ADVERTISEMENT

ಸಿಟಿ ಕಂದನಿಗೆ ನೈಟ್‌ಕೇರ್

ಸುಮಾ ಬಿ.
Published 10 ಮೇ 2012, 19:30 IST
Last Updated 10 ಮೇ 2012, 19:30 IST
ಸಿಟಿ ಕಂದನಿಗೆ ನೈಟ್‌ಕೇರ್
ಸಿಟಿ ಕಂದನಿಗೆ ನೈಟ್‌ಕೇರ್   

`ಅಂದು ಮಗುವಿಗೆ ವಿಪರೀತ ಜ್ವರ. ನನಗೋ ಆಫೀಸಿನಲ್ಲಿ ಬಿಡುವಿಲ್ಲದ ಕೆಲಸ. ಮಗುವಿನ ಕಾರಣಕ್ಕೆ ದಿನವೂ ಬೇಗ ಮನೆಗೆ ಹೋಗುತ್ತಿದ್ದೆ. ಅಂದು ಮಾತ್ರ ನನ್ನ ಯಾವುದೇ ಸಬೂಬನ್ನು ಕೇಳುವ ಸ್ಥಿತಿಯಲ್ಲಿ ಬಾಸ್ ಇರಲಿಲ್ಲ. ರಾತ್ರಿ ಹತ್ತರವರೆಗೂ ಕೆಲಸ ಸಾಗಿತ್ತು. ಡೇ ಕೇರ್‌ನಲ್ಲಿ ಮಗುವನ್ನು ಬಿಟ್ಟಿದ್ದರಿಂದ ಅಲ್ಲಿಂದ ಕರೆ ಮೇಲೆ ಕರೆ. ನಿಮ್ಮ ಮಗುವಿಗೆ ಮೈ ಹುಷಾರಿಲ್ಲ, ನಾವು ನೋಡಿಕೊಳ್ಳುವ ಸಮಯವೂ ಮುಗಿದಿದೆ. ಬೇಗ ಮಗುವನ್ನು ಕರೆದೊಯ್ಯಿರಿ ಎಂದು. ಆಗ ಇಬ್ಬಗೆಯ ಸ್ಥಿತಿಯನ್ನು ಅನುಭವಿಸಲಾಗದ ನನಗೆ ನನ್ನ ಮಗುವೇ ಮುಖ್ಯವೆಂದು ನಿರ್ಧರಿಸಿ ಅಂದೇ ನನ್ನ ಕೆಲಸಕ್ಕೆ ಬೈ ಬೈ ಹೇಳಿದೆ. ಆಗಲೇ ಅರಿವಾದದ್ದು, ಇದು ನನ್ನೊಬ್ಬಳ ಬವಣೆಯಲ್ಲ ಎಂದು. ನನ್ನಂತೆಯೇ ದುಡಿಯುವ, ಅನಿವಾರ್ಯತೆಗೆ ಕಟ್ಟುಬಿದ್ದು, ಹೆತ್ತಮಗುವನ್ನು ಸರಿಯಾಗಿ ನೋಡಿ ಕೊಳ್ಳಲಾಗುತ್ತಿಲ್ಲವಲ್ಲ ಎಂದು ಪರಿತಪಿಸುವ ತಾಯಂದಿರಿಗೇನೂ ಕಡಿಮೆ ಇಲ್ಲ. ನಾನ್ಯಾಕೆ ಅವರಿಗೆ ನೆರವಾಗಬಾರದೆನ್ನಿಸಿತು. ಈ ಯೋಚನೆಯೇ ನನ್ನನ್ನು ಈ ಕಾರ್ಯದಲ್ಲಿ ತೊಡಗುವಂತೆ ಮಾಡಿತು~ ಎಂದು ತಮ್ಮ ಮನದಾಳದ ಮಾತನ್ನು ಬಿಚ್ಚಿಡುತ್ತಾರೆ ಡೇಕೇರ್ ಮತ್ತು ನೈಟ್‌ಕೇರ್ ನಡೆಸುತ್ತಿರುವ ಸುಚೇತಾ ಮಧುಸೂದನ್.

ಕಳೆದ ಒಂಬತ್ತು ತಿಂಗಳಿಂದ `ಕಿಡ್ಸ್ ಸ್ಪೇಸ್~ ಡೇ ಕೇರ್ ಮತ್ತು ನೈಟ್‌ಕೇರ್ ನಡೆಸುತ್ತಿರುವ ಸುಚೇತಾ ಪಂಜಾಬ್ ಮೂಲದವರು. ಎಂಬಿಎ ಪದವಿ ಮುಗಿಸಿ ಎಲ್ಲರಂತೆ ಐಟಿ ಕಂಪೆನಿಯಲ್ಲಿ ಉದ್ಯೋಗ ಪಡೆದರು. ಮದುವೆಯ ನಂತರವೂ ಕೆಲಸಕ್ಕೆ ಹೋಗುತ್ತಾ ಮಗುವನ್ನು ಡೇಕೇರ್‌ನಲ್ಲಿ ಬಿಟ್ಟು ದುಡಿದಿದ್ದಾರೆ. ಕೊನೆಗೆ ಕಂದನ ಕರೆಗೆ ಓಗೊಟ್ಟು ಉದ್ಯೋಗದಿಂದ ಹಿಂದೆ ಸರಿದರು. ಹದಿನಾಲ್ಕು ತಿಂಗಳ ಮಗುವನ್ನು ಐದು ದಿನಗಳ ಕಾಲ ತನ್ನ ಮಗುವಿನಂತೆ ಸಾಕಿದ್ದು ಮರೆಯಲಾಗದ ಅನುಭವ. ಅದರ ತಂದೆ ತಾಯಿ ಬಂದರೂ ಮಗು ನನ್ನನ್ನು ಬಿಡಲಿಲ್ಲ. ಏನೂ ಅರಿಯದ ಮಗುವೇ ನನಗೆ ಬೆಸ್ಟ್ ಕಾಂಪ್ಲಿಮೆಂಟ್ ಕೊಟ್ಟಿದ್ದನ್ನು ಮರೆಯಲಾಗದು. ಮಗುವಿನ ಹೆತ್ತವರಿಗೇ ಆಶ್ಚರ್ಯವಾಯಿತು ಎಂದವರು ಭಾವುಕರಾಗುತ್ತಾರೆ.

ಉದ್ಯೋಗಿಯಾಗಿ, ತಾಯಿಯಾಗಿ ಮಗುವಿನ ಸೆಳೆತವನ್ನು ಸ್ವತಃ ಅನುಭವಿಸಿದ್ದರಿಂದ ತಾಯಂದಿರ ಪರಿಸ್ಥಿತಿಗಳು ಅರ್ಥವಾಗುತ್ತವೆ. ಅವರ ಮಕ್ಕಳನ್ನೂ ಅಷ್ಟೇ ಕಾಳಜಿಯಿಂದ ನೋಡಿಕೊಳ್ಳುತ್ತೇನೆ. ತಂದೆ ತಾಯಿಗಳೂ ನಿಶ್ಚಿಂತೆಯಿಂದ ಕೆಲಸಕ್ಕೆ ಹೋಗುತ್ತಾರೆ. ಈಗ ಒಂದು ವರ್ಷ ಮೂರು ತಿಂಗಳ ಮಗುವಿನಿಂದ ಹಿಡಿದು ಎಂಟು ವರ್ಷದವರೆಗಿನ ಒಟ್ಟು 15 ಮಕ್ಕಳಿದ್ದಾರೆ. ಕೆಲವೊಬ್ಬರು ರಾತ್ರಿ 9-10 ಗಂಟೆಗೆಲ್ಲಾ ಮಗುವನ್ನು ಕರೆದುಕೊಂಡು ಹೋಗುತ್ತಾರೆ. ಕೆಲವೊಮ್ಮೆ ರಾತ್ರಿ ಪೂರ್ತಿ ನಮ್ಮಲ್ಲಿಯೇ ಬಿಡುತ್ತಾರೆ. ಆಗ ಮಗುವಿಗೆ ತನ್ನ ತಾಯಿ ನೆನಪು ಬಾರದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ನನ್ನದೆನ್ನುತ್ತಾ ಅಮ್ಮನ ಪಾತ್ರ ಅನುಸರಿಸಿದ್ದಕ್ಕೆ ಖುಷಿಯಿಂದ ಬೀಗುತ್ತಾರೆ.

ADVERTISEMENT

ಐಟಿ ಕಂಪೆನಿಯಲ್ಲಿ ಕೆಲಸ ಮಾಡುವ ತಾಯಿಯಂದಿರು ಎಷ್ಟೋ ಕನಸುಗಳನ್ನು ಕಟ್ಟಿಕೊಂಡು ಶ್ರಮಪಟ್ಟು ಓದಿರುತ್ತಾರೆ. ನನ್ನಂತೆಯೇ ಅವರ ಕನಸುಗಳು ಗಾಳಿಗೆ ತೂರಿಹೋಗಬಾರದೆನ್ನುವುದು ನನ್ನ ಬಯಕೆ. ಆದ್ದರಿಂದ ಅಲ್ಲಿ ಉದ್ಯೋಗದಲ್ಲಿರುವ ತಂದೆ ತಾಯಿಗಳ ಮಕ್ಕಳನ್ನೇ ಮುಖ್ಯವಾಗಿ ದೃಷ್ಟಿಯಲ್ಲಿ ಇಟ್ಟುಕೊಂಡಿರುತ್ತೇನೆ ಎನ್ನುತ್ತಾರೆ ಸುಚೇತಾ. ಸಂಪರ್ಕಕ್ಕೆ:  9986048567.

ಇ ಮೇಲ್: kidsspaceblr@gmail.com ವೆಬ್: www.kidsspaceacademy.weebly.com 

`ರಾತ್ರಿ ಅಮ್ಮ ಜೊತೆಗೇ ಇರಲಿ~

ಸಿ. ಆರ್. ಚಂದ್ರಶೇಖರ್‌ ಮನೋವೈದ್ಯ

ಹೆತ್ತವರ ಬಾಂಧವ್ಯವಿಲ್ಲದೇ ಬೆಳೆವ ಮಗು ಮಾನಸಿಕ ಉದ್ವೇಗಕ್ಕೆ ಒಳಗಾಗುತ್ತದೆ. ದಿನವೆಲ್ಲಾ ಬೇರೆಡೆಯಿದ್ದರೂ ರಾತ್ರಿ ಮಾತ್ರ ಅಮ್ಮನ ಸಾಂಗತ್ಯ ಮಗುವಿಗೆ ಅತ್ಯಗತ್ಯ. ಕಡಿಮೆಯೆಂದರೂ ಮೂರು ವರ್ಷದವರೆಗೂ ಜೊತೆಗೇ ಮಲಗಿಸಿಕೊಳ್ಳುವುದು ಅಗತ್ಯ. ನೈಟ್ ಕೇರ್‌ಗಳಲ್ಲಿ ಮಗುವಿಗೆ ಅನಾಥ ಪ್ರಜ್ಞೆ ಕಾಡುತ್ತಿರುತ್ತದೆ. ದೊಡ್ಡವರಾದ ಮೇಲೂ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳುವಲ್ಲಿಯೂ ವಿಫಲರಾಗುತ್ತಾರೆ.

ಏಕೆ ಈ ನೆಚ್ಚಿಕೆ...?

ಒಂದನ್ನು ಪಡೆಯಬೇಕಾದರೆ ಇನ್ನೊಂದನ್ನು ಕಳೆದುಕೊಳ್ಳಲೇಬೇಕಾಗುತ್ತದೆ ಎಂಬ ಮಾತು ಇಲ್ಲಿ ಅಕ್ಷರಶಃ ಸತ್ಯ. ಜೀವನಕ್ಕೆ ಹಣ, ವಿಲಾಸಿ ಬದುಕು, ಪ್ರತಿಷ್ಠೆ ಬೇಕೆಂದರೆ ಸಂಬಂಧಗಳ ಕೊಂಡಿ ಸಡಿಲವಾಗತೊಡಗುತ್ತದೆ. ಬದುಕಿನ ನೊಗಹೊರಲು ಪತಿ ಪತ್ನಿಯರಿಬ್ಬರೂ ಅನುವಾದರೆ ಕೂಸು ಬಡವಾಗದೇ...? ಮಹಾನಗರಿಗಳಲ್ಲಿ ಯಾವುದೂ ಅಷ್ಟು ಸುಲಭಕ್ಕೆ ಕೈಗೆಟಕುವುದಲ್ಲ. ಎಲ್ಲವನ್ನೂ ಕಷ್ಟಪಟ್ಟು ಪಡೆದುಕೊಳ್ಳಬೇಕು. ಈ ಪಡೆದುಕೊಳ್ಳುವ ಧಾವಂತದಲ್ಲಿ ಅಮೂಲ್ಯವಾದುದನ್ನು ಕಳೆದುಕೊಳ್ಳುವುದೇ ಹೆಚ್ಚು. ರಾತ್ರಿ ಅಮ್ಮನ ಮಡಿಲಲ್ಲಿ ಮಲಗಿ, ಲಾಲಿ ಹಾಡು ಕೇಳುವ ಭಾಗ್ಯ ಇಂದಿನ ಮಕ್ಕಳಿಗೆಲ್ಲಿದೆ...?

ಇಂದಿನ ಮಹಿಳೆಗೆ ನಾಲ್ಕು ಗೋಡೆಯ ಮಾತು ದೂರವೇ. ಸ್ವೇಚ್ಛೆಯಾಗಿ ಜೀವನ ನಡೆಸಬೇಕೆಂಬುದು ಆಕೆಯ ಬಯಕೆ. ಕುಟುಂಬದೊಂದಿಗೆ ಕೆರಿಯರ್ ಡೆವಲಪ್ ಮಾಡಿಕೊಳ್ಳಬೇಕೆಂಬ ಕನಸೂ ಜೊತೆಯಾಗಿರುತ್ತದೆ. ತಮ್ಮ ಕನಸನ್ನು ಸಾಕಾರ ಮಾಡಿಕೊಳ್ಳಬೇಕಾದರೆ ಮಗುವಿನೊಟ್ಟಿಗಿನ ನಂಟನ್ನು ತ್ಯಾಗ ಮಾಡಲೇಬೇಕಾದ ಅನಿವಾರ್ಯ ಎದುರಾಗುತ್ತದೆ.

* ಮೊದಲಿನಂತೆ ಈಗ ಅಜ್ಜಿಯಂದಿರು ಮೊಮ್ಮಗುವನ್ನು ನೋಡಿಕೊಳ್ಳುವುದು ತೀರಾ ಅಪರೂಪವಾಗಿದೆ. ಕೆಲಸದಲ್ಲಿ ತೊಡಗಿದ್ದ ಅಜ್ಜಿಯಂದಿರು ನಿವೃತ್ತರಾದಮೇಲೂ ತಮ್ಮದೇ ಆದ ಚಟುವಟಿಕೆಗಳಲ್ಲಿ ಬ್ಯುಸಿಯಾಗಿಬಿಡುತ್ತಾರೆ. ಔಪಚಾರಿಕವೆಂಬಂತೆ ಪ್ರೀತಿ ತೋರಿಸುವ ಪರಿಪಾಠ ಶುರುವಾಗಿದೆ. ಆಗ ಅನಿವಾರ್ಯವಾಗಿ ತಮ್ಮ ಮಗುವಿಗೆ ಕೇರ್‌ಗಳ ನಂಟನ್ನು ಬೆಳೆಸುತ್ತಾರೆ ಪೋಷಕರು.

* ಶಿಫ್ಟ್ ಪ್ರಕಾರ ದುಡಿಯುವವರಿಗೆ ನೈಟ್‌ಕೇರ್ ವರದಾನ.

* ಇಬ್ಬರಲ್ಲಿ (ಪತಿ-ಪತ್ನಿ) ಒಬ್ಬರಿಗೆ ಮೈಗೆ ಹುಷಾರಿಲ್ಲವೆಂದು ಆಸ್ಪತ್ರೆ ಸೇರಿದರೂ ಇತ್ತ ಮಗುವನ್ನು ನೋಡಿಕೊಳ್ಳುವವರಿಲ್ಲದಂತಾಗುತ್ತದೆ.

* ಇಬ್ಬರೂ ಹೋಗಲೇಬೇಕಾದಂತಹ ಕಾರ್ಯಕ್ರಮಗಳು, ಪಾರ್ಟಿ... ಇಂಥಹ ಸಮಯದಲ್ಲಿ ನೈಟ್‌ಕೇರ್ ಅಗತ್ಯವೆನಿಸುತ್ತವೆ.

* ಕೆಲಸದ ಸಲುವಾಗಿ ಊರಿಗೆ ಹೋಗಬೇಕಾದಾಗ.

* ಪತಿ-ಪತ್ನಿಯರು ದಿನವಿಡೀ ಕೆಲಸ ಎಂದು ತಮ್ಮ ಖಾಸಗಿ ಬದುಕನ್ನೇ ಮರೆತಿರುತ್ತಾರೆ. ಇಬ್ಬರಿಗೂ ಏಕಾಂತದಲ್ಲಿರಬೇಕೆಂದೆನಿಸಿದಾಗ ನೈಟ್‌ಕೇರ್ ಸಹಾಯಕ್ಕೆ ಬರುತ್ತವೆ.

`ಸ್ವಿಮ್ಮಿಂಗ್ ಕ್ಲಾಸ್ ನಡೆಸುವ ನಮಗೆ ಬೆಳಿಗ್ಗೆ ಮತ್ತು ರಾತ್ರಿ ಒಂಬತ್ತು- ಹತ್ತರವರೆಗೂ ಕೆಲಸವಿರುತ್ತದೆ. ಮಕ್ಕಳನ್ನು ನೋಡಿಕೊಳ್ಳಲು ಆಗ ಯಾರೂ ಇರುವುದಿಲ್ಲ. ಮನೆಯಲ್ಲಿ ಮಕ್ಕಳನ್ನಷ್ಟೇ ಬಿಟ್ಟು ಬರಲು ಮನಸ್ಸು ಒಪ್ಪದು. ಹಾಗಾಗಿ ನೈಟ್‌ಕೇರ್‌ನಲ್ಲಿ ಬಿಡುವುದು ಅನಿವಾರ್ಯವಾಗಿದೆ~ ಎನ್ನುತ್ತಾರೆ ಸ್ವಿಮ್ಮಿಂಗ್ ಕ್ಲಾಸ್ ನಡೆಸುತ್ತಿರುವ ಪವಿತ್ರಾ.

`ಮಕ್ಕಳ ಜೊತೆಗೆ ನಾವೂ ಕಾಲ ಕಳಿಬೇಕು ಅನ್ನೊ ಆಸೆ ಇದೆ. ಆದರೆ ಈಗಿನ ಜೀವನಶೈಲಿಯಲ್ಲಿ ಇಬ್ಬರಿಗೂ ಉದ್ಯೋಗ ಅನಿವಾರ್ಯ. ನೈಟ್‌ಕೇರ್‌ನಲ್ಲಿ ಮಕ್ಕಳನ್ನು ಬಿಟ್ಟರೆ ಸ್ವಲ್ಪವಾದರೂ ಲವಲವಿಕೆಯಿಂದ ಇರುತ್ತಾರೆ. ಮೊದಲು ಮಕ್ಕಳನ್ನು ನೋಡಿಕೊಳ್ಳಲು ಕೆಲಸದವರನ್ನು ನೇಮಿಸಿಕೊಂಡಿದ್ವಿ. ಆಗ ಒಂಟಿತನದ ಭಾವ ಕಾಡಲು ಶುರುವಾಯಿತು. ನೈಟ್‌ಕೇರ್‌ನಲ್ಲಿ ಇತರ ಮಕ್ಕಳೂ ಜತೆಯಿರುವುದರಿಂದ ನನ್ನ ಮಗಳು ಮಾನ್ವಿ ತುಂಬಾ ಖುಷಿಯಾಗಿರುತ್ತಾಳೆ~ ಎನ್ನುತ್ತಾರೆ ಐಟಿ ಕಂಪೆನಿಯೊಂದರಲ್ಲಿ ಕೆಲಸ ಮಾಡುವ ಸ್ಮಿತಾ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.