ನಾದದ ಗುಣವೇ ಅಂಥದ್ದು, ಕೇಳುಗರಿದ್ದಲ್ಲಿ ತಾನಾಗೇ ಹರಿದು ಬರುತ್ತದೆ. ಅದರಲ್ಲೂ ಸಂಜೆಯ ಒನಪು, ರಾತ್ರಿಯ ದಟ್ಟತೆ ಈ ಹರಿವನ್ನು ಉನ್ಮತ್ತಗೊಳಿಸಿಬಿಡುತ್ತದೆ. ಈ ’ಸಪ್ತಕ’ದ ಮೋಡಿಗೆ ಬಿದ್ದರೆ ಮಗಿಯಿತು, ಮುಂದಿನದೆಲ್ಲ ಅನುಭೂತಿಪರ್ವ.
ಹೇಗೆ ಕ್ರಮಿಸುತ್ತೇನೆ, ಯಾವ ಜಾಗ ಜೀವಪ್ರಧಾನ, ಯಾವ ಮಾರ್ಗ ವರ್ಜ್ಯ, ಎಲ್ಲಿ ತೇಲುತ್ತೇನೆ-ಮುಳುಗುತ್ತೇನೆ-ಚಿಮ್ಮುತ್ತೇನೆ ಮತ್ತು ವಿರಮಿಸುತ್ತೇನೆ... ಹೀಗೆ ರಾಗವೊಂದು ತನ್ನನ್ನು ತಾ ಸ್ಪಷ್ಟವಾಗಿ ಪರಿಚಯಿಸಿಕೊಳ್ಳುವ ಕೆಲ ನಿಮಿಷಗಳ ಅವಧಿಯೇ ಆರಂಭಿಕ ಆಲಾಪ್.
ಎದುರಿನವರಿಗೆ ತನ್ನ ನಡೆಯನ್ನು ಆವರಣಾವರಣವಾಗಿ ತೆರೆದಿಡುತ್ತ, ರಸಾವೃತ್ತದೊಳಗೆ ಎಳೆದುಕೊಳ್ಳುತ್ತ, ‘ಇದು ಅನುಭೂತಿಯ ತುಣುಕಷ್ಟೇ, ನಾವೂ ನೀವೂ ಸೇರಿ ಒಂದಿಷ್ಟು ಹೊತ್ತು ಅದ್ಭುತ ಲೋಕವನ್ನೇ ಸೃಷ್ಟಿಸಲಿದ್ದೇವೆ, ಜೊತೆಗಿರುತ್ತೀರಲ್ಲ?’ ಹೀಗೆ ರಾಗವೊಂದು ಶ್ರೋತೃಗಳೊಂದಿಗೆ ಆತ್ಮಸಂವಾದ ನಡೆಸಿ, ಮೌಖಿಕ ಒಪ್ಪಂದವನ್ನು ಮಾಡಿಕೊಂಡು ಯಶಸ್ವಿಯಾಗುತ್ತದೆ ಎಂದರೆ ಅದು ಕಲಾವಿದರ ಪ್ರಸ್ತುತಿ ಸಾಮರ್ಥ್ಯ.
ಭಾನುವಾರ ಚೌಡಯ್ಯ ಸಭಾಂಗಣದಲ್ಲಿ ನಡೆದ ‘ಸಪ್ತಕ ದಶಮಾನೋತ್ಸವ’ ಕಾರ್ಯಕ್ರಮದಲ್ಲಿ ಇಂಥದೊಂದು ನಾದ ಸಂವಾದಲೋಕ ನಿರ್ಮಾಣವಾಗಿತ್ತು. ಸಂಜೆಯ ಅಳಿದುಳಿದ ಚಿಲಿಪಿಲಿ, ಮಿಶ್ರಗಾಳಿಯ ಹೊಯ್ದಾಟ, ಧಾವಂತವೆಲ್ಲ ಕರಗಿ ಗೂಡಿನೊಳಗೆ ಕಾಲಿಡುವ ಹೊತ್ತೇ ರಾತ್ರಿಯ ಆರಂಭವೆಂದಾದಲ್ಲಿ,
ದೀಪವೊಂದನ್ನು ದಿಟ್ಟಿಸಿದಾಗ ಹುಟ್ಟುವ ಭಾವವೇ ಗಂಭೀರ ಮತ್ತು ಶಾಂತ, ತನ್ಮೂಲಕ ಸಿದ್ಧಿಸುವುದೇ ಭಕ್ತಿರಸ. ಹೀಗೊಂದು ರಸದ ಸೆಳವಿಗೆ ಅಡ್ಡನಿಂತು, ಒಡ್ಡಿನೊಳಗೆ ಮೈದಳೆಯುತ್ತ, ಸಮರ್ಪಣ ಭಾವ ಸೃಷ್ಟಿಸುವುದೇ ರಾಗ ಭೂಪಾಲಿ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಇಂದಿನವರೆಗೂ ತನ್ನ ಪ್ರಭಾವಳಿ ಕಾಯ್ದುಕೊಂಡು ಬಂದಿದೆ ಎಂದರೆ, ಈ ಜೈವಿಕಲಯ ಸಿದ್ಧಾಂತವೂ ಕಾರಣ.
ಮಹಾರಾಷ್ಟ್ರ ಮೂಲದ ಮತ್ತು ಸದ್ಯ ಕೋಲ್ಕತ್ತದಲ್ಲಿ ನೆಲೆಸಿರುವ ಖ್ಯಾತ ಹಿಂದೂಸ್ತಾನಿ ಗಾಯಕ ಪಂ. ಉಲ್ಲಾಸ್ ಕಶಾಲ್ಕರ್ ಮೊದಲಿಗೆ ಪ್ರಸ್ತುತಪಡಿಸಿದ್ದು ರಾಗ ಭೂಪಾಲಿ.
‘ಜಬ ಮೈ ಜಾನೇ’ ಬಂದಿಶ್ ವಿಲಂಬಿತ ತಿಲವಾಡಾದಲ್ಲಿ, ಧೃತ್ ತೀನ್ ತಾಲದಲ್ಲಿ ‘ಜಬಸೆ ತುಮ ಸಂಗ್ ಲಗಲಿ’. ಆಗ್ರಾ, ಅತ್ರೌಲಿ, ಜೈಪುರ್ ಘರಾಣೆಯ ಸಂಗಮ ಇವರ ಗಾನವೈಶಿಷ್ಟ್ಯ.
ಯಾವ ಘರಾಣೆಯ ಶೈಲಿ ಆಲಾಪದ ಸೌಂದರ್ಯವನ್ನು ಹೆಚ್ಚಿಸುತ್ತದೆ, ಯಾವ ಮಾದರಿ ಲಯಕಾರಿಯನ್ನು ಪರಿಣಾಮಕಾರಿಯಾಗಿಸುತ್ತದೆ ಮತ್ತು ಯಾವ ಪಟ್ಟು ತಾನುಗಳ ಪಲಕುಗಳನ್ನು ವೃದ್ಧಿಸುತ್ತಾ ಹೋಗುತ್ತದೆ.
ಎಲ್ಲಕ್ಕಿಂತ ಹೆಚ್ಚಾಗಿ ಹೇಗೆ ತನ್ನ ಶಾರೀರಗುಣಕ್ಕೆ ತಕ್ಕಂತೆ ಅಳವಡಿಸಿಕೊಂಡು ಪ್ರದರ್ಶನ ನೀಡಬೇಕು ಎಂಬ ಪ್ರಜ್ಞೆ ಮತ್ತು ರಚನಾತ್ಮಕ ದೃಷ್ಟಿಕೋನ ಉಲ್ಲಾಸ್ ಅವರ ಗಾಯನದಲ್ಲಿ ಬಹಳ ನಿಚ್ಚಳವಾಗಿತ್ತು. ರಸೋತ್ಕರ್ಷ ಸಿದ್ಧಿಸಿದಾಗೆಲ್ಲ ಶ್ರೋತೃಗಳ ಕರತಾಡನ ಉಮೇದು ನೀಡುವಂತಿದ್ದರೂ ರಾಗರಸಕ್ಕೆ ಚ್ಯುತಿಯಾಗದಂಥ ಗಾಂಭೀರ್ಯ ಇವರ ಪ್ರಸ್ತುತಿಗಿತ್ತು.
ಈ ಗಾಯನಕ್ಕೆ ಸಾಥ್ ಸಂಗತ್ ಬೇಡುವುದು ‘ಸಂಯಮ’ವನ್ನು. ಏಕವ್ಯಕ್ತಿಪ್ರದರ್ಶನದಲ್ಲಿ ಕಲಾವಿದ ಎಷ್ಟೇ ಔನ್ನತ್ಯ ಸಾಧಿಸಿದ್ದರೂ ಸಂಗತ್‌ನಲ್ಲಿ ಅವನು ಕೇವಲ ಜತೆಗಾರ. ಪರಂಪರೆಗೆ ಬದ್ಧರಾಗಿರುವ ಗಾಯಕರು ವಾದಕರೊಂದಿಗೆ ಸಾಥ್ ನೀಡುವಾಗ ಸಾಥಿದಾರರ ಕಲ್ಪನಾಶಕ್ತಿಗೆ ಅವಕಾಶ ತುಸು ಕಡಿಮೆಯೇ. ಅದೊಂದು ರೀತಿ ಅಲಿಖಿತ ನಿಯಮ. ಮೇಲಾಗಿ ಮುಖ್ಯಕಲಾವಿದರ ಮನಸ್ಥಿತಿಯ ಮೇಲೆ ಇದು ಅವಲಂಬಿತ.
ಈ ದಿಸೆಯಲ್ಲಿ ಕಾಣಸಿಗುವ ಕೆಲವೇ ಕೆಲ ಕಲಾವಿದರಲ್ಲಿ ಪ್ರಮುಖರು ಪಂ. ಸುರೇಶ್ ತಲವಾಲ್ಕರ್. ಉಲ್ಲಾಸ್ ಅವರ ಗಾಯನಕ್ಕೆ, ವಿಲಂಬಿತ ತಿಲವಾಡದಲ್ಲಿ ಬೆರಳಾಡುವಾಗ ಅದೆಷ್ಟು ಸಂಯಮವಿತ್ತೋ, ಧೃತ್ ತೀನ್ ತಾಲಕ್ಕೆ ಬಂದಾಗ ಕಾವೇರಿದ್ದರೂ ಹದ ಕಾಯ್ದುಕೊಂಡಿತ್ತು. ಹಾಗೆಯೇ ಹಾರ್ಮೋನಿಯಂ ಕಲಾವಿದರ ಹಾದಿ ಕೂಡ ಇದಕ್ಕಿಂಥ ಭಿನ್ನವಾಗಿಲ್ಲ.
ಗಾಯಕರು ಒಂದು ಸ್ವರಗುಚ್ಛದ ಮೇಲೆ ಆಲಾಪಿಸಿ ಆವರ್ತನ ಮುಗಿಸುತ್ತಿದ್ದಂತೆ, ಹಾರ್ಮೋನಿಯಂ ಸಾಥಿದಾರರ ಬೆರಳು ಮುಂದಿನ ಸ್ವರವನ್ನು ಸ್ಪರ್ಶಿಸಿಬಿಡಲೇ ಎಂಬ ತವಕದಲ್ಲಿ ಪುಟಿಯುತ್ತಿರುತ್ತವೆ. ಆದರೆ ಇಲ್ಲಿ ಜಾಡುಬಿಟ್ಟುಕೊಡುವವರು ಗಾಯಕರು ಮಾತ್ರ. ಸಿಕ್ಕ ಒಂದಿಷ್ಟು ಅವಕಾಶಗಳಲ್ಲಿ ಕೈಚಳಕ ತೋರಿ ಸೈ ಎನ್ನಿಸಿಕೊಂಡರು ಖ್ಯಾತ ಹಾರ್ಮೋನಿಯಂ ಕಲಾವಿದ ವ್ಯಾಸಮೂರ್ತಿ ಕಟ್ಟಿ.
ರಾತ್ರಿಯ ನೀರವತೆಗೆ ಹೇಳಿಮಾಡಿಸಿದ ಮತ್ತೊಂದು ರಾಗ ಕಾಮೋದ್. ಕೇದಾರ್ ಮತ್ತು ಛಾಯನಟ್‌ನ ಮಿಂಚುನೋಟದೊಳಗೆ ಮಲ್ಹಾರ್, ಹಮೀರ್, ಕಲ್ಯಾಣ್ ಅಂಗಗಳ ಛಾಯೆ ಕೂಡ ಈ ರಾಗದಲ್ಲಿ ನುಸುಳಿ ಹೋಗುತ್ತದೆ.
ಆದ್ದರಿಂದ ಇದರ ವಿಸ್ತಾರದ ಹಾದಿ ಅಷ್ಟು ಸರಳವಲ್ಲ. ಆದರೆ ಉಲ್ಲಾಸ್ ಅವರ ಗಂಭೀರ ಶಾರೀರ ಮತ್ತೆ ಅವರು ಅಳವಡಿಸಿಕೊಂಡ ಗಾಯನ ಶೈಲಿಯಿಂದ ಈ ರಾಗ ನೆರೆದವರ ಹೃದಯಕ್ಕಿಳಿಯುವಲ್ಲಿ ಯಶಸ್ವಿಯಾಯಿತು.
ಕೊನೆಯದಾಗಿ ಶೃಂಗಾರಪೋಷಿತ ರಾಗ ದೇಶ್ ರಾತ್ರಿಯನ್ನು ಸಂಪೂರ್ಣ ತನ್ನ ತೆಕ್ಕೆಗೆಳೆದುಕೊಂಡಿತು. ಮಧ್ಯಲಯ ತೀನ್ ತಾಲದಲ್ಲಿ ‘ಕರೆನಾ ಮೋರಿ ಲಗಿ ಕನ್ಹಯ್ಯಾ’ ಹಾಡಿ, ಧೃತ್ ತೀನ್ ತಾಲದಲ್ಲಿ ತರಾನಾದ ರಂಗೇರಿಸಿ ಗುಂಗು ಹಿಡಿಸಿಬಿಟ್ಟರು ಉಲ್ಲಾಸ್.
ಅಂದಹಾಗೆ ಆ ರಾತ್ರಿಯೊಂದಕ್ಕೆ ರಾಗಗಳು ಹೀಗೆ ತನ್ನತಾ ಭಕ್ತಿಯಿಂದ ಅರ್ಪಿಸಿಕೊಳ್ಳುವುದರ ಹಿಂದೆ ಚಂಚಲತೆಯಿಂದ ಚಿಣ್ಣಾಟವಾಡಿ, ಮೋಹಕತೆಯಿಂದ ಮೈಮರೆಸಿದ ನವಿರುಸಂಜೆಯೊಂದಿರುತ್ತದೆ.
ಅಂದಿನ ಸಂಜೆಯನ್ನು ಸ್ವಾಗತಿಸಿದ್ದು, ಖ್ಯಾತ ಸಂತೂರ್ ವಾದಕ ಪಂ. ಸತೀಶ್ ವ್ಯಾಸ್ ಮತ್ತು ತಬಲಾ ವಾದಕ ಓಜಸ್ ಆದಿಯಾ. ಸಂತೂರ್‌ನಲ್ಲಿ ಅಂದು ಮೈದಳೆದ ‘ಮಧುವಂತಿ’ಯ ಗುಣವೇ ಅಂಥದ್ದು. ಮಧ್ಯಾಹ್ನದ ‘ಮುಲ್ತಾನಿ’ಯ ಖಾಸಾ ಗೆಳತಿಯೂ ಆದ ಈಕೆಗೆ, ಎಂಥ ಜನಸಮೂಹವನ್ನೂ ತನ್ನ ಒಯ್ಯಾರದಿಂದ ಒಳಗು ಮಾಡಿಕೊಳ್ಳುವ ಛಾತಿಯಿದೆ.
ಅವಳ ನಡೆಗೆ ಪ್ರತಿನಡೆಯಾಗಿ ಸವಾಲು ಒಡ್ಡುತ್ತ, ಸಾವರಿಸಿಕೊಂಡು ಹೋಗುವ ಸಾಥೀಗುಣ ಓಜಸ್ ಅವರ ಬೆರಳುಗಳಲ್ಲಿ ಬಹಳೇ ಚುರುಕಾಗಿ ಚಿಗುರಿಕೊಂಡಿತ್ತು. ನಂತರ ತಂತಿ ಮತ್ತು ತಬಲಾದ ಸಂಸಾರದೊಳಗೆ ಸಾಕ್ಷಾತ್ಕಾರಗೊಂಡವಳು ‘ಚಾರುಕೇಶಿ’. ವಿರಹದ ಮುನ್ಸೂಚನೆಯಲ್ಲೇ ಶೃಂಗಾರಬುತ್ತಿ ಕಟ್ಟಿಕೊಡುತ್ತಾ ಹೋದಳು.
ಹೇಗಿದ್ದಿರಬಹುದು ಆ ಸಂಜೆ? ಎಂಬ ಕುತೂಹಲ ಈಗ ನಿಮ್ಮದಾಗಿದ್ದರೆ, ಖಂಡಿತ ನೀವದನ್ನು ದಕ್ಕಿಸಿಕೊಳ್ಳಬಲ್ಲಿರಿ; ಸ್ವಲ್ಪ ಹೊತ್ತು ಕಣ್ಣು ಮುಚ್ಚಿ. ನಿಮ್ಮ ತಲೆಯ ಮೇಲೀಗ ಮೋಡಗಳ ಸಾಲು, ಬೆನ್ನ ಹಿಂದೊಂದು ಝರಿ, ಕಾಲ ಮುಂದೊಂದು ಪುಟ್ಟ ಕೊಳ,
ಅದರೊಳಗೊಂದಿಷ್ಟು ಹಂಸಗಳ ತೇಲು, ಪುಟ್ಟಮೀನುಗಳ ಪುಟಿದಾಟ, ಆಗಾಗ ಉದುರಿಬೀಳುವ ಒಣಗಿದೆಲೆಗಳು, ಮಳೆಯ ಸೆಳಕು ಮತ್ತವು ಸೃಷ್ಟಿಸುವ ಅಲೆಯುಂಗುರುಗಳು... ಸಮಾಧಿ ಸ್ಥಿತಿಯಲ್ಲಿ ನಿಮ್ಮೊಳಗೆ ದಕ್ಕಿದ ನೀವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.