ADVERTISEMENT

ಸಾಲ್ಸಾ ಪ್ರೇಮಿಯ ಗಿನ್ನೆಸ್ ದಾಖಲೆ

ಸುಮನಾ ಕೆ
Published 12 ಏಪ್ರಿಲ್ 2018, 19:30 IST
Last Updated 12 ಏಪ್ರಿಲ್ 2018, 19:30 IST
ಲೂಡ್‌ ವಿಜಯ್‌ ಸಾಲ್ಸಾ ಭಂಗಿ
ಲೂಡ್‌ ವಿಜಯ್‌ ಸಾಲ್ಸಾ ಭಂಗಿ   

ದೇಹದಲ್ಲಿ ಮೂಳೆಗಳೇ ಇಲ್ಲವೇನೋ ಎಂಬಂತೆ ಬಳುಕುವ ದೇಹ, ಹಿನ್ನೆಲೆ ಸಂಗೀತಕ್ಕೆ ತಕ್ಕಂತೆ ಚುರುಕು ನಡೆ, ವೇಗದ ಹೆಜ್ಜೆಯ ಸಾಲ್ಸಾ ನೃತ್ಯವನ್ನು ನೋಡುವುದೇ ಖುಷಿ. ಇಂತಹ ನೃತ್ಯದಲ್ಲಿ ಗಿನ್ನೆಸ್‌ ವಿಶ್ವ ದಾಖಲೆ ಮಾಡಿದವರು ಬೆಂಗಳೂರಿನ ಲೂಡ್‌ ವಿಜಯ್‌.

ತಮ್ಮದೇ ಆದ ‘ಲೂಡ್‌ ವಿಜಯ್ಸ್‌ ಡಾನ್ಸ್‌ ಸ್ಟುಡಿಯೊ’ ನಡೆಸುತ್ತಿರುವ ಅವರು ಸಾಲ್ಸಾ ಹಾಗೂ ಸಮಕಾಲೀನ ನೃತ್ಯ ಶೈಲಿಯಲ್ಲಿ ಒಂದು ನಿಮಿಷದಲ್ಲಿ 39 ಫ್ಲಿಪ್‌ಗಳನ್ನು ಮಾಡಿ ದಾಖಲೆ ನಿರ್ಮಿಸಿದ್ದಾರೆ.

‘ಡಾನ್ಸ್‌ ಫ್ಲಿಪ್‌ಗಳನ್ನು ಮಾಡುವಾಗ ಸಹನೃತ್ಯಗಾರರ ದೇಹ ಸಂಪೂರ್ಣ ನೆಲದಿಂದ ಮೇಲಿರುತ್ತದೆ. ಅವರ ದೇಹದ ತೂಕವನ್ನು ಸಮತೋಲನ ಮಾಡಿಕೊಂಡು ಒಂದು ನಿಮಿಷದಲ್ಲಿ 10 ಫ್ಲಿಪ್‌ಗಳನ್ನು ಮಾಡುವುದೇ ಕಷ್ಟ. ನಾವು ಒಂದು ನಿಮಿಷದಲ್ಲಿ 39 ಫ್ಲಿಪ್‌ ಮಾಡಿದ್ದೇವೆ. ಈ ಹಿಂದೆ ಒಂದು ನಿಮಿಷದಲ್ಲಿ 33 ಫ್ಲಿಪ್‌ಗಳನ್ನು ಮಾಡಿ ಗಿನ್ನೆಸ್‌ ದಾಖಲೆ ಇತ್ತು’ ಎಂದು ವಿವರಿಸುತ್ತಾರೆ. ಈ ನೃತ್ಯಕ್ಕೆ ವಿಜಯ್‌ಗೆ ಜೊತೆಗಾರ್ತಿಯಾಗಿದ್ದವರು ನೃತ್ಯಗಾರ್ತಿ ಸ್ನೇಹಾ ಕಪೂರ್‌.

ADVERTISEMENT

ಕಾಕ್ಸ್‌ಟೌನ್‌ನ ವಿಜಯ್‌ 1994ರಲ್ಲಿ ಉದ್ಯಮಕ್ಕೆಂದು ಕೆನಡಾದ ವ್ಯಾಂಕೋವರ್‌ ಹೋಗಿದ್ದರು. ಅಲ್ಲಿ ಅವರು ಸಾಲ್ಸಾ ಹಾಗೂ ಸಮಕಾಲೀನ ನೃತ್ಯಗಳನ್ನು ನೋಡಿ ಆಕರ್ಷಿತರಾಗಿ ಆ ನೃತ್ಯಗಳನ್ನು ಕಲಿತುಕೊಂಡರು. ಬಳಿಕ ಬೆಂಗಳೂರಿನಲ್ಲಿ ನೃತ್ಯಶಾಲೆಯನ್ನು ಆರಂಭಿಸಿದರು.

ಸೂಪರ್‌ಸ್ಟಾರ್‌ಗಳಾದ ಜಾಕಿ ಚಾನ್‌, ನಂದಿತಾ ದಾಸ್‌, ಮಲ್ಲಿಕಾ ಶೆರಾವತ್‌, ಶರ್ಮಿಳಾ ಮಾಂಡ್ರೆ, ರಘು ಮುಖರ್ಜಿ, ಅಕ್ಷರಾ ಹಾಸನ್‌ ಅವರಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ಇದಲ್ಲದೇ ಡಾನ್ಸ್‌ ಇಂಡಿಯಾ ಡಾನ್ಸ್‌, ಲಕ್ಸ್‌ ಫರ್ಫೆಕ್ಟ್ ಬ್ರೈಡ್‌ ರಿಯಾಲಿಟಿ ಷೋಗಳಲ್ಲೂ ಕೆಲಸ ಮಾಡಿದ ಅನುಭವ ಇದೆ. 30ಕ್ಕೂ ಹೆಚ್ಚು ದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡಿರುವ ಇವರು ನೂರಾರು ವಿದ್ಯಾರ್ಥಿಗಳಿಗೆ ನೃತ್ಯ ಕಲಿಸಿಕೊಟ್ಟಿದ್ದಾರೆ.

ಏಪ್ರಿಲ್‌ 2ಕ್ಕೆ ‘ಲೂಡ್‌ ವಿಜಯ್ಸ್‌ ಡಾನ್ಸ್‌ ಸ್ಟುಡಿಯೊ’ ಆರಂಭವಾಗಿ 20 ವರ್ಷ ತುಂಬಿತು. ಕೇವಲ ಆರು ಮಕ್ಕಳಿಂದ ಆರಂಭವಾದ ಈ ಸಂಸ್ಥೆಯಲ್ಲಿ ಈವರೆಗೆ 1.5 ಲಕ್ಷಕ್ಕೂ ಹೆಚ್ಚು ಮಕ್ಕಳು ನೃತ್ಯ ಕಲಿತಿದ್ದಾರೆ. ಇಲ್ಲಿ ಸಾಲ್ಸಾ, ಸ್ವಿಂಗ್‌, ರಾಕ್‌ ಆ್ಯಂಡ್‌ ರೋಲ್‌, ಹಿಪ್‌ ಹಾಪ್‌, ಫ್ರೀ ಸ್ಟೈಲ್‌, ಬ್ರೇಕ್‌ ಡಾನ್ಸಿಂಗ್‌, ಸಮಕಾಲೀನ ನೃತ್ಯ ಪ್ರಕಾರಗಳೊಂದಿಗೆ ಭಾರತೀಯ ನೃತ್ಯ ಪ್ರಕಾರಗಳಾದ ಭರತನಾಟ್ಯ, ಒಡಿಸ್ಸಿ, ಕಥಕ್‌, ಮಾರ್ಷಲ್‌ ಕಲೆಗಳಾದ ಕಳರಿಪಯಟ್ಟು, ಕತ್ತಿವರಸೆಯನ್ನು ಹೇಳಿಕೊಡಲಾಗುತ್ತದೆ.

ಲೂಡ್‌ ವಿಜಯ್ಸ್‌ ಡಾನ್ಸ್‌ ಸ್ಟುಡಿಯೊ ಶಾಖೆಗಳು ಚೆನ್ನೈ, ದೆಹಲಿ ಹಾಗೂ ಮುಂಬೈನಲ್ಲಿದೆ. ದೇಶದ ಪ್ರಸಿದ್ಧ ನೃತ್ಯ ಸ್ಪರ್ಧೆಗಳಾದ ಇಂಡಿಯಾ ಇಂಟರ್‌ನ್ಯಾಷನಲ್‌ ಸಾಲ್ಸಾ ಕಾಂಗ್ರೆಸ್‌, ಸ್ಪಿರಿಟ್‌ ಆಫ್‌ ಡಾನ್ಸ್‌– ಸಮ್ಮರ್ ಫೆಸ್ಟಿವಲ್‌ ಫಾರ್‌ ಕಿಡ್ಸ್‌, ದ ಚೆನ್ನೈ ಸಾಲ್ಸಾ ಫೆಸ್ಟಿವಲ್‌, ದ ದೆಹಲಿ ಸಾಲ್ಸಾ ಫೆಸ್ಟಿವಲ್‌, ದ ಗೋವಾ ಸಾಲ್ಸಾ ಫೆಸ್ಟಿವಲ್‌ ಸೇರಿದಂತೆ  ಅನೇಕ ಅಂತರರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆಗಳನ್ನು ಇವರು ತಮ್ಮ ಸಂಸ್ಥೆಯಿಂದ ನಡೆಸುತ್ತಾರೆ. ಅಮೆರಿಕದಲ್ಲಿ ಪ್ರತಿವರ್ಷ ನಡೆಯುವ ‘ವರ್ಲ್ಡ್‌ ಡಾನ್ಸ್‌ ಕಪ್‌’ ಸ್ಪರ್ಧೆಯಲ್ಲಿ 10ಕ್ಕೂ ಹೆಚ್ಚು ಬಾರಿ ಮೊದಲ ಸ್ಥಾನಗಳನ್ನು ಬಾಚಿಕೊಂಡಿರುವುದು ಈ ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದೆ.

ನೃತ್ಯದೊಂದಿಗೆ ಅಂಗದಾನದ ಬಗ್ಗೆಯೂ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಈ ಕಲಾವಿದ. ನಾಲ್ಕು ವರ್ಷಗಳ ಹಿಂದೆ ಇವರ ಕಿಡ್ನಿ ವೈಫಲ್ಯಗೊಂಡಿತ್ತು. ಬಳಿಕ ಕಿಡ್ನಿ ಕಸಿ ಮಾಡಲಾಗಿತ್ತು. ಅಲ್ಲಿಂದ ದೇಶದ ಒಂಬತ್ತು ರಾಜ್ಯಗಳಲ್ಲಿ ಅಂಗದಾನದ ಬಗ್ಗೆ ಜಾಗೃತಿ ಕಾರ್ಯಕ್ರಮ ಮಾಡಿದ್ದಾರೆ.

ವಿಜಯ್‌ ಅವರು ಜನಪದ ಕಲಾವಿದರಿಗೆ ನೆರವು ನೀಡಲು ಬೆಂಗಳೂರು ‘ಡಾನ್ಸ್‌ ಆ್ಯಂಡ್‌ ಆರ್ಟ್ಸ್‌ ಕನ್ಸರ್ವೇಟರಿ’ಯನ್ನು ಆರಂಭಿಸಿದ್ದು, ಈ ಮೂಲಕ ಕಲಾವಿದರಿಗೆ ಸಂಬಳ ನಿಗದಿ, ಮೂಲಭೂತ ಸೌಕರ್ಯಗಳನ್ನು ಒದಗಿಸುವ ಉದ್ದೇಶ ಹೊಂದಿದೆ. ಸಂಪರ್ಕಕ್ಕೆ: 9880772572. ಇಮೇಲ್‌– lourdvijay@lvds.in v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.