ADVERTISEMENT

ಸಂಕ್ರಾಂತಿ ಸಂಗೀತೋತ್ಸವ ಶ್ರೀಕಂಠನ್‌ಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2012, 19:30 IST
Last Updated 18 ಜನವರಿ 2012, 19:30 IST
ಸಂಕ್ರಾಂತಿ ಸಂಗೀತೋತ್ಸವ ಶ್ರೀಕಂಠನ್‌ಗೆ ಅಭಿನಂದನೆ
ಸಂಕ್ರಾಂತಿ ಸಂಗೀತೋತ್ಸವ ಶ್ರೀಕಂಠನ್‌ಗೆ ಅಭಿನಂದನೆ   

ಡಾ. ಆರ್. ಕೆ. ಶ್ರೀಕಂಠನ್ ಮೇರು ಗಾಯಕ, ದಕ್ಷ ಬೋಧಕ. ಸಂಗೀತ ಕಲಾರತ್ನ ಹಾಗೂ ಪದ್ಮಭೂಷಣ ಗೌರವಗಳಿಗೂ ಭಾಜನರು. ಅವರ ಸಂಸ್ಥೆ  ವಿದ್ವಾನ್ ಆರ್.ಕೆ. ಶ್ರೀಕಂಠನ್ ಟ್ರಸ್ಟ್ ಪ್ರತಿವರ್ಷ ಸಂಕ್ರಾಂತಿ ಸಂಗೀತೋತ್ಸವ ನಡೆಸುತ್ತಿದೆ. ಅಲ್ಲದೆ ಸಂಗೀತೋಪನ್ಯಾಸ, ಪ್ರಾತ್ಯಕ್ಷಿಕೆ, ಪುಸ್ತಕ ಪ್ರಕಟಣೆ, ಸೀಡಿಗಳ ಅನಾವರಣ, ಪ್ರಶಸ್ತಿ ವಿತರಣೆ  ಮುಂತಾದವುಗಳನ್ನು ನಡೆಸುತ್ತಿದೆ. ಸಂಕ್ರಾಂತಿ ಹಬ್ಬದ ದಿನವೇ ಡಾ. ಆರ್.ಕೆ. ಶ್ರೀಕಂಠನ್ ಜನ್ಮದಿನ. ಹೀಗಾಗಿ ಅವರ ಹುಟ್ಟಿದ ದಿನವೇ ಪ್ರಾರಂಭವಾಗುವ ಸಂಗೀತೋತ್ಸವವನ್ನು ಹೋಳಿಗೆ ಹಂಚಿ, ಪ್ರತಿವರ್ಷ ಶುಭಾರಂಭ ಮಾಡುತ್ತಾರೆ. ಈ ವರ್ಷ, ತಿರುಮಲೆ ಸಹೋದರಿಯರು ಎಂದೇ ಪರಿಚಿತರಾದ ಪ್ರೊ. ಟಿ. ಶಾರದ ಮತ್ತು ಡಾ. ಟಿ. ಶಚೀದೇವಿ ಅವರಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು.

ಸಂಗೀತೋತ್ಸವದ ಚೊಚ್ಚಲ ಕಛೇರಿ ಮಾಡಿದ ಡಾ. ಕೆ. ವಾಗೀಶ್ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದು, ಮುಂದೆ ಡಾಕ್ಟರೇಟ್ ಸಹ ಗಳಿಸಿದವರು. ಮೈಸೂರಿನವರಾದ ಡಾ. ವಾಗೀಶ್ ಬಾನುಲಿಯ ಸಂಗೀತ ಮುಖ್ಯಸ್ಥರಾಗಿ, ಸದ್ಯ ದೆಹಲಿ ವಾಸಿಯಾಗಿದ್ದಾರೆ.

ಪ್ರಸ್ತುತ ಕಾರ್ಯಕ್ರಮದಲ್ಲಿ ಡಾ. ವಾಗೀಶ್ ಗಾಯನಕ್ಕೆ ಪಿಟೀಲಿನಲ್ಲಿ ಸಿ.ಎನ್. ಚಂದ್ರಶೇಖರ್, ಮೃದಂಗದಲ್ಲಿ ಜೆ. ವೈದ್ಯನಾಥನ್ ಹಾಗೂ ಘಟದಲ್ಲಿ ದಯಾನಂದ ಮೋಹಿತೆ ನೆರವಾದರು. ವಾಗೀಶ್ ಗಾಯನದ ಪ್ರಾರಂಭವೇ ಒಂದು ಸೋಜಿಗ.

ಪ್ರಾರಂಭಿಸಿದ ಮಲಯಮಾರುತ ವರ್ಣ ವಾಗೀಶ ಅವರ ಸ್ವಂತ ರಚನೆ. ಆಂಜನೇಯನ ಮೇಲಿನ `ವೀರ ಮಾರುತ ನಮೋಸ್ತುತೆ~ ವರ್ಣವನ್ನು ಎರಡು ಕಾಲದಲ್ಲಿ ಹಾಡಿ, ಕಛೇರಿಗೆ ಭದ್ರ ಬುನಾದಿ ಹಾಕಿಕೊಂಡರು. ಸುಪರಿಚಿತ ವಾಗ್ಗೇಯಕಾರ ಡಾ. ಮುತ್ತಯ್ಯ ಭಾಗವತರ `ತ್ಯಾಗರಾಜ ಸದ್ಗುರುಂ~ ಒಂದು ಉತ್ತಮ ಆಯ್ಕೆ. ಹಿಂದೋಳ ರಾಗವನ್ನು ಕಿರಿದಾಗಿ ಆಲಾಪಿಸಿ, ಸ್ವಲ್ಪ ಸ್ವರವನ್ನೂ ಸೇರಿಸಿ, ಕೃತಿಯನ್ನು ಭಕ್ತಿಭಾವದಿಂದ ನಿರೂಪಿಸಿದರು.

ಹಿಂದಿನಿಂದಲೂ ಸಂಗೀತ, ಭಕ್ತಿ ಕುರಿತ ಕೃತಿಗಳಲ್ಲಿ `ಸಂಗೀತ ಜ್ಞಾನಮು ಭಕ್ತಿವಿನಾ~ ಮೇರು ಸ್ಥಾನದಲ್ಲಿದೆ. ಭಕ್ತಿ ಇಲ್ಲದ ಸಂಗೀತ ಜ್ಞಾನವು ನಿಷ್ಫಲ. ನಾದೋಪಾಸನೆಯು ಮುಕ್ತಿ ಫಲ ಸ್ವರೂಪಿ. ಇಂಥ ಅರ್ಥಪೂರ್ಣ ತ್ಯಾಗರಾಜರ ಕೀರ್ತನೆ `ಸಂಗೀತ ಜ್ಞಾನಮು~ ಆಯ್ದ ವಾಗೀಶರು ನೆರವಲ್ ಸಹಿತ ಭಾವಪೂರ್ಣವಾಗಿ ಹಾಡಿದರು. ನಂತರ ಇನ್ನೊಂದು ಆಶ್ಚರ್ಯ ಕಾದಿತ್ತು. ಶ್ರೀಕಂಠನ್ ಅವರ ಜನ್ಮದಿನಕ್ಕಾಗಿ (92) ವಾಗೀಶರು ಸ್ವತಃ ರಚಿಸಿದ ಕೃತಿ `ಶ್ರೀಕಂಠದತ್ತ ಶ್ರೀಕಂಠದೂತ~ ಅರ್ಪಿಸಿದರು. ಸರಸ್ವತಿ ರಾಗದಲ್ಲಿ ಕೃತಿ ಆಹ್ಲಾದಕರವಾಗಿ ಹೊಮ್ಮಿತು. ಘನವಾದ ಕಾಂಬೋಧಿ ರಾಗವನ್ನು ವಿಸ್ತರಿಸಿ, ತಾನವನ್ನೂ ಸೇರಿಸಿದರು. `ಗುರು ಶ್ರೀಕಂಠ ಜನ್ಮದಿನಂ! ಅತಿ ಶುಭ ದಿನಂ~ - ಪಲ್ಲವಿಯು ಖಂಡ ತ್ರಿಪುಟದಲ್ಲಿ ಪಸರಿಸಿತು. ಹಿತಮಿತವಾಗಿ ಸ್ವರ ಪ್ರಸ್ತಾರವನ್ನೂ ಮಾಡಿ, ಪಲ್ಲವಿಗೆ ಪೂರ್ಣತ್ವ ನೀಡಿದರು. ಸಾತ್ವಿಕ ಕಂಠ, ಶಾಸ್ತ್ರೀಯ ಚೌಕಟ್ಟು, ಸದಭಿರುಚಿಯ ನಿರೂಪಣೆಗಳಿಂದ ಡಾ. ವಾಗೀಶರು ಸಭೆಯ ಗೌರವಕ್ಕೆ ಪಾತ್ರರಾದರು. ಜನಾನುರಾಗಿ ಕನ್ನಡ `ದೇವರನಾಮ ಹರಿ ಆಡಿದನೆ~ದೊಂದಿಗೆ ಕೆ. ವಾಗೀಶರು ತಮ್ಮ ಕಾರ್ಯಕ್ರಮ ಮುಕ್ತಾಯಗೊಳಿಸಿದರು.

ಮೋಹನ ರಾಮ
ಎರಡನೆಯ ದಿನದ ಸಂಕ್ರಾಂತಿ ಸಂಗೀತೋತ್ಸವದಲ್ಲಿ ವೇಣುವಾದನ ಮಾಡಿದ ಎಲ್.ವಿ. ಮುಕುಂದ್ ಒಂದು ಸಂಗೀತ ಮನೆತನಕ್ಕೆ ಸೇರಿದವರು. ತಾಯಿ ರಾಧಾ ವಿಜಯ ರಾಘವನ್‌ರಿಂದ ಸಂಗೀತ ಶಿಕ್ಷಣ ಪ್ರಾರಂಭಿಸಿದ ಮುಕುಂದ್ ತಮ್ಮ ತಾತ ಬೆಳಕವಾಡಿ ರಂಗಸ್ವಾಮಿ ಅಯ್ಯಂಗಾರ್ ಅವರಲ್ಲಿ ಪಾಠ ಮುಂದುವರಿಸಿದರು.

ಪ್ರಪಂಚಂ ಬಾಲಚಂದರ್ ಅವರಲ್ಲಿ ಪಡೆದ ಕೊಳಲು ಶಿಕ್ಷಣವನ್ನು ಡಾ.ಎನ್. ರಮಣಿ ಅವರಲ್ಲಿ ಮುಂದುವರೆಸಿದ್ದಾರೆ. ಬಿ.ಇ. ಹಾಗೂ ಎಂ.ಎಸ್. ಮಾಡಿರುವ ಮುಕುಂದ್ ಸಂಗೀತ ವೃತ್ತಿಯಲ್ಲೇ ಮುಂದುವರಿದು, ರಾಜ್ಯದ ಒಳಗೆ-ಹೊರಗೆ ಅನೇಕ ಕಾರ್ಯಕ್ರಮಗಳನ್ನು ನೀಡಿ, ಖ್ಯಾತಿಯ ಶಿಖರ ಏರುತ್ತಿರುವರು.

ತಮ್ಮ ಪ್ರಸ್ತುತ ಕಾರ್ಯಕ್ರಮವನ್ನು ಎಲ್. ವಿ. ಮುಕುಂದ್ ಜನಪ್ರಿಯ ಶ್ರೀ ರಾಗದ ವರ್ಣದಿಂದ ಆರಂಭಿಸಿದರು. ದೀಕ್ಷಿತರ ಗೌಳ ರಾಗದ ವಿನಾಯಕ ಸ್ತುತಿಯ ಮೂಲಕ ವಿಘ್ನರಾಜನಿಗೆ ವಂದಿಸಿದರು. ತ್ಯಾಗರಾಜರ ಕಳಾನಿಧಿ ರಾಗದ ಕೃತಿ ರಂಜಕವಾದುದು.

ಸಿಂಹೇಂದ್ರ ಮಧ್ಯಮ ರಾಗದ ಕೀರ್ತನೆಯನ್ನು ನುಡಿಸಿ, ದಿನದ ಪ್ರಧಾನ ರಾಗಕ್ಕೆ ಸರಿದರು. ಮೋಹನ ರಾಗವನ್ನು ಮಾಧುರ್ಯವಾಗಿ ಅರಳಿಸಿದರು. ಮಧುರ ಸಂಗತಿಗಳು ಮನ ಮುಟ್ಟಿದವು. ತ್ಯಾಗರಾಜರು ರಾಮನ ರೂಪ ಮಹಿಮೆ ವರ್ಣಿಸುವ; `ಮೋಹನ ರಾಮ~ದಲ್ಲಿ ರಾಗಮುದ್ರೆಯೂ ಇರುವುದು ಇನ್ನೊಂದು ವಿಶೇಷ. ಸ್ವರ ಪ್ರಸ್ತಾರವನ್ನು ವಿಳಂಬದಲ್ಲಿ ಪ್ರಾರಂಭಿಸಿ, ಕ್ರಮೇಣ ದ್ರುತಕ್ಕೆ ಸರಿದು, ಕೃತಿ-ರಾಗಕ್ಕೆ ಸ್ವಾದ ತುಂಬಿದರು. ಸುಬ್ರಹ್ಮಣ್ಯ ಭಾರತಿಯವರ ಒಂದು ಗೀತೆ ನುಡಿಸಿ, ರಮಣಿಯವರ ತಿಲ್ಲಾನ (ನಳಿನಕಾಂತಿ)ದೊಂದಿಗೆ ತೆರೆ ಎಳೆದರು. ಮತ್ತೂರು ಶ್ರೀನಿಧಿ (ಪಿಟೀಲು), ಎ. ರೇಣುಕಾ ಪ್ರಸಾದ್ (ಮೃದಂಗ) ಮತ್ತು ಎಂ.ಎ. ಕಷ್ಣಮೂರ್ತಿ (ಘಟ) ಸಹಕರಿಸಿದರು.

ಹರಿಕಥೆಯ ಚಿಂತನೆ
ಹರಿಕಥೆ ಒಂದು ಪ್ರಾಚೀನ ಕಲೆ. ಜನ ಸಾಮಾನ್ಯರಿಗೂ ಪ್ರಿಯವಾದ ಕಥಾಕೀರ್ತನ್ ಪಾಮರ-ಪಂಡಿತರಿಬ್ಬರಿಗೂ ಬೇಕಾದುದು. ಒಂದು ಕಾಲದಲ್ಲಿ ವ್ಯಾಪಕವಾಗಿದ್ದ ಹರಿಕಥಾ ದಾಸರ ಪೀಳಿಗೆ ಇಂದು ನಶಿಸುತ್ತಿದೆ. ಹರಿಕಥೆಯ ಪುನರುಜ್ಜೀವನಕ್ಕಾಗಿ ದುಡಿಯುತ್ತಿರುವ ಷಡ್ಜ ಕಲಾ ಕೇಂದ್ರ ಮತ್ತು ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್ತು ಕಳೆದ ವಾರ ಕಥಾ ಕೀರ್ತನ ವಿಚಾರ ಸಂಕಿರಣವನ್ನು ಏರ್ಪಡಿಸಿದ್ದುದು, ಈ ನಿಟ್ಟಿನಲ್ಲಿ ಒಂದು ಒಳ್ಳೆಯ ಪ್ರಯತ್ನ. ಹರಿಕಥೆಯ ಇತಿಹಾಸ, ಪುರಾಣ, ಚರಿತ್ರೆ, ಸಂಗೀತದ ರಾಗ-ತಾಳ-ವಾದ್ಯಗಳು, ನೃತ್ಯ, ಅಭಿನಯ, ವೇಷ ಮುಂತಾದ ವಿಷಯಗಳನ್ನು ಕುರಿತು ಭದ್ರಗಿರಿ ಅಚ್ಯುತದಾಸರು, ಸರ್ವೋತ್ತಮ ದಾಸರು, ಲಕ್ಷ್ಮಣದಾಸ ವೇಲಣಕರ್, ಎಂ.ಎ. ಜಯರಾಮ ರಾವ್, ಡಾ. ಎ.ಎಚ್. ರಾಮರಾವ್   ಮುಂತಾದವರು ವಿಷದೀಕರಿಸಿದರು. ಈ ಚರ್ಚೆ, ವಿಚಾರ ವಿನಿಮಯ ಉಪಯುಕ್ತವಾದುದು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT