ADVERTISEMENT

ಸೂಫಿ ಸಂಗೀತ ಧ್ಯಾನದಲ್ಲಿ...

ಪ್ರಜಾವಾಣಿ ವಿಶೇಷ
Published 25 ಜೂನ್ 2013, 19:59 IST
Last Updated 25 ಜೂನ್ 2013, 19:59 IST

ಏರು ದನಿಯಲ್ಲಿ, ಧಾಟಿ ಬದಲಿಸುತ್ತಾ, ಕಿವಿಗಿಂಪು ನೀಡುತ್ತವೆ ಸೂಫಿ ಹಾಡುಗಳು. ಹಿಂಬದಿಗೆ ಸರಿಸಿದ ಕಾಲಿನ ಮೇಲೆ ಕುಳಿತು, ಕೈ ಕೈ ಬಡಿಯುತ್ತಾ, ಆಗೊಮ್ಮೆ ಈಗೊಮ್ಮೆ ಕೈ ಎತ್ತರಿಸುತ್ತಾ ಗಾಯಕ ಸೂಫಿ  ಶೈಲಿಯಲ್ಲಿ ಹಾಡಲು ಕುಳಿತರೆಂದರೆ ಕಣ್ಣೆವೆಯಿಕ್ಕದೆ ನೋಡುವಷ್ಟು ಆಸಕ್ತಿ ಮೂಡುತ್ತದೆ.

ಪಾಕಿಸ್ತಾನ ಹಾಗೂ ಭಾರತದಲ್ಲಿ ಪ್ರಸಿದ್ಧವಾದ ಖವ್ವಾಲಿ ಹಾಡುಗಳು ಹಾಗೆ ನೋಡಿದರೆ ಸೂಫಿ ಶೈಲಿಯವು. ಇತ್ತೀಚೆಗಂತೂ ಸೂಫಿ ಹಾಡುಗಳು ಹಿಂದಿ ಸಿನಿಮಾಗಳಲ್ಲಿ ಜನಪ್ರಿಯಗೊಳ್ಳುತ್ತಿವೆ. ನಾಯಕಿಯನ್ನು ಖುಷಿ ಪಡಿಸಲೆಂದು ಉದ್ದದ ಕುರ್ತಾ, ಅಗಲದ ಪ್ಯಾಂಟ್, ತಲೆಗೊಂದು ರುಮಾಲು ತೊಟ್ಟು ನಾಯಕ ಹಾಡಲು ಕುಳಿತನೆಂದರೆ ನಾಯಕಿ ಪ್ರೀತಿಯಲ್ಲಿ ಬೀಳುವುದು ಪಕ್ಕಾ!

ಜನರನ್ನು ಬೇಗನೆ ತಲುಪುವ ಪ್ರಸಿದ್ಧ ಮಾಧ್ಯಮ ಸಿನಿಮಾದಲ್ಲಿ ಸೂಫಿ ಹಾಡುಗಳಿಗೆ ಪ್ರಾಧಾನ್ಯ ದೊರೆತ ಬಗ್ಗೆ ಸೂಫಿ ಹಾಡುಗಾರ್ತಿ ಝೀಲಾ ಖಾನ್‌ಗೆ ತುಂಬಾ ಖುಷಿಯಾಗಿದೆಯಂತೆ. ಈಕೆ ಸೂಫಿ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು ಗಳಿಸಿರುವುದಷ್ಟೇ ಅಲ್ಲ, ಸೂಫಿ ಹಾಡುಗಳನ್ನು ಹಾಡುತ್ತಿರುವ ಏಳನೇ ತಲೆಮಾರಿನ ಗಾಯಕಿ ಎಂಬ ಹೆಗ್ಗಳಿಕೆಯೂ ಇವರದ್ದು. ಹೀಗಿದ್ದರೂ ಕುಟುಂಬದಲ್ಲಿ ಸೂಫಿ ಹಾಡಿಗೆ ಅಂಟಿಕೊಂಡವರು ಇವರೊಬ್ಬರೇ ಆಗಿದ್ದು, ಗಾಯನ ಅವರಿಗೆ ಸಂತಸ ನೀಡಿದೆಯಂತೆ.

`ಸಿತಾರ ವಾದನದಲ್ಲಿ ಪ್ರಸಿದ್ಧಿ ಪಡೆದ ಉಸ್ತಾದ್ ವಿಲಾಯತ್ ಖಾನ್ ಅವರನ್ನು ತಂದೆಯಾಗಿ ಪಡೆದದ್ದು ನನ್ನ ಭಾಗ್ಯ. ನನ್ನ ಈಗಿನ ಸಾಧನೆ ಹಾಗೂ ಗುರುತಿಸಿಕೊಳ್ಳುವಿಕೆಯಲ್ಲಿ ಅಪ್ಪನ ಪಾತ್ರ ತುಂಬಾ ದೊಡ್ಡದು. ಅವರು ಕಲಿಸಿದ್ದು ಅಪಾರ. ಇದರಿಂದಲೇ ಇಂದು ನಾನು ಕಲಾವಿದೆಯಾಗಿ ಈ ಮಟ್ಟಕ್ಕೆ ಬೆಳೆದಿದ್ದೇನೆ'- ಹೀಗೆ ಅಪ್ಪನೊಂದಿಗೆ ಕಳೆದ ದಿನಗಳನ್ನು ನೆನೆಸಿಕೊಳ್ಳುವ ಝಿಲಾ ಕಂಗಳಲ್ಲಿ ಹೊಳಪು ಕಾಣುತ್ತಿತ್ತು.

`ಅಪ್ಪನ ಸಂಗೀತ ಯಾವತ್ತೂ ಉಳಿಯುವಂಥದ್ದು. ಅವರು ನೀಡಿದ ತರಬೇತಿ ನನ್ನ ಧ್ವನಿಯನ್ನು ಸುಧಾರಿಸಿದ್ದಷ್ಟೇ ಅಲ್ಲದೆ ಅವರ ಮಾರ್ಗದರ್ಶನ ಮಾನವೀಯತೆಯನ್ನೂ ಕಲಿಸಿದೆ. ಅವರಿಂದ ಕಲಿತ ದಾರಿ ಅಷ್ಟು ಸುಲಭದ್ದಾಗಿರಲಿಲ್ಲ. ದಿನಕ್ಕೆ14-16 ಗಂಟೆಗಳ ಕಾಲ ನನ್ನ ಸಂಗೀತಾಭ್ಯಾಸ ನಡೆಯುತ್ತಿತ್ತು. ತೀರಾ ಚಿಕ್ಕವಳಿದ್ದಾಗಿನಿಂದಲೇ ಸಂಗೀತ ಹೇಳಿಕೊಡುತ್ತಿದ್ದರು. ಶಾಸ್ತ್ರೋಕ್ತವಾಗಿ ಕಲಿಕೆ ಆರಂಭವಾಗಿದ್ದು 12ನೇ ವಯಸ್ಸಿನಲ್ಲಿ' ಎಂದು ನಡೆದ ದಾರಿಯನ್ನು ನೆನಪಿಸಿಕೊಂಡರು ಝೀಲಾ.

`ಜನ ಮೆಚ್ಚುವ ಕಂಠ ನನಗಿದೆ. ಶ್ರೇಷ್ಠ ಗುರು ಕೂಡ ಸಿಕ್ಕಿದ್ದು ಅದೃಷ್ಟ. ನನಗೆ ಸಂಗೀತದಲ್ಲಿ ಅತಿಯಾದ ಆಸಕ್ತಿ ಇದ್ದಿದ್ದರಿಂದ ದಿನದ ಹೆಚ್ಚಿನ ಸಮಯ ಅಭ್ಯಾಸದಲ್ಲೇ ಕಳೆಯುವುದು ಬೇಸರ ಎನಿಸಲೇ ಇಲ್ಲ. ಅದೂ ಅಲ್ಲದೆ ಇತ್ತೀಚೆಗೆ ಬಾಲಿವುಡ್‌ನಲ್ಲಿ ಸೂಫಿ ಹಾಡುಗಳು ಕಾಣಿಸಿಕೊಳ್ಳುತ್ತಿರುವುದು ಸಿನಿಮಾಗಳು ಕಳೆಕಟ್ಟುವಂತೆ ಮಾಡಿದೆ' ಎನ್ನುತ್ತಾರೆ.

ಯಾವುದೇ ಸಿನಿಮಾಗೆ ಸೂಫಿ ಹಾಡುಗಳನ್ನು ಸೇರಿಸಿಕೊಳ್ಳಬೇಕು ಎಂದರೆ ಸಮುದ್ರದಲ್ಲಿ ಈಜಾಡಿದಂತೆ. ಯಾಕೆಂದರೆ ಸೂಫಿ ಹಾಡಿನ ಹರವು ಅಷ್ಟು ವಿಶಾಲವಾದದ್ದು. ಸಿನಿಮಾಗಳಲ್ಲಿ ಈ ಹಾಡುಗಳು ವ್ಯಾಪಕವಾಗುತ್ತಿರುವುದು ಬಹಳ ಖುಷಿ ನೀಡಿದೆ. ವಿವಿಧ ಶೈಲಿಯ ಸಂಗೀತ ಎಂದು ವಿಂಗಡಿಸುವ ಬದಲು ಉತ್ತಮ ಗುಣಮಟ್ಟದ ಶೈಲಿಯನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಇಂದಿನ ಯುವಕರು ಈ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡುತ್ತಿದ್ದಾರೆ. ಅದನ್ನು ಸರಿಯಾದ ಧಾಟಿಯಲ್ಲಿ ತಿಳಿಸಿಕೊಡುವ ಅವಶ್ಯಕತೆ ಇದೆ. ಎಲ್ಲಾ ಶೈಲಿಯನ್ನು ಮೂಲ ಧಾಟಿಯಲ್ಲಿಯೇ ಸಂರಕ್ಷಿಸದೇ ಇದ್ದರೆ ಮುಂದಿನ ಪೀಳಿಗೆಯವರಿಗೆ ಇವುಗಳನ್ನು ತಿಳಿಸಿಕೊಡುವುದು ಕಠಿಣವಾಗುತ್ತದೆ' ಎಂದು ತಮ್ಮ ಕಾಳಜಿಯನ್ನು ವ್ಯಕ್ತಪಡಿಸುತ್ತಾರೆ ಅವರು.

ಬೆಂಗಳೂರಿಗರು ಬೇರೆ ಬೇರೆ ರೀತಿಯ ಸಂಗೀತಗಳನ್ನು ಇಷ್ಟಪಡುತ್ತಾರೆ ಎಂಬುದನ್ನು ಗ್ರಹಿಸಿರುವ ಇವರಿಗೆ ನಗರದಲ್ಲಿ ಸಂಗೀತ ಕಛೇರಿ ನಡೆಸುವುದೆಂದರೆ ಎಲ್ಲಿಲ್ಲದ ಖುಷಿ ನೀಡುತ್ತದಂತೆ. ಜನರು ತೋರುವ ಆಸಕ್ತಿ, ತಲ್ಲೆನತೆ ಪ್ರದರ್ಶನ ನೀಡಲು ಅಪಾರವಾದ ಪ್ರೋತ್ಸಾಹ ನೀಡುತ್ತದೆ ಎಂಬ ಖುಷಿ ಅವರದ್ದು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.