ADVERTISEMENT

‘ಸಿಲಿಕಾನ್ ಸಿಟಿ’ಯ ಜೀವನಚಿತ್ರಣ

​ಪ್ರಜಾವಾಣಿ ವಾರ್ತೆ
Published 7 ಜೂನ್ 2017, 19:30 IST
Last Updated 7 ಜೂನ್ 2017, 19:30 IST
‘ಸಿಲಿಕಾನ್ ಸಿಟಿ’ಯ ಜೀವನಚಿತ್ರಣ
‘ಸಿಲಿಕಾನ್ ಸಿಟಿ’ಯ ಜೀವನಚಿತ್ರಣ   

ಮೈಕ್‌ ಕೈಗೆತ್ತಿಕೊಂಡ ನಿರ್ದೇಶಕ ಮುರಳಿ ಗುರಪ್ಪ ಒಮ್ಮೆ ಸುದೀರ್ಘ ನಿಟ್ಟುಸಿರುಬಿಟ್ಟರು. ಆ ನಿಟ್ಟುಸಿರೇ ನೂರು ಮಾತು ಹೇಳುವಂತಿತ್ತು. ಆದರೆ ಆ ಮೌನ ಮಾತನ್ನು ಅರ್ಥೈಸಿಕೊಳ್ಳುವ ತ್ರಾಸಿಗೆ ಅವರು ಅನುವು ಮಾಡಿಕೊಡಲಿಲ್ಲ. ‘ಅಂತೂ ಈಗ ಸಿನಿಮಾ ಮುಗಿಸಿ ನಿಟ್ಟುಸಿರು ಬಿಡುವಂತಾಗಿದೆ’ ಎಂದು ಬಾಯಿಬಿಟ್ಟೇ ಹೇಳಿದರು.

ಅದು ‘ಸಿಲಿಕಾನ್‌ ಸಿಟಿ’ ಚಿತ್ರದ ಪತ್ರಿಕಾಗೋಷ್ಠಿ. ಜೂನ್‌ 16ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ ಎಂಬ ಸುದ್ದಿಯನ್ನು ಹಂಚಿಕೊಳ್ಳಲು ತಂಡ ಪತ್ರಕರ್ತರನ್ನು ಕರೆದಿತ್ತು. ನಾಯಕ ಶ್ರೀನಗರ ಕಿಟ್ಟಿ ಉದ್ದಕ್ಕೆ ಗಡ್ಡಬಿಟ್ಟುಕೊಂಡು ತಲೆಗೆ ಸ್ಕಾರ್ಫ್‌ ಕಟ್ಟಿದ್ದರು.

ನಾಯಕಿ ಕಾವ್ಯಾ ಶೆಟ್ಟಿ ಕಪ್ಪು–ಬಿಳುಪು ಚೂಡಿದಾರದಲ್ಲಿ ಸೀದಾ ಸಾದಾ ಆಗಿದ್ದರು. ಅವರ ಮಧ್ಯ ಮಿನುಗುತ್ತಿದ್ದವರು ಸೂರಜ್‌ ಗೌಡ ಮತ್ತು ಏಕ್ತಾ ರಾಥೋಡ್‌. ತಮಿಳಿನ ‘ಮೆಟ್ರೊ’ ಸಿನಿಮಾವನ್ನು ಬೆಂಗಳೂರಿನ ಪರಿಸರಕ್ಕೆ ಒಗ್ಗಿಸಿ ‘ಸಿಲಿಕಾನ್‌ ಸಿಟಿ’ಯಾಗಿಸಿದ್ದಾರೆ ಮುರಳಿ ಗುರಪ್ಪ.

ADVERTISEMENT

‘ಮೂಲ ಸಿನಿಮಾದ ಕಥೆಯ ಎಳೆಯನ್ನಷ್ಟೇ ಇಟ್ಟುಕೊಂಡು ಅದಕ್ಕೆ ಕುಟುಂಬ ಕಥನ, ರೋಮಾನ್ಸ್‌ಅನ್ನು ಸೇರಿಸಿ ಹೊಸದೇ ಅನುಭವ ಕೊಡುವ ರೀತಿಯಲ್ಲಿ ಸಿನಿಮಾ ಕಟ್ಟಿದ್ದೇವೆ’ ಎಂದರು ನಿರ್ದೇಶಕರು.‘ಎಲ್ಲ ಮಧ್ಯಮ ವರ್ಗದ ಕುಟುಂಬಕ್ಕೆ ಕನೆಕ್ಟ್‌ ಆಗುತ್ತದೆ’ ಎಂಬ ವಿಶ್ವಾಸ ಅವರದು.

ಸೂರಜ್‌ ಗೌಡ ಕೂಡ ‘ನನಗೆ ಸ್ವಲ್ಪವೂ ನರ್ವಸ್‌ನೆಸ್‌ ಇಲ್ಲ. ಈ ಸಿನಿಮಾ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸ ಇದೆ’ ಎಂದರು. ಕಾವ್ಯಾ ಶೆಟ್ಟಿ ಈ ಚಿತ್ರದಲ್ಲಿ ಮಧ್ಯಮವರ್ಗದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.

‘ಈ ಹುಡುಗಿ, ಅವಳು ಪ್ರೀತಿಸುವ ಹುಡುಗ, ಅವರ ಕುಟುಂಬದ ಸುತ್ತವೇ ಸಿನಿಮಾ ಬೆಳೆಯುತ್ತ ಹೋಗುತ್ತದೆ’ ಎಂದು ತಮ್ಮ ಪಾತ್ರದ ಬಗ್ಗೆ ವಿವರಿಸಿದರು ಕಾವ್ಯಾ. ಏಕ್ತಾ ರಾಥೋಡ್‌ ಅವರು ಈ ಚಿತ್ರದಲ್ಲಿ ಸಣ್ಣ, ಆದರೆ ತುಂಬ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.

180ರಿಂದ 200 ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ತಂಡ ಸಿದ್ಧತೆ ನಡೆಸಿದೆ. ಆನ್‌ಲೈನ್‌ ಮಾಧ್ಯಮದಲ್ಲಿ ಒಳ್ಳೆಯ ಸ್ಪಂದನ ದೊರೆತಿರುವುದೂ ತಂಡದ ವಿಶ್ವಾಸ ಹೆಚ್ಚಿಸಿದೆ.

ಕೊನೆಯಲ್ಲಿ ಮಾತಿಗಿಳಿದ ಶ್ರೀನಗರ ಕಿಟ್ಟಿ, ‘ಸಿಲಿಕಾನ್ ಸಿಟಿ’ ನಾವು ಅಂದುಕೊಂಡಂತೆಯೇ ಚೆನ್ನಾಗಿ ಬಂದಿದೆ. ಶೇ 40ಕ್ಕಿಂತಲೂ ಹೆಚ್ಚಿನ ಭಾಗ ರಾತ್ರಿಯಲ್ಲಿ ಚಿತ್ರೀಕರಿಸಿದ್ದೇವೆ. ಲಭ್ಯ ಬೆಳಕಿನಲ್ಲಿ ಈ ದೃಶ್ಯಗಳನ್ನು ಅದ್ಭುತವಾಗಿ ಚಿತ್ರೀಕರಿಸಿದ್ದಾರೆ ಛಾಯಾಗ್ರಾಹಕ ಶ್ರೀನಿವಾಸ್‌ ರಾಮಯ್ಯ.

ನಾವೂ ಈ ಕಥೆಯ ಭಾಗವೇ ಎಂಬ ಭಾವವನ್ನು ಹುಟ್ಟಿಸುವ ಸಿನಿಮಾ ಇದು’ ಎಂದು ವಿವರಿಸಿದರು. ನಟನೆಯ ಜತೆಗೆ ಧನಬೆಂಬಲವನ್ನೂ ಶ್ರೀನಗರ ಕಿಟ್ಟಿ ಈ ಚಿತ್ರಕ್ಕೆ ನೀಡಿದ್ದಾರೆ. ಅನೂಪ್ ಸೀಳಿನ್‌ ಮತ್ತು ಜೋಹನ್‌ ಅವರ ಸಂಗೀತ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.