ADVERTISEMENT

ವ್ಯಾಯಾಮ ವಿಮುಖಿ

ಅಮಿತ್ ಎಂ.ಎಸ್.
Published 14 ಜನವರಿ 2013, 19:59 IST
Last Updated 14 ಜನವರಿ 2013, 19:59 IST
ವ್ಯಾಯಾಮ ವಿಮುಖಿ
ವ್ಯಾಯಾಮ ವಿಮುಖಿ   

ಒಂದು ದಿನದ ಊಟ, ವ್ಯಾಯಾಮದಲ್ಲಿ ಹೆಚ್ಚು ಕಡಿಮೆಯಾದರೂ ದೇಹಸೌಂದರ್ಯವೇ ಹಾಳಾಗುತ್ತದೆಯೇನೋ ಎಂಬ ಭಯ, ಕಾಳಜಿಯಿಂದ ಚಾಚೂ ತಪ್ಪದೆ ಡಯಟಿಂಗ್ ಮತ್ತು ವರ್ಕ್‌ಔಟ್‌ನಲ್ಲಿ ಮಗ್ನರಾಗುವ ನಟಿಯರ ನಡುವೆ ವಿಭಿನ್ನ ವ್ಯಕ್ತಿತ್ವದ ನಟಿಯೊಬ್ಬರಿದ್ದಾರೆ. ಜಿಮ್‌ನಲ್ಲಿ ಬೆವರು ಹರಿಸುವ ಶ್ರಮ ಅವರಿಂದ ದೂರ. ಮಿತಾಹಾರ ಸೇವನೆಯೆಂದರೆ ಅವರಿಗೆ ಅಲರ್ಜಿ. `ತಿನ್ನಬೇಕಿನಿಸಿದಷ್ಟೂ ತಿನ್ನಬೇಕು, ಎಲ್ಲವನ್ನೂ ಅರಗಿಸಿಕೊಳ್ಳುವ ಶಕ್ತಿ ನನ್ನ ದೇಹಕ್ಕಿದೆ' ಎಂದು ಹೆಮ್ಮೆಯಿಂದ ಬೀಗುತ್ತಾರೆ ನಟಿ ಕೃತಿ ಕರಬಂಧ.

ಸದ್ಯ `ಗಲಾಟೆ' ಮಾಡುತ್ತಿರುವ ದೆಹಲಿ ಮೂಲದ ಅರೆಗನ್ನಡತಿಯ ದೇಹಕ್ಕೆ ಈ ಬಗೆಯ ವರವನ್ನು ಪ್ರಕೃತಿಯೇ ನೀಡಿದೆಯಂತೆ. ಏನೇ ತಿಂದರೂ ಎಷ್ಟೇ ತಿಂದರೂ ನನ್ನ ದೇಹ ತೂಕವಂತೂ ಹೆಚ್ಚಲಾರದು. ದಪ್ಪವೂ ಆಗುವುದಿಲ್ಲ. ಫಿಟ್‌ನೆಸ್, ಝೀರೋ ಸೈಜ್ ಎಂದು ತಲೆಕೆಡಿಸಿಕೊಂಡು ಜಿಮ್‌ಗೆ ಹೋದವಳಲ್ಲ. ಇನ್ನು ಊಟ ತಿಂಡಿ ಬಿಟ್ಟು ತೆಳ್ಳಗಾಗುವ ಪ್ರಮೇಯವೇ ಬಂದಿಲ್ಲ. ಅಮ್ಮ ಮಾಡಿದ್ದನ್ನು ಚೆನ್ನಾಗಿ ತಿನ್ನುತ್ತೇನೆ. ಹೀಗೆ ತಿನ್ನುವ ವಿಚಾರದಲ್ಲಿ ಶಿಸ್ತು ಇಲ್ಲದಿದ್ದರೂ ದೇಹಾಕಾರ ಮಾತ್ರ ಕೊಂಚವೂ ಬದಲಾಗಿಲ್ಲ ಎಂದು ಖುಷಿ ಬೆರೆಸಿದ ಆತ್ಮವಿಶ್ವಾಸದಲ್ಲಿ ಹೇಳುತ್ತಾರೆ ಕೃತಿ.

ವರ್ಕ್‌ಔಟ್ ಮಾಡುವುದೆಂದರೆ ಕೃತಿಗೆ ಬೇಸರದ ಸಂಗತಿ. ಈ ವೃತ್ತಿಯಲ್ಲಿ ದೇಹಾಕಾರ ಕಾಪಾಡಿಕೊಳ್ಳಲು ಈ ಬಗೆಯ ಶ್ರಮ ಅನಿವಾರ್ಯ. ಆದರೆ ಅದೃಷ್ಟವಶಾತ್ ನನ್ನ ದೇಹಪ್ರಕೃತಿ ಅಂಥ ಶ್ರಮಕ್ಕೆ ನನ್ನನ್ನು ನೂಕಿಲ್ಲ. ಹೆಚ್ಚು ತಿಂದಾಗ ದಪ್ಪಗಾಗುವುದು ಸಹಜ. ಹಾಗೆ ಕಂಡಾಗ ಊಟ ತಿಂಡಿಗೆ ಸ್ವಲ್ಪಮಟ್ಟಿನ ಕತ್ತರಿ ಹಾಕುತ್ತೇನೆ ಅಷ್ಟೆ. ಆದರೆ ನಟಿಯರಿಗೆ ಇರಬೇಕಾದ ವ್ಯಾಯಾಮ ಬದ್ಧತೆಯನ್ನೇನೂ ಕಾಪಾಡಿಕೊಂಡಿಲ್ಲ ಎನ್ನುವ ಕೃತಿಗೆ ತಾನೂ ಜಿಮ್‌ಗೆ ಹೋಗಿ ವರ್ಕ್‌ಔಟ್ ಮಾಡಬೇಕು ಎಂದು ಅನಿಸಿದ್ದಿದೆ. ಹಾಗೆ ಹಲವು ಬಾರಿ ಪ್ರಯತ್ನವನ್ನೂ ಮಾಡಿದ್ದಾರೆ. ಆದರೆ ಎರಡು ಮೂರು ದಿನಕ್ಕೆ ಸೋಮಾರಿತನ ಬಂದುಬಿಡುತ್ತದೆ. ನೆಪಗಳನ್ನು ಹೇಳಿ ಅದರಿಂದ ತಪ್ಪಿಸಿಕೊಳ್ಳುತ್ತಾರಂತೆ.

ಕಳೆದ ಐದು ತಿಂಗಳಿಂದ ಮಾಂಸಾಹಾರ ತ್ಯಜಿಸಿರುವ ಕೃತಿ ಈಗ ಅಪ್ಪಟ ಸಸ್ಯಾಹಾರಿಯಂತೆ. ಪಂಜಾಬಿ ಖಾದ್ಯ, ಅದರಲ್ಲೂ ಅಮ್ಮ ಮಾಡಿದ ತಿಂಡಿ ತಿನಿಸುಗಳೆಂದರೆ ಅವರಿಗೆ ಅಚ್ಚುಮೆಚ್ಚು. ಹೀಗಾಗಿ ದಕ್ಷಿಣ ಭಾರತ ಅವರ ಮನೆಯಾದರೂ ಅನುಸರಿಸುವ ಆಹಾರ ಪದ್ಧತಿ ಉತ್ತರ ಭಾರತದ್ದು. ಇಲ್ಲಿನ ವಾಂಗಿಭಾತ್ ಮತ್ತು ಬಿಸಿಬೇಳೆ ಭಾತ್ ಕೂಡ ಇಷ್ಟವಂತೆ. ಸಸ್ಯಾಹಾರದಲ್ಲಿ ಪ್ರೊಟೀನ್‌ಗಿಂತ ಕಾರ್ಬೋಹೈಡ್ರೇಟ್ ಅಂಶ ಜಾಸ್ತಿ ಇರುತ್ತದೆ. ಹೀಗಾಗಿ ದೇಹ ತೂಕ ಹೆಚ್ಚಾಗುತ್ತದೆ ಎನ್ನುವ ಅವರು ಜಂಕ್‌ಫುಡ್‌ಗಳನ್ನು ತಿನ್ನುವ ಹವ್ಯಾಸವನ್ನೂ ಬಿಟ್ಟಿಲ್ಲವಂತೆ.

ಹಣ್ಣುಹಂಪಲು ಸಹ ತಮ್ಮ ದೇಹಾಕಾರದ ರೂಪವನ್ನು ಒಂದೇ ರೀತಿಯಲ್ಲಿ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ ಎನ್ನುವುದು ಅವರ ನಂಬಿಕೆ. ನಿಧಾನವಾಗಿ, ಸರಿಯಾದ ಕ್ರಮ ಹಾಗೂ ವೇಳೆಯಲ್ಲಿ ತಿನ್ನುವುದು ಅವರು ಪಾಲಿಸಿಕೊಂಡು ಬಂದ ನೀತಿ. ಆರೋಗ್ಯಕರವಾಗಿರಲು, ದೇಹಕ್ಕೆ ಏನು, ಎಷ್ಟು ಬೇಕೋ ಅಷ್ಟನ್ನು ತಿನ್ನಬೇಕು. ಅದು ಹೆಚ್ಚೂ ಆಗಬಾರದು ಕಡಿಮೆಯೂ ಆಗಬಾರದು ಎನ್ನುತ್ತಾರೆ. ತುಸು ದಪ್ಪ ಆಗಿದ್ದೇನೆ ಎನಿಸಿದರೆ ಕೃತಿ ಡಯಟೀಷಿಯನ್ ಮತ್ತು ನ್ಯೂಟ್ರೀಷಿಯನ್‌ರ ಮೊರೆ ಹೋಗುತ್ತಾರಂತೆ.

ನಿರ್ದೇಶಕರು ಹೇಳಿದಾಗ ದೇಹದ ತೂಕ ಹೆಚ್ಚಿಸಿಕೊಳ್ಳುವ ಮತ್ತು ಕಡಿಮೆ ಮಾಡಿಕೊಳ್ಳುವ ಅನಿವಾರ್ಯತೆ ಇರುತ್ತದೆ. ಆಗ ಸ್ವಲ್ಪಮಟ್ಟಿಗೆ ದೇಹಕ್ಕೆ ಕಸರತ್ತು ನೀಡಿದರೆ, ಉಳಿದ ಹೆಚ್ಚು ಗಮನ ಆಹಾರದ ಮೇಲೆ ಇರುತ್ತದೆ. ದಿನದ ಮೂಡ್‌ನ ಮೇಲೆ ಅವರ ತಿಂಡಿತಿನಿಸುಗಳ ಬಗೆಯೂ ನಿರ್ಧರಿತವಾಗುತ್ತದೆ. ಚಿತ್ರೀಕರಣದ ವೇಳೆ ಬಿಡುವು ಸಿಕ್ಕಾಗ ಕೆಲಹೊತ್ತು ಧ್ಯಾನ ಮಾಡುವ ಕೃತಿಗೆ ಯೋಗ ಮಾಡುವುದೆಂದರೆ ಬೋರ್ ಅಂತೆ.

`ಚಿರು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಕೃತಿ ಕರಬಂಧ ಅವರಿಗೆ ಅವಕಾಶಗಳ ಹಾದಿ ತೆರೆದುಕೊಳ್ಳುತ್ತಿದೆ. ಪ್ರಜ್ವಲ್ ದೇವರಾಜ್ ಜೊತೆ ಅವರು ನಟಿಸಿರುವ `ಗಲಾಟೆ' ಈ ವರ್ಷದ ಮೊದಲ ಚಿತ್ರವಾಗಿ ಬಿಡುಗಡೆಯಾಗಿದ್ದರೆ, ಯಶ್ ನಾಯಕರಾಗಿರುವ `ಗೂಗ್ಲಿ' ಚಿತ್ರೀಕರಣ ಸಾಗಿದೆ. ಇನ್ನು ದಿಗಂತ್ ಜೊತೆಗೆ ಹೆಸರಿಡದ ಚಿತ್ರವೊಂದರ ನಟನೆಯಲ್ಲೂ ಅವರು ಬಿಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT