ADVERTISEMENT

‘ಶ್ರೀರಾಮಾಯಣ ದರ್ಶನಂ’ಗೆ ಲಕೋಟೆ ಗೌರವ

ಜೆ.ಪಿ.ಕೋಲಾರ
Published 26 ಡಿಸೆಂಬರ್ 2017, 19:30 IST
Last Updated 26 ಡಿಸೆಂಬರ್ 2017, 19:30 IST
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತಿಗಳ ಗೌರವಾರ್ಥ ಪ್ರಕಟವಾದ ಅಂಚೆಚೀಟಿ (1997) ಮತ್ತು ಕುವೆಂಪು ಭಾವಚಿತ್ರ ಹೊತ್ತ ಅಂಚೆಚೀಟಿ (2017)
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತಿಗಳ ಗೌರವಾರ್ಥ ಪ್ರಕಟವಾದ ಅಂಚೆಚೀಟಿ (1997) ಮತ್ತು ಕುವೆಂಪು ಭಾವಚಿತ್ರ ಹೊತ್ತ ಅಂಚೆಚೀಟಿ (2017)   

‘ಶ್ರೀ ರಾಮಾಯಣ ದರ್ಶನಂ’ ಕನ್ನಡಕ್ಕೆ ಹಲವು ಕೋಡುಗಳನ್ನು ಮೂಡಿಸಿದ ಕುವೆಂಪು ಅವರ ಮಹತ್ವದ ಕೃತಿ, ಕನ್ನಡ ಭಾಷೆಗೆ ಮೊದಲ ಜ್ಞಾನಪೀಠ ಗೌರವ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಪಂಪ ಪ್ರಶಸ್ತಿ ಗೌರವಕ್ಕೆ ಪಾತ್ರವಾದ ಕೃತಿಯೂ ಹೌದು.

ಇದು ಕನ್ನಡಕ್ಕೆ ಪ್ರಥಮ ಜ್ಞಾನಪೀಠ ಪ್ರಶಸ್ತಿ ಸಂದ ಐವತ್ತನೆಯ ವರ್ಷ. 1967ರಲ್ಲಿ ಈ ಗೌರವ ಕುವೆಂಪು ಅವರನ್ನು ಅಲಂಕರಿಸಿತ್ತು. ಈ ನೆನಪಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೇಂದ್ರ ಅಂಚೆ ಇಲಾಖೆಯೊಡನೆ ವಿಶೇಷ ಅಂಚೆ ಲಕೋಟೆಯನ್ನು ಕುವೆಂಪು ಹುಟ್ಟುಹಬ್ಬದ ಮುನ್ನಾದಿನ (ಡಿ.28) ಬಿಡುಗಡೆ ಮಾಡುತ್ತಿದೆ.

ಕನ್ನಡದಲ್ಲಿ ವಿಶೇಷ ಅಂಚೆ ಲಕೋಟೆಯೊಂದು ಪ್ರಥಮವಾಗಿ ಹೊರ ಬಿದ್ದಿದ್ದು 1977ರಲ್ಲಿ, ಅದು ಬರಹಗಾರ ವೈದ್ಯ ಶಿಕ್ಷಣ ತಜ್ಞ ತಾರಾನಾಥರ ಶಾಲೆಗೆ ನೂರು ತುಂಬಿದಾಗ. ಆ ಬಳಿಕ ಕನ್ನಡದ ಕಣ್ವ ಬಿ.ಎಂ. ಶ್ರೀಕಂಠಯ್ಯನವರ ಜನಶತಮಾನೋತ್ಸವ ಸಂದರ್ಭದಲ್ಲಿ (1984) ವಿಶೇಷ ಲಕೋಟೆ ಬಂತು. ನಂತರದ ದಿನಗಳಲ್ಲಿ ಡಿ.ವಿ.ಜಿ., ಬೀಚಿ, ಶಿವರಾಮ ಕಾರಂತ, ದ.ರಾ. ಬೇಂದ್ರೆ, ಕುವೆಂಪು, ಮುದ್ದಣ, ಗೋಪಾಲಕೃಷ್ಣ ಅಡಿಗ, ತರಾಸು, ಬಸವರಾಜ ಕಟ್ಟಿಮನಿ ಅವರ ಹೆಸರು, ಚಿತ್ರ ಹೊತ್ತ ವಿಶೇಷ ಲಕೋಟೆಗಳು ಹೊರ ಬಂದವು.

ಆದರೆ ಅನ್ಯಭಾಷೆಗಳಿಗೆ ಹೋಲಿಸಿದರೆ ಅಂಚೆಚೀಟಿಗಳಾಗಲಿ, ವಿಶೇಷ ಅಂಚೆಲಕೋಟೆಗಳಾಗಲಿ ಕನ್ನಡಕ್ಕೆ ದಕ್ಕಿರುವುದು ಕಡಿಮೆ.

ರಾಷ್ಟ್ರೀಯ–ಅಂತರರಾಷ್ಟ್ರೀಯ ಮಟ್ಟದಲ್ಲಿ ಅಂಚೆ ಚೀಟಿಗಳ ಸಂಗ್ರಹಕಾರರು ‘ಸಾಹಿತ್ಯ’ ವಿಷಯದಲ್ಲಿ ಸಂಗ್ರಹ ಮಾಡುವುದಿದೆ. ಷೇಕ್ಸ್‌ಪಿಯರ್, ವೇಲ್ಸ್, ಬೋವಿಲೇರ್ ಜೊತೆಗೆ ನಮ್ಮ ನಾಡಿನ ಸಾಹಿತಿಗಳೂ ಇರಬೇಕಲ್ಲವೆ? ಅದಕ್ಕಾಗಿ ಅಂಚೆ ಇಲಾಖೆ ಅಥವಾ ರಾಜ್ಯ ಸರ್ಕಾರದ ಇಲಾಖೆಗಳು ಆಯಾ ಸಂದರ್ಭಕ್ಕೆ ಸರಿಯಾಗಿ ಕಾರ್ಯ ಪ್ರವೃತ್ತರಾದರೆ ಕನ್ನಡದ ಕವಿ ಸಾಹಿತಿಗಳು ಅಂಚೆಚೀಟಿ ವಿಶೇಷ ಲಕೋಟೆಗಳಲ್ಲಿ ಕಾಣಿಸಿಕೊಳ್ಳಲು ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.