ADVERTISEMENT

ವಿನ್ಯಾಸದ ಚುಂಗು ಪುರುಷ ವಸ್ತ್ರದ ಹಂಗು

ಪ್ರಜಾವಾಣಿ ವಿಶೇಷ
Published 22 ಜನವರಿ 2013, 19:59 IST
Last Updated 22 ಜನವರಿ 2013, 19:59 IST
ವಿನ್ಯಾಸದ ಚುಂಗು  ಪುರುಷ ವಸ್ತ್ರದ ಹಂಗು
ವಿನ್ಯಾಸದ ಚುಂಗು ಪುರುಷ ವಸ್ತ್ರದ ಹಂಗು   

`ಯಾವ ರೀತಿಯ ಉಡುಪು ತೊಡುತ್ತೇವೆ ಎನ್ನುವುದು ಮುಖ್ಯವಲ್ಲ. ಉಡುಪಿಗೆ ತಕ್ಕಂತೆ ಇತರ ಪರಿಕರಗಳನ್ನು ಹೇಗೆ ನಿಭಾಯಿಸಿದ್ದೇವೆ ಎನ್ನುವುದೇ ಬಹಳ ಮುಖ್ಯ' ಎಂದೆನ್ನುವ ಬೆಂಗಳೂರು ಮೂಲದ ವಸ್ತ್ರ ವಿನ್ಯಾಸಗಾರ್ತಿ ಯಶಸ್ವಿನಿ ನಾಯ್ಕ ಪುರುಷರಿಗಾಗಿ ವಿನ್ಯಾಸ ಮಾಡಿದ್ದ ದಿರಿಸು `ಗೀತಾಂಜಲಿ ಪ್ರಸಾದ್ ಬಿದಪ್ಪ ಫ್ಯಾಷನ್ ವೀಕ್'ನಲ್ಲಿ ಗಮನ ಸೆಳೆಯಿತು.

ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಪದವಿ ಜತೆಗೆ `ನಿಫ್ಟ್'ನಿಂದ ಫ್ಯಾಷನ್ ಮತ್ತು ಸ್ಟೈಲಿಸ್ಟ್‌ನಲ್ಲಿ ಡಿಪ್ಲೊಮಾ ಪದವಿ ಪಡೆದ ಯಶಸ್ವಿನಿ `ರಾಯಲ್ ಹೌಸ್ ಆಫ್ ಮೈಸೂರು' ವಿನ್ಯಾಸ ಮಾಡುವ ವಸ್ತ್ರಗಳಿಗೆ ಸತತವಾಗಿ ಆರು ವರ್ಷ ರೇಷ್ಮೆ ಬಳಸಿ ಝರಿ ಸೀರೆ, ಶೇರ್ವಾನಿ, ಕುರ್ತಾ, ಶಲ್ಯಗಳ ವಿನ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಗಾಢ ಬಣ್ಣ, ಆನೆ, ಶಂಖ, ಚಕ್ರಗಳನ್ನು ಅಂದವಾಗಿ ಜೋಡಿಸಿ ಚೆಂದದ ಸೀರೆಗಳನ್ನು ಸಿದ್ಧಪಡಿಸುವಲ್ಲಿ ವರ್ಷಗಳ ಕಾಲ ತೊಡಗಿಸಿಕೊಂಡಿದ್ದ ಇವರು ಮದುವೆ ನಂತರ ದುಬೈ ಹಾಗೂ ಬೆಂಗಳೂರು ನಡುವೆ ಓಡಾಟ ಮುಂದುವರಿಸಿದರು. ನಂತರ ಇವರ ಚಿತ್ತ ಹೊರಳಿದ್ದು ಸಂಪೂರ್ಣವಾಗಿ ಪುರುಷರ ವಸ್ತ್ರಗಳನ್ನು ಸಿದ್ಧಪಡಿಸುವತ್ತ. ಅದರ ಫಲವಾಗಿಯೇ ಪ್ರತಿಯೊಬ್ಬರ ಕೈಗೆಟಕುವ ಬೆಲೆಗೆ `ವೈ ಅಂಡ್ ಎಸ್' ಎಂಬ ಹೆಸರಿನ ಬ್ರಾಂಡ್ ಮೂಲಕ ಈಗ ಮನೆಮಾತಾಗಲು ಸಜ್ಜಾಗಿದ್ದಾರೆ. ಫ್ಯಾಷನ್ ಕುರಿತ ಅವರ ಅನಿಸಿಕೆ ಇಲ್ಲಿದೆ.

ವಸ್ತ್ರ ವಿನ್ಯಾಸಗಳಲ್ಲಿ ನಿಮಗೆ ಪ್ರೇರಣೆ ಏನು?
ನನಗೆ ಬಣ್ಣಗಳೆಂದರೆ ಬಹಳ ಇಷ್ಟ. ಹೀಗಾಗಿ ಈ ಕಲೆಯತ್ತ ಆಕರ್ಷಿತಳಾದೆ. ಪೇಂಟಿಂಗ್ ಮಾಡುತ್ತಿದ್ದ ನಾನು ವಸ್ತ್ರಗಳತ್ತ ಹೊರಳಿದ್ದು ಅಮ್ಮನಿಂದಾಗಿ. ಅಮ್ಮ ಹವ್ಯಾಸಕ್ಕೆಂದು ಬಟ್ಟೆ ಹೊಲೆಯುತ್ತಿದ್ದರು. ನನಗೆ, ಪಕ್ಕದ ಮನೆಯವರಿಗಾಗಿ ವಸ್ತ್ರಗಳನ್ನು ಸಿದ್ಧಪಡಿಸುತ್ತಿದ್ದರು. ಕಲೆಯಲ್ಲಿ ಆಸಕ್ತಳಾಗಿದ್ದ ನನಗೆ ಸಹಜವಾಗಿಯೇ ವಸ್ತ್ರಗಳು ಮೋಡಿ ಮಾಡಿದವು. ಹೀಗಾಗಿ ಫ್ಯಾಷನ್ ಜಗತ್ತಿಗೆ ಬಂದಿಳಿದೆ.

ಫ್ಯಾಷನ್ ಪದವಿ ವಿನ್ಯಾಸಕ್ಕೆ ಎಷ್ಟರ ಮಟ್ಟಿಗೆ ಸಹಕಾರಿ?
ಅಲ್ಲಿ ಶಾಸ್ತ್ರೀಯವಾಗಿ ಕಲಿತ ಆಧಾರದ ಮೇಲೆ ನಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಸಾಧ್ಯ. ಜತೆಗೆ ವೃತ್ತಿಯ ಅನುಭವವೂ ಸಾಕಷ್ಟು ಪಾಠ ಕಲಿಸುತ್ತದೆ.

ಸೀರೆ, ಶೇರ್ವಾನಿ ವಿನ್ಯಾಸದಲ್ಲಿ ತೊಡಗಿಸಿಕೊಂಡಿದ್ದ ನೀವು ಪುರುಷರ ಕ್ಯಾಷುಯಲ್ಸ್‌ನತ್ತ ಹೊರಳಿದ್ದು ಏಕೆ?
ಆರು ವರ್ಷ ಎಲೆ, ಬಳ್ಳಿ, ಹೂವು, ಶಂಖ, ಚಕ್ರಗಳನ್ನು ರೇಷ್ಮೆ ಮೇಲೆ ಮೂಡಿಸುವ ಕಾಯಕದಲ್ಲಿ ತೊಡಗಿಕೊಂಡಿದ್ದೆ. ನಂತರ ಹತ್ತಿ ಹಾಗೂ ಲಿನೆನ್ ಬಹುವಾಗಿ ಆಕರ್ಷಿಸಿದವು. ಪುರುಷರ ವಸ್ತ್ರಗಳನ್ನು ವಿನ್ಯಾಸ ಮಾಡುವುದು ಸವಾಲಿನ ಕೆಲಸ. ಕೇವಲ ಪ್ಯಾಂಟ್ ಹಾಗೂ ಶರ್ಟ್‌ನಲ್ಲಿ ವಿಭಿನ್ನತೆ ಸೃಷ್ಟಿಸುವುದು ಸಾಮಾನ್ಯವೇನಲ್ಲ. ಹೀಗಾಗಿ ಈ ಸವಾಲನ್ನು ಸ್ವೀಕರಿಸಿದೆ.

ವಸ್ತ್ರ ವಿನ್ಯಾಸಕ್ಕೆ ಬೆಂಗಳೂರು ಎಷ್ಟು ಸಹಕಾರಿ?
ಭಾರತದ ಉಳಿದ ಮಹಾನಗರಗಳಿಗೆ ಹೋಲಿಸಿದಲ್ಲಿ ಬೆಂಗಳೂರು ಅತ್ಯಂತ ಶಿಸ್ತುಬದ್ಧ ಹಾಗೂ ಸುಸಂಸ್ಕೃತರ ನಗರ. ಯಾವ ಕಾರ್ಯಕ್ರಮಕ್ಕೆ ಯಾವ ರೀತಿಯ ಉಡುಪು ತೊಡಬೇಕೆಂಬುದನ್ನು ಚೆನ್ನಾಗಿ ಬಲ್ಲರು. ಜತೆಗೆ ಜಾಗತಿಕ ಮಟ್ಟದ ಹೊಸ ಬಗೆಯ ವಿನ್ಯಾಸಗಳನ್ನು ಇಲ್ಲಿನವರು ಬಹಳ ಬೇಗ ಅಳವಡಿಸಿಕೊಳ್ಳುವುದರಿಂದ ಇದು ವಸ್ತ್ರ ವಿನ್ಯಾಸಕ್ಕೆ ಹೇಳಿಮಾಡಿಸಿದ ತಾಣ.

ADVERTISEMENT

ಇತ್ತೀಚಿನ ದಿನಗಳಲ್ಲಿ ಪುರುಷರ ವಸ್ತ್ರ ವಿನ್ಯಾಸ ಹೇಗಿದೆ?
ಮಹಿಳೆಯರು ಮಾತ್ರ ಗಾಢ ಬಣ್ಣದ ವಸ್ತ್ರಗಳನ್ನು ತೊಡುತ್ತಿದ್ದರು. ಆದರೆ ಈಗ ಪುರುಷರೂ ಗಾಢ ಬಣ್ಣವನ್ನು ಇಷ್ಟಪಡುತ್ತಿದ್ದಾರೆ. ಹೀಗಾಗಿ ಗುಲಾಬಿ, ನೇರಳೆ, ಹಳದಿ ಇತ್ಯಾದಿ ಬಣ್ಣಗಳ ಪ್ಯಾಂಟ್‌ಗಳನ್ನು ಇಷ್ಟಪಡುತ್ತಿದ್ದಾರೆ. ಸ್ಲಿಂ ಫಿಟ್ ಕೂಡ ಚಾಲ್ತಿಯಲ್ಲಿದೆ. ತೆಳ್ಳಗೆ ಫಿಟ್ ಇರುವವರಿಗೆ ಮಾತ್ರವಲ್ಲದೆ ದಪ್ಪಗಿರುವವರೂ ಸ್ಲಿಂ ಫಿಟ್ ತೊಟ್ಟಲ್ಲಿ ತೆಳ್ಳಗೆ ಕಾಣಿಸಿಕೊಳ್ಳುತ್ತಾರೆ. ಆದ್ದರಿಂದ ಇಂಥ ಉಡುಗೆಗಳಿಗೆ ಬೇಡಿಕೆ ಇದೆ.

ಪುರುಷರ ವಸ್ತ್ರ ವಿನ್ಯಾಸದಲ್ಲಿ ಯಾವುದು ಬಹಳ ಮುಖ್ಯ?
ಶರ್ಟ್ ಹಾಗೂ ಪ್ಯಾಂಟ್ ಮಾತ್ರ ಮುಖ್ಯವಲ್ಲ. ತೊಟ್ಟ ಉಡುಪಿನೊಂದಿಗೆ ಬಳಸುವ ಪರಿಕರಗಳು ಹಾಗೂ ಸಾದರಪಡಿಸುವ ರೀತಿಯೂ ಅಷ್ಟೇ ಮುಖ್ಯ. ಉದಾಹರಣೆಗೆ ಶರ್ಟ್, ಪ್ಯಾಂಟ್ ತೊಟ್ಟ ನಂತರ ಅದಕ್ಕೆ ಒಪ್ಪುವ ಶೂ, ಕೈಗಡಿಯಾರ ಹಾಗೂ ಒಂದು ಪುಟ್ಟ ಬ್ಯಾಗ್ ಈಗಿನ ಟ್ರೆಂಡ್. ಈ ಹಿಂದೆ ಪರ್ಸ್, ಮೊಬೈಲ್‌ಗಳನ್ನು ಜೇಬಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ಅದರ ಬದಲು ಒಂದು ಪುಟ್ಟ ಬ್ಯಾಗ್ ಇದ್ದಲ್ಲಿ ಪುಸ್ತಕ, ದಿನಪತ್ರಿಕೆ, ವಿಸಿಟಿಂಗ್ ಕಾರ್ಡ್ ಇತ್ಯಾದಿಗಳನ್ನು ಇಟ್ಟುಕೊಳ್ಳಬಹುದು. ಜತೆಗೆ ಅದು ವ್ಯಕ್ತಿತ್ವವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಮುಂದಿನ ಗುರಿ ಏನು?
`ಡಿಸೈನರ್ ವೇರ್' ಎಂದಾಕ್ಷಣ ದುಬಾರಿ ಎಂಬ ಕಲ್ಪನೆ ಅನೇಕರಲ್ಲಿ ಇದೆ. ಆದರೆ ಅದರಿಂದ ಕೊಂಚ ಭಿನ್ನ ನನ್ನ ಸಂಗ್ರಹ. ಪ್ರತಿಯೊಬ್ಬರ ಕೈಗೆಟಕುವ ಬೆಲೆಗೆ ನನ್ನ ವಿನ್ಯಾಸ (ವೈ ಅಂಡ್ ಎಸ್)ದ ಉಡುಪುಗಳು ಲಭ್ಯ. ಕಮರ್ಷಿಯಲ್ ಸ್ಟ್ರೀಟ್‌ನ ಬಹುತೇಕ ವಸ್ತ್ರಮಳಿಗೆಗಳಲ್ಲಿ (ರೂ. 999ರಿಂದ 1500) ಇವುಗಳು ಸಿಗುತ್ತವೆ. ಮುಂದಿನ ದಿನಗಳಲ್ಲಿ ಸಾಂಪ್ರದಾಯಿಕ ಉಡುಗೆ ವಿನ್ಯಾಸ ಮಾಡುವುದರ ಜತೆಗೆ ಇತರ ಪರಿಕರಗಳನ್ನೂ ಪರಿಚಯಿಸುವ ಯೋಜನೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.