ADVERTISEMENT

ಶಂಕರ ಸಂಗೀತ ಸಂಕರ!

ಸತೀಶ ಬೆಳ್ಳಕ್ಕಿ
Published 8 ಏಪ್ರಿಲ್ 2013, 19:59 IST
Last Updated 8 ಏಪ್ರಿಲ್ 2013, 19:59 IST
ಎಹ್ಸಾನ್
ಎಹ್ಸಾನ್   

ಈಚೆಗೆ ನಗರದಲ್ಲಿ ನಡೆದ `ಐಡಿಯಾ ರಾಕ್ಸ್ ಇಂಡಿಯಾ ಕಾನ್ಸರ್ಟ್' ಕೆಲವೊಂದು ಕಾರಣಗಳಿಂದ ಭಿನ್ನವಾಗಿತ್ತು. ಸಂಗೀತ ಕ್ಷೇತ್ರದ ದಿಗ್ಗಜರ ಜತೆ ಜತೆಗೆ ಹೊಸ ಪ್ರತಿಭೆಗಳು ತಮ್ಮ ಪ್ರತಿಭೆ ಪ್ರದರ್ಶಿಸಿದ್ದು ಈ ಕಾರ್ಯಕ್ರಮದ ಮತ್ತೊಂದು ವಿಶೇಷ. ರಾಕ್‌ಬ್ಯಾಂಡ್, ಮೆಟಲ್‌ಬ್ಯಾಂಡ್ ಕಾನ್ಸರ್ಟ್‌ಗಳಲ್ಲಿರುವಂತಹ ಗ್ಲಾಮರ್, ರೋಚಕತೆ, ಅಮಲು, ಧೂಮ-ವೋಡ್ಕಾದ ಕಮಟು ಇಲ್ಲಿರಲಿಲ್ಲ. ಹಾಗೆಯೇ, ರಾಕ್‌ಬ್ಯಾಂಡ್‌ಗಳಲ್ಲಿ ಸಮೂಹಸನ್ನಿಗೆ ಒಳಗಾದಂತೆ ವಿಚಿತ್ರವಾಗಿ ವರ್ತಿಸುವ ಪ್ರೇಕ್ಷಕ ವರ್ಗವೂ ಹೆಚ್ಚಿರಲಿಲ್ಲ. ಇಲ್ಲಿ ಸೇರಿದ್ದ ಅನೇಕರು ಅಪ್ಪಟ ಶಂಕರ್-ಎಹ್ಸಾನ್-ಲಾಯ್ ಅವರ ಅಭಿಮಾನಿ ವರ್ಗ. ಹಾಗಾಗಿ ಈ ಸಂಗೀತ ಸಂಜೆ ಯಶಸ್ವಿಯಾಗಿ ಮೂಡಿಬಂತು. ಈ ರಸಮಂಜರಿ ಕಾರ್ಯಕ್ರಮದ ಒಂದಿಷ್ಟು ಝಲಕ್‌ಗಳು ಇಲ್ಲಿವೆ.
***
ಅವಧಿಗೂ ಮುನ್ನ ಸೇರಿದ್ದ ಸಂಗೀತ ಪ್ರೇಮಿಗಳ ಮೊಗದಲ್ಲಿ ಸಂಗೀತ ಸುಧೆಯನ್ನು ಕಿವಿದುಂಬಿಕೊಳ್ಳುವ ತವಕ. ಐಡಿಯಾ ರಾಕ್ಸ್ ಇಂಡಿಯಾ ಸಂಗೀತ ಸಂಜೆಯಲ್ಲಿ ಶಂಕರ್-ಎಹ್ಸಾನ್-ಲಾಯ್ ಅವರ ಗಾಯನ ಕೇಳಲು ಬೆಂಗಳೂರಿಗರಷ್ಟೇ ಅಲ್ಲದೇ ತುಮಕೂರು, ರಾಮನಗರದಿಂದಲೂ ಜನ ಬಂದಿದ್ದರು. ಸಂಜೆ 6.30ಕ್ಕೆ ಶುರುವಾಗಬೇಕಿದ್ದ ಕಾರ್ಯಕ್ರಮ ಎಂಟು ಗಂಟೆಯಾದರೂ ಪ್ರಾರಂಭಗೊಳ್ಳದ ಕಾರಣ ನೈಸ್ ಮೈದಾನದಲ್ಲಿ ಅಭಿಮಾನದ ಕಿರುಚಾಟ, ಅಬ್ಬರ ಮುಂದುವರಿದಿತ್ತು.
***
ರಾತ್ರಿ ಎಂಟು ಗಂಟೆ ಹತ್ತು ನಿಮಿಷ. ತ್ರಿಮೂರ್ತಿಗಳು ತಾಜ್ ವಿವಾಂತ ಹೋಟೆಲ್‌ನಿಂದ ನೇರವಾಗಿ ನೈಸ್ ಮೈದಾನದಲ್ಲಿ ಸಜ್ಜಾಗಿದ್ದ ಬೃಹತ್ ವೇದಿಕೆಯ ಹಿಂಭಾಗದಲ್ಲಿ ಬಂದಿಳಿದರು. ಅದುವರೆಗೂ ಮೈದಾನದಲ್ಲೇ ಇದ್ದ ತಂಡದ ಹುಡುಗರೆಲ್ಲರೂ ಮೂವರಿಗೂ ಹಸ್ತಲಾಘವ ಮಾಡಿದರು. ಶಂಕರ್ ಅವರು ಎಹ್ಸಾನ್ ಕಿವಿಯಲ್ಲಿ ಏನನ್ನೋ ಉಸುರಿದರು. ಅವರು ಎಲ್ಲ ಹುಡುಗರನ್ನು ಕೂಗಿ, ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದುಕೊಂಡು ಬ್ಯಾಕ್‌ಸ್ಟೇಜ್‌ನಲ್ಲೇ ಒಂದು ಮಾನವ ಸರಪಳಿ ನಿರ್ಮಿಸಿದರು. ಶಂಕರ್-ಎಹ್ಸಾನ್-ಲಾಯ್ ಮೂವರು ಸೇರಿದಂತೆ ಹದಿನೈದು ಮಂದಿ ಒಂದು ನಿಮಿಷ ತಲೆ ಬಗ್ಗಿಸಿ ನಿಂತರು.

ನಂತರ ಎಲ್ಲರೂ ಮೂರು ಉಚ್ಚಸ್ಥಾಯಿಯಲ್ಲಿ ಓಂಕಾರ ಪಠಿಸಿದರು. ಅದು ಮುಗಿದ ಬಳಿಕ ಪರಸ್ಪರ `ಆಲ್ ದಿ ಬೆಸ್ಟ್' ಹೇಳಿಕೊಂಡರು. ಶಂಕರ್ ತಮ್ಮ ನೆಚ್ಚಿನ ವೇಸ್ಟ್‌ಕೋಟ್ ಧರಿಸಿ ಮೈಕ್ ಕೈಗೆತ್ತಿಕೊಂಡು ಸಜ್ಜಾದರು. ವೇದಿಕೆ ಮೇಲಿದ್ದ ನಿರೂಪಕಿ `ತ್ರಿಮೂರ್ತಿಗಳು ವೇದಿಕೆಗೆ ಬರುತ್ತಿದ್ದಾರೆ' ಎಂದು ಗಟ್ಟಿಧ್ವನಿಯಲ್ಲಿ ಪ್ರಕಟಿಸಿದರು.
***
ಸೌಂಡ್‌ಬಾಕ್ಸ್‌ಗಳು ಭೂಮಿ ಕಂಪಿಸುವಂತೆ ಅಬ್ಬರಿಸುತ್ತಿದ್ದವು. ಒಮ್ಮೆಲೆ ವೇದಿಕೆಯನ್ನು ಕತ್ತಲು ಆವರಿಸಿಕೊಂಡಿತು. ಶಂಕರ್ ಹಾಡಲು ಅಣಿಯಾಗಿದ್ದರು. ಲಾಯ್ ಕೀಬೋರ್ಡ್ ಬಳಿ ಬಂದು ನಿಂತರು. ಎಹ್ಸಾನ್ ಗಿಟಾರ್ ಬಗಲಿಗೆ ಹಾಕಿಕೊಂಡು ಬಂದು ನಿಂತರು. ಇದ್ದಕ್ಕಿದ್ದಂತೆ ವೇದಿಕೆಯಲ್ಲಿ ಬೆಳಕು ಆವರಿಸಿತು. ತ್ರಿಮೂರ್ತಿಗಳನ್ನು ಕಂಡ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು. ಶಂಕರ್ `ನಮಸ್ಕಾರ ಬೆಂಗಳೂರು' ಅಂತ ಶುಭಾಶಯ ಕೋರಿದರು. ಅವರ ಮಾತಿಗೆ ಅಭಿಮಾನಿಗಳಿಂದ ಮತ್ತೊಮ್ಮೆ ಅಬ್ಬರದ ಪ್ರತಿಕ್ರಿಯೆ. ನಂತರ ಶಂಕರ್ ಗಣಪತಿ ಸ್ತುತಿ `ವಕ್ರತುಂಡ ಮಹಾಕಾಯ'ದೊಂದಿಗೆ ಸಂಗೀತ ಪಯಣ ಪ್ರಾರಂಭಿಸಿದರು.
***
ನಂತರ ನಡೆದದ್ದು ಸುಮಧುರ ಹಾಡುಗಳ ಸುರಿಮಳೆ. ಅಬ್ಬರಿಸುತ್ತಿದ್ದ ಸಂಗೀತ ವರ್ಷಧಾರೆಯಲ್ಲಿ ಅಭಿಮಾನಿಗಳು ಜಳಕ ಮಾಡಿದರು. ಶಂಕರ್ ಮೊದಲಿಗೆ ಹಾಡಿದ್ದು `ಕೋಯಿ ಕಹೇ ಕೆಹತಾ ರಹೇ, ಇತನಾ ಭಿ ಹಮ್‌ಕೋ ದಿವಾನಾ' ಗೀತೆಯನ್ನು. ಹಾಡುವಾಗ ಪ್ರೇಕ್ಷಕರನ್ನು ತಮ್ಮಂದಿಗೆ ಸೇರಿಸಿಕೊಂಡು ಹಾಡಿದ್ದರಿಂದ ಈ ಗೀತೆಗೆ ಜನ ಕುಣಿದು ಕುಪ್ಪಳಿಸಿದರು. ನಂತರ ಹಾಡಿದ `ರಾಕ್ ಆನ್' ಚಿತ್ರದ ಗೀತೆಯು ಪ್ರೇಕ್ಷಕರಲ್ಲಿ ಉತ್ಸಾಹ ಚಿಮ್ಮಿಸಿತು. ಶಂಕರ್ ಹಾಡಿಗೆ ಎಹ್ಸಾನ್ ಮತ್ತು ಲಾಯ್ ಉತ್ತಮ ಸಾಥ್ ನೀಡಿದರು.
***
ಐಡಿಯಾ ರಾಕ್ಸ್ ಇಂಡಿಯಾ ಸಂಗೀತ ಸಂಜೆಯಲ್ಲಿ ತ್ರಿಮೂರ್ತಿಗಳು ತಮ್ಮ ಅಭಿಮಾನಿಗಳನ್ನು ಸಂಗೀತದ ಅಲೆಯ ಮೇಲೆ ತೇಲಿಸಿದರು. ಮೂವರೂ ಬಾಲಿವುಡ್‌ನ ಜನಪ್ರಿಯ ಗೀತೆಗಳನ್ನು ಹಾಡಿ ಜನರನ್ನು ರಂಜಿಸಿದರು. ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶ ದೊರಕಿಸಿಕೊಡುವ ಸಲುವಾಗಿ ಪ್ರತಿವರ್ಷ ಐಡಿಯಾ ರಾಕ್ಸ್ `ಇಂಡಿಯಾ ಕಾನ್ಸರ್ಟ್'ನ್ನು ಆಯೋಜಿಕೊಂಡು ಬರುತ್ತಿದೆ. ಈ ರಸಸಂಜೆ ಕಾರ್ಯಕ್ರಮ ಅದ್ಭುತವಾಗಿ ಕೊಳಲು ನುಡಿಸುವ ಹಾಗೂ ಹಾಡುವ ಹೊಸ ಪ್ರತಿಭೆ ರಸಿಕಾ ಚಂದ್ರಶೇಖರ್ ಅವರ ಪ್ರತಿಭೆಯ ಅನಾವರಣಕ್ಕೂ ವೇದಿಕೆಯಾಯಿತು.

ಈಕೆ ಶಂಕರ್-ಎಹ್ಸಾನ್-ಲಾಯ್ ಅವರ ಸಂಯೋಜನೆಯಲ್ಲಿ ಮೂಡಿಬಂದ ಅನೇಕ ಗೀತೆಗಳನ್ನು ಕೊಳಲಲ್ಲಿ ನುಡಿಸಿದರು. ಹಾಗೆಯೇ ಐಡಿಯಾ ರಾಕ್ಸ್ ಇಂಡಿಯಾ ಸ್ಪರ್ಧೆಯ ವಿಜೇತ ನಿಶಾಂತ್ ಕುಮಾರ್ ಗೀತೆಯೂ ಜನರನ್ನು ಮೋಡಿಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.