ADVERTISEMENT

ವಿಜ್ಞಾನದ ಬೆಳಕಿನ ಈ ಕಂತು...

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2012, 19:30 IST
Last Updated 20 ಏಪ್ರಿಲ್ 2012, 19:30 IST

ಹಲವು ವರ್ಷಗಳಿಂದ ವಿಜ್ಞಾನಕ್ಕೆ ಹೆಚ್ಚು ಪ್ರಾಮುಖ್ಯ ನೀಡುತ್ತಾ ಬಂದಿರುವ ಬೆಂಗಳೂರು ವಿಜ್ಞಾನ ವೇದಿಕೆ (ಬೆಂಗಳೂರು ಸೈನ್ಸ್ ಫೋರಂ) ತನ್ನ 45ನೇ ವಾರ್ಷಿಕ ಬೇಸಿಗೆ ವಿಜ್ಞಾನ ಶಾಲೆಯನ್ನು ಹಮ್ಮಿಕೊಂಡಿದೆ.

ಪ್ರತಿ ವರ್ಷದಂತೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆಂದು ಈ ಬಾರಿಯೂ ಆಯೋಜಿಸಲಾಗಿರುವ ಬೇಸಿಗೆ ವಿಜ್ಞಾನ ಶಾಲೆ ಏಪ್ರಿಲ್ 23ರಿಂದ ಆರಂಭಗೊಂಡು ಮೇ 12 ರವರೆಗೆ ನಡೆಯಲಿದೆ.

ಮಕ್ಕಳಲ್ಲಿ ವಿಜ್ಞಾನ ಕುರಿತು ಪ್ರಾಥಮಿಕ ಜ್ಞಾನ ಮೂಡಿಸಲು ಈ ಶಾಲೆಯನ್ನು ಹಲವು ವರ್ಷಗಳಿಂದ ನಡೆಸಲಾಗುತ್ತಿದೆ. ಅದರಲ್ಲೂ 10ನೇ ತರಗತಿ ಶಿಕ್ಷಣದ ಅತಿ ಮುಖ್ಯ ಘಟ್ಟವಾದ್ದರಿಂದ ಅವರಿಗೆಂದೇ ವಿಶೇಷವಾಗಿ ಈ ತರಗತಿಯನ್ನು ನಡೆಸಲಾಗುತ್ತಿದೆ. ಇದರಿಂದ ಮಕ್ಕಳಿಗೆ ತಮ್ಮ ಮುಂದಿನ ಉನ್ನತ ಶಿಕ್ಷಣದ ಆಯ್ಕೆಯ ಕುರಿತು ಗೊಂದಲ ನಿವಾರಣೆಯಾಗಲಿವೆ ಎನ್ನುತ್ತಾರೆ ಸಂಸ್ಥೆಯ ಅಧ್ಯಕ್ಷ ಡಾ. ಎ.ಎಚ್.ರಾಮರಾವ್.

ADVERTISEMENT

ಈ ವಿಜ್ಞಾನ ಕಲಿಕೆ ಪ್ರಕ್ರಿಯೆಯಲ್ಲಿ ಪೂರ್ಣ ಪಠ್ಯಕ್ರಮವಿರುವುದಿಲ್ಲ. ವಿಜ್ಞಾನದ ಅನೇಕ ಆಯಾಮಗಳನ್ನು ತಿಳಿಸುತ್ತಾ, ಮುಕ್ತವಾಗಿ ಚರ್ಚಿಸಲು, ಕಲಿಯಲು, ಅಭಿಪ್ರಾಯ ಹಂಚಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸಾಮಾನ್ಯ ತರಗತಿಗಳಲ್ಲಿ ಒತ್ತಡವಿದ್ದಂತೆ ಇಲ್ಲಿರುವುದಿಲ್ಲ. ಮಕ್ಕಳು ಇಷ್ಟಪಟ್ಟು ವಿಜ್ಞಾನದ ಬಗ್ಗೆ ತಿಳಿಯುವಂತೆ ಕುತೂಹಲ ಮೂಡಿಸುವುದೇ ಈ ವಿಜ್ಞಾನ ವೇದಿಕೆಯ ಉದ್ದೇಶ ಎಂದರು.

ತಂತ್ರಜ್ಞಾನದಲ್ಲಿ ದಿನನಿತ್ಯವೂ ಹೊಸ ಬೆಳವಣಿಗೆ ಆಗುತ್ತಿರುತ್ತದೆ. ಅದಕ್ಕೆ ತಕ್ಕಂತೆ ಮಕ್ಕಳೂ ತಮ್ಮ ಜ್ಞಾನ, ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕು. ಅದಕ್ಕೆ ಅನುಗುಣವಾಗಿ ಬೇಸಿಗೆ ಶಾಲೆಯಲ್ಲಿ ವಿಜ್ಞಾನದ ಕುರಿತು ಉಪನ್ಯಾಸ, ಪ್ರಯೋಗ ಎಲ್ಲವೂ ಉಚಿತವಾಗಿರುತ್ತದೆ. ಜೊತೆಗೆ ಪ್ರಮುಖ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರಗಳಿಗೆ ಭೇಟಿ ನೀಡುವ ಅವಕಾಶವೂ ಇಲ್ಲಿದೆ. ವಿಜ್ಞಾನಕ್ಕೆ ಸಂಬಂಧಿಸಿದ ಚಲನಚಿತ್ರಗಳನ್ನೂ ಮಕ್ಕಳಿಗೆ ಪ್ರದರ್ಶಿಸಲಾಗುತ್ತದೆ ಎಂದು ಅವರು ತಿಳಿಸಿದರು.

60 ಮಕ್ಕಳಿಗೆ ಈ ಬೇಸಿಗೆ ವಿಜ್ಞಾನ ಶಾಲೆಯಲ್ಲಿ ಅವಕಾಶವಿದ್ದು, ಈ ಬಾರಿ 25 ವಿಶೇಷ ಉಪನ್ಯಾಸಕರೊಂದಿಗೆ ಶಾಲೆ ನಡೆಸಲಾಗುವುದು. ನಿಮ್ಹಾನ್ಸ್‌ನ ಮನಃಶಾಸ್ತ್ರ ವಿಭಾಗದ
ಡಾ. ಸಿ.ಆರ್.ಚಂದ್ರಶೇಖರ್, ಥಟ್ ಅಂತ ಹೇಳಿ ಖ್ಯಾತಿಯ ಡಾ. ನ.ಸೋಮೇಶ್ವರ, ನ್ಯಾಷನಲ್ ಕಾಲೇಜು ಅಧ್ಯಾಪಕ ಡಾ. ಎಸ್.ಬಾಲಚಂದ್ರ ರಾವ್, ಐಐಎಸ್‌ಸಿಯ ಡಾ. ಹರೀಶ್ ಆರ್.ಭಟ್, ಇಸ್ರೋದ ಗುರುಪ್ರಸಾದ್, ಕೆ.ಎಲ್.ಇ ಕಾಲೇಜಿನ ಡಾ. ಕೆ. ಎ.ಬುಲ್‌ಬುಲೆ ಇನ್ನೂ ಹಲವು ವಿಶೇಷ ಉಪನ್ಯಾಸಕರು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಬಾಹ್ಯಾಕಾಶ ವಿಜ್ಞಾನ, ಮನಃಶಾಸ್ತ್ರ, ಹೀಗೆ ವಿಜ್ಞಾನದ ಪ್ರತಿ ಮಜಲಿನ ವಿಷಯಗಳನ್ನು ಆಸಕ್ತಿದಾಯಕವಾಗಿ ಇಲ್ಲಿ ಕಟ್ಟಿಕೊಡುತ್ತಾರೆ ಎಂದರು.

ವಿಜ್ಞಾನ ಕಲಿಕೆಯಲ್ಲಿ ಆಸಕ್ತಿಯಿದ್ದವರಿಗೆ ಇದೊಂದು ಉತ್ತಮ ಅವಕಾಶ. ಶಾಲೆಗಳು ನ್ಯಾಷನಲ್ ಕಾಲೇಜು, ಬಸವನಗುಡಿ ಇಲ್ಲಿ ನಡೆಯುತ್ತವೆ. ಬೆಳಿಗ್ಗೆ 8.30ರಿಂದ 11.30ರವರೆಗೆ ನಡೆಯುತ್ತದೆ. ಅರ್ಜಿಗಳನ್ನು ಪಡೆಯಲು ಮತ್ತು ಇನ್ನಿತರ ಮಾಹಿತಿಗೆ: 080-26674441 ಅಥವಾ 94823 92091 ಸಂಪರ್ಕಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.