ADVERTISEMENT

ಸಣ್ಣ ಪೆನ್ನಂಗಡಿ ದೊಡ್ಡ ಲೋಕ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 19:30 IST
Last Updated 10 ಫೆಬ್ರುವರಿ 2012, 19:30 IST

ಹಾಯ್,
ನಾನು ಲೇಖನಿ. ಹಾಗಂತ ನನ್ನನ್ನು ಹುಡುಗಿ ಅಂತ ಭಾವಿಸಬೇಡಿ. ಎಲ್ಲರೂ ನನ್ನನ್ನು ಇಂಗ್ಲಿಷ್‌ನಲ್ಲಿ ಸ್ವೀಟ್ ಆಗಿ ಕರೆಯುವ ಪೆನ್; ಅದೇ ನಾನು. ನಾನು ಸರ್ವಾಂತರ್ಯಾಮಿ. ವಿಶ್ವದ ಉದ್ದಗಲಕ್ಕೂ ನನ್ನ ಬೇರುಗಳು ಚಾಚಿವೆ. ಹಾಗಾಗಿ ನಾನು ತುಂಬಾ ಪ್ರಭಾವಿ ಕೂಡ ಹೌದು.

ಇವತ್ತು ನಾನು ನಿಮಗೆ ಒಬ್ಬ ಇಂಟರೆಸ್ಟಿಂಗ್ ವ್ಯಕ್ತಿ ಹಾಗೂ ಒಂದು ವಿಶೇಷ ಅಂಗಡಿಯನ್ನು ಪರಿಚಯಿಸಿಕೊಡುತ್ತೀನಿ ಬನ್ನಿ. ಈಗ ನಾನು ಹೇಳಹೊರಟಿರುವುದು ಅವೆನ್ಯೂ ರಸ್ತೆಯಲ್ಲಿರುವ ಮೀನಾಕ್ಷಿ ಸ್ಟೋರ್ ಹಾಗೂ ಅದರ ಮಾಲೀಕ ಕೆ.ಎನ್.ಕೃಷ್ಣಮೂರ್ತಿ ಬಗ್ಗೆ. ಇವರಿಗೂ ನನಗೂ ಸುಮಾರು ಆರು ದಶಕಕ್ಕೂ ಹೆಚ್ಚಿನ ಸುದೀರ್ಘ ಸಂಬಂಧವಿದೆ.

ಕೃಷ್ಣಮೂರ್ತಿ ಅವರ ತಂದೆ ನಾರಾಯಣಶೆಟ್ಟಿ. ಇವರು 1952ರಲ್ಲಿ ಅವೆನ್ಯೂ ರಸ್ತೆಯಲ್ಲಿ ಪುಟ್ಟ ಅಂಗಡಿಯೊಂದನ್ನು ತೆರೆದರು. ಅಂದಿನಿಂದ ಇಂದಿನವರೆಗೆ ಆ ಅಂಗಡಿಯ ತುಂಬಾ ನಾನೇ ರಾರಾಜಿಸುತ್ತಿದ್ದೇನೆ. ಅಂದಹಾಗೆ, ಈ ಮಳಿಗೆ ಬೆಂಗಳೂರಿನ ಅತ್ಯಂತ ಸುಪ್ರಸಿದ್ಧ ಪೆನ್ನಿನ ಅಂಗಡಿಗಳ್ಲ್ಲಲಿ ಒಂದು ಎಂಬ ಅಗ್ಗಳಿಕೆಗೆ ಕೂಡ ಪಾತ್ರವಾಗಿದೆ.

ನಾರಾಯಣಶೆಟ್ಟಿ ಪ್ರಾರಂಭಿಸಿದ ಮೀನಾಕ್ಷಿ ಸ್ಟೋರ್ ಇಂದಿಗೂ ತನ್ನ ಜನಪ್ರಿಯತೆಯನ್ನು ಕಾಯ್ದುಕೊಂಡಿದೆ. ಅದಕ್ಕೆ ವಿಶೇಷ ಕಾರಣ ಕೂಡ ಇದೆ. ಅದನ್ನು ಮುಂದೆ ಹೇಳುತ್ತೇನೆ. ಈಗ ಅಂಗಡಿ ಕತೆ ಕೇಳಿ. ನಾರಾಯಣ ಶೆಟ್ಟಿ ಪೆನ್ನಿನ ಅಂಗಡಿಯನ್ನೇ ಏಕೆ ತೆರೆದರು ಎಂಬುದರ ಹಿಂದೆ ಒಂದು ಪುಟ್ಟ ಆದರೆ, ಅಷ್ಟೇ ಕುತೂಹಲಕಾರಿಯಾದ ಇತಿಹಾಸವಿದೆ."
 
ಆ ದಿನಗಳಲ್ಲಿ ಬೆಂಗಳೂರಿನಲ್ಲಿ ಪ್ರಮುಖವಾಗಿ ಇದ್ದುದ್ದು ಸೆಂಟ್ರಲ್ ಕಾಲೇಜು ಒಂದೇ. ವಿದ್ಯಾರ್ಥಿಗಳೆಲ್ಲರೂ ಈಗಿನ ಅವೆನ್ಯೂ ರಸ್ತೆ ಮಾರ್ಗವಾಗಿಯೇ ಕಾಲೇಜಿಗೆ ಹಾದುಹೋಗುತ್ತಿದ್ದರು. ಜತೆಗೆ ಈ ರಸ್ತೆಯ ಆಸುಪಾಸಿನಲ್ಲಿಯೇ ತಾಲ್ಲೂಕು ಕಚೇರಿ, ಕೋರ್ಟ್ ಇದ್ದವು.

ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಎಲ್ಲರಿಗೂ ಪೆನ್ನಿನ ಅವಶ್ಯಕತೆ ಹೆಚ್ಚಾಗಿದ್ದರಿಂದ ಈ ಸ್ಥಳದಲ್ಲಿಯೇ ಅಂಗಡಿ ತೆರೆಯಬೇಕು ಅಂತ ನಾರಾಯಣಶೆಟ್ಟಿ ಅವರಿಗೆ ಅನಿಸಿತಂತೆ. ಅವರ ಈ ದೂರದೃಷ್ಟಿಯಿಂದ ತಲೆಎತ್ತಿದ್ದೇ ಮೀನಾಕ್ಷಿ ಸ್ಟೋರ್ ಎಂಬ ಪೆನ್ನಿನ ಖಜಾನೆ.

ಒಮ್ಮೆ ನೀವಿಲ್ಲಿಗೆ ಭೇಟಿ ನೀಡಬೇಕು. ಇಲ್ಲಿರುವ ತರಹೇವಾರಿ ಪೆನ್ನುಗಳು ಖಂಡಿತವಾಗಿಯೂ ನಿಮ್ಮ ಮನಸೆಳೆಯುತ್ತವೆ. ವಿಭಿನ್ನ ವಿನ್ಯಾಸದ ವೈವಿಧ್ಯಮಯ ಪೆನ್ನುಗಳು ಕೂಡ ನಿಮ್ಮ ಗಮನ ಸೆಳೆಯದೇ ಇರವು. ಇಲ್ಲಿ 2 ರೂಪಾಯಿಂದ 20 ಸಾವಿರದವರೆಗಿನ ಪೆನ್ನುಗಳಿವೆ.

ಅದಕ್ಕೂ ಹೆಚ್ಚಿನ ಬೆಲೆ ಇರುವ ಅತ್ಯಾಕರ್ಷಕ ಪೆನ್ನುಗಳು ಬೇಕೆಂದರೆ ಅವು ಕೂಡ ಲಭ್ಯ. ಆ ಪೆನ್ನುಗಳನ್ನು ಪೂರೈಸಲು ಕೃಷ್ಣಮೂರ್ತಿ ಒಂದು ವಾರ ಸಮಯ ಬೇಡುತ್ತಾರೆ ಅಷ್ಟೆ. ಕೆಲವೊಂದು ಪೆನ್ನುಗಳು ಇಲ್ಲಿ ಶೋ ರೂಮ್‌ಗಳಿಗಿಂತ ಕಡಿಮೆ ಬೆಲೆಗೆ ದೊರಕುತ್ತವೆ.

ಈ ಅಂಗಡಿಯ ಮತ್ತೊಂದು ವಿಶೇಷ ಆಕರ್ಷಣೆ ಏನು ಗೊತ್ತಾ? ಇಲ್ಲಿರುವ ವೈವಿಧ್ಯಮಯ `ಆ್ಯಂಟಿಕ್~ ಪೆನ್ನುಗಳು. ಹಳೆ ಪೆನ್ನುಗಳನ್ನು ಇಷ್ಟಪಡುವ ಮಂದಿ ಇಲ್ಲಿಗೆ ಹುಡುಕಿಕೊಂಡು ಬರುತ್ತಾರೆ. ತುಂಬಾ ಹಳೆಯದಾದ ಈ ಪೆನ್ನುಗಳ ಬೆಲೆ ರೂ 8 ಸಾವಿರದಿಂದ ಪ್ರಾರಂಭಗೊಂಡು ಐದಂಕಿಯನ್ನು ಮೀರುತ್ತವೆ.
 
ಹೈದರಾಬಾದ್‌ನಲ್ಲಿ ತಯಾರಾಗಿರುವ `ಹ್ಯಾಂಡ್ ಮೇಡ್ ಫೌಂಟೆನ್ ಪೆನ್ನುಗಳು~ ಸಹ ಈ ಅಂಗಡಿಯ ಮತ್ತೊಂದು ಆಕರ್ಷಣೆ. ಈ ಸಂಗ್ರಹ ರೂಪುಗೊಂಡಿದ್ದು ಮಾಲೀಕರಾದ ನಾರಾಯಣಶೆಟ್ಟಿ ಹಾಗೂ ಅವರ ಮಗ ಕೃಷ್ಣಮೂರ್ತಿ ಅವರಿಗೆ ಪೆನ್ನಿನ ಸಂಗ್ರಹದ ಬಗ್ಗೆ ಇರುವ ಕ್ರೇಜ್‌ನಿಂದ.

ಮೀನಾಕ್ಷಿ ಸ್ಟೋರ್‌ನ ಜನಪ್ರಿಯತೆಯನ್ನು ಉತ್ತುಂಗಕ್ಕೆ ಕೊಂಡೊಯ್ಯದ್ದದ್ದು ಪೆನ್ನಿನ ರೀಕಂಡೀಷನಿಂಗ್ ವ್ಯವಸ್ಥೆ. ಇದು ಈ ಅಂಗಡಿಯ ಮತ್ತೊಂದು ವಿಶೇಷತೆ. ನೀವು ಇಲ್ಲಿಗೆ ಎಷ್ಟೇ ಹಳೆಯದಾದ, ಕೆಟ್ಟುಹೋದ ಪೆನ್ನುಗಳನ್ನು ತಂದರೂ ಅವಕ್ಕೆ ಚಿಕಿತ್ಸೆ ಇದೆ.

ತಂದೆಯಿಂದ ಈ ವಿದ್ಯೆ ಕಲಿತ ಕೃಷ್ಣಮೂರ್ತಿ ಒಂದರ್ಥದಲ್ಲಿ ಪೆನ್ನುಗಳ ಡಾಕ್ಟರ್. ಅವರ ಕೈಯಲ್ಲಿ ಸ್ಪರ್ಶಮಣಿ ಇದೆ. ಇವರು ಕೆಟ್ಟುಹೋದ ಯಾವುದೇ ಪೆನ್ನನ್ನು ಮುಟ್ಟಿದರೂ ಅದು ಮರುಜೀವ ಪಡೆದುಕೊಳ್ಳುತ್ತದೆ. ಹಾಗಾಗಿಯೇ ಜನ ಕೂಡ ಈ ಅಂಗಡಿಯ ಬಗ್ಗೆ ವಿಶೇಷ ಅಸ್ಥೆ ಹೊಂದಿದ್ದಾರೆ.

ಪೆನ್ನುಗಳ ಜತೆ ಕೆಲವರಿಗೆ ಭಾವನಾತ್ಮಕ ಸಂಬಂಧವಿರುತ್ತದೆ. ಅದನ್ನು ಕಳೆಯುವುದಿರಲಿ, ಒಮ್ಮೆ ಕೂಡ ಆ ಪೆನ್ನನ್ನು ಬೇರೊಬ್ಬರಿಗೆ ಕೊಡಲು ಇಷ್ಟಪಡುವುದಿಲ್ಲ. ಅಂತಹ ಪೆನ್ನು ಏನಾದರೂ ಹಾಳಾದರೆ ಅದರ ಬಗ್ಗೆ ಇನ್ನಿಲ್ಲದಂತೆ ಕೊರಗುತ್ತಾರೆ.

ಒಮ್ಮೆ ಹೀಗಾಯಿತು: ಮೂಗಿನ ಮೇಲಿದ್ದ ಕನ್ನಡಕವನ್ನೊಮ್ಮೆ ಸರಿಮಾಡಿಕೊಳ್ಳುತ್ತಾ ಬಂದ 70ರ ವೃದ್ಧರೊಬ್ಬರು ತಮ್ಮ ಕಿಸೆಯಿಂದ ಫೌಂಟೆನ್ ಪೆನ್ನೊಂದನ್ನು ತೆಗೆದರು. ಅವರು ಜೇಬಿನಿಂದ ಆ ಪೆನ್ನನ್ನು ಹೊರತೆಗೆಯುವ ರೀತಿಯಲ್ಲಿಯೇ ಅವರಿಗೆ ಆ ಪೆನ್ನಿನ ಮೇಲೆ ಎಷ್ಟು ಪ್ರೀತಿ ಇತ್ತು ಎಂಬುದನ್ನು ತೋರಿಸುತ್ತಿತ್ತು. ಕೃಷ್ಣಮೂರ್ತಿ ಬಳಿ ಬಂದ ಅವರು ಈ ಪೆನ್ನನ್ನು ಸರಿ ಮಾಡಿಕೊಡಬೇಕು ಎಂದರು. ಕೃಷ್ಣಮೂರ್ತಿ ಅವರಿಗೆ ಗ್ರಾಹಕನ ಮನದಿಂಗಿತ ಅರ್ಥವಾಯಿತು.
 
ಅವರನ್ನು ಸಮಾಧಾನದಿಂದ ಕುಳಿತುಕೊಳ್ಳಲು ಹೇಳಿ ಅವರ ಕೈಯಿಂದ ಪೆನ್ನು ಇಸಿದುಕೊಂಡು ಪರೀಕ್ಷಿಸಿದರು. ತುಂಬಾ ಹಳೆಯ ಪೆನ್ನು ಅದು. ಕೃಷ್ಣಮೂರ್ತಿ ಮನಸ್ಸಿನಲ್ಲಿಯೇ ಪೆನ್ನಿನ ವಯಸ್ಸನ್ನು ಅಂದಾಜಿಸುತ್ತಾ ಅರ್ಧ ತಾಸಿನಲ್ಲಿ ಆ ಪೆನ್ನನ್ನು ಸರಿ ಮಾಡಿ ಅವರ ಕೈಗಿಟ್ಟರು.

ಮತ್ತೆ ಮೊದಲಿನ ಸ್ಥಿತಿಗೆ ಬಂದ ಪೆನ್ನನ್ನು ಕಂಡು ಅವರ ಮುಖದಲ್ಲಿ ಮಂದಹಾಸ ಮೂಡಿತು. ಆಗ ಆ ವೃದ್ಧರು ಕೃಷ್ಣಮೂರ್ತಿಯವರಿಗೆ ಹೇಳಿದ್ದೇನು ಗೊತ್ತೆ? ಈ ಪೆನ್ನು ನನಗೆ ಬ್ರಿಟಿಷ್ ವೈಸ್‌ರಾಯ್ ಒಬ್ಬರಿಂದ ಬಳುವಳಿಯಾಗಿ ಬಂದದ್ದು.

ಈ ಪೆನ್ನಿನ ಮೇಲೆ ನನಗೆ ಇನ್ನಿಲ್ಲದ ಮೋಹ. ಅದು ಬರೆಯದೇ ಕೆಟ್ಟು ಹೋದಾಗ ನನ್ನ ಜೀವವೇ ಹಾರಿ ಹೋದಂತಾಗಿತ್ತು. ಕೆಟ್ಟು ಹೋಯಿತೆಂದು ಅದನ್ನು ಮೂಲೆಗೆಸೆಯುವ ಮನಸ್ಸು ನನಗೆ ಒಂದಿನಿತು ಕೂಡ ಇರಲಿಲ್ಲ. ಯಾರೋ ಒಬ್ಬರು ಈ ಅಂಗಡಿಯ ಬಗ್ಗೆ ಹೇಳಿದರು. ನಾನು ಇಲ್ಲಿಗೆ ಬರುವಾಗ ಈ ಪೆನ್ನು ಸರಿಹೋಗುತ್ತದೆಯೋ ಇಲ್ಲವೋ ಎಂಬ ಅನುಮಾನದಿಂದಲೇ ಬಂದೆ. ಆದರೆ ನನ್ನ ನಿರೀಕ್ಷೆ ಸುಳ್ಳಾಯಿತು.
 
ನನ್ನ ಪ್ರೀತಿಯ ಪೆನ್ನು ಮತ್ತೆ ನನ್ನ ಕೈ ಸೇರಿತು ಎಂದು ಖುಷಿಯಿಂದ ಹೋದರು. ಹೀಗೆ ಆ ವೃದ್ಧರ ಕೊರಗನ್ನು ನೀಗಿಸಿ ಅವರ ಮೊಗದಲ್ಲಿ ಮತ್ತೆ ನಗು ಮೂಡಿಸಿದ್ದು ಇದೇ ಕೃಷ್ಣಮೂರ್ತಿ.  (ದೂರವಾಣಿ: 080 2226 9616)

ಕಂಪ್ಯೂಟರ್, ಲ್ಯಾಪ್‌ಟಾಪ್ ಹಾಗೂ ಟ್ಯಾಬ್ಲೆಟ್‌ಗಳು ಬಂದ ನಂತರದಲ್ಲಿ ನನ್ನ ಪ್ರಾಮುಖ್ಯ ಕುಗ್ಗಿದೆ ಎನ್ನುತ್ತಾರೆ ಕೆಲವರು. ಇದು ಅವರ ತಪ್ಪು ಕಲ್ಪನೆ. ಜಾಗತೀಕರಣ, ಜನರ ಬದಲಾದ ಮನಸ್ಥಿತಿ ಇವೆಲ್ಲದರ ನಡುವೆಯೂ ನಾನು ನನ್ನ ಅಸ್ಮಿತೆಯನ್ನು ಉಳಿಸಿಕೊಂಡಿದ್ದೇನೆ. ಮಾರುಕಟ್ಟೆಗೆ ಯಾವುದೇ ಹೊಸ ಲೇಖನಿ ಲಗ್ಗೆಯಿಟ್ಟರೂ ಅದನ್ನು ಆಸೆಗಣ್ಣಿನಿಂದ ನೋಡುವ, ಕೊಳ್ಳುವ ನನ್ನ ಅನೇಕ ಅಭಿಮಾನಿಗಳು ಇಂದಿಗೂ ಇದ್ದಾರೆ.
 
ಇದೇ ನನ್ನ ಉಳಿವಿನ ಗುರುತು. ಸಾಹಿತ್ಯಕ್ಕೂ ನನಗೂ ಅವಿನಾಭಾವ ಸಂಬಂಧ. ಇಲ್ಲಿ ಕೃಷಿ ಮಾಡುತ್ತಿರುವವರೆಲ್ಲರಿಗೂ ನಾನು ತಾಯಿ ಇದ್ದಂತೆ. ನಾನಿಲ್ಲದೇ ಅವರ ಕೃಷಿ ಅರೆಕ್ಷಣ ನಡೆಯುವುದಿಲ್ಲ.
 
ಯಾವುದೋ ಕ್ಷಣದಲ್ಲಿ ಥಟ್ಟನೆ ನೆನಪಾಗುವ ಒಂದೊಂದು ಸಾಲನ್ನು ನಾನು ಸ್ಥಾಯಿಯಾಗಿಸುತ್ತಾ ಹೋಗುತ್ತೇನೆ. ನಾನು ಸಾಹಿತಿಗಳ ಎಲ್ಲ ಬಗೆಯ ಭಾವನೆ, ಹಪಹಪಿ, ಕನಸು, ಕಾಮನೆ, ದುಸ್ವಪ್ನ ಕೊನೆಗೆ ಅವರ ನೂತನ ಅನ್ವೇಷಣೆಗೂ ಸಹ ಅಕ್ಷರ ರೂಪ ಕೊಡುತ್ತೇನೆ.

ಹರೆಯಕ್ಕೆ ಕಾಲಿಟ್ಟ ಹುಡುಗ ಹುಡುಗಿಯರ ಮನಸ್ಸಿನಲ್ಲಿ ನೂರಾರೂ ಭಾವಗಳು. ಇವರ ಹೂ ಮನಸ್ಸಿನ ಭಾವನೆಗಳ ಪ್ರಕಟಕ್ಕೆ ನಾನೇ ಸಾರಥಿ. ಬಿಳಿ ಹಾಳೆಯ ಮೇಲೆ ತಮ್ಮ ಉತ್ಕಟ ಭಾವವನ್ನು ಪ್ರಕಟಿಸುವ ಪರಿ ಕಂಡು ಒಮ್ಮಮ್ಮೆ ನಾನೇ ನಸುನಕ್ಕಿದ್ದು ಉಂಟು. ಕಾಮನಬಿಲ್ಲನ್ನು ಕಂಡಾಗ ಮನಸ್ಸು ಪ್ರಫುಲ್ಲಗೊಳ್ಳುವಂತೆ ಪ್ರೇಮಪತ್ರ ಬರೆವಾಗ ನನ್ನೊಳಗೂ ಕೂಡ ಬೆಚ್ಚನೆಯ ಭಾವ ಸ್ಫುರಿಸುತ್ತದೆ.

ಜನರ ಜೀವನದಲ್ಲಿ ಹಾಸುಹೊಕ್ಕಾಗಿರುವ ನಾನೆಂದರೆ ಎಲ್ಲರಿಗೂ ಇಷ್ಟ. ಯಾವಾಗಲೂ ನಾನು ಬಹುತೇಕರ ಎದೆಯ ಮೇಲೆ ರಾರಾಜಿಸುತ್ತಿರುತ್ತೇನೆ, ಮತ್ತೆ ಕೆಲವರ  ಪರ್ಸ್‌ನಲ್ಲಿ ಬೆಚ್ಚಗೆ ಮಲಗಿರುತ್ತೇನೆ. ನನಗೆ ದೇಶವನ್ನು ಕಟ್ಟುವುದು ಗೊತ್ತು, ಉರುಳಿಸುವುದೂ ಕೂಡ ಗೊತ್ತು. ಹಾಗೆಯೇ ಒಬ್ಬರ ಮನಸ್ಸಿನಲ್ಲಿ ನವಿರು ಭಾವನೆ ಹುಟ್ಟುಹಾಕಿ ಪ್ರೀತಿಯನ್ನು ಅರಳಿಸುವ ಕಲೆ ಕೂಡ ನಾ ಬಲ್ಲೆ.

ಹೀಗಾಗಿಯೇ ನಾನು ಬಹುಮುಖಿ. ನನ್ನ ಶಕ್ತಿ ಇರುವುದು ನಾನಿರುವ ವ್ಯಕ್ತಿಯ ವ್ಯಕ್ತಿತ್ವದಲ್ಲಿ. ಆತ ಎಷ್ಟು ಪ್ರಭಾವಿ ಎಂಬುದರ ಮೇಲೆ ನನ್ನ ಪ್ರಭಾವ ಕೂಡ ನಿರ್ಧರಿತಗೊಳ್ಳುತ್ತೆ. ಇವೆಲ್ಲಕ್ಕೂ ನಾನು ನೇರ ಕಾರಣವಲ್ಲದಿದ್ದರೂ, ಈ ಕೆಲಸಗಳೆಲ್ಲವೂ ನನ್ನ ಮೂಲಕವೇ ನಡೆಯುತ್ತವೆ. ಹಾಗಾಗಿಯೇ ನಾನು ತುಂಬಾ ಪ್ರಭಾವಿ ಎನಿಸಿಕೊಂಡಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.