ADVERTISEMENT

ಸಂಚಾರಿ ಮೆಕ್ಯಾನಿಕ್‌ಗಳು

ಹೇಮಾ ವೆಂಕಟ್
Published 2 ಜನವರಿ 2014, 19:30 IST
Last Updated 2 ಜನವರಿ 2014, 19:30 IST

ವಾಹನ ಕೈಕೊಟ್ಟಿತೆಂದರೆ ಗ್ಯಾರೆಜ್‌ಗೆ ಹೋಗಬೇಕು. ಅಲ್ಲಿ ಹೋದರೆ ‘ಇವತ್ತು ಇಟ್ಟು ಹೋಗ್ರಿ, ನಾಳೆ ಬನ್ನಿ. ತುಂಬ ಬ್ಯುಸಿ ಇದ್ದೇವೆ’ ಅಂತಾರೆ ಮೆಕ್ಯಾನಿಕ್. ‘ಹುಡುಗರೆಲ್ಲ ರಜೆ ಇದ್ದಾರೆ’ ಎಂದೋ, ‘ನಿಮಗಿಂತ ಮೊದಲೇ ವಾಹನ ಇಟ್ಟು ಹೋದ ಹತ್ತಾರು ಜನರಿದ್ದಾರೆ’ ಎಂದೋ ಹೇಳಿ ಕೈಚೆಲ್ಲುತ್ತಾರೆ. ಇಷ್ಟೇ ಅಲ್ಲ, ಒಮ್ಮೆ ಗ್ಯಾರೇಜ್‌ಗೆ ಹೋದರೆ ಆ ಪಾರ್ಟು ಹೋಗಿದೆ, ಈ ಪಾರ್ಟು ಬದಲಾಯಿಸಬೇಕು ಎಂದು ನೂರಾರು ರೂಪಾಯಿ ಬಿಲ್‌ ಕೊಡುತ್ತಾರೆ. ಪ್ರತಿದಿನ ಸ್ವಂತ ವಾಹನದಲ್ಲಿಯೇ ಓಡಾಡುವ ಯುವಕ, ಯುವತಿಯರಿಗೆ ಒಂದೆರಡು ದಿನದ ಮಟ್ಟಿಗೆ ವಾಹನ ಇಲ್ಲವೆಂದರೂ ಕೈಕಾಲು ಕಟ್ಟಿ ಹಾಕಿದಂತೆಯೇ ಆಗುತ್ತದೆ. ಆದರೆ, ನಗರದ ಕೆಲವು ರಸ್ತೆಗಳಲ್ಲಿ ಓಡಾಡುವ ವಾಹನ ಚಾಲಕರಿಗೆ ಆಪದ್ಬಾಂಧವರಂತೆ ಕೆಲ ಸಂಚಾರಿ ಮೆಕ್ಯಾನಿಕ್‌ಗಳಿದ್ದಾರೆ. ಕೆಟ್ಟು ನಿಂತ ವಾಹನವನ್ನು ಬಲು ಬೇಗ ಓಡುವಂತೆ ಮಾಡಿಕೊಡುತ್ತಾರೆ.

ಕಾರ್ಪೊರೇಷನ್‌ನಿಂದ ಎಂ.ಜಿ. ರಸ್ತೆ ಸಂಪರ್ಕಿಸುವ ಬಹುತೇಕ ರಸ್ತೆಗಳಲ್ಲಿ ಇಂತಹ ಮೆಕ್ಯಾನಿಕ್‌ಗಳು ಕಾಣಸಿಗುತ್ತಾರೆ. ಮಲ್ಯ ರಸ್ತೆ, ಕಬ್ಬನ್‌ಪಾರ್ಕ್‌ ರಸ್ತೆ, ಕಸ್ತೂರಬಾ ರಸ್ತೆ, ರೆಸಿಡೆನ್ಸಿ ರಸ್ತೆ, ಚರ್ಚ್‌ಸ್ಟ್ರೀಟ್‌, ಮೆಯೋಹಾಲ್ ಹೀಗೆ ಅನೇಕ ಕಡೆ ಪೆಟ್ಟಿಗೆಯೊಂದರಲ್ಲಿ ವಾಹನ ದುರಸ್ತಿಗೆ ಬೇಕಾದ ಸಾಮಾಗ್ರಿಗಳನ್ನು ಇಟ್ಟುಕೊಂಡು, ಯಾವುದಾದರೊಂದು ದ್ವಿಚಕ್ರವಾಹನದ ರಿಪೇರಿಯಲ್ಲಿ ನಿರತರಾಗಿರುವ ಇಂಥ ಮೆಕ್ಯಾನಿಕ್‌ಗಳು ಕಾಣಸಿಗುತ್ತಾರೆ. ಕಣ್ಣಳತೆ ದೂರದಲ್ಲಿ ವಾಹನ ಕೆಟ್ಟು ನಿಂತರೆ ಅಲ್ಲಿಗೇ ಬಂದು ರಿಪೇರಿ ಮಾಡಿಕೊಡುತ್ತಾರೆ. ಇವರಲ್ಲಿ ಅನೇಕರು ಪಂಕ್ಚರ್‌ ಹಾಕುವುದನ್ನೂ ಬಲ್ಲರು. ಇನ್ನು ಕೆಲವರಿಗೆ ಸಣ್ಣಪುಟ್ಟ ರಿಪೇರಿ ಮಾಡುವುದು ಗೊತ್ತು. ನಗರದಲ್ಲಿ ಸೈಕಲ್‌ನಲ್ಲೇ ಓಡಾಡುವ ಸಣ್ಣಪುಟ್ಟ ವ್ಯಾಪಾರಿಗಳಿದ್ದಾರೆ. ಹಾಗಾಗಿ ಕೆಲವೆಡೆ ಸೈಕಲ್‌ ರಿಪೇರಿ ಮಾಡುವವರೂ ಇದ್ದಾರೆ. ಕಂಠೀರವ ಸ್ಟೇಡಿಯಂಗೆ ಹೊಂದಿಕೊಂಡ ರಸ್ತೆಗಳಲ್ಲಿ ಸೈಕಲ್‌ಗೆ ಪಂಕ್ಚರ್‌ ಹಾಕುವವರು ಸಿಗುತ್ತಾರೆ. ಯಾಕೆಂದರೆ ಇಲ್ಲಿ ಕ್ರೀಡಾಪಟುಗಳು ಹೆಚ್ಚಾಗಿ ಸೈಕಲ್‌ನಲ್ಲಿ ಓಡಾಡುತ್ತಾರೆ.

ಮೈಸೂರು ರಸ್ತೆಯಿಂದ ಗೋರಿಪಾಳ್ಯದ ಕಡೆ ಹೋಗುವ ರಸ್ತೆಯಲ್ಲಿ ಒಂದು ಸಂಚಾರಿ ಆಟೋರಿಕ್ಷಾ ಗ್ಯಾರೇಜ್‌ ಇದೆ. ದಿನಾ ಅಲ್ಲಿ ಮೂರ್‍ನಾಲ್ಕು ಆಟೋರಿಕ್ಷಾಗಳು ಅರ್ಧ ಮಗುಚಿದ ರೀತಿಯಲ್ಲಿ ನಿಂತಿರುತ್ತವೆ. ಅವುಗಳಲ್ಲಿ ಯಾವುದಾದರೂ ಒಂದರ ಕೆಳಗೊಬ್ಬ ಮೆಕ್ಯಾನಿಕ್‌ ರಿಪೇರಿ ಕೆಲಸದಲ್ಲಿ ನಿರತನಾಗಿರುತ್ತಾನೆ. ಪುಟ್ಟ ಹುಡುಗರು ಮೈಕೈ ತುಂಬ ಗ್ರೀಸ್‌, ಆಯಿಲ್‌  ಮೆತ್ತಿಕೊಂಡು ಕೆಲಸ ಮಾಡುತ್ತಿರುತ್ತಾರೆ. ಯಾವುದೇ ಶೆಡ್‌ ಇಲ್ಲದೆಯೂ ಆ ಜಾಗ ಗ್ಯಾರೆಜ್‌ನಂತೆಯೇ ಕಾಣುತ್ತಿರುತ್ತದೆ.

ಇನ್ನು ಕೆಲ ಕಡೆ ಪೆಟ್ಟಿಗೆ ಅಂಗಡಿಯಂಥ ಗ್ಯಾರೇಜ್‌ಗಳಿವೆ. ಇವು ಬಿಬಿಎಂಪಿಯ ಅನುಮತಿ ಪಡೆದಿರುತ್ತವೆ. ಆದರೆ ಕೆಲಸವೆಲ್ಲ ನಡೆಯುವುದು ಫುಟ್‌ಪಾತ್‌ನಲ್ಲಿಯೇ.

ಹೀಗೆ ನಗರದ ಅನೆೇಕ ಕಡೆ ವಾಹನ ರಿಪೇರಿ ಮಾಡುತ್ತಿರುವ ಅನೇಕರು ತರಬೇತಿ ಪಡೆದವರು. ಕೆಲವರು ಗ್ಯಾರೇಜ್‌ಗಳಲ್ಲಿ ದುಡಿದು ಅನುಭವ ಪಡೆದುಕೊಂಡವರು. ಬೇರೆ ಕಡೆ ಇಡೀ ದಿನ ದುಡಿದು ಪುಡಿಗಾಸು ಪಡೆಯುವುದಕ್ಕಿಂತ ಸ್ವಂತವಾಗಿ ದುಡಿಯುವುದು ಹೆಚ್ಚು ಹಣ ತರಬಲ್ಲದು ಎಂಬುದು ಅಂಥವರ ಅನುಭವ.

ವಾಹನ ಬಳಸುವವರಿಗೆ ಸ್ವಲ್ಪ ಮಟ್ಟಿಗಾದರೂ ವಾಹನದ ಮುಖ್ಯ ಭಾಗಗಳು ಹೇಗೆ ಕೆಲಸ ಮಾಡುತ್ತವೆ ಎಂಬ ಜ್ಞಾನ ಇರಬೇಕು. ಸಣ್ಣಪುಟ್ಟ ರಿಪೇರಿ ಮಾಡುವುದು ತಿಳಿದಿದ್ದರೆ ಒಳಿತು. ಅದಕ್ಕೆಂದೇ ವಾಹನದ ಜೊತೆ ಕೆಲವು ಅಗತ್ಯ ಟೂಲ್ಸ್‌ ಕೊಟ್ಟಿರುತ್ತಾರೆ. ಆದರೆ, ಅನೇಕರಿಗೆ ಈ ಜ್ಞಾನ ಇರುವುದಿಲ್ಲ. ಸಣ್ಣಪುಟ್ಟ ಕೆಲಸಗಳಿಗೂ ಗ್ಯಾರೇಜ್‌ಗೆ ಹೋಗುವವರೇ ಹೆಚ್ಚು. ಹಾಗಾಗಿ ವಾಹನ ಕೆಟ್ಟರೆ ಮೆಕ್ಯಾನಿಕ್‌ ಬರಲೇಬೇಕು. ಇದು ಸಂಚಾರಿ ಮೆಕ್ಯಾನಿಕ್‌ಗಳ ಅಗತ್ಯವನ್ನು ಹೆಚ್ಚಿಸಿದೆ.

ನಗರದ ಪ್ರತಿಷ್ಠಿತ ರಸ್ತೆಗಳಲ್ಲಿ ಗ್ಯಾರೇಜ್‌ಗಳಿರುವುದು ಕಡಿಮೆ. ಹೆಚ್ಚು ಜಾಗದ ಅಗತ್ಯವಿರುವ ಕಾರಣ ಹಾಗೂ ನಗರದ ಅಂದಕ್ಕೆ ಇದರಿಂದ ಧಕ್ಕೆಯಾಗುತ್ತದೆ ಎಂದೇ ಇವು ನಗರದ ಹೊರಗೇ ಇರುತ್ತವೆ. ನಗರದ ಕೇಂದ್ರ ಭಾಗಗಳನ್ನು ಹೊರತುಪಡಿಸಿದರೆ  ಬೇರೆ ರಸ್ತೆಗಳಲ್ಲಿ ಗ್ಯಾರೇಜ್‌ಗಳಿಗೆ ಬರವಿಲ್ಲ. ಇಪ್ಪತ್ತನಾಲ್ಕು ಗಂಟೆಯೂ ಸೇವೆ ನೀಡುವ ವಾಹನ ಕಂಪೆನಿಗಳ ಮೊಬೈಲ್‌ ಗ್ಯಾರೇಜ್‌ಗಳೂ ಇವೆ. ಆದರೂ ತಕ್ಷಣಕ್ಕೆ ಮತ್ತು ಚಿಕ್ಕಪುಟ್ಟ ಸಮಸ್ಯೆಗಳಿಗೆ ಇವರೇ ಆಪದ್ಬಾಂಧವರು ಎಂದರೆ ತಪ್ಪಲ್ಲ.

ದಿನವಿಡೀ ಕೆಲಸ
ವೈಟ್‌ಫೀಲ್ಡ್‌ನ ನಾರಾಯಣ ಅವರು ಕಳೆದ ಮೂವತ್ತು ವರ್ಷಗಳಿಂದ ಸಂಚಾರಿ ಮೆಕ್ಯಾನಿಕ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಕಸ್ತೂರಬಾ ರಸ್ತೆಯಲ್ಲಿ ಜೋಸ್ಕೋ ಆಭರಣ ಮಳಿಗೆಯ ಎದುರು ಮರದ ಕೆಳಗೆ ಪೆಟ್ಟಿಗೆಯೊಂದನ್ನು ಇಟ್ಟುಕೊಂಡು ರಿಪೇರಿ ಕೆಲಸ ಮಾಡುವ ಇವರ ಬಳಿ ದ್ವಿಚಕ್ರವಾಹನಗಳ ಸವಾರರು ನಿಂತು ವಾಹನ ದುರಸ್ತಿ ಮಾಡಿಸಿಕೊಂಡು ಮುಂದೆ ಸಾಗುತ್ತಿರುವ ದೃಶ್ಯ ನಿತ್ಯ ಕಾಣುತ್ತಿರುತ್ತದೆ. ಬೆಳಗ್ಗಿನಿಂದ ಸಂಜೆವರೆಗೂ ಇವರಿಗೆ ಬಿಡುವಿಲ್ಲದ ಕೆಲಸ. ಒಬ್ಬರು ಪಂಕ್ಚರ್‌ ಹಾಕಿಸಲೆಂದು ಬಂದರೆ, ಮತ್ತೊಬ್ಬರು ಬ್ರೇಕ್‌ ಟೈಟ್‌ ಮಾಡಿಕೊಡಿ ಎಂದು ಬರುತ್ತಾರೆ. ಕ್ಲಚ್ ಹಿಡೀತಿಲ್ಲ, ಗೇರ್‌ ಸಮಸ್ಯೆ ಇದೆ ಎಂದೂ ಬರುವವರಿದ್ದಾರೆ. ಹೀಗೆ ಬರುವ ವಾಹನಗಳ ತೊಂದರೆ ಸರಿಪಡಿಸಿಕೊಡುವ ಇವರ ಬಳಿ ಎಲ್ಲ ಪರಿಕರಗಳೂ ಇವೆ.

‘ಕಳೆದ ಮೂವತ್ತು ವರ್ಷಗಳಿಂದ ಮೆಕ್ಯಾನಿಕ್‌ ಆಗಿ ಕೆಲಸ ಮಾಡುತ್ತಿದ್ದೇನೆ. ಬೆಳಗ್ಗೆ ಬಂದು ನನ್ನ ಪೆಟ್ಟಿಗೆ ತೆರೆಯುತ್ತಿದ್ದಂತೆ ಗಾಡಿಗಳು ನಿಲ್ಲುತ್ತಿರುತ್ತವೆ. ಇಂಥದ್ದೇ ಕೆಲಸ ಮಾಡುತ್ತೇನೆ ಎಂದೇನಿಲ್ಲ. ಪಂಕ್ಚರ್‌ ಹಾಕುತ್ತೇನೆ. ಬ್ರೇಕು, ಕ್ಲೆಚ್ಚು, ಗೇರು ರಿಪೇರಿ ಹೀಗೆ ಎಲ್ಲವನ್ನೂ ಮಾಡಬೇಕಾಗುತ್ತದೆ. ರಿಪೇರಿಗೆ ಬೇಕಾದ ಎಲ್ಲ ಪರಿಕರಗಳನ್ನೂ ಇಟ್ಟುಕೊಂಡಿದ್ದೇನೆ. ಎಲ್ಲವೂ ಚಿಕ್ಕಪುಟ್ಟ ಕೆಲಸಗಳೇ ಆಗಿರುವ ಕಾರಣ ಹೆಚ್ಚು ಕಾಯಬೇಕಾಗಿಲ್ಲ. ದಿನವಿಡೀ ಕೆಲಸ ಸಿಗುತ್ತದೆ’ ಎನ್ನುತ್ತಾರೆ ಅವರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.