ಗಾಂಧಿ ಬಜಾರಿನ ನ್ಯಾಷನಲ್ ಕಾಲೇಜ್ ಮೇಲ್ಸೇತುವೆಯ ಕಡೆಯಿಂದ ಡಿವಿಜಿ ರಸ್ತೆಗೆ ಪ್ರವೇಶಿಸುತ್ತಿದ್ದಂತೆ ಅರೆಕ್ಷಣ ದಾರಿಹೋಕರ ಕಣ್ಣುಗಳು ಅತ್ತ ಇತ್ತ ಚಲಿಸದೆ ಸ್ತಂಭೀಭೂತವಾಗುತ್ತವೆ. ಎಂಟ್ಹತ್ತು ನಿಮಿಷ ಅಲ್ಲಿಯೇ ನಿಂತವರು, ‘ಅರೆರೆ... ಅಬ್ಬಾ’ ಎಂದು ಉದ್ಗರಿಸಿ, ಅಚ್ಚರಿಯಿಂದ ಕಣ್ಣರಳಿಸುತ್ತಾರೆ.
ಇಲ್ಲಿನ ಡಿವಿಜಿ ರಸ್ತೆಗೆ ಪ್ರವೇಶಿಸುತ್ತಿದ್ದಂತೆ ಕಾಣುವ ಸಪ್ತಮಿ ಕ್ರಿಯೇಷನ್ ಬಳಿ ಕಲಾವಿದ ಶಿವಮಾದು ಅವರ ಕೈ ಚಳಕದಿಂದ ರೂಪುಗೊಂಡಿರುವ ಗಣ್ಯರ ಕಲಾಕೃತಿಗಳು ದಾರಿಹೋಕರನ್ನು ಸೆಳೆಯದೇ ಇರಲಾರವು. ಇಲ್ಲಿ ನಾಡಿನ ನಾನಾ ಗಣ್ಯರು ಸಾಲಾಗಿಯೇ ಪಕ್ಷಭೇದ ಮರೆತು ನಿಂತಿದ್ದಾರೆ. ಅವರನ್ನು ಮುಟ್ಟಿ, ತಟ್ಟಿ ನಮ್ಮ ಮುಖದಲ್ಲಿ ನಗೆಯನ್ನು ನಾವೇ ಅರಳಿಸಿಕೊಳ್ಳಬಹುದು.
ವರನಟ ಡಾ.ರಾಜ್‌ಕುಮಾರ್, ಬಾಲಿವುಡ್ ನಟರಾದ ಶಾರೂಖ್ ಖಾನ್, ಸಲ್ಮಾನ್ ಖಾನ್, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಅಬ್ದುಲ್‌ಕಲಾಂ, ಇಂದಿರಾ ಗಾಂಧಿ ಹೀಗೆ ಹತ್ತು ಹದಿನೈದು ಗಣ್ಯರ ಕಲಾಕೃತಿಗಳು ಶಿವಮಾದು ಅವರ ಕೈ ಚಳಕದಲ್ಲಿ ಅರಳಿ ಪಾದಚಾರಿಗಳನ್ನು ಸೆಳೆಯುವ ಜೊತೆಗೆ ಅವರ ಕಿಸೆಯಲ್ಲಿದ್ದ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗುತ್ತಿದ್ದಾರೆ.
ಈ ಕಲಾಕೃತಿಗಳ ಹಿಂದೆ ಹದಿನೈದು ಕಲಾವಿದರ ಪರಿಶ್ರಮವಿದೆ. ಆರು ತಿಂಗಳು ಶ್ರಮವಹಿಸಿ ಈ ಕಲಾಕೃತಿಗಳನ್ನು ತಯಾರಿಸಿದ್ದಾರೆ. ಕಲಾಕೃತಿಗಳಿಗೆ ತಲಾ ಐದು ಲಕ್ಷ ರೂಪಾಯಿ ಬೆಲೆ.
ಇಲ್ಲಿನ ಕಲಾಕೃತಿಗಳು ಮೂಲ ವ್ಯಕ್ತಿಗಳ ಪಡಿಯಚ್ಚಿನಂತಿವೆ. ಇಂದಿರಾಗಾಂಧಿ, ಸಾಯಿಬಾಬಾ, ವಾಜಪೇಯಿ ಅವರು ತಮ್ಮದೇ ಆದ ಡ್ರೆಸ್ ಕೋಡ್ ಹೊಂದಿದ್ದಾರೆ. ಈ ಕಲಾಕೃತಿಗಳಲ್ಲಿ ಎಲ್ಲಿಯೂ ಆ ವೇಷಭೂಷಣಕ್ಕೆ ಚ್ಯುತಿ ಬಾರದಂತೆ ಕಲಾವಿದರು ತಮ್ಮ ಕೈ ಚಳಕ ತೋರಿದ್ದಾರೆ. ಹೀಗೆ ಪ್ರತಿ ಗಣ್ಯರ ಕಲಾಕೃತಿಯನ್ನು ಅವರ ಚಹರೆಗೆ ಲೋಪವಾಗದಂತೆ ತೈಲ ವರ್ಣದಿಂದ ತಯಾರಿಸಲಾಗಿದೆ. ಸಹಜ ಕೂದಲಿನಿಂದ ತಯಾರಿಸಿರುವ ವಿಗ್ ತೊಡಿಸಿರುವುದು, ಕಣ್ಣಿಗೆ ಗ್ಲಿಸರಿನ್‌ಯುಕ್ತ ರಾಸಾಯನಿಕ ಬಳಸಿರುವುದರಿಂದ ಕಲಾಕೃತಿಗಳು ವಾಸ್ತವವೆನ್ನುವಂತೆ ಗಮನ ಸೆಳೆಯುತ್ತವೆ.
‘ಲಂಡನ್ನಿನ ಮೇಡಂ ಟುಸ್ಸಾಡ್ಸ್‌ನಲ್ಲಿ ಮೇಣದಿಂದ ಗಣ್ಯರ ಪ್ರತಿಮೆಗಳನ್ನು ಮಾಡಲಾಗುತ್ತಿದೆ. ಅಂತಹ ಪ್ರತಿಮೆಗಳನ್ನು ನಿರ್ವಹಣೆ ಮಾಡುವುದು ಕಷ್ಟ. ಜೊತೆಗೆ ದುಬಾರಿ ಕೂಡ. ಹಾಗಾಗಿ ಫೈಬರ್‌ನಿಂದ ಪ್ರತಿಮೆಗಳನ್ನು ತಯಾರಿಸಿದರೆ ಸಾಮಾನ್ಯ ಜನರ ಕೈಗೆಟಕುತ್ತವೆ. ಇದರ ನಿರ್ವಹಣೆಯೂ ಸುಲಭ ಎನ್ನಿಸಿತು. ಹಾಗಾಗಿ ಈ ಒಂದು ಪ್ರಯೋಗಕ್ಕೆ ಮುಂದಾದೆ’ ಎಂದು ಈ ಕಲಾಕೃತಿಗಳ ಹುಟ್ಟನ್ನು ವಿವರಿಸುತ್ತಾರೆ ಕಲಾವಿದ ಶಿವಮಾದು.
ಕಂಠೀರವ ಸ್ಟುಡಿಯೊದಲ್ಲಿರುವ ಡಾ.ರಾಜ್‌ಕುಮಾರ್ ಕಂಚಿನ ಪ್ರತಿಮೆಯೂ ಇವರ ಕೈಚಳಕದಿಂದಲೇ ಮೂಡಿರುವುದು. ‘ಬಾಲ್ಯದಿಂದಲೂ ಅಣ್ಣಾವ್ರ ಸಿನಿಮಾಗಳನ್ನು ನೋಡಿ ಬೆಳೆದವನು ನಾನು. ಹಾಗಾಗಿ ಅವರ ರೂಪವನ್ನು ಸೃಷ್ಟಿಸುವುದು ಕಷ್ಟವೆನ್ನಿಸಲಿಲ್ಲ. ರಾಜ್‌ಕುಮಾರ್ ಪ್ರತಿಮೆಯನ್ನು ಜೇಡಿಮಣ್ಣಿನಿಂದ ಮೊದಲು ತಯಾರಿಸಿದ್ದೆ. ಅವರ ನಗುಮೊಗವನ್ನು ಬಹಳಷ್ಟು ಮಂದಿ ಮೆಚ್ಚಿಕೊಂಡರು. ಇಲ್ಲಿಯವರೆಗೆ ಯಾರೂ ಇಂತಹ ಪ್ರತಿಮೆ ತಯಾರಿಸಿರಲಿಲ್ಲ ಎಂದು ರಾಜ್ ಕುಟುಂಬದವರು ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಅದೇ ಪ್ರತಿಮೆಗೆ ಕಂಚಿನ ಎರಕ ಹಾಕಿ ಪ್ರತಿಮೆಯನ್ನು ತಯಾರಿಸಿದೆ’ ಎಂದು ರಾಜ್‌ಕುಮಾರ್ ಅವರ ಮೂರ್ತಿಗೆ ರೂಪು ಕೊಟ್ಟಿದ್ದನ್ನು ನೆನಪಿಸಿಕೊಳ್ಳುತ್ತಾರೆ ಶಿವಮಾದು.
೨೦೧೧ರಲ್ಲಿ ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕೇವಲ ಐದು ದಿನಗಳಲ್ಲಿ ೧೩೦೦ ಅಶ್ವಾರೂಢ ಚೆನ್ನಮ್ಮನ ಸ್ಮರಣ ಸಂಚಿಕೆಯನ್ನು ತಯಾರಿಸಿಕೊಟ್ಟ ಹಿರಿಮೆ ಇವರದು.
‘ನಮ್ಮ ಪೂರ್ವಿಕರು ಶಿಲ್ಪಕಲೆಯನ್ನೇ ಉದ್ಯೋಗವನ್ನಾಗಿಸಿಕೊಂಡಿದ್ದರು. ಶಿಲ್ಪಿಗಳ ಒಡನಾಟದಿಂದಲೇ ಬೆಳೆದೆ. ಆ ಸಮ್ಮಿಲನವೇ ನನ್ನಲ್ಲಿ ಕಲಾವಿದನೊಬ್ಬ ಜಾಗೃತನಾಗಲು ಸ್ಫೂರ್ತಿಯಾಯಿತು’ ಎನ್ನುತ್ತಾರೆ ಅವರು.
ಯಾವುದೇ ವ್ಯಕ್ತಿಯ ಛಾಯಾಚಿತ್ರ ನೀಡಿದರೂ ಆ ಛಾಯಾಚಿತ್ರವನ್ನು ನೋಡಿಯೇ ಮೂರ್ತಿಯನ್ನು (ಪ್ರತಿಮೆ) ತಯಾರಿಸಿ ಬಿಡುವ ಕಲಾ ಕೌಶಲ ಶಿವಮಾದು ಅವರಿಗೆ ಸಿದ್ಧಿಸಿದೆ. ಮಾಹಿತಿಗೆ: ೯೮೪೫೨೮೬೬೩೫
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.