ADVERTISEMENT

ಸೇಫ್ ಸರ್ಫಿಂಗ್

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 19:30 IST
Last Updated 14 ಸೆಪ್ಟೆಂಬರ್ 2011, 19:30 IST

ಮಕ್ಕಳು ಹಾಗೂ ದೊಡ್ಡವರು ಮೋಜು ಮತ್ತು ಮಾಹಿತಿಗಾಗಿ ಇಂಟರ್‌ನೆಟ್‌ನಲ್ಲಿ ಸರ್ಫಿಂಗ್ ಮಾಡುವುದು ಸಾಮಾನ್ಯ. ಆದರೆ ಆನ್‌ಲೈನ್ ಸುರಕ್ಷತೆ ಬಹುತೇಕ ಜನರಿಗೆ ಅರಿವಿಲ್ಲ. ಶಾಲಾ ಮಕ್ಕಳು ಇಂಟರ್‌ನೆಟ್‌ಗೆ ಅಡಿಯಾಳಾಗಿರುವ ಈ ಕಾಲದಲ್ಲಿ ಪೋಷಕರಿಗಂತೂ ಸಿಕ್ಕಾಪಟ್ಟೆ ಆತಂಕ.

ಇದರ ನಿವಾರಣೆ ಮತ್ತು ಇಂಟರ್‌ನೆಟ್ ಜಾಲಾಡುವಾಗ ಅನುಸರಿಸಬೇಕಾದ ಮುಂಜಾಗ್ರತೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲು ಇಂಟರ್‌ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ (ಐಎಎಂಎಐ) ಸಹಯೋಗದಲ್ಲಿ ಒಪೆರಾ ಸಾಫ್ಟ್‌ವೇರ್ ಈಚೆಗೆ ಸೇಫ್ ಸರ್ಫಿಂಗ್ ಕಾರ್ಯಾಗಾರ ಹಮ್ಮಿಕೊಂಡಿತ್ತು.

ಯುವಜನತೆಗೆ ಸುರಕ್ಷಿತ ಆನ್‌ಲೈನ್ ಅನುಭವ ನೀಡುವ ಸಲುವಾಗಿ ಅಹಮದಾಬಾದ್, ಪುಣೆ, ಮೈಸೂರು ಮತ್ತು ಹೈದರಾಬಾದ್, ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಸುಮಾರು 25,000 ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಯಿತು.

ಐಎಎಂಎಐನ ಸಲಹೆಗಾರ ರಕ್ಷಿತ್ ಟಂಡನ್ ಬೆಂಗಳೂರಿನಲ್ಲಿ ಸೆಂಟ್ ಜಾನ್ ಹೈಸ್ಕೂಲ್, ಗುಡ್‌ವಿಲ್ ಗರ್ಲ್ಸ್ ಹೈಸ್ಕೂಲ್, ಶ್ರೀವಾಣಿ ಎಜುಕೇಷನ್ ಸೆಂಟರ್ ಸೇರಿದಂತೆ ವಿವಿಧ ಶಾಲೆಗಳಿಗೆ ಭೇಟಿ ನೀಡಿ 6ನೇ ತರಗತಿಯಿಂದ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಇಂಟರ್‌ನೆಟ್‌ನ ಸುರಕ್ಷಿತ ಬಳಕೆ ಕುರಿತು ತಿಳಿಸಿಕೊಟ್ಟರು. 

ಒಪೇರ ಸಾಫ್ಟ್‌ವೇರ್‌ನ ಶ್ವೇತಾಂಕ್ ದೀಕ್ಷಿತ್ ಮಾತನಾಡಿ, ಇಂಟರ್‌ನೆಟ್ ಹಲವಾರು ಅದ್ಭುತ ಅವಕಾಶಗಳನ್ನು ನೀಡಿದರೂ ಮಕ್ಕಳು, ಯುವಜನತೆ ಮತ್ತು ವಯಸ್ಕರಿಗೆ ಅದರ ಅಪಾಯ, ಸುರಕ್ಷತೆ ಮತ್ತು ಖಾಸಗಿತನದ ಬಗ್ಗೆ ಅರಿವು ಇರಬೇಕು. ಆದ್ದರಿಂದ ಎಲ್ಲ ವಯಸ್ಸಿನವರಿಗೆ ಸೇಫ್ ಸರ್ಫಿಂಗ್ ಕುರಿತು ಅರಿವು ಮೂಡಿಸುವುದು ಅವಶ್ಯಕ. ಅದಕ್ಕಾಗೇ ಈ ಕಸರತ್ತು ಎಂದರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.