ್ಟ ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ತುಂಬಾ ಧನ್ಯವಾದಗಳು~ ಎಂದರು ವಿಶ್ವಾಸ್.

ಈ ರಸಪ್ರಶ್ನೆ ಸ್ಪರ್ಧೆಯಲ್ಲಿ ಕಲೆ, ವಿಜ್ಞಾನ, ವಾಣಿಜ್ಯ, ಎಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಐಐಎಂ ಬೆಂಗಳೂರು, ಬಿಎಂಎಸ್ ಕಾಲೇಜು, ಪೆಸಿಟ್, ಆರ್.ವಿ. ಎಂಜಿನಿಯರಿಂಗ್ ಕಾಲೇಜು, ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು, ಆರ್.ಎನ್.ಶೆಟ್ಟಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಎ.ಪಿ.ಎಸ್. ಎಂಜಿನಿಯರಿಂಗ್ ಕಾಲೇಜು ಮತ್ತು ಕ್ರೈಸ್ಟ್ ಯೂನಿವರ್ಸಿಟಿ ವಿದ್ಯಾರ್ಥಿಗಳು ರಸಪ್ರಶ್ನೆ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾದ ತಂಡಗಳು.

ಪ್ರತಿ ತಂಡದಲ್ಲಿ ಮೂವರು ವಿದ್ಯಾರ್ಥಿಗಳಿದ್ದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ಐದು ಸುತ್ತುಗಳಿದ್ದವು. ಸ್ಕ್ರೀನ್ ಮೇಲೆ ತೋರುತ್ತಿದ್ದ ಪ್ರಶ್ನೆ ಅಥವಾ ಚಿತ್ರಗಳಿಗೆ ಸರಿಯಾದ ಉತ್ತರವನ್ನು ಹಾಳೆಯ ಮೇಲೆ ಬರೆದು ಕ್ವಿಜ್ ಮಾಸ್ಟರ್‌ಗೆ ತೋರಿಸಬೇಕಿತ್ತು.

ಪ್ರತಿ ಪ್ರಶ್ನೆಗೆ ಉತ್ತರ ಹೇಳಿದಾಗಲೂ ವಿದ್ಯಾರ್ಥಿಗಳ ಬಾಯಿಂದ ಎಸ್... ಎಸ್... ಎಂಬ ಉದ್ಗಾರ ಬರುತ್ತಿತ್ತು. ಮೊದಲಿನಿಂದಲೂ ಕೊನೆವರೆಗೂ ಉತ್ತಮ ನಡೆ ಕಾಯ್ದುಕೊಂಡ ಬಂದ ಐಐಬಿಎಂ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ ದೊರೆಯಿತು. ಪೆಸೆಟ್, ಸೇಂಟ್ ಜಾನ್ಸ್ ಕಾಲೇಜು ಹಾಗೂ ಎಪಿಎಸ್ ಎಂಜಿನಿಯರಿಂಗ್ ಕಾಲೇಜು ಕ್ರಮವಾಗಿ ನಂತರದ ಮೂರು ಸ್ಥಾನ ಪಡೆದುಕೊಂಡವು.

ಇತಿಹಾಸ, ವಿಶ್ವದ ಪ್ರಚಲಿತ ವಿದ್ಯಮಾನಗಳು, ಪ್ರಸಿದ್ಧ ವ್ಯಕ್ತಿಗಳು, ರಾಜಧಾನಿ, ಗಣಿತ, ವಿಜ್ಞಾನ, ಸಿನಿಮಾ, ನೊಬೆಲ್ ಪ್ರಶಸ್ತಿ ಪಡೆದವರು, ಪಕ್ಷಿ ಪ್ರಪಂಚ ಹೀಗೆ ಎಲ್ಲ ವಿಷಯವನ್ನು ಒಳಗೊಂಡ ಪ್ರಶ್ನೆಗಳನ್ನು ರಸಪ್ರಶ್ನೆಯಲ್ಲಿ ಕೇಳಲಾಯಿತು. ಕ್ವಿಜ್ ಮಾಸ್ಟರ್ ಅರುಣ್ ಮಣಿ ಅವರ ಸಾರಥ್ಯ ಈ ಕಾರ್ಯಕ್ರಮಕ್ಕೊಂದು ವಿಶೇಷ ಮೆರುಗು ತಂದು ಕೊಟ್ಟಿತು.                                            

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.