ADVERTISEMENT

ಸೌಜನ್ಯದ ಪಾಠ ಕಲಿಸಿದ ರಾಜ್

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 19:30 IST
Last Updated 20 ಏಪ್ರಿಲ್ 2018, 19:30 IST
ಡಾ.ರಮಣ ರಾವ್ ಅವರಿಂದ ತಪಾಸಣೆಗೆ ಒಳಗಾಗಿದ್ದ ರಾಜ್‌
ಡಾ.ರಮಣ ರಾವ್ ಅವರಿಂದ ತಪಾಸಣೆಗೆ ಒಳಗಾಗಿದ್ದ ರಾಜ್‌   

ವರನಟ ಡಾ.ರಾಜ್‌ಕುಮಾರ್. ಈ ಹೆಸರಿನ ಹಿಂದೆ ಸಾಕಷ್ಟು ಸವಿಸವಿ ನೆನಪುಗಳಿವೆ, ಬದುಕಿನ ಪಾಠಗಳಿವೆ, ಕಲಿತು ಕಲಿಯಬೇಕೆನ್ನುವ ಹಂಬಲವಿದೆ. ರಾಜ್ ಅಂದರೆ ಸಾಕು ನನ್ನ ಕಣ್ಣ ಎದುರಿಗೆ ಪ್ರಜ್ವಲಿಸುವ ಬೆಳಕೊಂದು ಮೂಡುತ್ತದೆ. ಮೂವತ್ತು ವರ್ಷಗಳ ಅವರೊಂದಿಗಿನ ಒಡನಾಟ, ನನ್ನ ಬದುಕಿನ ಮಹತ್ವಪೂರ್ಣ ಘಟ್ಟ. ಅವರ ಮೊದಲ ಭೇಟಿಯೇ ನನ್ನ ಬದುಕಿನ ದಿಕ್ಕನ್ನೇ ಬದಲಾಯಿಸಿತು.

ಒಮ್ಮೆ ನಾನಿದ್ದ ಕ್ಲಿನಿಕ್ ತುಂಬಾ ಜನ. ಒಳಗಡೆ ರೋಗಿಯೊಬ್ಬರನ್ನು ತಪಾಸಣೆ ಮಾಡುತ್ತಿದ್ದೆ. ಇದಕ್ಕಿದ್ದಂತೆ ಹೊರಗೆ ಸಂಭ್ರಮದ ಸದ್ದಾಯಿತು. ‘ನಿಮ್ಮನ್ನು ನೋಡಿ ತುಂಬಾ ಖುಷಿ ಆಯ್ತು ಸರ್. ನನ್ನ ಜನ್ಮ ಸಾರ್ಥಕವಾಯ್ತು’ ಎಂದು ರೋಗಿಗಳು ಕೂಗುತ್ತಿದ್ದುದು ನನ್ನ ಕಿವಿಗೆ ಬಿತ್ತು. ತಪಾಸಣೆ ಮಾಡುತ್ತಿದ್ದ ನಾನು ಯಾರೋ ಬಂದಿದ್ದಾರೆ ಎನ್ನುವ ಕಾತರದಿಂದ ಸಹಾಯಕನನ್ನು ಕರೆದು ಆ ಬಗ್ಗೆ ವಿಚಾರಿಸಿದೆ. ಅಣ್ಣಾವ್ರು ಬಂದ ವಿಷಯ ತಿಳಿದು ಆಶ್ಚರ್ಯಗೊಂಡೆ.

ರೋಗಿಯನ್ನು ಪರಿಶೀಲಿಸಿ ಹೊರಗೆ ಬರುವವರೆಗೆ ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ಅಕ್ಕಪಕ್ಕ ಕೂತಿದ್ದರು. ಅವರನ್ನು ನೋಡಿದಾಕ್ಷಣ ನನ್ನೊಳಗೆ ಆನಂದ ಭಾಷ್ಪ ಚಿಮ್ಮಿ ಬಂತು. ಕನ್ನಡದ ವರನಟ, ಬಂಗಾರದ ಮನುಷ್ಯ, ಭಕ್ತ ಕುಂಬಾರದ ರಾಜ್ ಕುಮಾರ್ ಇವರೇನಾ ಎಂಬ ಪ್ರಶ್ನೆಗಳು ನನ್ನಲ್ಲಿ ಮೂಡಿದವು. ನನ್ನನ್ನು ಅವರಿಗೆ ಯಾವ ರೀತಿ ಪರಿಚಯಿಸಿಕೊಳ್ಳಲಿ ಎಂಬ ಪ್ರಶ್ನೆಗಳು ಮೂಡಿದವು. ಆ ಪ್ರಶ್ನೆಗಳನ್ನೇ ಇಟ್ಟುಕೊಂಡು ಅವರ ಬಳಿಗೆ ಹೋಗಿ ನಿಂತೆ.

ADVERTISEMENT

ಕಣ್ಣು ಅದೆನೋ ಸೌಖ್ಯತೆಯನ್ನು ಅನುಭವಿಸುತ್ತಿತ್ತು. ಮನಸ್ಸು ಅಹ್ಲಾದಕರವಾಗಿತ್ತು. ಎದುರಿಗೆ ಇದ್ದ ವ್ಯಕ್ತಿಯ ಪೂರ್ಣತೆಯಿಂದ ನನ್ನೊಳಗಿನ ಮಾತು ಹೊರಗೆ ಬಾರದೆ ಮೂಕನಾಗಿದ್ದೆ. ರಾಜ್ ನನ್ನನ್ನು ನೋಡಿ ಹಸುಗೂಸಿನಂತೆ ನಕ್ಕರು. ನಾನು ‘ನಮಸ್ಕಾರ ಸರ್’ ಎಂದೆ. ಅದಕ್ಕೆ ಪ್ರತಿಯಾಗಿ ಅವರು ‘ನಮಸ್ಕಾರ’ ಅಂದ್ರು. ಕ್ಷಣಾರ್ಧದಲ್ಲಿಯೇ ಅವರು ನನ್ನ ಕಾಲಿಗೆರಗಿದರು. ನಾನು ಆತಂಕಗೊಂಡು ‘ಸರ್ ಏನ್ ಮಾಡ್ತಾ ಇದ್ದೀರಾ’ ಎಂದು ಹೇಳಿ ಹಿಂದೆ ಸರಿದೆ.

‘ಸರ್, ನಾನು ನಿಮಗಿಂತ ಚಿಕ್ಕವ. ನೀವು ನನಗಿಂತ ದೊಡ್ಡವರು. ಹೀಗೆ ಮಾಡಬಾರದು’ ಎಂದೆ. ಅದಕ್ಕೆ ಅವರು ‘ಡಾಕ್ಟ್ರೇ ನಮ್ಮ ಕಡೆ ಒಂದು ಮಾತು ಹೇಳ್ತಾರೆ. ವೈದ್ಯೋ ನಾರಾಯಣೋ ಹರಿಃ ಅಂತ. ನಾನು ನಿಮ್ಮ ಕಾಲಿಗೆ ಬೀಳಲಿಲ್ಲ. ನಿಮ್ಮ ಒಳಗೆ ಕೂತಿದ್ದಾಳಲ್ಲ ಆ ಸರಸ್ವತಿ ತಾಯಿ, ಅವಳ ಕಾಲಿಗೆ ಬಿದ್ದೆ’ ಎಂದರು. ಪ್ರತಿಯಾಗಿ ಏನು ಮಾತನಾಡಬೇಕು ಎಂದು ದಿಕ್ಕುತೋಚದೆ ನಿಂತು ಬಿಟ್ಟೆ. ಅಷ್ಟು ಸೌಜನ್ಯ ಪೂರಿತ ವ್ಯಕ್ತಿ ಅವರು. ಬಳಿಕ ಅವರ ತಪಾಸಣೆ ಮಾಡಿ ಕಳುಹಿಸಿಕೊಟ್ಟೆ.

ಆ ಕ್ಷಣದಿಂದ ನನ್ನ ಬದುಕಿನ ತಪಾಸಣೆಯು ಪ್ರಾರಂಭವಾಯಿತು. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ದೇವರನ್ನು ಕಾಣುವ, ಗೌರವಿಸುವ ಅವರ ಗುಣ ನನ್ನನ್ನು ಕಾಡುತ್ತಿತ್ತು. ಅದು ನನ್ನ ಮನ ಮುಟ್ಟಿತ್ತು. ಅಂದಿನಿಂದ ಇನ್ನಷ್ಟು ಸರಳವಾಗಿ, ಸೌಜನ್ಯದಿಂದ ಬದುಕು ಸಾಗಿಸುವುದನ್ನು ರೂಢಿಸಿಕೊಂಡೆ. ವೈದ್ಯ ಪದವಿಗಾಗಿ ಓದು ಪುಸ್ತಕಗಳಿಂದ ಕಲಿಯದ ಪಾಠವನ್ನು ರಾಜ್ ಅವರ ನಡತೆಯಿಂದ ಕಲಿತೆ.

ಅವರ ಸರಳತನ, ಮನುಷ್ಯನಾಗಿ ನಿಲ್ಲುವ ಅವರ ಪರಿಶುದ್ಧ ನೀತಿ ನನ್ನ ಬದುಕಿನ ಮೇಲೆ ಗಾಢವಾದ ಪರಿಣಾಮ ಬೀರಿದೆ. ನನ್ನ ಒಳಗಿದ್ದ ಅಹಂಕಾರಗಳ ಪೊರೆ ಅಂದು ಕಳಚಿತು. ಅವರ ಜೊತೆ ಮೂವತ್ತು ವರ್ಷಗಳ ಒಡನಾಟ ಇತ್ತು. ಅವರೊಂದಿಗೆ ಕಳೆದ ಒಂದೊಂದು ಕ್ಷಣವೂ ನನಗೆ ಅತ್ಯಮೂಲ್ಯ.

ನಿರೂಪಣೆ: ಸಿ.ಎಸ್.ನಿರ್ವಾಣ ಸಿದ್ದಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.