ADVERTISEMENT

ಸಾಂಸ್ಕೃತಿಕ ಹಬ್ಬ

ವರ್ಷ ತುಂಬಿದ ಸಂತೆಯಲ್ಲಿ

ದಯಾನಂದ ಎಚ್‌.ಎಚ್‌.
Published 11 ಮೇ 2014, 19:30 IST
Last Updated 11 ಮೇ 2014, 19:30 IST
ಚಿತ್ರ: ರಂಜು ಪಿ.
ಚಿತ್ರ: ರಂಜು ಪಿ.   

ಹಳ್ಳಿಮನೆಗಳ ವಿನ್ಯಾಸದ ಮಳಿಗೆಗಳಲ್ಲಿ ಕರಕುಶಲ ವಸ್ತುಗಳು ಹಾಗೂ ದೇಸಿ ಆಹಾರದ ಮಾರಾಟಕ್ಕಾಗಿ ಆರಂಭಗೊಂಡ ಸ್ವಾಮಿ ವಿವೇಕಾನಂದ ರಸ್ತೆಯ ‘ನಮ್ಮ ಮೆಟ್ರೊ’ ನಿಲ್ದಾಣದ ‘ಬೆಂಗಳೂರು ಸಂತೆ’ ಒಂದು ವರ್ಷ ಪೂರೈಸಿ ಎರಡನೇ ವರ್ಷಕ್ಕೆ ಕಾಲಿಟ್ಟಿದೆ.
2013ರ ಮೇ 8ರಂದು ಆರಂಭಗೊಂಡ ಸಂತೆಗೆ ಮೊನ್ನೆ ವರ್ಷ ತುಂಬಿತು.

ಚುನಾವಣಾ ನೀತಿ ಸಂಹಿತೆಯ ಕಾರಣಕ್ಕೆ ವಾರ್ಷಿಕೋತ್ಸವ ಆಚರಿಸದ ಮೆಟ್ರೊ ನಿಗಮ ಮೇ 25ರಿಂದ ಸಾಂಸ್ಕೃತಿಕ ಸಪ್ತಾಹ ಆಯೋಜಿಸಿದೆ. ಸಂತೆಯಲ್ಲಿ ಸಾಂಸ್ಕೃತಿಕ ಹಬ್ಬ ನಡೆಸುವ ಮೂಲಕ ವರ್ಷ ತುಂಬಿದ ಸಂದರ್ಭವನ್ನು ಸ್ಮರಣೀಯಗೊಳಿಸಲು ನಿಗಮ ಮುಂದಾಗಿದೆ.

ಗಾಯಕರಾದ ಶ್ಯಾಮಲಾ ಜಿ. ಭಾವೆ, ರಮೇಶ್‌ ಷಡ್ಗ, ಅನಂತರಾಜು, ಶಶಿಧರ ಕೋಟೆ, ಎಂ.ಮಹೇಶ್‌ ಸೇರಿದಂತೆ ವಿವಿಧ ಕಲಾವಿದರು ಮೇ 25ರಿಂದ ಜೂನ್‌ 1ರವರೆಗೆ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ನೃತ್ಯ ಕಲಾವಿದರಾದ ಚೇತನಾ, ಮಧುಲಿತಾ, ಸೋಮಶೇಖರ್‌, ಸುಂದರೇಶ್‌ ಅವರಿಂದ ನೃತ್ಯ ಕಾರ್ಯಕ್ರಮವಿರಲಿದೆ.

ಪ್ರತಿದಿನ ಸಂಗೀತ ಕಛೇರಿ ಮತ್ತು ನೃತ್ಯ ಪ್ರದರ್ಶನ ಕಲಾರಸಿಕರನ್ನು ರಂಜಿಸಲಿವೆ. ಶಾಸ್ತ್ರೀಯ ಸಂಗೀತ, ನೃತ್ಯದ ಜತೆಗೆ ಸಂತೆಯಲ್ಲಿ ಜನಪದ ಸಂಗೀತ ಹಾಗೂ ನೃತ್ಯ ಪ್ರದರ್ಶನವೂ ಇರಲಿದೆ. ಸಂತೆಯ ರಂಗಸ್ಥಳ ವೇದಿಕೆಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ.


ನಿಲ್ದಾಣದ ಕೆಳಗಿನ ಒಂದು ಕಿಲೋಮೀಟರ್‌ ಜಾಗದಲ್ಲಿ ಹಳ್ಳಿಯ ಪರಿಸರದೊಂದಿಗೆ ಸಂತೆ ಆರಂಭಗೊಂಡಿತು. ತೊಟ್ಟಿಮನೆ, ಕಟ್ಟೆಮನೆ, ಕಲ್ಲಿನ ಛಾವಣಿಯ ಮನೆಗಳ ವಿನ್ಯಾಸ ಸೇರಿದಂತೆ ಬಗೆಬಗೆಯ ರೂಪಿನ ಒಟ್ಟು 72 ಮಳಿಗೆಗಳು ಸಂತೆಯಲ್ಲಿವೆ. ಕಾವೇರಿ, ಹೇಮಾವತಿ, ನೇತ್ರಾವತಿ, ತುಂಗಾ, ಭದ್ರಾ, ಭೀಮ, ಕೃಷ್ಣಾ ಎಂಬ ವಿಭಾಗಗಳಡಿ ಮಳಿಗೆಗಳನ್ನು ವಿಂಗಡಿಸಲಾಗಿದೆ.

ಗ್ರಾಮೀಣ ಪರಿಸರದ ಮಳಿಗೆಗಳನ್ನು ಚಿತ್ರಕಾರ ರಾಧಾಕೃಷ್ಣ ಹೆಗ್ಗೋಡು ಹಸೆಚಿತ್ರಗಳಿಂದ ಸಿಂಗಾರಗೊಳಿಸಿದ್ದಾರೆ. ಸಂತೆಯಲ್ಲಿ ಓಡಾಡುವವರನ್ನು ಈ ಚಿತ್ರಗಳು ಸೆಳೆದುಕೊಳ್ಳದೆ ಇರಲಾರವು. ‘ಕಸೂತಿ ಬಟ್ಟೆ, ಕರಕುಶಲ ವಸ್ತುಗಳು, ಗ್ರಾಮೀಣ ಗುಡಿ ಕೈಗಾರಿಕೆಯ ಉತ್ಪನ್ನಗಳು ಹಾಗೂ ದೇಸಿ ಆಹಾರಕ್ಕೆ ಸಂತೆಯಲ್ಲಿ ಆದ್ಯತೆ ನೀಡಲಾಗಿದೆ.

ವಾಣಿಜ್ಯ ಉದ್ದೇಶದ ಕಾರಣದಿಂದ ಸಂತೆ ಆರಂಭಿಸಲಾಗಿಲ್ಲ. ಸಂತೆಯಿಂದ ಗ್ರಾಮೀಣ ಸ್ವಸಹಾಯ ಸಂಘಗಳಿಗೆ ಮಾರುಕಟ್ಟೆ ಒದಗಿಸುವುದು ನಮ್ಮ ಉದ್ದೇಶ’ ಎನ್ನುತ್ತಾರೆ ಸಂತೆಯ ಮುಖ್ಯ ಆಡಳಿತಾಧಿಕಾರಿ ಡಾ.ಕೆ.ಪ್ರಭಾಕರ ರಾವ್‌.
‘ಸಂತೆಯಲ್ಲಿರುವ ದೇಸಿ ಆಹಾರ ಮಳಿಗೆಗಳಲ್ಲಿ ವೈವಿಧ್ಯದ ಊಟ ಸಿಗುತ್ತದೆ.

ರಾಗಿರೊಟ್ಟಿ, ಜೋಳದ ರೊಟ್ಟಿ, ವಿವಿಧ ಪಲ್ಯಗಳ ಜತೆಗೆ ಮಣ್ಣಿನ ಲೋಟದಲ್ಲಿ ಟೀ, ಕಾಫಿ ಕುಡಿಯುವುದು ಒಂದು ವಿಶಿಷ್ಟ ಅನುಭವ. ಏನನ್ನು ಕೊಳ್ಳದಿದ್ದರೂ ಸಂತೆಯನ್ನು ನೋಡಲಾದರೂ ಜನ ಇಲ್ಲಿಗೆ ಬರಬೇಕು’ ಎನ್ನುತ್ತಾರೆ ಅವರು.

ರಾಜ್ಯ ಮಾತ್ರವಲ್ಲದೆ, ಮಹಾರಾಷ್ಟ್ರ, ಒಡಿಶಾ, ಪಶ್ಚಿಮ ಬಂಗಾಳದ ಗ್ರಾಮೀಣ ಸ್ವಸಹಾಯ ಸಂಘಗಳೂ ಸಂತೆಗೆ ಬಂದು ತಮ್ಮ ವಸ್ತುಗಳನ್ನು ಮಾರಾಟ ಮಾಡಿವೆ. ಮೆಟ್ರೊ ಎತ್ತರಿಸಿದ ಮಾರ್ಗದ ಕೆಳಗೆ ವ್ಯರ್ಥವಾಗಿದ್ದ ಜಾಗದಲ್ಲಿ ನಿರ್ಮಿಸಿದ ಸಂತೆ ಈಗ ಅನೇಕರ ಅನ್ನದ ಮಾರ್ಗವೂ ಆಗಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ವಿವರ

ADVERTISEMENT

ದಿನಾಂಕ ಕಾರ್ಯಕ್ರಮ ಕಲಾತಂಡ
ಮೇ 25  ಶಾಸ್ತ್ರೀಯ ಸಂಗೀತ ಶ್ಯಾಮಲಾ ಜಿ. ಭಾವೆ ಮತ್ತು ತಂಡ
ಭರತನಾಟ್ಯ ಚೇತನಾ ಮತ್ತು ತಂಡ

ಮೇ 26  ಶಾಸ್ತ್ರೀಯ ಸಂಗೀತ ರಮೇಶ್‌ ಷಡ್ಗ ಮತ್ತು ತಂಡ
ಒಡಿಸ್ಸಿ ನೃತ್ಯ ಮಧುಲಿತಾ ಮತ್ತು ತಂಡ

ಮೇ 27  ಸುಗಮ ಸಂಗೀತ ಅನಂತರಾಜು ಮತ್ತು ತಂಡ
ಬೀಸು ಕಂಸಾಳೆ ಲಿಂಗಯ್ಯ ಮತ್ತು ತಂಡ

ಮೇ 28  ಶಾಸ್ತ್ರೀಯ ಸಂಗೀತ ಎಂ.ಮಹೇಶ್‌ ಮತ್ತು ತಂಡ
ಕಥಕ್‌ ನೃತ್ಯ ಸೋಮಶೇಖರ್‌ ಮತ್ತು ತಂಡ

ಮೇ 30  ಸಂಗೀತ ಸಂಭ್ರಮ ಶಶಿಧರ ಕೋಟೆ ಮತ್ತು ತಂಡ
ಜನಪದ ನೃತ್ಯ ಸುಂದರೇಶ್‌ ಮತ್ತು ತಂಡ

ಮೇ 31  ಸಮಕಾಲೀನ ನೃತ್ಯ ತೇಜಸ್ವಿನಿ ಮತ್ತು ತಂಡ
ಯಕ್ಷಗಾನ ಸುಧಾಕರ್‌ ಮತ್ತು ತಂಡ

ಜೂನ್‌ 1  ತಾಳವಾದ್ಯ ಕಛೇರಿ ತಂಗವೇಲು ಮತ್ತು ತಂಡ
ಯಕ್ಷಗಾನ ರಘುರಾಮ್‌ ಮುಳಿಯ ಮತ್ತು ತಂಡ
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.