ADVERTISEMENT

ಸಾಂತ್ವನ ನೀಡುವ ಮಹಿಳಾ ದನಿ

ಸುರೇಖಾ ಹೆಗಡೆ
Published 7 ಮಾರ್ಚ್ 2016, 19:59 IST
Last Updated 7 ಮಾರ್ಚ್ 2016, 19:59 IST
-ನೇತ್ರಾ, ರೇಡಿಯೊ ಸಿಟಿ.
-ನೇತ್ರಾ, ರೇಡಿಯೊ ಸಿಟಿ.   

ಊರು ಬಿಟ್ಟು ಪಟ್ಟಣ ಸೇರುವ, ಭಾವನೆಗಳ ಸಿಕ್ಕುಗಳಲ್ಲಿ ಬಂಧಿಯಾಗುವ ಅನೇಕರಿಗೆ ಎಫ್‌ಎಂ ಚಾನೆಲ್‌ಗಳು ಸಮಾಧಾನ ನೀಡುವ ಸಂಗಾತಿಯಾಗುತ್ತವೆ. ಮಾತಿನ ಮಂಟಪ ಕಟ್ಟುತ್ತಾ ಬೇಗೆಯ ಬುತ್ತಿ ಇಳಿಸಿ ಸಾಂತ್ವನದ ನಗು ತುಂಬುವ ಮಹಿಳಾ ಆರ್‌ಜೆಗಳು ಜನರಿಗೆ ಹೆಚ್ಚು ಅಚ್ಚುಮೆಚ್ಚು. ಈ ಕುರಿತಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ ಜನಪ್ರಿಯ ಆರ್‌ಜೆಗಳು.

ಆರ್‌ಜೆ ಅಂದರೆ ಸಾಕು, ಪಟ್‌ ಪಟಾಕಿಯಂಥ ಮಾತು, ಖುಷಿ ನೀಡುವ ನಗು, ಸಾಂತ್ವನ ನೀಡುವ ದನಿ ಕಿವಿ ತುಂಬುತ್ತದೆ. ಕೇವಲ ಶ್ರಾವ್ಯ ಮಾಧ್ಯಮವನ್ನೇ ನಂಬಿ ಒಮ್ಮೆ ಉಪಯುಕ್ತ ಮಾಹಿತಿ ನೀಡುತ್ತಾ, ಇನ್ನೊಮ್ಮೆ ಕಿತ್ತಾಡುತ್ತಾ, ಮಗದೊಮ್ಮೆ ಯಾರದ್ದೋ ಕಾಲೆಳೆಯುತ್ತಾ, ನೊಂದ ಮನಸ್ಸಿಗೆ ಸಾಂತ್ವನದ ಮಾತಾಗುತ್ತಾ ಜನರ ಬದುಕಿನಲ್ಲಿ ಒಂದಾಗುತ್ತಿರುವವರು ಈ ರೇಡಿಯೊ ಜಾಕಿಗಳು.

ಬೆಂಗಳೂರಿನ ವೇಗದ ಬದುಕಿನಲ್ಲಿ ಅನೇಕರಿಗೆ ಎಫ್‌ಎಂ ರೇಡಿಯೊ ಚಾನೆಲ್‌ಗಳು ಸಾಥಿಯಾಗುತ್ತಿವೆ. ರೇಡಿಯೊ ಸಿಟಿ, ರೇಡಿಯೊ ಇಂಡಿಗೊ, ಬಿಗ್‌ ಎಫ್‌ಎಂ, ರೆಡ್‌ ಎಫ್ಎಂ, ರೇಡಿಯೊ ಒನ್‌, ರೇಡಿಯೊ ಮಿರ್ಚಿ, ರೇನ್‌ಬೊ, ವಿವಿಧ ಭಾರತಿ ಹೀಗೆ ನಾನಾ ರೇಡಿಯೊ ಚಾನೆಲ್‌ಗಳಿವೆ.  ಆದರೆ ಇಂತಹ ರೇಡಿಯೊ ವಾಹಿನಿಗಳಲ್ಲಿ ಕೇಳುವ ದನಿಗಳಲ್ಲಿ ಮಹಿಳಾ ದನಿಗಳೇ ಹೆಚ್ಚು ಆಪ್ತವಾಗುತ್ತಿವೆ. ಅಂತೆಯೇ ಮಹಿಳಾ ಆರ್‌ಜೆಗಳಿಗೆ ಅವಕಾಶಗಳ ಆಗರವೇ ಮುಂದಿದೆ. ಬಿಡುವಿಲ್ಲದ ಪಟಪಟ ಮಾತುಗಳಿಂದ, ಅವಸರದ ಹರಟೆ, ಆದರದ ನಗುವಿನಿಂದ ಜನಮನಕ್ಕೆ ಹತ್ತಿರವಾದ ಆರ್‌ಜೆಗಳು ಸಾಕಷ್ಟಿದ್ದಾರೆ. ನಿದ್ದೆಯಿಂದೆದ್ದ ಸ್ವಚ್ಛ ಮನಸ್ಸಿಗೆ ಮುಂಜಾನೆಯ ಶುಭ ಕೋರುವುದು ಹೆಚ್ಚಾಗಿ ಮಹಿಳೆಯರೇ.

ರೇಡಿಯೊ ಸಿಟಿಯ ಸೌಜನ್ಯಾ, ನೇತ್ರಾ, ಸುಧಾ ಬರಗೂರು, ರೇಡಿಯೊ ಮಿರ್ಚಿಯ  ಲಾವಣ್ಯಾ, ಸ್ಮಿತಾ, ಸಿರಿ, ರಚನಾ, ಐಶ್ವರ್ಯಾ, ಪ್ರಕೃತಿ, ಬಿಗ್‌ ಎಫ್‌ಎಂನ ಹಂಸ, ಶ್ರುತಿ, ರಶ್ಮಿ, ಪ್ರಿಯಾ, ಫೀವರ್‌ ಎಫ್‌ಎಂನ ಶ್ರದ್ಧಾ, ಸಿಂಧು, ರುಬೀನಾ, ರೆಡ್‌ ಎಫ್‌.ಎಂ.ನ ದಿಶಾ ಒಬೆರಾಯ್‌... ಈ ಎಲ್ಲಾ ಮಹಿಳಾ ಮಣಿಗಳು ತಂತಮ್ಮ ಮಧುರ ದನಿ, ಗೆಲುವಿನ ಮಾತುಗಳಿಂದ ಜನರಿಗೆ ಹೆಚ್ಚು ಅಚ್ಚುಮೆಚ್ಚು. ಮಾತುಗಳ ಮಂಟಪ ಕಟ್ಟುತ್ತಾ, ಜನರೊಂದಿಗೆ ಒಂದಾಗುವ ಮಹಿಳೆಯರ ದನಿಯನ್ನೇ ಜನ ಹೆಚ್ಚಾಗಿ ಇಷ್ಟಪಡಲು ಕಾರಣ ಏನಿರಬಹುದು ಎಂದು ತಮ್ಮ ಅನಿಸಿಕೆಗಳನ್ನು ಆರ್‌ಜೆಗಳು ಹಂಚಿಕೊಂಡಿದ್ದಾರೆ.

***
ಆಕರ್ಷಣೆ ಸಹಜ
ಯಾವುದೇ ಕ್ಷೇತ್ರವಿರಬಹುದು ಮಹಿಳೆಯರ ಧ್ವನಿ ಕೇಳಿದರೆ ಗಂಡಸರೇ ಇರಲಿ ಅಥವಾ ಹೆಂಗಸರೇ ಇರಲಿ ಥಟ್ಟನೆ ಆಕರ್ಷಿತರಾಗುತ್ತಾರೆ. ಹೆಂಗಸರಿಗೆ ನಮ್ಮವರ ದನಿ ಎಂಬ ಆಪ್ತಭಾವ ಸೆಳೆದರೆ, ಗಂಡಸರನ್ನು ಮಹಿಳೆಯ ದನಿ ಸಹಜವಾಗಿಯೇ ಆಕರ್ಷಿಸುತ್ತದೆ. ಅಲ್ಲದೆ ತಾನು ಮಾಡುವ ಕೆಲಸವನ್ನು ನಿಷ್ಠೆಯಿಂದ, ಪ್ರೀತಿಯಿಂದ, ಅರ್ಥೈಸಿಕೊಂಡು ಮಾಡುವವಳು ಹೆಣ್ಣು.

ಹೀಗಾಗಿ ಆಕೆಯ ದನಿಯಲ್ಲಿಯೂ ಆ ಎಲ್ಲಾ ಚಾತುರ್ಯದ ಅಂಶಗಳು ಮಿಳಿತಗೊಂಡು ಕೇಳುಗರ ಮನಸ್ಸನ್ನು ಬಹುಬೇಗ ತಟ್ಟುತ್ತದೆ. ಮಕ್ಕಳಿಗೆ ತಾಯಿಯ ದನಿ ಕೇಳಲು ಎಂದಿಗೂ ಇಷ್ಟ. ಹಾಗೆ ಜನರಿಗೂ ಸಹಜವಾಗಿ ಮಹಿಳಾ ಧ್ವನಿಯತ್ತ ಆಕರ್ಷಣೆ ಇದೆ. ತಮ್ಮ ಭಾವನೆಗಳನ್ನು ಅರ್ಥೈಸಿಕೊಂಡು ಅದಕ್ಕೆ ತಕ್ಕಂತೆ ಸ್ಪಂದಿಸಿ ಸಾಂತ್ವನ ನೀಡುವ ಗುಣ ಮಹಿಳೆಯದ್ದು ಎಂದು ಕೇಳುಗರೂ ಭಾವಿಸಿ ಸ್ಪಂದಿಸುತ್ತಾರೆ.
-ನೇತ್ರಾ, ರೇಡಿಯೊ ಸಿಟಿ.

***
ಆಕೆ ಎಲ್ಲವೂ ಆಗಬಲ್ಲಳು
ನಿಜ ಬದುಕಿನಲ್ಲೇ ಆದರೂ ಮನಸ್ಸಿನ ಆತಂಕವನ್ನು, ಖುಷಿಯ ಸನ್ನಿವೇಶಗಳನ್ನು, ತಾಕಲಾಟ ತಲ್ಲಣಗಳನ್ನು ಅಕ್ಕ–ತಂಗಿಯ ಬಳಿಯೋ, ಅಮ್ಮನ ಬಳಿಯೋ ಅಥವಾ ಸ್ನೇಹಿತೆಯ ಬಳಿಯೋ ಹೇಳಿಕೊಂಡರೆ ನಾವು ಹಗುರಾಗುತ್ತೇವೆ. ಎಲ್ಲ ಸನ್ನಿವೇಶಗಳಿಗೆ, ನೋವುಗಳಿಗೆ ಸಾಂತ್ವನವಾಗುವ ಗುಣ ಹೆಣ್ಣಿನದ್ದು. ಹುಡುಗರೇ ಇರಲಿ, ಹುಡುಗಿಯೇ ಇರಲಿ ಹೆಣ್ಣಿನಲ್ಲಿ ಸಮಾಧಾನ ನೀಡುವ ಆಪ್ತಭಾವ ಇರುತ್ತದೆ.

ದನಿಯ ಮೂಲಕವೇ ಸಂಬಂಧ, ಸಮಾಧಾನ ಸಿಗುವ ರೇಡಿಯೊ ಮಾಧ್ಯಮಗಳಲ್ಲಿ ಕೂಡ ಮಹಿಳಾ ಧ್ವನಿಯೇ ಹೆಚ್ಚು ಜನಪ್ರಿಯವಾಗಲು ಇವುಗಳೇ ಕಾರಣ ಎಂದು ನನಗನಿಸುತ್ತದೆ. ನಮಗೆ ಕರೆ ಮಾಡುವವರೂ ಖುಷಿಯನ್ನೋ, ಅನುಭವವನ್ನೋ, ನೋವನ್ನೋ ಹೇಳಿಕೊಂಡು ಹಗುರಾಗುತ್ತಾರೆ. ಪ್ರತಿಯೊಬ್ಬರ ಭಾವನೆಗಳನ್ನು ಸಮಾಧಾನವಾಗಿ ಕೇಳಿಸಿಕೊಳ್ಳುವ, ನೋವು ನಲಿವುಗಳಿಗೆ ಸ್ಪಂದಿಸುವ, ಬೆಂಬಲ ನೀಡುವ, ಅರ್ಥೈಸಿಕೊಳ್ಳುವ ಗುಣ ಮಹಿಳೆಯರದ್ದಾದ್ದರಿಂದ ಜನರು ಮಹಿಳಾ ಧ್ವನಿಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ ಎಂದೆನಿಸುತ್ತದೆ. 
– ಸಿರಿ, ರೇಡಿಯೊ ಮಿರ್ಚಿ

***
ಆಳವಾದ, ಗಟ್ಟಿ ದನಿ ಇಷ್ಟ
‘ನಮ್ಮಲ್ಲಿ ನಾಲ್ವರು ಪುರುಷರೇ ಆರ್‌ಜೆಗಳು. ನಾನೊಬ್ಬಳೇ ಇಲ್ಲಿ ಹುಡುಗಿ. ವೈಯಕ್ತಿಕವಾಗಿ ನನಗೆ ಗಟ್ಟಿಯಾದ, ಆಳವಾದ ಧ್ವನಿ ಹೊಂದಿರುತ್ತಾರೆ ಎನ್ನುವ ಕಾರಣಕ್ಕೆ ಪುರುಷರ ಧ್ವನಿಯೇ ಹೆಚ್ಚು ಇಷ್ಟವಾಗುತ್ತದೆ. ಮುಂಜಾನೆ ಏಳುತ್ತಿದ್ದಂತೆ ಅಮಿತಾಭ್‌ ಬಚ್ಚನ್‌ ಮುಂತಾದ ಕಂಚಿನ ಕಂಠದವರ ದನಿಯನ್ನೇ ಕೇಳಬೇಕೆನಿಸುತ್ತದೆ. ಆದರೆ ಜನರು ಹೆಚ್ಚೆಚ್ಚು ಮಹಿಳಾ ದನಿಗಳನ್ನೇ ಆಲಿಸುತ್ತಾರೆ ಎಂದರೆ ಅದು ಅತ್ಯಂತ ಖುಷಿ ಕೊಡುವ ಸಂಗತಿ.

ನನ್ನ ಪ್ರಕಾರ ಮಹಿಳೆಯರು ಮಾತನಾಡುವ ಶೈಲಿ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲೂ ತೀರಾ ಆಪ್ತರೊಬ್ಬರು ಮಾತಾಡಿದಂಥ ಅನುಭವವನ್ನು ನೀಡುತ್ತದೆ. ಹೀಗಾಗಿಯೇ ಅವರು ತಮ್ಮ ಅನುಭವ, ಅನಿಸಿಕೆಗಳನ್ನು ಮುಕ್ತವಾಗಿ ನಮ್ಮೊಂದಿಗೆ ಹೇಳಿಕೊಳ್ಳುತ್ತಾರೆ. ಮನಸ್ಸಿನಲ್ಲಿರುವ ದುಗುಡವನ್ನು ಇಳಿಸಿಕೊಂಡ ಭಾವ ಅವರಿಗೆ ಮೂಡಬಹುದು. ಹೀಗಾಗಿಯೇ ಹೆಚ್ಚೆಚ್ಚು ಮಹಿಳಾ ದನಿಗೆ ಜನಪ್ರಿಯತೆ ಸಿಗುತ್ತಿದೆ’ ಎನ್ನುತ್ತಾರೆ ಆರ್‌ಜೆ ಆಗಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನೂ ಬಾಚಿಕೊಂಡಿರುವ ದಿಶಾ ಒಬೆರಾಯ್‌.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.