ADVERTISEMENT

ಸರ್ಕಾರಿ ಕೆಲಸವೇ ಬೇಕು!

ಪ್ರಜಾವಾಣಿ ವಿಶೇಷ
Published 20 ಜುಲೈ 2012, 19:30 IST
Last Updated 20 ಜುಲೈ 2012, 19:30 IST
ಸರ್ಕಾರಿ ಕೆಲಸವೇ ಬೇಕು!
ಸರ್ಕಾರಿ ಕೆಲಸವೇ ಬೇಕು!   

ಇಂದು ಫ್ಯಾಷನ್ ಎಂಬುದು ಸಾಮಾನ್ಯವೆನಿಸಿಬಿಟ್ಟಿದೆ. ಏನಾದರೂ ಹೊಸ ವಸ್ತುವನ್ನು ಮಾರುಕಟ್ಟೆಗೆ ಪರಿಚಯಿಸಬೇಕು ಎಂದಾಕ್ಷಣ ಕಣ್ಮುಂದೆ ಬರುವುದು ಮಾಡೆಲ್‌ಗಳು. ಇವರ ನಡುವೆಯೂ ಆಯ್ಕೆಗಳು ನಡೆಯುತ್ತವೆ.

ನಾಲ್ಕೈದು ಶೋನಲ್ಲಿ ಪರಿಚಯವಾದ ಮುಖಗಳಿಗೆ ಸ್ವಲ್ಪ ಬೇಡಿಕೆ ಹೆಚ್ಚು. ಫ್ಯಾಷನ್ ಲೋಕದ ಮೆಟ್ಟಿಲೇರಿ ಸಿನಿಮಾ ಅವಕಾಶ ಸಿಕ್ಕಿದರೂ ಅದನ್ನು ತಿರಸ್ಕರಿಸಿ ಸರ್ಕಾರಿ ನೌಕರಿಯೇ ಪ್ರೀತಿ ಎನ್ನುವ, ಅದಕ್ಕಾಗಿ ಪ್ರಯತ್ನಿಸುತ್ತಲೇ ಇರುವ ಮಾಡೆಲ್ `ವಿರಜಾ~ ಇಲ್ಲಿ ಮಾತನಾಡಿದ್ದಾರೆ.

ನಿಮ್ಮ ಹುಟ್ಟೂರು...
ನಾನು ಹುಟ್ಟಿದ್ದು ಕೊಡಗಿನ ತಲಕಾವೇರಿಯಲ್ಲಿ. ನನ್ನೂರು ಅಂದರೆ ತುಂಬಾ ಪ್ರೀತಿ. ಅಲ್ಲಿಯ ಪ್ರಕೃತಿ, ಗಾಳಿ ಇಲ್ಲಿ ಸಿಗಲು ಹೇಗೆ ಸಾಧ್ಯ? ಹೊರಗೆ ಹೋಗುವುದಕ್ಕೂ ಟಾಫ್ರಿಕ್ ಭಯ. ಇಲ್ಲಿ ಕುಡಿಯುವ ನೀರಿನಿಂದ ಹಿಡಿದು ಪ್ರತಿಯೊಂದಕ್ಕೂ ದುಡ್ಡು ತೆರಬೇಕು. ನಗುವುದಕ್ಕೂ ಹಿಂದೆಮುಂದೆ ನೋಡುತ್ತಾರೆ. ಆದರೆ ಹಳ್ಳಿಯ ಜನ ಮುಗ್ಧರು. ಅಲ್ಲಿ ಕಪಟವಿಲ್ಲ. ನನಗೆ ಸ್ವಲ್ಪ ಬಿಡುವು ಸಿಕ್ಕಿದರೂ ಬ್ಯಾಗ್ ಏರಿಸಿಕೊಂಡು ಕೊಡಗಿಗೆ ಹೋಗಿಬಿಡುತ್ತೇನೆ.

ಫ್ಯಾಷನ್ ಲೋಕಕ್ಕೆ ಬಾರದಿದ್ದರೆ?

ನಾನು ಫ್ಯಾಷನ್ ಲೋಕಕ್ಕೆ ಬಾರದಿದ್ದರೆ ಇಂದು ಯಾವುದೋ ಒಂದು  ಕಂಪೆನಿಯಲ್ಲಿ ಉದ್ಯೋಗಿಯಾಗಿರುತ್ತಿದ್ದೆ. ಆದರೆ ಸರ್ಕಾರಿ ನೌಕರಿ ಎಂದರೆ ನನಗೆ ಬಹಳ ಇಷ್ಟ. ಓದಿಗಿಂತ ಜಾಸ್ತಿ ಸೆಳೆದಿದ್ದು ಈ ಫ್ಯಾಷನ್ ಲೋಕ. ಹಿತಮಿತವಾದ ನಗು, ಅಳತೆ ಮಾಡಿದಂತೆ ನಡೆಯುವ ನಡಿಗೆ, ಯಾವುದೋ ಒಂದು ಧಿರಿಸು ಅಥವಾ ಒಡವೆಯ ಮೂಲಕ ಅದನ್ನು ಪ್ರಚಾರ ಮಾಡುವುದಲ್ಲದೇ ನಮ್ಮನ್ನು ಗುರುತಿಸಿಕೊಳ್ಳುವುದಕ್ಕೆ ಇದೊಂದು ಉತ್ತಮ ವೇದಿಕೆ ಎಂದರೆ ತಪ್ಪಾಗಲಾರದು. ಕಾಲೇಜಿನ ದಿನಗಳಲ್ಲಿ ಚಿಕ್ಕಪುಟ್ಟ ಶೋನಲ್ಲಿ ಭಾಗವಹಿಸುತ್ತಿದ್ದೆ. ಈಗ ಅದೇ ವೃತ್ತಿಯಾಗಿದೆ.

ನಿಮ್ಮ ಪ್ರಕಾರ ಫ್ಯಾಷನ್ ಶೋ ಎಂದರೇನು?
ಫ್ಯಾಷನ್ ಶೋ ಬಗ್ಗೆ ಯುವಪೀಳಿಗೆಯಲ್ಲಿ ಕ್ರೇಜ್ ಇದೆ. ಹೊಸ ಸೀರೆ, ಡ್ರೆಸ್ ಇನ್ನಿತರ ಸಂಗ್ರಹಗಳನ್ನು ತೊಟ್ಟು ನಮ್ಮನ್ನು ವಿಶಿಷ್ಟವಾಗಿ ಪ್ರದರ್ಶಿಸಿಕೊಳ್ಳುವ ರೀತಿಯೂ ವಿಶೇಷ. ಪ್ರಚಾರ ಸಿಕ್ಕರೆ ತಾನೇ  ಒಂದು ವಸ್ತುವಿಗೆ ಬೇಡಿಕೆ ಹೆಚ್ಚುವುದು. ಹಾಗಾಗಿ ಫ್ಯಾಷನ್ ಮಾಡುವುದು ತಪ್ಪೇನಿಲ್ಲ.

ನಗರದಲ್ಲಿ ಫ್ಯಾಷನ್ ಶೋಗೆ ಅವಕಾಶವಿದೆಯಾ?
ನಿಜವಾಗಲೂ ಇದೆ. ಬೆಂಗಳೂರು ಮಹಾನಗರ. ಇಲ್ಲಿ ಅವಕಾಶಗಳು ಇದೆ. ನನಗೆ ಸಮಯವೇ ಸಿಗುವುದಿಲ್ಲ. ಆದರೆ ಜೀವನದಲ್ಲಿ ನೆಲೆಕಾಣಲು ಇದರಿಂದ ಸಾಧ್ಯವಾಗುವುದಿಲ್ಲ. ಸೌಂದರ್ಯ ಇರುವಷ್ಟು ದಿನ ಬೇಡಿಕೆ ಇರುತ್ತದೆ. ಮುಖದಲ್ಲಿ ನೆರಿಗೆ ಮೂಡುತ್ತಿದ್ದಂತೆ ನಾವು ಹಿಂದೆ ಸರಿಯಬೇಕು.

ಮಾಡೆಲ್ ಆಗಬೇಕಾದರೆ ಯಾವ ಅರ್ಹತೆ ಇರಬೇಕು?
ಗ್ಲಾಮರಸ್ ಆಗಿ ಕಾಣಬೇಕು. ತೆಳ್ಳಗೆ ಇರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಆರೋಗ್ಯವಂತರಾಗಿರಬೇಕು. ತೆಳ್ಳಗಿದ್ದು ಮುಖದಲ್ಲಿ ಹೊಳಪಿಲ್ಲದಿದ್ದರೆ ಕ್ಯಾಮೆರಾ ಎದುರಿಸೋದಕ್ಕೆ ಕಷ್ಟ ಆಗುತ್ತದೆ.

ನೀವು ಯಾವ ರೀತಿಯ ಡಯೆಟ್ ಮಾಡುತ್ತೀರಿ?
ತಿನ್ನೋದಕ್ಕೆ ಯಾವುದೇ ರೀತಿ ಕಡಿವಾಣ ಹಾಕಿಕೊಂಡಿಲ್ಲ. ಮಂಗಳೂರು ಗೋಲಿ ಬಜೆ ಅಂದರೆ ತುಂಬಾ ಇಷ್ಟ. ಪಂಜಾಬಿ ರೋಟಿ, ಐಸ್‌ಕ್ರೀಂ ನನ್ನ ಮೆಚ್ಚಿನ ಆಹಾರ. ತಿಂದ ನಂತರ ಅಷ್ಟೇ ವರ್ಕ್ ಔಟ್, ಯೋಗ ಮಾಡುತ್ತೇನೆ. ಇದರಿಂದ ಮನಸ್ಸು ಶಾಂತವಾಗಿರುವುದಲ್ಲದೇ, ದೇಹವೂ ಚೆನ್ನಾಗಿರುತ್ತದೆ. ನಾನು ಕೊಡಗಿಗೆ ಹೋದರೆ ದಪ್ಪಾಗಾಗುತ್ತೇನೆ. ಬೆಂಗಳೂರಿನಲ್ಲೇ ಇದ್ದರೆ ತೆಳ್ಳಗಾಗುತ್ತೇನೆ. ಇದೇ ನನ್ನ ಸೀಕ್ರೇಟ್.

ಯಾವ ಸ್ಥಳ ನಿಮಗೆ ತುಂಬಾ ಇಷ್ಟ? ಬಿಡುವಿದ್ದಾಗ ಏನು ಮಾಡುತ್ತೀರಿ?
ಗ್ರೀಸ್ ತುಂಬಾ ಇಷ್ಟದ ಸ್ಥಳ. ಯಾವತ್ತಾದರೂ ಒಂದು ದಿನ ಅಲ್ಲಿಗೆ ಹೋಗಬೇಕು. ನನಗೆ ದೇಶ ಸುತ್ತುವುದು ಇಷ್ಟದ ಹವ್ಯಾಸವೂ ಹೌದು. ಸಮಯ ಸಿಕ್ಕಾಗಲೆಲ್ಲ ಪುಸ್ತಕ ಓದುತ್ತೇನೆ.

ನಿಮ್ಮಿಷ್ಟದ ಮಾಡೆಲ್ ಯಾರು?
ನನಗೆ ಪ್ರತ್ಯೇಕವಾಗಿ ಇಂತಹವರೇ ಇಷ್ಟವೆಂದೇನಿಲ್ಲ. ಎಲ್ಲರಿಗೂ ಅವರದೇ ಆದ ಪ್ರತಿಭೆ ಇರುತ್ತದೆ. ನಾನು ಗೌರವ ನೀಡುವುದು ಅದಕ್ಕೆ.

ಇಷ್ಟದ ನಟ?
ಅನಂತ್‌ನಾಗ್ ಇಷ್ಟ. ಅವರ ಸಿನಿಮಾ ಬಂದರೆ ನಾನು ತಪ್ಪದೇ ನೋಡುತ್ತೇನೆ. ಅವರ ನಟನಾ ಶೈಲಿ ಚೆನ್ನಾಗಿದೆ.

ಸಿನಿಮಾದಲ್ಲಿ ನಟಿಸಲು ಅವಕಾಶ ಬಂದಿದೆಯಾ?
ಹ್ಞಾಂ. ಆದರೆ ನನಗೆ ಇಷ್ಟ ಇಲ್ಲ. ಸರ್ಕಾರಿ ಹುದ್ದೆಯೇ ನನ್ನ ಗುರಿ. ಸರ್ಕಾರಿ ಕೆಲಸದಲ್ಲಿ ಯಾವುದೇ ರೀತಿಯ ತಲೆಬಿಸಿ ಇರಲ್ಲ. ನನ್ನ ಪಾಡಿಗೆ ನಾನಿರಬಹುದು. ಒಳ್ಳೆಯದು ಮಾಡುವುದಕ್ಕೆ ಆಗದಿದ್ದರೂ ಪರ‌್ವಾಗಿಲ್ಲ. ಕೆಟ್ಟದ್ದು ಮಾಡದೇ ಇದ್ದರೆ ಸಾಕು.

ಇಷ್ಟದ ಡ್ರೆಸ್ ಯಾವುದು?
ನಾನು ಫ್ಯಾಷನ್ ಲೋಕದಲ್ಲಿರುವುದರಿಂದ ಎಲ್ಲಾ ರೀತಿಯ ಬಟ್ಟೆಯನ್ನೂ ಹಾಕುತ್ತೇನೆ. ಮೈ ತೋರಿಸುವ ಬಟ್ಟೆಯಿಂದ ಹಿಡಿದು ಮೈ ಮುಚ್ಚುವ ಬಟ್ಟೆಯೂ ಹಾಕಬೇಕಾಗುತ್ತದೆ. ನಾವು ಹಾಕುವ ಬಟ್ಟೆ ನಮಗೆ ಕಂಫರ್ಟ್ ಆಗಿರಬೇಕು. ಆಗ ಮಾತ್ರ ಚಂದವಾಗಿ ಕಾಣಲು ಸಾಧ್ಯ. ಸೀರೆ, ಘಾಗ್ರಾ ಚೋಲಿ ಸ್ವಲ್ಪ ಹೆಚ್ಚೇ ಇಷ್ಟ.

ಮದುವೆ ?
ಎರಡು ವರ್ಷಗಳಲ್ಲಿ ಆಗುತ್ತೇನೆ. ಲವ್ ಕಮ್ ಅರೇಂಜ್ಡ್. ನನ್ನನ್ನು ಅರ್ಥಮಾಡಿಕೊಂಡು ಹೋಗುವ ಹುಡುಗ ಅವನು. ಹೆಸರು ಕೇಳಬೇಡಿ. (ನಗು)

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.