ADVERTISEMENT

ವಿದೇಶಿ ಭಾಷಾ ಕಲಿಕೆಗೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 30 ಮೇ 2018, 19:30 IST
Last Updated 30 ಮೇ 2018, 19:30 IST
ವಿದೇಶಿ ಭಾಷಾ ಕಲಿಕೆಗೆ ಬೇಡಿಕೆ
ವಿದೇಶಿ ಭಾಷಾ ಕಲಿಕೆಗೆ ಬೇಡಿಕೆ   

ಕೇವಲ ನಾಲ್ಕು ವಿದ್ಯಾರ್ಥಿಗಳಿಂದ ಆರಂಭವಾದ ಬೆಂಗಳೂರು ಕೇಂದ್ರೀಯ ವಿಶ್ವವಿದ್ಯಾಲಯದ (ಬಿಸಿಯು) ಜಾಗತಿಕ ಭಾಷಾ ಅಧ್ಯಯನ ಕೇಂದ್ರದಲ್ಲೀಗ (ಸೆಂಟರ್‌ ಫಾರ್‌ ಗ್ಲೋಬಲ್‌ ಲಾಂಗ್ವೇಜಸ್‌) 425 ವಿದ್ಯಾರ್ಥಿಗಳಿದ್ದಾರೆ. ವಿದೇಶಿ ಭಾಷೆಗಳ ಕಲಿಕೆಯಿಂದ ಉದ್ಯೋಗಾವಕಾಶ ಹೆಚ್ಚಾಗುತ್ತಿರುವುದೇ ಇದಕ್ಕೆ ಕಾರಣ. ಈ ಕುರಿತು ಕೇಂದ್ರದ ಮುಖ್ಯಸ್ಥರಾದ ಡಾ. ಜ್ಯೋತಿ ವೆಂಕಟೇಶ್‌ ಅವರು ಮಾಹಿತಿ ನೀಡಿದ್ದಾರೆ.

‘ಸೆಂಟರ್‌ ಫಾರ್‌ ಗ್ಲೋಬಲ್‌ ಲಾಂಗ್ವೇಜಸ್‌’ ಬೆಳವಣಿಗೆ ಕುರಿತು ಮಾಹಿತಿ ನೀಡಿ?

ಬೆಂಗಳೂರು ವಿ.ವಿ.ಯಲ್ಲಿ 1985ರಲ್ಲಿ ಈ ವಿಭಾಗ ಆರಂಭವಾಯಿತು. ಆಗ ಎಂ.ಎ (ಫ್ರೆಂಚ್‌) ಅನ್ನು ಮಾತ್ರ ರೆಗ್ಯುಲರ್‌ ಕೋರ್ಸ್‌ ಆಗಿ ಆರಂಭಿಸಲಾಗಿತ್ತು. ಈಗ ಯುರೋಪ್‌ ಮತ್ತು ಏಷ್ಯಾದ 16 ದೇಶಗಳ ವಿವಿಧ ಭಾಷಾ ಕೋರ್ಸ್‌ಗಳನ್ನು ನಡೆಸಲಾಗುತ್ತಿದೆ. ಇತ್ತೀಚೆಗೆ ಇದು ಬಿಸಿಯು ವ್ಯಾಪ್ತಿಗೆ ಬಂದಿದೆ.

ADVERTISEMENT

ಯಾವ್ಯಾವ ಭಾಷಾ ಕಲಿಕಾ ಕೋರ್ಸ್‌ಗಳಿವೆ?

ಫ್ರೆಂಚ್‌, ಜರ್ಮನ್‌, ಸ್ಪ್ಯಾನಿಷ್‌, ಇಟಾಲಿಯನ್‌, ಪೋರ್ಚುಗೀಸ್‌, ಅರೇಬಿಕ್‌, ರಷ್ಯನ್‌, ಸ್ವೀಡಿಷ್‌ ಹಾಗೂ ಏಷ್ಯನ್‌ ಭಾಷೆಗಳಾದ ಜಪಾನಿ, ಕೋರಿಯನ್‌, ಚೀನಿ ಭಾಷೆಗಳನ್ನು ಕಲಿಸಲಾಗುತ್ತಿದೆ. ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ಪಠ್ಯ ಮತ್ತು ಪರೀಕ್ಷಾ ವಿಧಾನವನ್ನು ಅನುಸರಿಸಲಾಗುತ್ತಿದೆ. ಸರ್ಟಿಫಿಕೆಟ್‌ ಕೋರ್ಸ್‌ನಲ್ಲಿ ತಲಾ ನಾಲ್ಕು ತಿಂಗಳ ‘ಎ1’ ಮತ್ತು ’ಎ2’ ಕೋರ್ಸ್‌ಗಳು, ಡಿಪ್ಲೊಮಾ ಕೋರ್ಸ್‌ನಲ್ಲಿ ತಲಾ ನಾಲ್ಕು ತಿಂಗಳ ‘ಬಿ1’ ಮತ್ತು ‘ಬಿ2’ ಕೋರ್ಸ್‌ಗಳು ನಡೆಯುತ್ತಿವೆ. ನಂತರ ತಲಾ 8 ತಿಂಗಳ ಹೈಯರ್‌ ಮತ್ತು ಅಡ್ವಾನ್ಸ್ಡ್‌ ಡಿಪ್ಲೊಮಾ ಕೋರ್ಸ್‌ಗಳಿವೆ.

ಯಾವ್ಯಾವ ಸ್ನಾತಕೋತ್ತರ ಪದವಿ ಕೋರ್ಸ್‌ಗಳಿವೆ?

ಫ್ರೆಂಚ್‌, ಸ್ಪ್ಯಾನಿಷ್‌, ಜರ್ಮನ್‌ ಮತ್ತು ಜಪಾನಿ ಭಾಷೆಗಳಲ್ಲಿ ಎರಡು ವರ್ಷದ ಸ್ನಾತಕೋತ್ತರ ಪದವಿ (ಎಂ.ಎ) ಕೋರ್ಸ್‌ಗಳಿವೆ. ಸರ್ಟಿಫಿಕೆಟ್‌, ಡಿಪ್ಲೊಮಾ, ಹೈಯರ್‌ ಡಿಪ್ಲೊಮಾ ಮತ್ತು ಅಡ್ವಾನ್ಸ್ಡ್‌ ಡಿಪ್ಲೊಮಾ ಕೋರ್ಸ್‌ಗಳಲ್ಲಿ ಉತ್ತೀರ್ಣರಾದವರಿಗೆ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದವರಿಗೆ ಎಂ.ಎ ಕೋರ್ಸ್‌ಗಳಿಗೆ ಪ್ರವೇಶ ದೊರೆಯುತ್ತದೆ.

ಯಾವ ಹೊಸ ಕೋರ್ಸ್‌ ಆರಂಭಿಸುತ್ತಿದ್ದೀರಾ?

2018–19ನೇ ಶೈಕ್ಷಣಿಕ ಸಾಲಿನಿಂದ ಫ್ರೆಂಚ್‌ ಭಾಷಾ ವಿಷಯದಲ್ಲಿ ಐದು ವರ್ಷದ ಇಂಟಿಗ್ರೇಟೆಡ್‌ ಎಂ.ಎ ಕೋರ್ಸ್‌ ಆರಂಭಿಸುತ್ತಿದ್ದೇವೆ. ಜೂನ್‌ 10ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ಇದು 10 ಸೆಮಿಸ್ಟರ್‌ಗಳನ್ನು ಒಳಗೊಂಡಿರುತ್ತದೆ. ದ್ವಿತೀಯ ಪಿಯುಸಿ ಅಥವಾ 10+2 ತರಗತಿ ಪಾಸಾದವರು ಪ್ರವೇಶ ಪಡೆಯಬಹುದು. ಪಿಯುಸಿ ಅಥವಾ 12ನೇ ತರಗತಿಯಲ್ಲಿ ಫ್ರೆಂಚ್‌ ಅನ್ನು ಭಾಷಾ ವಿಷಯವಾಗಿ ಓದಿರಲೇ ಬೇಕು ಎಂಬ ನಿಯಮವಿಲ್ಲ. ಒಂದು ವೇಳೆ ವಿದ್ಯಾರ್ಥಿಯು ಮೂರು ವರ್ಷ (6 ಸೆಮಿಸ್ಟರ್‌) ಪೂರೈಸಿದ ನಂತರ ವ್ಯಾಸಂಗ ಮುಂದುವರೆಸಲು ಬಯಸದಿದ್ದರೆ, ಆ ವಿದ್ಯಾರ್ಥಿಗೆ ಫ್ರೆಂಚ್‌ ಭಾಷಾ ವಿಷಯದಲ್ಲಿ ಬಿ.ಎ ಪದವಿ ನೀಡಲಾಗುತ್ತದೆ. ವ್ಯಾಸಂಗ ಮುಂದುವರೆಸಿ ಉಳಿದ ನಾಲ್ಕು ಸೆಮಿಸ್ಟರ್‌ ಪೂರ್ಣಗೊಳಿಸಿದರೆ ಎಂ.ಎ ಪದವಿ ದೊರೆಯುತ್ತದೆ.

‘ಸ್ಪೋಕನ್‌’ ಕೋರ್ಸ್‌ಗಳಿವೆಯೇ?

ವಿದೇಶಗಳಿಗೆ ಹೋಗುವವರಿಂದ ಎರಡು, ಮೂರು ತಿಂಗಳಲ್ಲಿ ಎಷ್ಟಾಗುತ್ತದೆಯೋ ಅಷ್ಟು ಆಯಾ ದೇಶದ ಭಾಷೆಗಳನ್ನು ಕಲಿಸಿಕೊಡಿ ಎಂಬ ಬೇಡಿಕೆಗಳು ಬಂದಿವೆ. ಈ ವರ್ಷದಿಂದ ‘ಸ್ಪೋಕನ್‌’ ತರಗತಿಗಳಿಗೆ ಚಾಲನೆ ನೀಡಲಿದ್ದೇವೆ. ಹೆಚ್ಚು ಬೇಡಿಕೆ ಇರುವ ಫ್ರೆಂಚ್‌, ಡಚ್‌, ಹೀಬ್ರೂ, ಪೋಲಿಷ್‌, ಥಾಯ್‌ ಭಾಷೆಗಳಲ್ಲಿ ‘ಸ್ಪೋಕನ್‌’ ಕ್ಲಾಸ್‌ಗಳನ್ನು ತೆಗೆದುಕೊಳ್ಳಲಿದ್ದೇವೆ. ಸರ್ಟಿಫಿಕೆಟ್‌, ಡಿಪ್ಲೊಮಾ ಕೋರ್ಸ್‌ಗಳ ಭಾಷೆಗಳಲ್ಲೂ ಸ್ಪೋಕನ್‌ ಕ್ಲಾಸ್‌ಗಳನ್ನು ನಡೆಸಲಿದ್ದೇವೆ.

ಬೋಧನಾ ಸಿಬ್ಬಂದಿ ಇದ್ದಾರಾ?

ವಿಭಾಗದಲ್ಲಿ ಸದ್ಯಕ್ಕೆ ಒಬ್ಬರು ಕಾಯಂ ಸಿಬ್ಬಂದಿ (ಮುಖ್ಯಸ್ಥರು) ಹಾಗೂ 24 ಅತಿಥಿ ಬೋಧಕರಿದ್ದಾರೆ. ಇಂಟಿಗ್ರೇಟೆಡ್‌ ಕೋರ್ಸ್‌ ಮತ್ತು ಸ್ಪೋಕನ್‌ ಕೋರ್ಸ್‌ ತರಗತಿಗಳು ಆರಂಭವಾಗುವುದರಿಂದ ಈ ವರ್ಷ ಅತಿಥಿ ಬೋಧಕರ ಸಂಖ್ಯೆ ಹೆಚ್ಚಾಗಬಹುದು. ಬ್ರೆಜಿಲ್‌, ಚೀನಾ, ಪೋರ್ಚುಗೀಸ್‌, ಕೋರಿಯಾ, ಸ್ಪೈನ್‌, ಜಪಾನ್‌ ದೇಶಗಳ ಬೋಧಕರೂ ಇಲ್ಲಿದ್ದಾರೆ.

ತರಗತಿ ಸಮಯ ಯಾವುದು?

ಎಂ.ಎ ಕೋರ್ಸ್‌ಗಳು ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ನಡೆಯುತ್ತದೆ. ಉಳಿದಂತೆ ಸರ್ಟಿಫಿಕೆಟ್‌, ಡಿಪ್ಲೊಮಾ, ಹೈಯರ್‌ ಡಿಪ್ಲೊಮಾ, ಅಡ್ವಾನ್ಸ್ಡ್‌ ಡಿಪ್ಲೊಮಾ ಕೊರ್ಸ್‌ಗಳನ್ನು ಬೆಳ್ಳಿಗೆ 9.30ರಿಂದ ಮಧ್ಯಾಹ್ನ 12.30, ಸಂಜೆ 4ರಿಂದ 6 ಹಾಗೂ ವಾರಾಂತ್ಯ (ಶನಿವಾರ, ಭಾನುವಾರ) ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿದೆ. 

ವಿದೇಶಿ ಭಾಷೆ ಕಲಿಕೆಗೆ ಬೇಡಿಕೆ ಹೇಗಿದೆ? ಉದ್ಯೋಗಾವಕಾಶ ಎಷ್ಟಿದೆ?

ಜಾಗತೀಕರಣದಿಂದ ವಿದೇಶಿ ಭಾಷೆ ಕಲಿಕೆಗೆ ಬೇಡಿಕೆ ಹೆಚ್ಚಾಗಿದೆ. ಬಹುರಾಷ್ಟ್ರೀಯ ಕಂಪನಿಗಳ ಕಾಲ್‌ ಸೆಂಟರ್‌ಗಳಲ್ಲಿ ಅವರ ದೇಶದ ಭಾಷೆಯನ್ನು ಕಲಿತವರಿಗೆ ಆದ್ಯತೆ ನೀಡಲಾಗುತ್ತಿದೆ. ಫ್ರೆಂಚ್‌ ಭಾಷೆ ಕಲಿತವರಿಗೆ ಅಕ್ಸೆಂಚರ್‌, ಅಮೆಜಾನ್‌, ಎಚ್‌ಎಸ್‌ಬಿಸಿಯಲ್ಲಿ ಅವಕಾಶಗಳು ಹೆಚ್ಚು. ಜಪಾನ್‌ ಭಾಷೆ ಗೊತ್ತಿದ್ದರೆ ಟಯೋಟಾ, ಜರ್ಮನ್‌ ಗೊತ್ತಿದ್ದವರಿಗೆ ಬಾಷ್‌ ಕಂಪನಿಯಲ್ಲಿ ಪ್ರಾಶಸ್ತ್ಯವಿದೆ. ಅಲ್ಲದೆ ಜರ್ಮನಿಯಲ್ಲಿ ಉಚಿತ ವ್ಯಾಸಂಗ ಮಾಡಲು ಮತ್ತು ಸ್ಕಾಲರ್‌ಶಿಪ್‌ ಪಡೆಯಲು ಕಡ್ಡಾಯವಾಗಿ ಜರ್ಮನ್‌ ಭಾಷೆ ಬರಬೇಕು ಎಂಬ ನಿಯಮ ಇದೆ.

ಅಲ್ಲದೆ ನಮ್ಮ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಗೆ ಜಪಾನ್‌ ಸರ್ಕಾರ ಪ್ರತಿ ವರ್ಷ ಜಪಾನಿ ಸ್ಪರ್ಧೆ ಏರ್ಪಡಿಸುತ್ತದೆ. ಇದರಲ್ಲಿ ವಿಜೇತರಾಗುವ ಇಬ್ಬರು ಅಥವಾ ಮೂವರು ವಿದ್ಯಾರ್ಥಿಗಳಿಗೆ ನಾಲ್ಕರಿಂದ ಐದು ತಿಂಗಳು ಜಪಾನ್‌ನಲ್ಲಿ ಕಲಿಯುವ ಅವಕಾಶ ಒದಗಿಸುತ್ತದೆ.

ಇಂಟರ್‌ನ್ಯಾಷನಲ್‌ ಜನರಲ್‌ ಸರ್ಟಿಫಿಕೆಟ್‌ ಆಫ್‌ ಸೆಕೆಂಡರಿ ಎಜುಕೇಷನ್‌ (ಐಜಿಸಿಎಸ್‌ಇ) ಮಾನ್ಯತೆ ಪಡೆದಿರುವ ಶಾಲೆಗಳಲ್ಲಿ ಫ್ರೆಂಚ್‌, ಸ್ಪಾನಿಷ್‌, ಜರ್ಮನ್‌ ಭಾಷಾ ಕಲಿಕೆ ಕಡ್ಡಾಯ. ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳಲ್ಲೂ ಒಂದೊಂದು ವಿದೇಶಿ ಭಾಷೆ ಕಲಿಕೆಗೆ ಅವಕಾಶ ಇದೆ. ಅಲ್ಲದೆ ಎಂ.ಬಿ.ಎ, ಐಐಎಂಬಿ, ಬ್ಯುಸಿನೆಸ್‌ ಸ್ಕೂಲ್‌ಗಳು, ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗಳಲ್ಲಿಯೂ ಫ್ರೆಂಚ್‌, ಜರ್ಮನಿ, ಜಪಾನಿ, ಚೀನಿ ಅಥವಾ ವಿದೇಶಿ ಭಾಷೆಯೊಂದನ್ನು ಕಲಿಕೆಗೆ ಒತ್ತು ನೀಡಲಾಗಿದೆ. ಹೀಗಾಗಿ ವಿದೇಶಿ ಭಾಷೆಗಳನ್ನು ಕಲಿತವರು ಶಿಕ್ಷಕರಾಗಿ ಬೋಧನಾ ವೃತ್ತಿಯಲ್ಲೂ ತೊಡಗಬಹುದು. ಉದ್ಯೋಗಾವಕಾಶ ಹೆಚ್ಚಿರುವ ಕಾರಣ ಎಂಜಿನಿಯರಿಂಗ್‌ ಕಾಲೇಜುಗಳ ಹಲವು ವಿದ್ಯಾರ್ಥಿಗಳು ವಾರಾಂತ್ಯ ಅಥವಾ ಸಂಜೆ ತರಗತಿಗಳಿಗೆ ಬರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.