
ಕಳೆದ ಹತ್ತು ವರ್ಷಗಳಿಂದ ರಂಗಶಂಕರದಲ್ಲಿ ‘ರಂಗಯುಗಾದಿ’ಯನ್ನು ಆಚರಿಸಲಾಗುತ್ತದೆ. ಈ ಬಾರಿ ಏಪ್ರಿಲ್ 3ರಂದು (ಭಾನುವಾರ) ಕನ್ನಡದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ನೆನಪಿನಲ್ಲಿ ರಂಗಯುಗಾದಿಯನ್ನು ಹಮ್ಮಿಕೊಳ್ಳಲಾಗಿದೆ.
ಯುಗಾದಿ ಹಬ್ಬವನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ಮುಂಚಿನ ಭಾನುವಾರವನ್ನು ರಂಗಶಂಕರದಲ್ಲಿ ಪ್ರತಿವರ್ಷವೂ ‘ರಂಗಯುಗಾದಿ’ ಎಂದು ಆಚರಿಸಲಾಗುತ್ತದೆ.
‘ರಂಗಯುಗಾದಿ’ಯಂದು ಕನ್ನಡದ ಒಬ್ಬ ಶ್ರೇಷ್ಠ ಕವಿ ಅಥವಾ ಲೇಖಕನನ್ನು ಅವರ ಕೃತಿ ಸಂವಾದ, ಕವನ ವಾಚನ ಹಾಗೂ ನಾಟಕ ಪ್ರದರ್ಶನಗಳ ಮೂಲಕ ಸ್ಮರಿಸಲಾಗುತ್ತದೆ. ಈ ಸಲ ಶಬ್ದಗಾರುಡಿಗ ದ.ರಾ. ಬೇಂದ್ರೆ ಅವರ ನೆನಪಲ್ಲಿ ಆಯೋಜಿಸಿರುವುದು ವಿಶೇಷ. ಇದೇ ಭಾನುವಾರ (ಏಪ್ರಿಲ್ 3) ರಂಗಶಂಕರಲ್ಲಿ ರಂಗಯುಗಾದಿ ನಡೆಯಲಿದೆ.
‘ರಂಗಶಂಕರದಲ್ಲಿ ಪ್ರತಿವರ್ಷವೂ ಕನ್ನಡದ ಮಹಾನ್ ವ್ಯಕ್ತಿಗಳ ನೆನಪಿನಲ್ಲಿ ರಂಗಯುಗಾದಿಯನ್ನು ಆಯೋಜಿಸುತ್ತಿದ್ದೇವೆ. ಕನ್ನಡ ಸಾಹಿತ್ಯದಲ್ಲಿ ದ.ರಾ.ಬೇಂದ್ರೆ ಕೊಡುಗೆ ಅಪಾರ. ಅಲ್ಲದೇ ಕನ್ನಡದ ಜ್ಞಾನ ಪೀಠ ಪ್ರಶಸ್ತಿ ವಿಜೇತ ಶ್ರೇಷ್ಠಕವಿಗಳಲ್ಲೊಬ್ಬರು’ ಎಂದು ರಂಗಶಂಕರದ ನಿರ್ದೇಶಕ ಸುರೇಂದ್ರನಾಥ್ ವಿವರಿಸುತ್ತಾರೆ.
ಈ ಹಿಂದೆ ಚಂದ್ರಶೇಖರ ಕಂಬಾರ, ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ಅನಂತಮೂರ್ತಿ ಹೀಗೆ ಮೇರು ಲೇಖಕರ ಸಾಹಿತ್ಯ ಒಳಗೊಂಡ ‘ರಂಗಯುಗಾದಿ’ ನಡೆಸಲಾಗಿತ್ತು. ರಂಗಯುಗಾದಿಯಂದು ಇಡೀ ದಿನ ಆಯ್ಕೆ ಮಾಡಲಾದ ವ್ಯಕ್ತಿಯ ಪರಿಚಯ ಹಾಗೂ ಅವರ ಕೃತಿಗಳ ಬಗ್ಗೆಯೇ ಕಾರ್ಯಕ್ರಮ ಇರುತ್ತದೆ. ಅವರ ಕವನ, ಪದ್ಯ, ಗದ್ಯ, ಕತೆಗಳ ವಾಚನ ಹಾಗೂ ನಾಟಕ ಪ್ರದರ್ಶನ ಇರುತ್ತದೆ.
‘ಆಯಾ ಲೇಖಕರನ್ನು ಅವರ ಕೃತಿಗಳ ಮೂಲಕ ಮೂಲಕವೇ ಅರ್ಥಮಾಡಿಕೊಳ್ಳುವ ಸಣ್ಣ ಪ್ರಯತ್ನವಿದು’ ಎಂದು ಸುರೇಂದ್ರನಾಥ್ ಕಾರ್ಯಕ್ರಮದ ಬಗ್ಗೆ ಹೇಳುತ್ತಾರೆ. ‘ರಂಗಯುಗಾದಿ’ಗೆ ಆಯ್ಕೆ ಮಾಡುವ ಆ ವ್ಯಕ್ತಿ ಮೇರು ವ್ಯಕ್ತಿತ್ವ ಹೊಂದಿರಬೇಕು, ರಂಗಭೂಮಿ ಅಥವಾ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರಬೇಕು.
ಅಂತಹವರನ್ನು ಆಯ್ಕೆ ಮಾಡುತ್ತೇವೆ’ ಎಂದು ಹೇಳುವ ಅವರು, ‘‘ಮುಂದಿನ ವರ್ಷಗಳಲ್ಲಿ ಕನ್ನಡದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಬಗ್ಗೆ ‘ರಂಗಯುಗಾದಿ’ ನಡೆಸಬೇಕು ಎಂಬುದು ನಮ್ಮ ಆಶಯ’’ ಎಂದು ಹೇಳುತ್ತಾರೆ. ಈ ಬಾರಿ ದ.ರಾ. ಬೇಂದ್ರೆ ನೆನಪಿನಲ್ಲಿ ನಡೆಯುವ ‘ರಂಗಯುಗಾದಿ’ಯಲ್ಲಿ ಬೆಳಿಗ್ಗೆ 9ರಿಂದ ರಾತ್ರಿ 9 ಗಂಟೆ ತನಕ ಬೇಂದ್ರೆ ಅವರ ಪರಿಚಯ, ಅವರ ಕವನಗಳ ವಾಚನ, ಅವರ ನೆನಪುಗಳು, ಅವರ ಗದ್ಯದ ಓದು ಹಾಗೂ ಅವರು ಬರೆದ ಮೂರು ನಾಟಕಗಳ ಪ್ರದರ್ಶನ ಇರುತ್ತದೆ.
ಬೇಂದ್ರೆಯವರ ಧ್ವನಿಮುದ್ರಣಗಳು ಹಾಗೂ ಅವರ ಸಾಕ್ಷ್ಯಚಿತ್ರಗಳ ಪ್ರದರ್ಶನ ಕೂಡ ಇರಲಿದೆ. “ಪ್ರತಿವರ್ಷವೂ ‘ರಂಗಯುಗಾದಿ’ ಆಚರಿಸುವ ಬಗ್ಗೆ ರಂಗಶಂಕರದ ಆಡಳಿತ ಸಮಿತಿ ನಿರ್ಧಾರ ತೆಗೆದುಕೊಳ್ಳುತ್ತದೆ. ಈ ವರ್ಷದ ‘ರಂಗಯುಗಾದಿ’ ಮುಗಿದ ಕೂಡಲೇ ಮುಂದಿನ ವರ್ಷದ ವ್ಯಕ್ತಿಯ ಆಯ್ಕೆ ಬಗ್ಗೆ ಚರ್ಚೆ ನಡೆಸಲಾಗುತ್ತದೆ.
ರಂಗಶಂಕರದಲ್ಲಿ ಉತ್ತಮವಾದ ಕಾರ್ಯಕ್ರಮ ನೀಡಬೇಕು, ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂಬ ಇರಾದೆಯಿಂದ ವರ್ಷಪೂರ್ತಿ ಇದರ ಬಗ್ಗೆ ಸಿದ್ಧತೆ ನಡೆಸಲಾಗುತ್ತದೆ’’ ಎಂದು ಅವರು ಸಿದ್ಧತೆ ಬಗ್ಗೆ ವಿವರಿಸುತ್ತಾರೆ. ‘ಮುಂದಿನ ವರ್ಷ ಕುವೆಂಪು ಅಥವಾ ಶಿವರಾಮ ಕಾರಂತರ ನೆನಪಿನಲ್ಲಿ ರಂಗಯುಗಾದಿ ನಡೆಸುವ ಸಾಧ್ಯತೆಯಿದೆ’ ಎಂದೂ ಅವರು ಸುಳಿವು ನೀಡುತ್ತಾರೆ.
ಉತ್ತರ ಕರ್ನಾಟಕದ ತಿನಿಸುಗಳು
ರಂಗಯುಗಾದಿಯೆಂದರೆ ಬರೀ ಸಾಹಿತ್ಯ–ರಂಗಭೂಮಿಯ ಕುರಿತಾದ ಚರ್ಚೆಗಳಷ್ಟೇ ಇರುವುದಿಲ್ಲ. ತಿನಿಸುಪ್ರಿಯರಿಗೂ ಇಲ್ಲಿ ಸಂತೋಷ ನೀಡುವ ಸಂಗತಿಯಿದೆ.
ಉತ್ತರ ಕರ್ನಾಟಕದ ಅದರಲ್ಲೂ ಧಾರವಾಡದ ವಿಶೇಷ ತಿಂಡಿಗಳು ಈ ಬಾರಿ ರಂಗಯುಗಾದಿ ವಿಶೇಷ. ಜೋಳದ ರೊಟ್ಟಿ, ಖಾರ ಮಂಡಕ್ಕಿ, ಮಸಾಲಾ ಬಾಜಿ, ಚಹಾ ಮತ್ತು ಚೂಡ ಹಾಗೂ ಧಾರವಾಡದ ಇನ್ನಿತರ ಭಕ್ಷ್ಯಗಳನ್ನು ರಂಗಶಂಕರ ಕ್ಯಾಂಟೀನ್‌ನಲ್ಲಿ ರುಚಿ ನೋಡಬಹುದು.
ರಂಗಯುಗಾದಿ ಕಾರ್ಯಕ್ರಮ ವಿವರ
ಬೆಳಿಗ್ಗೆ 10 ಗಂಟೆಗೆ: ಬಾ ಹತ್ತರ, ಅನಂತ ದೇಶಪಾಂಡೆ ಅವರಿಂದ ಬೇಂದ್ರೆ ಪರಿಚಯ.
11 ಗಂಟೆಗೆ: ‘ಆ ಥರಾ, ಈ ಥರಾ’ ನಾಟಕ ಪ್ರದರ್ಶನ. ರಚನೆ– ದ.ರಾ. ಬೇಂದ್ರೆ. ನಿರ್ದೇಶನ– ಸುಮನ್ ಜಾದುಗಾರ್. ತಂಡ– ವಿಎಎಸ್‌ಪಿ.
12 ಗಂಟೆಗೆ: ನಾದಲೀಲೆ– ಬೇಂದ್ರೆಯವರ ಕವನ ವಾಚನ. ವಾಚಿಸುವವರು– ಎಸ್. ದಿವಾಕರ್, ಪ್ರಕಾಶ್ ರೈ, ಯೋಗರಾಜ ಭಟ್, ಟಿ.ಎನ್. ಸೀತಾರಾಮ್, ಜೋಗಿ, ವನಮಾಲಾ ವಿಶ್ವನಾಥ್, ಪ್ರತಿಭಾ ನಂದಕುಮಾರ್, ಭಾನುಮತಿ, ಚಿದಂಬರ ನರೇಂದ್ರ, ಶ್ರೀದೇವಿ ಕಳಸದ, ಸಂಧ್ಯಾರಾಣಿ, ಎಂ.ಡಿ. ಪಲ್ಲವಿ, ಬಿಂದು ಮಾಲಿನಿ.
ಮಧ್ಯಾಹ್ನ 3.30: ‘ಉದ್ಧಾರ’ ನಾಟಕ ಪ್ರದರ್ಶನ. ರಚನೆ–ದ.ರಾ. ಬೇಂದ್ರೆ. ನಿರ್ದೇಶನ– ಮಂಜುನಾಥ ಬಡಿಗೇರ್. ತಂಡ– ಅಭಿನಯ ತರಂಗ
ಸಂಜೆ 5: ಉತ್ತರಾಯಣ– ಬೇಂದ್ರೆಯವರ ನೆನಪುಗಳು. ಹಂಚಿಕೊಳ್ಳುವವರು– ಗಿರೀಶ ಕಾರ್ನಾಡ, ಗೋಪಾಲ ವಾಜಪೇಯಿ.
6 ಗಂಟೆಗೆ: ಶ್ರಾವಣ ಪ್ರತಿಭೆ– ಬೇಂದ್ರೆಯವರ ಗದ್ಯದ ಓದು. ವಾಚಿಸುವವರು– ಜಯಂತ್ ಕಾಯ್ಕಿಣಿ, ಎಸ್. ಸುರೇಂದ್ರನಾಥ್.
7.30 ಗಂಟೆಗೆ: ‘ಸಾಯೋ ಆಟ’ ನಾಟಕ ಪ್ರದರ್ಶನ. ರಚನೆ– ದ.ರಾ.ಬೇಂದ್ರೆ. ನಿರ್ದೇಶನ– ಮಂಡ್ಯ ರಮೇಶ್. ತಂಡ– ನಟನ
ವಿಳಾಸ: ರಂಗಶಂಕರ, 8ನೇ ಅಡ್ಡರಸ್ತೆ, ಜೆ.ಪಿ.ನಗರ ಎರಡನೇ ಹಂತ.
ಇಡೀ ದಿನದ ಟಿಕೆಟ್ ದರ: ₹ 150
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.