ADVERTISEMENT

ಸೂಫಿ ಚೆಲುವಿನ ಸಂಗೀತ ಸಂಜೆ

ಸುರೇಖಾ ಹೆಗಡೆ
Published 30 ಮಾರ್ಚ್ 2018, 19:30 IST
Last Updated 30 ಮಾರ್ಚ್ 2018, 19:30 IST
ತಂಡದ ಸದಸ್ಯರೊಂದಿಗೆ ಬಿಂದು ಮಾಲಿನಿ
ತಂಡದ ಸದಸ್ಯರೊಂದಿಗೆ ಬಿಂದು ಮಾಲಿನಿ   

ರಸವತ್ತಾದ ನಿರೂಪಣೆಯಲ್ಲಿ ಓಡುವ ಕಥೆ, ಮಾತಿನ ಮಧ್ಯೆ ಕಿವಿಗಿಂಪು ನೀಡುವ ಗಾಯನ, ಢೋಲಕ್‌. ಉರ್ದು ಭಾಷೆಯಲ್ಲಿ ನಡೆಯುವ ಈ ಕಥಾ ಪ್ರಸಂಗಕ್ಕೆ ಸಾಥ್‌ ನೀಡುವುದು ಸೂಫಿ ಹಾಗೂ ಖವ್ವಾಲಿ ಹಾಡುಗಳು.

‘ದಾಸ್ತಾನ್‌ ಎ ಆವಾರಗಿ’ ಹಾಗೂ ‘ಖುಶ್ರು ಕೆ ರಂಗ್‌’ ಹೆಸರಿನಲ್ಲಿ ನಡೆಯುವ ಈ ವಿಭಿನ್ನ ಕಾರ್ಯಕ್ರಮ ಎರಡು ವರ್ಷಗಳ ಹಿಂದೆ ನಗರದಲ್ಲಿ ಮೊದಲ ಬಾರಿಗೆ ನಡೆದಾಗ ಹುಬ್ಬೇರಿಸಿದವರೇ ಹೆಚ್ಚಿನವರು.

ವಿವಿಧ ಕಥೆಗಳನ್ನು ವಿಶೇಷ ಶೈಲಿಯಲ್ಲಿ ಅಂಕಿತ್‌ ಛಡ್ಡಾ ವಿವರಿಸುತ್ತಿದ್ದರೆ ಪ್ರೇಕ್ಷಕ ವರ್ಗ ಬೆರಗಾಗಿ ಕೇಳಿತ್ತು. ಹಾಡಿನ ಮೋಡಿಯಲ್ಲಿ ಮಿಂದೆದ್ದು ಹೊಸಲೋಕ ಪ್ರವೇಶಿಸಿದ ಅನುಭವ ಪುಳಕ ಎಲ್ಲರಿಗೂ.

ADVERTISEMENT

ಕಥೆಗಳನ್ನು ವಿಶಿಷ್ಟ ರೀತಿಯಲ್ಲಿ ಜನರಿಗೆ ದಾಟಿಸುವ ಈ ಕಲೆ ಮೊಘಲರ ಕಾಲದಲ್ಲಿ ಹೆಚ್ಚು ಪ್ರಚಲಿತದಲ್ಲಿತ್ತು. ಚಕ್ರವರ್ತಿಗಳಿಗೆ ಮನರಂಜನೆ ನೀಡುವ ವಿಶೇಷ ಕಲಾಪ್ರಕಾರವಾಗಿದ್ದ ಇದು ಕ್ರಮೇಣ ಅವಸಾನದ ದಾರಿ ಹಿಡಿದಿತ್ತು. ಕಳೆದೆರಡು ದಶಕಗಳಿಂದ ಮತ್ತೆ ಅಸ್ಮಿತೆ ಕಂಡುಕೊಳ್ಳುತ್ತಿರುವ ಈ ವಿಶೇಷ ಕಲೆಯನ್ನು ನಗರಕ್ಕೆ ತಂದವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದೆ ಬಿಂದು ಮಾಲಿನಿ.

‘ಮುಂಬೈನಲ್ಲಿ ನಡೆಯುವ ಕಬೀರ್‌ ಉತ್ಸವದಲ್ಲಿ ನಾನು ಪಾಲ್ಗೊಂಡಿದ್ದೆ. ಈ ಕಲೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದ ಅಂಕಿತ್‌ ಛಡ್ಡಾ ಪರಿಚಯ ಆಗಿದ್ದು ಇದೇ ಉತ್ಸವದಲ್ಲಿ. ಕಥೆಯನ್ನು ಹೇಳುವ ರೀತಿ, ಕಥೆಯೊಂದಿಗೆ ಥಳುಕು ಹಾಕಿಕೊಳ್ಳುವ ಹಾಡುಗಳು ವಿಶೇಷ ಎನಿಸಿತ್ತು. ಅಲ್ಲದೆ ಅಂಕಿತ್‌, ಸೂಫಿ ಸಂಗೀತಗಾರ ಅಮೀರ್‌ ಖುಸ್ರು ಬಗೆಗೆ ಹೆಚ್ಚಿನ ಅಧ್ಯಯನ ಮಾಡುತ್ತಿದ್ದರು. ಆಗ ಕಥೆ ಹಾಗೂ ಸಂಗೀತವನ್ನು ಜೋಡಿಸುವ ವಿಶೇಷ ಕಾರ್ಯಕ್ರಮ ಮಾಡುವ ಕಲ್ಪನೆ ಮೂಡಿತು’ ಎಂದು ವಿವರಿಸುತ್ತಾರೆ ಬಿಂದು ಮಾಲಿನಿ.

ಅಂಕಿತ್‌ ಛಡ್ಡಾ ಹಾಗೂ ಬಿಂದು ಮಾಲಿನಿ ಅವರ ಈ ಯೋಚನೆಗೆ ಕಬೀರ್‌ ಉತ್ಸವದಲ್ಲಿಯೇ ಪರಿಚಯವಾದ ಇನ್ನಿಬ್ಬರು ಗೆಳೆಯರು ಸಾಥ್‌ ನೀಡಿದರು.

ಢೋಲಕ್‌ ನುಡಿಸುವ ಅಜಯ್‌ ಟಿಪಾನ್ಯಾ ಇಂದೋರ್‌ನವರು. ಗಾಯನ ಹಾಗೂ ಬ್ಯಾಂಜೊದಲ್ಲಿ ಸಹಕರಿಸುವವರು ವೇದಾಂತ್‌ ಭಾರದ್ವಾಜ್‌. ಅಂಕಿತ್ ಅವರನ್ನು ಬಿಟ್ಟರೆ ಉಳಿದ ಯಾರಿಗೂ ಉರ್ದು ಬರುವುದಿಲ್ಲ. ಈ ಕಲೆಯ ಬಗೆಗೂ ಅರಿವಿರಲಿಲ್ಲ. ಆದರೆ ಎಲ್ಲರಿಗೂ ಈ ಕಲೆಯ ಸೊಗಡನ್ನು, ಉರ್ದು ಅಕ್ಷರಗಳ ಉಚ್ಛಾರದ ವಿಧಾನವನ್ನು ಕಲಿಸಿಕೊಟ್ಟಿದ್ದು ಅಂಕಿತ್‌ ಅವರೇ. ಸ್ಕೈಪ್‌ನಲ್ಲಿ ಮೊದಲ ಪಾಠವಾಯಿತು. ‌

ಕಥೆ ಹೇಳುವ ‘ದಾಸ್ತಾನ ಎ ಆವಾರಗಿ’ಗೆ ಸಂಬಂಧಿಸಿದ ಅನೇಕ ರೆಕಾರ್ಡಿಂಗ್ಸ್‌ಗಳನ್ನು ಅಂಕಿತ್‌ ಕೇಳುವಂತೆ ಸಲಹೆ ನೀಡಿದರು. ನಂತರ ಮುಂಬೈ, ಕೋಲ್ಕತ್ತಗಳಲ್ಲಿ ಅಭ್ಯಾಸ ಮಾಡಿದರು. ಈಗಲೂ ಕಾರ್ಯಕ್ರಮ ಎಲ್ಲಿದೆಯೋ ಅಲ್ಲಿ ಒಂದು ದಿನ ಮುಂಚೆ ಹೋಗಿ ನಾಲ್ಕೂ ಜನ ಅಭ್ಯಾಸ ಮಾಡುತ್ತಾರೆ. ಇದುವರೆಗೆ ದೇಶದಾದ್ಯಂತ 30ಕ್ಕೂ ಹೆಚ್ಚು ಕಾರ್ಯಕ್ರಮವನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ.

‘ನಾನು ಮೂಲತಃ ಹಿಂದೂಸ್ತಾನಿ ಗಾಯಕಿಯಾದರೂ ಅಮೀರ್‌ ಖುಸ್ರೊ ಬಗೆಗಿನ ಹೆಚ್ಚಿನ ಮಾಹಿತಿ ತಿಳಿದಿದ್ದು ಅಂಕಿತ್‌ ಅವರು ಅಧ್ಯಯನ ಕೈಗೊಂಡ ನಂತರವೇ. ಇಲ್ಲಿ ಭಾವಕ್ಕಿಂತ ಹೆಚ್ಚಾಗಿ ಭಕ್ತಿಯೇ ಪ್ರಧಾನ ಪಾತ್ರ ವಹಿಸುತ್ತದೆ. ಅಧ್ಯಾತ್ಮ, ಸಂಗೀತ, ಸೂಫಿ ಕಲೆಯ ಬಗೆಗೆ ಆಸಕ್ತಿ ಇರುವವರಿಗೆಲ್ಲಾ ನಮ್ಮ ಪ್ರಯತ್ನ ಖಂಡಿತ ಇಷ್ಟವಾಗುತ್ತದೆ. ವಿಶೇಷ ಎಂದರೆ ಇಲ್ಲಿ ಚಲನೆ ಇಲ್ಲ. ಕಲಾವಿದ ಕುಳಿತೇ ಕಥೆಯನ್ನು ನಿರೂಪಣೆ ಮಾಡಿಕೊಂಡು ಹೋಗುತ್ತಾನೆ. ಕಥೆಯನ್ನು ಎಷ್ಟು ಸೊಗಸಾಗಿ ನಿರೂಪಿಸುತ್ತಾನೆ ಎನ್ನುವುದರ ಮೇಲೆ ಕಾರ್ಯಕ್ರಮದ ಯಶಸ್ಸು ಅಡಗಿರುತ್ತದೆ’ ಎನ್ನುವ ಬಿಂದು ಅವರಲ್ಲಿ ಜನರ ಪ್ರತಿಕ್ರಿಯೆ ಎಂದಿಗೂ ತಮ್ಮ ಪ್ರಯತ್ನವನ್ನು ಹುರಿದುಂಬಿಸಿದೆ ಎನ್ನುವ ತೃಪ್ತ ಭಾವವನ್ನು ತೋರಿಸುತ್ತದೆ.
***
‘ದಾಸ್ತಾನ್‌ ಎ ಆವಾರಗಿ’ ಹಾಗೂ ‘ಖುಶ್ರು ಕೆ ರಂಗ್‌’: ಕಲಾವಿದರು– ಅಂಕಿತ್‌ ಛಡ್ಡಾ, ಬಿಂದು ಮಾಲಿನಿ, ವೇಂದಾತ್‌, ಅಜಯ್‌ ತ್ರಿಪಾಠಿ. ಆಯೋಜನೆ, ಸ್ಥಳ– ಶೂನ್ಯ ಸೆಂಟರ್‌ ಫಾರ್‌ ಆರ್ಟ್‌ ಅಂಡ್‌ ಸೊಮಾಟಿಕ್‌ ಪ್ರಾಕ್ಟೀಸಸ್‌, 4ನೇ ಮಹಡಿ, ನಂ 37, ಬ್ರಹ್ಮಾನಂದಕೋರ್ಟ್‌, ಲಾಲ್‌ಬಾಗ್‌ ಮುಖ್ಯರಸ್ತೆ. ಸಂಜೆ 7.30.

ಟಿಕೆಟ್‌ಗಾಗಿ– www.eventshigh.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.