ADVERTISEMENT

ವೈಕುಂಠ ದ್ವಾರ, ದೈವ ಸಾಕ್ಷಾತ್ಕಾರ

ರೋಹಿಣಿ ಮುಂಡಾಜೆ
Published 6 ಜನವರಿ 2017, 19:30 IST
Last Updated 6 ಜನವರಿ 2017, 19:30 IST
ರಾಜಾಜಿನಗರ ಶ್ರೀ ಕೈಲಾಸ ವೈಕುಂಠ ಮಹಾಕ್ಷೇತ್ರದ ರಂಗನಾಥ ಸ್ವಾಮಿ ವಿಗ್ರಹ. ಚಿತ್ರ: ವಿಶ್ವನಾಥ ಸುವರ್ಣ
ರಾಜಾಜಿನಗರ ಶ್ರೀ ಕೈಲಾಸ ವೈಕುಂಠ ಮಹಾಕ್ಷೇತ್ರದ ರಂಗನಾಥ ಸ್ವಾಮಿ ವಿಗ್ರಹ. ಚಿತ್ರ: ವಿಶ್ವನಾಥ ಸುವರ್ಣ   

ದಕ್ಷಿಣಾಯನದಲ್ಲಿ ವೈಕುಂಠದಲ್ಲಿ ಮಲಗಿ ನಿದ್ರಿಸಿರುವ ಮಹಾವಿಷ್ಣು ಉತ್ತರಾಯಣದಲ್ಲಿ (ಹಗಲು ಎಂಬ ನಂಬಿಕೆ) ಎದ್ದಿರುತ್ತಾನೆ. ಮಕರ ಸಂಕ್ರಮಣ ಎನ್ನುವುದು ಸೂರ್ಯ ಉತ್ತರಾಯಣವನ್ನು ಪ್ರವೇಶಿಸುವ ಸಂಧಿಕಾಲ.

ಪುಷ್ಯ ಶುದ್ಧ ಏಕಾದಶಿಯಂದು ಅವನು ಉತ್ತರ ದ್ವಾರದ ಮೂಲಕ ಮೂರು ಕೋಟಿ ದೇವತೆಗಳಿಗೆ ದರ್ಶನ ನೀಡಿದ್ದ. ಹಾಗಾಗಿ ವೈಕುಂಠ ಏಕಾದಶಿಗೆ ಮುಕ್ಕೋಟಿ ಏಕಾದಶಿ ಎಂಬ ಹೆಸರೂ ಇದೆ.

ಉತ್ತರದ ದ್ವಾರವನ್ನು ವೈಕುಂಠ ದ್ವಾರ ಅರ್ಥಾತ್‌ ಸ್ವರ್ಗದ ಬಾಗಿಲು ಎಂದೇ ಕರೆಯುವುದು ವಿಶೇಷ. ವೈಕುಂಠ ದ್ವಾರದ ಮೂಲಕ ದೇವರ ದರ್ಶನ ಮಾಡಿದರೆ ಸಾಕ್ಷಾತ್‌ ಮಹಾವಿಷ್ಣು ಸ್ವರ್ಗದಿಂದ ಹರಸುತ್ತಾನೆ ಎಂಬುದು ನಂಬಿಕೆ. ಹಾಗಾಗಿ ಎಲ್ಲಾ ಶ್ರೀನಿವಾಸ ದೇವಾಲಯಗಳಲ್ಲಿ ‘ವೈಕುಂಠ ದ್ವಾರ’ಗಳನ್ನು ನಿರ್ಮಿಸಲಾಗುತ್ತದೆ.

ಖಡಕ್‌ ಉಪವಾಸ
‘ಒಂದು ಉದ್ಧರಣೆಯಷ್ಟು ನೀರನ್ನೂ ಸೇವಿಸದೆ ಕಟ್ಟುನಿಟ್ಟಾದ ನಿರಾಹಾರ ಉಪವಾಸ ಮಾಡಬೇಕು. ರಾತ್ರಿಯಿಡೀ ನಿದ್ರಿಸದೆ, ದೇವರ ಧ್ಯಾನ ಮಾಡಬೇಕು. ಮರುದಿನ  ಹರಳೆಣ್ಣೆ ಇಲ್ಲವೇ ಎಳ್ಳೆಣ್ಣೆ ಹಚ್ಚಿಕೊಂಡು ಸ್ನಾನ ಮಾಡಿ ಸೂರ್ಯೋಪಾಸನೆಯೊಂದಿಗೆ ದೇವರ ಪೂಜೆ ಮಾಡಿ ಪಾರಣೆ (ಉಪವಾಸ ಮುರಿದು ಆಹಾರ ಸೇವಿಸುವುದು) ಮಾಡಬೇಕು ಎಂಬುದು ಈ ಏಕಾದಶಿ ಆಚರಣೆಯ ಕ್ರಮ’ ಎಂದು ಹೇಳುತ್ತಾರೆ, ರಾಜಾಜಿನಗರ ಐದನೇ ಬ್ಲಾಕ್‌ನಲ್ಲಿರುವ ಶ್ರೀಕೈಲಾಸ ವೈಕುಂಠ ಮಹಾಕ್ಷೇತ್ರದ ಪ್ರಧಾನ ಅರ್ಚಕರಾದ ಸುದರ್ಶನ ಭಟ್‌.

ಅದೇ ದೇವಾಲಯದ ಅರ್ಚಕ ನರಸರಾಜ ಭಟ್ಟರ್‌ ಅವರ ಪ್ರಕಾರ, ವ್ರತಾಚರಣೆ ವೇಳೆ ದ್ವಿದಳ ಧಾನ್ಯದ ಆಹಾರಗಳನ್ನು ಸೇವಿಸಬಹುದು. ಏಕದಳ ಧಾನ್ಯ ಸೇವನೆ ನಿಷಿದ್ಧ. ಅಕ್ಕಿಯಿಂದ ಮಾಡಿದ ಆಹಾರ ಮತ್ತು ಬೇಯಿಸಿದ ಆಹಾರ ನಿಷಿದ್ಧ. ಹಾಲು ಕುಡಿಯಬಾರದು. ಬಾಳೆಹಣ್ಣು ಸೇವಿಸಿದರೆ ಹಸಿವು ಹೆಚ್ಚಾಗುವ ಕಾರಣ ಅದೂ ವರ್ಜ್ಯ. ಉಳಿದಂತೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಕೆಗೆ ಅವಕಾಶವಿರುವುದಿಲ್ಲ.

‘ಪ್ರತಿ 15 ದಿನಕ್ಕೊಮ್ಮೆ ಬರುವ ಏಕಾದಶಿ ತಿಥಿಯಂದು ಉಪವಾಸ ಮಾಡುವುದು ಮಾಧ್ವರಿಗೆ ಕಡ್ಡಾಯ. ವೈಕುಂಠ ಏಕಾದಶಿಯಂದು ಉಪವಾಸ ಮತ್ತು ಜಾಗರಣೆಯೊಂದಿಗೆ ವಿಷ್ಣು ಉಪಾಸನೆಯನ್ನು ಎಲ್ಲಾ ವಯಸ್ಸಿನವರೂ ಮಾಡಬೇಕು. ಉಪವಾಸದ ಮೂಲಕ ಹಿಂದಿನ ಏಕಾದಶಿಯಿಂದ ಈ ಏಕಾದಶಿವರೆಗೆ ಮಾಡಿರಬಹುದಾದ ತಪ್ಪುಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಾರೆ’ ಎಂದು ಉತ್ತರಾದಿ ಮಠದ ವಿದ್ವಾಂಸರಾದ ವಿದ್ಯಾಧೀಶಾಚಾರ್ ಹೇಳುತ್ತಾರೆ.

ನಸುಕಿನಿಂದಲೇ ಪೂಜೆ
ರಾಜಾಜಿನಗರದ ಶ್ರೀ ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ ರಂಗನಾಥಸ್ವಾಮಿಯ ವಿಗ್ರಹ ಮಲಗಿರುವ ಭಂಗಿಯಲ್ಲಿರುವುದು ವಿಶೇಷ. ಶ್ರೀರಂಗಪಟ್ಟಣದ ವಿಗ್ರಹ 16 ಅಡಿ, ಅನಂತಶಯನದಲ್ಲಿ 18 ಅಡಿ ಇದ್ದರೆ ಇಲ್ಲಿನ ವಿಗ್ರಹ 26 ಅಡಿ ಇದೆ. ಶ್ರೀನಿವಾಸ ಮತ್ತು ಶಿವನ ವಿಗ್ರಹಗಳು ಒಂದೇ ಗರ್ಭಗುಡಿಯಲ್ಲಿರುವುದು ಮತ್ತೊಂದು ಪ್ರಮುಖ ಆಕರ್ಷಣೆ.

ಭಾನುವಾರ (ಜ.8) ಮುಂಜಾನೆ 3 ಗಂಟೆಗೆ ಸುಪ್ರಭಾತ ಸೇವೆಯೊಂದಿಗೆ ವೈಕುಂಠ ಏಕಾದಶಿಯ ಪೂಜಾ ವಿಧಿಗಳು ಆರಂಭವಾಗುತ್ತವೆ. ಬೆಳಿಗ್ಗೆ 6ರಿಂದ ವೈಕುಂಠ ದ್ವಾರದ ಮೂಲಕ ಭಕ್ತರ ಪ್ರವೇಶ ಶುರುವಾಗುತ್ತದೆ. ಸಂಜೆ 6ಕ್ಕೆ ಆರ್.ಮಂಜುನಾಥ್‌ ಮತ್ತು ತಂಡದವರಿಂದ ಸ್ಯಾಕ್ಸೊಫೋನ್‌ ಕಛೇರಿ ನಡೆಯಲಿದೆ ಎಂದು ಸುದರ್ಶನ ಭಟ್ಟರ್ ಮಾಹಿತಿ ನೀಡುತ್ತಾರೆ.

ಉತ್ತರಾದಿ ಮಠದಲ್ಲಿ ಸೋಮವಾರ ರಾತ್ರಿಯಿಂದ ಮಂಗಳವಾರ ಮುಂಜಾನೆಯವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮಂಗಳವಾರ ಮುಂಜಾನೆ ಹರಿವಾಣ ಸೇವೆ ಮತ್ತು ಮಂಗಳಾರತಿಯಲ್ಲಿ ಪಾಲ್ಗೊಂಡ ನಂತರ ಪಾರಣೆ ಕೈಗೊಳ್ಳುತ್ತಾರೆ. ದ್ವಾದಶಿಯಂದು ನೈವೇದ್ಯಕ್ಕೆ ಅಕ್ಕಿ ಮತ್ತು ತೆಂಗಿನಕಾಯಿ ತುರಿ ಹಾಕಿದ ಕಾಯಿಗಂಜಿ ಇರುತ್ತದೆ’ ಎಂದು ವಿದ್ಯಾಧೀಶಾಚಾರ್ ವಿವರಿಸುತ್ತಾರೆ. 

ಏಕಾದಶಿ ಕಥೆ
ವೈಕುಂಠ ಏಕಾದಶಿಯ ಮಹತ್ವದ ಬಗ್ಗೆ ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖವಿದೆ. ಗೋಕಲವೆಂಬ ನಗರದಲ್ಲಿ ವೈಖಾನಸನೆಂಬ ರಾಜರ್ಷಿಯ ದಿವ್ಯದೃಷ್ಟಿಗೆ ತನ್ನ ತಂದೆ ಸತ್ತ ಬಳಿಕ ನರಕವಾಸ ಅನುಭವಿಸುತ್ತಿರುವುದು ಗೋಚರಿಸುತ್ತದೆ. ತಂದೆಯ ಆತ್ಮಕ್ಕೆ ಮುಕ್ತಿ ಕೊಡಿಸುವ ಉಪಾಯವೇನಾದರೂ ಇದೆಯೇ ಎಂದು ರಾಜರ್ಷಿ ತನ್ನ ಪಂಡಿತರನ್ನು ಕೇಳುತ್ತಾನೆ.

ಮಾರ್ಗಶಿರ ಶುಕ್ಷ ಪಕ್ಷದ ಏಕಾದಶಿಯ ಆಚರಣೆಯೊಂದೇ ಇದಕ್ಕಿರುವ ಮಾರ್ಗ ಎಂದು ಅವರು ಸಲಹೆ ನೀಡುತ್ತಾರೆ.  ರಾಜರ್ಷಿ ಅದರಂತೆ ಕ್ರಮಬದ್ಧವಾಗಿ ಏಕಾದಶಿ ಉಪವಾಸ ಮತ್ತು ವಿಷ್ಣುವಿನ ಉಪಾಸನೆ ಮಾಡಿ ಕೊನೆಗೆ ಮಾರ್ಗಶಿರ ಶುಕ್ಲ ಪಕ್ಷದ ವೈಕುಂಠ ಏಕಾದಶಿ ವ್ರತವನ್ನು ಆಚರಿಸಿ ದಾನಧರ್ಮಗಳನ್ನು ಮಾಡುತ್ತಾನೆ. ತಂದೆ ನರಕವಾಸದಿಂದ ಪಾರಾಗುತ್ತಾನೆ ಎಂಬ ಉಲ್ಲೇಖ ಬ್ರಹ್ಮಾಂಡ ಪುರಾಣದಲ್ಲಿ ಇದೆ.

ಏಕಾದಶಿ ಆಚರಣೆ
ನಗರದಲ್ಲಿ ಬಹುತೇಕ ಜನರು ಭಾನುವಾರವೇ (ಜ.8) ವೈಕುಂಠ ಏಕಾದಶಿ ಆಚರಣೆ ಮಾಡುತ್ತಿದ್ದಾರೆ. ಮಾಧ್ವ ಸಂಪ್ರದಾಯ ಅನುಸರಿಸುವವರು ಸೋಮವಾರ (ಜ.9) ಆಚರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT