ADVERTISEMENT

ಸಾಂಬ್ರಾಣಿ ಎಂಬ ತರಕಾರಿ ಗೆಡ್ಡೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2010, 18:30 IST
Last Updated 20 ಅಕ್ಟೋಬರ್ 2010, 18:30 IST


ಸಾಂಬ್ರಾಣಿ ಕಾರ್ಕಳ ತಾಲೂಕಿನ ರೈತರನ್ನು ಆಕರ್ಷಿಸುತ್ತಿರುವ ತರಕಾರಿ ಗೆಡ್ಡೆ. ಪುತ್ತಿಗೆ ಗ್ರಾಮದ ಮಿತ್ತಬೈಲು ಗ್ರಾಮದ ವಿಠಲ ನಾಯ್ಕರು ದೊಡ್ಡ ಪ್ರಮಾಣದಲ್ಲಿ ಅದನ್ನು ಹೊಲದಲ್ಲಿ ಬೆಳೆದು ಬತ್ತದ ಬೇಸಾಯ ಕೈಬಿಟ್ಟಿದ್ದಾರೆ.

ಬತ್ತದ ನಾಟಿಗೆ ತುಂಬ ಜನ ಬೇಕು. ಈಗ ಕೂಲಿಗಳು ಸಿಗುವುದಿಲ್ಲ. ಸಾಂಬ್ರಾಣಿ ಬೆಳೆದರೆ ಕಡಿಮೆ ಶ್ರಮ ಹಾಗೂ ಖರ್ಚಿನಲ್ಲಿ ಬತ್ತಕ್ಕಿಂತ ಹೆಚ್ಚು ಲಾಭ ಸಿಗುತ್ತದೆ ಎಂಬುದು ಅವರ ಅನುಭವ. ಎಕರೆಗೆ 12 ಕ್ವಿಂಟಲ್ ಸಾಂಬ್ರಾಣಿ ಗೆಡ್ಡೆ ಬೆಳೆದು 15 ಸಾವಿರ ರೂ ನಿವ್ವಳ ಆದಾಯಗಳಿಸಿದ್ದಾರೆ.

ಸಾಂಬ್ರಾಣಿ ಗಿಡ ನೋಡಲು ದೊಡ್ಡ ಪತ್ರೆ ಗಿಡದ ಹಾಗೆ ಕಾಣುತ್ತದೆ. ಒಂದು ಸಲ ಹೊಲದಲ್ಲಿ ಅದನ್ನು ನಾಟಿ ಮಾಡಿದರೆ ಮುಂದಿನ ವರ್ಷ ಮತ್ತೆ ನಾಟಿ ಮಾಡುವ ಅಗತ್ಯ ಇಲ್ಲ.

ಗೆಡ್ಡೆ ಕೀಳುವಾಗ ಚೂರು ಪಾರು ಉಳಿದರೂ ಮೊದಲ ಮಳೆ ಬಿದ್ದ ಕೂಡಲೇ ಮೊಳಕೆಯೊಡೆದು ಗಿಡವಾಗುತ್ತದೆ. ಮಣ್ಣನ್ನು ಏರು ಹಾಕಿ ಉದ್ದನೆಯ ಸಾಲು ಮಾಡಿ ಒಂದೊಂದೇ ಗಿಡಗಳನ್ನು ಹತ್ತಿರ ಹತ್ತಿರ ನಾಟಿ ಮಾಡುತ್ತಾರೆ.

ADVERTISEMENT

ಮೂರೇ ತಿಂಗಳಲ್ಲಿ ಗಿಡ ಹುಲುಸಾಗಿ ಹರಡಿ  ಕೊಂಡು ಬೆಳೆದು ನಂತರ ಒಣಗುತ್ತವೆ. ಅಂದರೆ ಅಲ್ಲಿಗೆ ಗೆಡ್ಡೆಗಳು ಕೊಯ್ಲಿಗೆ ಸಿದ್ಧವಾಗಿವೆ ಎಂದರ್ಥ.

ಸಾಂಬ್ರಾಣಿ ಗೆಡ್ಡೆ ಗಾತ್ರದಲ್ಲಿ ಬಲು ಚಿಕ್ಕದಾದರೂ ಪಲ್ಯ, ಸಾಂಬಾರ್ ಇತ್ಯಾದಿ ಪದಾರ್ಥಗಳಿಗೆ ಆಲೂಗೆಡ್ಡೆಯ ರುಚಿ ಕೊಡುತ್ತದೆ. ಶರ್ಕರ, ಪಿಷ್ಟ, ಪೋಷಕಾಂಶಗಳು ಗೆಡ್ಡೆಯಲ್ಲಿ ಸಮೃದ್ಧವಾಗಿವೆ.

ಎಂಟು ಹಸುಗಳನ್ನು ಸಾಕಿ ಹೈನುಗಾರಿಕೆಯನ್ನೂ ಮಾಡುತ್ತಿರುವ ನಾಯ್ಕರು ಅವರು ಸಾಂಬ್ರಾಣಿ ಬೆಳೆಯಲು ಸಾವಯವ ಗೊಬ್ಬರ, ಎರೆಗೊಬ್ಬರ ಮಾತ್ರ ಧಾರಾಳವಾಗಿ ಬಳಸುತ್ತಾರೆ. ಪಾಳು ಬಿದ್ದ ಹೊಲವನ್ನು ಬೇರೆಯವರಿಂದ ಲೀಸ್‌ಗೆ ಪಡೆದು ಬೇಸಾಯ ಮಾಡಿದರೂ ಎಲ್ಲ ಖರ್ಚು ಕಳೆದು ಒಳ್ಳೆಯ ಲಾಭ ಸಿಗುತ್ತದೆ ಎಂಬ ತೃಪ್ತಿ ಅವರಲ್ಲಿದೆ.

ಗೆಡ್ಡೆಗಳನ್ನು ಅಗೆಯುವಾಗಲೇ ಅವನ್ನು ಖರೀದಿಗೆ ವ್ಯಾಪಾರಿಗಳು ಬರುವುದರಿಂದ ಸಾಂಬ್ರಾಣಿಗೆ ಮಾರುಕಟ್ಟೆ ಸಮಸ್ಯೆ ಇಲ್ಲ. ಪುತ್ತಿಗೆ ಗ್ರಾಮದ ರೈತರು 50 ಎಕರೆಗಳಲ್ಲಿ ಈ ಗೆಡ್ಡೆಗಳನ್ನು ಬೆಳೆಯುತ್ತಿದ್ದಾರೆ.

ಮಳೆಗಾಲದಲ್ಲಿ ಮಾತ್ರ ಸಾಂಬ್ರಾಣಿ ಬೇಸಾಯ. ಅದಕ್ಕೆ ರೋಗ ಬಾಧೆ ಇಲ್ಲ. ಜಾನುವಾರುಗಳು ತಿನ್ನುವುದಿಲ್ಲ. ಹೀಗಾಗಿ ಈ ಸುಲಭದ ತರಕಾರಿ ಕಡೆಗೆ ಹೆಚ್ಚು ರೈತರು ವಾಲಿದ್ದಾರೆ.
ವಿಠಲ ನಾಯ್ಕರ ಮೊಬೈಲ್ ನಂಬರ್: 08258 - 316759.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.