ADVERTISEMENT

ಸೇರಿಗೆ ಸವ್ವಾಸೇರು ಎಂದ ಸನಾ

ಸುರೇಖಾ ಹೆಗಡೆ
Published 10 ಏಪ್ರಿಲ್ 2018, 19:30 IST
Last Updated 10 ಏಪ್ರಿಲ್ 2018, 19:30 IST
ಸನಾ ಶ್ರೀ
ಸನಾ ಶ್ರೀ   

ಮಧ್ಯಮ ವರ್ಗದ ಕ್ರಿಶ್ಚಿಯನ್‌ ಕುಟುಂಬದಲ್ಲಿ ನಾನು ಹುಟ್ಟಿ ಬೆಳೆದಿದ್ದು. ನಾಲ್ವರು ಮಕ್ಕಳಲ್ಲಿ ನಾನು ಮೂರನೇ ಮಗು. ಐದನೇ ತರಗತಿಗೆ ಬರುವ ವೇಳೆಗೆ ನನಗೆ ಹೆಣ್ಣು ಮಕ್ಕಳಂತೆ ಜಡೆ ಹಾಕಿಕೊಳ್ಳಬೇಕು, ಅವರಂತೆ ಇರಬೇಕು ಅನಿಸಲಾರಂಭಿಸಿತ್ತು. ನನ್ನ ವರ್ತನೆ ಕಂಡು ಗೆಳೆಯರು ರೇಗಿಸುತ್ತಿದ್ದರು.

ಇದೇ ವಿಷಯವನ್ನು ಅಮ್ಮನ ಬಳಿ ನಿವೇದಿಸಿದರೆ ‘ನೀನು ಗಟ್ಟಿಯಾಗಿ ಮಾತನಾಡುವುದಕ್ಕೆ ಕಲಿ. ಹುಡುಗರಂತೆ ಬಿರುಸಾಗಿ ನಡೆ, ಯಾರಿಗೂ ಯಾವ ವಿಷಯಕ್ಕೂ ಹೆದರ ಬೇಡ’ ಎಂದು ಹೇಳಿಕೊಡುತ್ತಿದ್ದರು. ಇದೇ ಸಂದಿಗ್ಧಗಳಲ್ಲಿ ನಾನು ಹತ್ತನೇ ತರಗತಿವರೆಗೂ ಓದಿದೆ. ತುಂಬಾ ಚೂಟಿ, ಒಳ್ಳೆಯ ಅಂಕಗಳನ್ನೇ ಪಡೆದೆ. ಪಿಯುಸಿಯಲ್ಲಿ ವಿಜ್ಞಾನ ಓದಿದೆ. ಅಲ್ಲೂ ಸಾಕಷ್ಟು ಅವಮಾನ ಅನುಭವಿಸಿದೆ. ವಿದ್ಯಾರ್ಥಿಗಳು ನನ್ನ ಬಳಿ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದರು. ಪ್ರಾಂಶುಪಾಲರಿಗೆ ದೂರು ನೀಡಿದರೆ ‘ನೀನು ಹುಡುಗ, ಹುಡುಗಿಯಲ್ಲ. ನಿನ್ನ ಬಳಿ ಯಾರು ಕೆಟ್ಟದಾಗಿ ನಡೆದುಕೊಳ್ಳುತ್ತಾರೆ. ಸುಮ್ಮನೆ ಓದಿನ ಬಗೆಗೆ ಗಮನ ಕೊಡು’ ಎಂದು ನನ್ನನ್ನೇ ಬೈದು ಹೊರಗೆ ಕಳುಹಿಸಿದರು.

ಪಿಯುಸಿ ಮುಗಿಸಿ ಯುನೈಟೆಡ್‌ ಮಿಶನ್‌ ಡಿಗ್ರಿ ಕಾಲೇಜಿನಲ್ಲಿ ಬಿಬಿಎಂ ಅಭ್ಯಾಸಕ್ಕಾಗಿ ಸೇರಿದೆ. ಅಲ್ಲಿ ನನ್ನ ಮೇಲಿನ ದೌರ್ಜನ್ಯ ದುಪ್ಪಟ್ಟಾಯಿತು. ಹೀಗಾಗಿ ನಿಧಾನವಾಗಿ ತರಗತಿಗೆ ಬಂಕ್‌ ಮಾಡಿ ಕಬ್ಬನ್‌ ಪಾರ್ಕ್‌ಗೆ ಬಂದು ಕಾಲ ಕಳೆಯುತ್ತಿದ್ದೆ. ಅದು ಅಪ್ಪನಿಗೆ ಗೊತ್ತಾಗಿ ಚೆನ್ನಾಗಿ ಹೊಡೆದರು. ಆರು ತಿಂಗಳು ಗೃಹ ಬಂಧನದಲ್ಲಿದ್ದೆ. ನಿಮ್ಹಾನ್ಸ್‌, ದೇವಸ್ಥಾನಗಳಿಗೆ ನನ್ನನ್ನು ಕರೆದುಕೊಂಡು ಅಲೆದರು. ಹುಚ್ಚು ಹಿಡಿದಿದೆ, ಹೆಣ್ಣು ದೆವ್ವ ಮೈಮೇಲೆ ಬಂದಿದೆ ಎಂದೆಲ್ಲಾ ವಿಧವಿಧವಾಗಿ ನನಗೆ ಚಿಕಿತ್ಸೆ ನೀಡಿಸಿದರು. ಕೊನೆಗೊಂದು ದಿನ ನಾನು ಮನೆಬಿಟ್ಟು ಓಡಿ ಹೋಗಿಬಿಟ್ಟೆ.

ADVERTISEMENT

ಎಲ್ಲಿ ಹೋಗುವುದು ಏನು ಮಾಡುವುದು ತಿಳಿಯಲಿಲ್ಲ. ರಾತ್ರಿ ರಸ್ತೆ ಬದಿಯಲ್ಲಿ ಭಯಭೀತಳಾಗಿ ಕುಳಿತಿದ್ದ ನನಗೆ ಹುಡುಗನೊಬ್ಬ ಆಸೆ ತೋರಿಸಿ ಸಂಭೋಗಿಸಿದ. ಹಣ ಕೊಟ್ಟ. ಅಂದು ಹೊಟ್ಟೆ ತುಂಬಾ ಊಟ ಮಾಡಿದೆ. ಅಲ್ಲಿಂದ ಹಣ ಸಂಪಾದನೆ ದಾರಿ ಅದೇ ಆಯಿತು. ನನ್ನಂಥ ಅನೇಕರ ಪರಿಚಯ ಆಯಿತು. ಧೈರ್ಯವಂತೆ, ಚೆನ್ನಾಗಿ ಓದಿಕೊಂಡಿದ್ದೀಯಾ ಎಂದು ಮತ್ತೆ ಓದುವಂತೆ ಅವರೆಲ್ಲಾ ಮಾರ್ಗದರ್ಶನ ಮಾಡಿದರು. ಮೂರು ವರ್ಷ ಪ್ರವೇಶ ನೀಡಿ ಎಂದು ನಗರದ ನಾನಾ ಕಾಲೇಜು ಸುತ್ತಿದೆ. ನಾನು ಲೈಂಗಿಕ ಅಲ್ಪಸಂಖ್ಯಾತೆ ಎಂದು ಗೊತ್ತಾದ ಮೇಲೆ, ಮಾತಾಡುವುದಿರಲಿ ನಿಲ್ಲಲೂ ನನಗೆ ಅವಕಾಶ ನೀಡದೆ ಹೊರದಬ್ಬಿ ಬಿಡುತ್ತಿದ್ದರು. 2014ರಲ್ಲಿ ಸುಪ್ರೀಂಕೋರ್ಟ್‌ ಅಲ್ಪಸಂಖ್ಯಾತರನ್ನು ತೃತೀಯ ಲಿಂಗಿಗಳು ಎಂದು ತೀರ್ಪು ನೀಡಿತು. ಅದನ್ನಿಟ್ಟುಕೊಂಡು ಕಾಲೇಜಿನಲ್ಲಿ ಪ್ರವೇಶಾತಿ ಕೇಳಿದೆ. ಕೊನೆಗೂ ಸೇಂಟ್‌ ಜೋಸೆಫ್‌ ಸಂಜೆ ಕಾಲೇಜಿನಲ್ಲಿ ಪ್ರವೇಶ ಪಡೆದೆ. ಈಗ ಪದವಿ ಅಂತಿಮ ವರ್ಷದಲ್ಲಿದ್ದೇನೆ.

ಈ ಸಮಾಜದಲ್ಲಿ ನಾನು ಉತ್ತಮವಾಗಿ ಬದುಕಲು ನನ್ನ ಮೊದಲ ಹೆಜ್ಜೆ ಶಿಕ್ಷಣದ ಆಯ್ಕೆ. ನೊಂದವರ ಕೂಗಿಗೆ ದನಿಯಾಗುವ ಪತ್ರಿಕೋದ್ಯಮವನ್ನು ಓದುತ್ತಿದ್ದೇನೆ. ಲೈಂಗಿಕ ಅಲ್ಪಸಂಖ್ಯಾತರ ಸಮಸ್ಯೆ, ಅವರ ಸಾಧನೆ, ಜಾಗೃತಿ ಮೂಡಿಸುವಂಥ ಲೇಖನಗಳನ್ನು ಬೇರೆ ಬೇರೆ ಪತ್ರಿಕೆಗಳಿಗೆ ಬರೆದಿದ್ದೇನೆ. ನಾನು ಓದುತ್ತಿರುವುದನ್ನು ನೋಡಿ ಮತ್ತೆ ಮೂವರು ಲೈಂಗಿಕ ಅಲ್ಪಸಂಖ್ಯಾತರು ಕಾಲೇಜು ಸೇರಿಕೊಂಡಿದ್ದಾರೆ. ಇನ್ನೂ ಹತ್ತು ಜನ ಕಾಲೇಜು ಸೇರುವ ಮನಸು ಮಾಡಿದ್ದಾರೆ. ಇದು ನನ್ನೆಲ್ಲಾ ನೋವನ್ನು ಮರೆಸಿ ಖುಷಿ ನೀಡಿದೆ.

ಈಗ ಓದಿನೆಡೆಗೆ ಪೂರ್ಣ ಮನಸಿಟ್ಟಿದ್ದೇನೆ. ಜೊತೆಗೆ ‘ಒಂದೆಡೆ ಸ್ವಾತಂತ್ರ’ ಎನ್ನುವ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮಂಥ ಅನೇಕರಿಗೆ ಶಿಕ್ಷಣ ಪಡೆಯುವ ಅವಶ್ಯಕತೆ ಎಷ್ಟಿದೆ ಎನ್ನುವ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತೇನೆ. ಲೈಂಗಿಕ ಅಲ್ಪಸಂಖ್ಯಾತೆಯರೇ ಸೇರಿಕೊಂಡು ಕಟ್ಟಿಕೊಂಡಿರುವ ‘ಅದ್ವೈತ’ ಎನ್ನುವ ರಂಗತಂಡದಲ್ಲಿಯೂ ಸಕ್ರಿಯಳಾಗಿದ್ದೇನೆ.

ರಿಯಲ್‌ ಟಿ.ವಿ ವಾಹಿನಿಯಲ್ಲಿ ಫ್ರೀಲಾನ್ಸ್‌ ವರದಿಗಾರ್ತಿಯಾಗಿಯೂ ಕೆಲಸ ಮಾಡಿದ್ದೇನೆ. ಸ್ವ ಪ್ರಯತ್ನದಿಂದ ವೆಬ್‌ಸೈಟ್‌ ಡಿಸೈನ್‌ ಮಾಡುವಷ್ಟು ಜ್ಞಾನ ಸಂಪಾದಿಸಿಕೊಂಡಿದ್ದೇನೆ. ವೇದಿಕೆಯ ಮೇಲೆ ನಿಂತು ಭಯವಿಲ್ಲದೆ ಮಾತನಾಡಬಲ್ಲೆ. ಮುಂದೆ ಒಳ್ಳೆಯ ಕೆಲಸವನ್ನೂ ಗಿಟ್ಟಿಸಿಕೊಳ್ಳುತ್ತೇನೆ ಎನ್ನುವ ನಂಬಿಕೆ ಇದೆ.

ನಮ್ಮನ್ನು ಕೆಟ್ಟ ದೃಷ್ಟಿಯಿಂದ ನೋಡುವವರೇ ಅನೇಕರು. ಆದರೆ ಶಿಕ್ಷಣವೊಂದೆ ನಮ್ಮ ಬದುಕನ್ನು ಬದಲಾಯಿಸಬಲ್ಲ ಪ್ರಬಲ ಮಾಧ್ಯಮ. ಎಲ್ಲರಂತೆ ನಾವೂ ಮನುಷ್ಯರೇ. ಲೈಂಗಿಕ ಅಲ್ಪಸಂಖ್ಯಾತರು ಎಂದು ತಿಳಿದ ಮೇಲೆ ಸಮಾಜವಷ್ಟೇ ಅಲ್ಲ, ಮನೆಯಲ್ಲಿಯೂ ಹೊರಹಾಕುವ ಅನೇಕರಿದ್ದಾರೆ. ಹಾಗೆ ಮಾಡದೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ. ಶಿಕ್ಷಣ ಖಂಡಿತವಾಗಿಯೂ ಒಳ್ಳೆಯ ದಾರಿಯಲ್ಲಿ ನಡೆಸುತ್ತದೆ. ಇತರರಂತೆ ನಾವೂ ಉತ್ತಮ ಪ್ರಜೆ ಆಗಬಹುದು. 

ಮತ್ತೆ ನನ್ನ ಕುಟುಂಬ ಸಿಕ್ಕಿತು
ನಾನು ಕಾಲೇಜು ಸೇರಿದಾಗ ಕಾಲೇಜಿನಲ್ಲಿಯಷ್ಟೇ ಅಲ್ಲ, ಇಡೀ ಕರ್ನಾಟಕದಲ್ಲಿ ಲೈಂಗಿಕ ಅಲ್ಪಸಂಖ್ಯಾತ ವಿದ್ಯಾರ್ಥಿನಿ ಇದ್ದುದು ನಾನೊಬ್ಬಳೇ. ಕಾಲೇಜು ಸೇರುತ್ತಿದ್ದಂತೆ ನನ್ನ ಜೊತೆಯಿದ್ದ ಸ್ನೇಹಿತರು ನಾನು ತೃತೀಯ ಲಿಂಗಿ ಎಂದು ತಿಳಿಯುತ್ತಿದ್ದಂತೆ ಮಾತನಾಡುವುದನ್ನು ಬಿಟ್ಟರು. ಯಾರೂ ನನ್ನನ್ನು ಅಕ್ಕಪಕ್ಕ ಕೂರಲು ಬಿಡುತ್ತಿರಲಿಲ್ಲ.

ಈ ಎಲ್ಲಾ ತಾರತಮ್ಯಗಳನ್ನು ಮೆಟ್ಟಿನಿಂತು ಒಳ್ಳೆ ಅಂಕಗಳನ್ನು ಪಡೆದೆ. ತರಗತಿಯ ನಾಯಕತ್ವ ಗಳಿಸಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿ ಪ್ರಮುಖ ಸ್ಥಾನ ಗಳಿಸಿದೆ. ನೃತ್ಯ ಎಂದರೆ ನನಗೆ ವಿಪರೀತ ವ್ಯಾಮೋಹ. ಟಿ.ವಿ ನೋಡುತ್ತಾ ಕಲಿತ ಹೆಜ್ಜೆಗಳು ಕಾಲೇಜು ಬದುಕಿನಲ್ಲಿ ಕೈ ಹಿಡಿಯಿತು. ಈಗ ಎಲ್ಲರೂ ಸ್ನೇಹಿತರಾಗಿದ್ದಾರೆ. ನಾನೂ ಎಲ್ಲರಂತೆಯೇ ಆಗಿದ್ದೇನೆ. ಅಪ್ಪ ಅಮ್ಮನೂ ನನ್ನನ್ನು ಒಪ್ಪಿಕೊಂಡರು. ಸಮಾಜದಲ್ಲಿ ಎಲ್ಲರಂತೆ ನಾನೂ ಒಬ್ಬಳು ಎನ್ನುವ ಹೋರಾಟದ ದಾರಿಯಲ್ಲಿ ಇಂಚಿಂಚಾಗಿ ಮುಂದಡಿಯಿಡುತ್ತಿದ್ದೇನೆ.

**

ಗಂಡಾಗಿದ್ದ ನಾನು ಹೆಣ್ಣು ಎಂಬ ಭಾವ ಬಂದಮೇಲೆ ನನ್ನ ಮುಂದಿದ್ದ ಅವಕಾಶವೆಂದರೆ ಲೈಂಗಿಕ ವೃತ್ತಿ ಅಥವಾ ಭಿಕ್ಷಾಟನೆ ಮಾಡುವುದು. ಹೊಟ್ಟೆಯ ಹಸಿವು ನೀಗಲು ಲೈಂಗಿಕ ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತಿತ್ತು. ಆದರೆ ಕೊನೆಗೂ ನಾನು ಅದೆಲ್ಲವನ್ನೂ ಮೆಟ್ಟಿನಿಂತೆ.

– ಸನಾಶ್ರೀ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.