ADVERTISEMENT

ಸ್ಯಾಂಕಿ ಕಣ್ಣೀರು

ಪ್ರವೀಣ ಕುಲಕರ್ಣಿ
Published 15 ಏಪ್ರಿಲ್ 2013, 19:59 IST
Last Updated 15 ಏಪ್ರಿಲ್ 2013, 19:59 IST

ಪ್ರಿಯ ಬಂಧುಗಳೇ, ನಾವು ಉದ್ಯಾನನಗರಿಯಲ್ಲೇ ಇದ್ದರೂ ನಿತ್ಯ ಸಂಧಿಸುತ್ತಿದ್ದರೂ ಒಬ್ಬರಿಗೊಬ್ಬರು ಮುಖಕೊಟ್ಟು ಮಾತಾಡಿಲ್ಲ. ಮನಸ್ಸಿನ ಭಾವನೆಗಳನ್ನು ಹಂಚಿಕೊಂಡಿಲ್ಲ. ಪ್ರತಿದಿನ ಬೆಳಗಾದರೆ ನನ್ನ ದಂಡೆಯ ಮೇಲೆ ನೀವು ವಾಕಿಂಗ್ ಮಾಡಲು ಬಂದಾಗ ಎದೆಯ ಮಾತನ್ನು ಹೇಳಿಕೊಂಡು ಹಗುರ ಆಗಬೇಕು ಎನ್ನುವ ತುಡಿತ ಮತ್ತೆ ಮತ್ತೆ ಕಾಡಿದೆ. ಕಿವಿಯಲ್ಲಿ ಇಯರ್ ಫೋನ್ ಚುಚ್ಚಿಕೊಂಡು ಬರುವ ನಿಮ್ಮ ಜತೆ ಮಾತನಾಡುವ ನನ್ನ ಯತ್ನ ಕೈಗೂಡಿಲ್ಲ. ಆದ್ದರಿಂದಲೇ ಈ ಪತ್ರ ಬರೆಯುತ್ತಿದ್ದೇನೆ.

ನೀವು `3ಜಿ'ಗಳು. ಅಂದರೆ ಮೂರನೇ ತಲೆಮಾರಿನವರು. ನಿಮ್ಮ ದಿನಚರಿ ಆರಂಭಕ್ಕೆ ನಾನೇ ಬೇಕಾದರೂ ನನ್ನ ವಿಷಯವಾಗಿ ತಿಳಿದುಕೊಳ್ಳುವ ಪ್ರಯತ್ನವನ್ನು ನೀವು ಎಂದಿಗೂ ಮಾಡಿಲ್ಲ. ನನ್ನ ಹಿನ್ನೆಲೆಯನ್ನು ತುಸು ವಿವರಿಸಿದರೆ ನನ್ನ ಭಾವನೆಗಳು ನಿಮಗೆ ಚೆನ್ನಾಗಿ ಅರ್ಥವಾಗುತ್ತವೆ. ಮದ್ರಾಸ್ ಸ್ಯಾಪರ್ಸ್‌ ರೆಜಿಮೆಂಟಿನ ಮುಖ್ಯಸ್ಥರಾಗಿದ್ದ ಕರ್ನಲ್ ರಿಚರ್ಡ್ ಸ್ಯಾಂಕಿ ಅವರ ಪ್ರಯತ್ನದ ಫಲವಾಗಿ 1882ರಲ್ಲಿ ನಾನು ಕಣ್ಣು ತೆರೆದೆ.

ಆಗಿನ ದಿನಗಳಲ್ಲಿ ನನ್ನ ಜನನಕ್ಕೆ 5.75 ಲಕ್ಷ ರೂಪಾಯಿ ಖರ್ಚು ಆಗಿತ್ತಂತೆ. 15 ಹೆಕ್ಟೇರ್ (37.1 ಎಕರೆ) ಪ್ರದೇಶದಲ್ಲಿ ನಾನು ಬೆಳೆದು ನಿಂತಿದ್ದೇನೆ. ಸಾವಿರಾರು ಜನ ವರ್ಷಗಟ್ಟಲೆ ನನ್ನ ಸಲುವಾಗಿ ದುಡಿದಿದ್ದಾರೆ. ದಂಡಿನ ಹುಡುಗರು ಮಣ್ಣನ್ನು ಹೊತ್ತು ಏರಿಯ ಮೇಲೆ ಹಾಕಿ ಬರುತ್ತಿದ್ದರಂತೆ. ನನ್ನ ನಿರ್ಮಾಣದ ಕಥೆಗಳನ್ನು ನಂತರದ ದಿನಗಳಲ್ಲಿ ನಾನೇ ನನ್ನ ಕಿವಿಯಾರೆ ಕೇಳಿದ್ದೇನೆ. ಕೆಲಸದ ವೇಗ ಕಂಡು ಖುಷಿಯಾದ ಸ್ಯಾಂಕಿ ಸಾಹೇಬರು ಒಮ್ಮೆ ಬಾಡೂಟದ ಭೋಜನ ಕೂಟವನ್ನೂ ಏರ್ಪಡಿಸಿದ್ದರಂತೆ.

ಮಿಲ್ಲರ್ ಕೆರೆ ಮತ್ತು ಧರ್ಮಾಂಬುಧಿ ಕೆರೆಗಳ ನಡುವೆ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ನೀರಿನ ಸಂಗ್ರಹಕ್ಕಾಗಿ ನನ್ನನ್ನು ಬಳಸಿಕೊಳ್ಳಲಾಗಿತ್ತು. ಆದ್ದರಿಂದ ಕಾಡಿನಿಂದಲೇ ಆವೃತವಾಗಿದ್ದ ಕಾಡು ಮಲ್ಲೇಶ್ವರ ಪ್ರದೇಶ ನನ್ನ ಜನ್ಮಸ್ಥಳ. ಧರ್ಮಾಂಬುಧಿ ಕೆರೆ ಈಗ ಮೆಜಿಸ್ಟಿಕ್ ನಿಲ್ದಾಣವಾಗಿದೆ. ಆ ಮಾತು ಬೇರೆ. ಆಗಿನ ದಿನಗಳಲ್ಲಿ ದಂಡಿನ ಕುದುರೆಗಳು ನನ್ನ ದಡದಲ್ಲಿ ಹುಲ್ಲು ಮೇಯುತ್ತಿದ್ದವು. ಸಿಹಿಯಾದ ನೀರು ಕುಡಿದು, ವಿಹಾರ ಮಾಡುತ್ತಿದ್ದವು.

ಸರ್ಕಾರದ ಗಂಧದ ಡಿಪೊ ನನ್ನ ದಂಡೆ ಮೇಲೆ ಇದ್ದುದರಿಂದ ಜನ ನನ್ನನ್ನು ಪ್ರೀತಿಯಿಂದ ಗಂಧದ ಕೋಟೆ ಕೆರೆ ಎಂದೇ ಕರೆಯುತ್ತಿದ್ದರು. ನನಗೆ ಆ ಹೆಸರು ತುಂಬಾ ಖುಷಿ ಕೊಟ್ಟಿತ್ತು. ದಂಡಿನ ದೊರೆಗಳು ನನ್ನ ಒಡಲಲ್ಲಿ ಈಜಾಡುತ್ತಿದ್ದರು. ಅಷ್ಟೇ ಏಕೆ, ವೈಯಾಲಿಕಾವಲ್‌ನ ಕಾಳಣ್ಣ, ಶೇಷಾದ್ರಿಪುರದ ಪಾಪಣ್ಣ, ಗುಟ್ಟಹಳ್ಳಿಯ ರಂಗಣ್ಣ ಸೇರಿದಂತೆ ನೂರಾರು ಮಂದಿ ನನ್ನಲ್ಲಿ ಬಂದು ಈಜಾಡದ ದಿನಗಳೇ ಇರುತ್ತಿರಲಿಲ್ಲ. ಐವತ್ತು ವರ್ಷಗಳಾದವು, ಅವರನ್ನೆಲ್ಲ ನೋಡದೆ. ಹರಿಶ್ಚಂದ್ರ ಘಾಟ್‌ನಲ್ಲಿ ಅವರೀಗ ಚಿರನಿದ್ರೆಯಲ್ಲಿ ಇದ್ದಾರೆ. ಬಟ್ಟೆ ತೊಳೆಯಲು ಬರುತ್ತಿದ್ದ ಪಾಪಮ್ಮ, ಸೀತಮ್ಮ, ಯಂಕಮ್ಮ ಮೊದಲಾದವರ ಸುಳಿವೂ ಇಲ್ಲ.

ಮಳೆರಾಯ ಸ್ವಾತಿ ಮುತ್ತಿನಂತಹ ಹನಿ ಉದುರಿಸುತ್ತಿದ್ದ ದಿನಗಳು ಅವು. ಅಂತಹ ಪರಿಶುದ್ಧ ನೀರು ನನ್ನ ಮೈ-ಮನಗಳಲ್ಲಿ ಶಬ್ದಗಳಿಂದ ವರ್ಣಿಸಲಾಗದ ಮಾಧುರ್ಯವನ್ನು ತುಂಬಿತ್ತು. ದಿಟ್ಟಿಸಿ ನೋಡಿದರೆ ನನ್ನ ತಳ ಕಾಣುತ್ತಿತ್ತು. ಸ್ಫಟಿಕದಷ್ಟು ಪಾರದರ್ಶಕ ನೀರು ನನ್ನಲ್ಲಿತ್ತು.
ಆಗಿನ ದಿನಗಳಲ್ಲಿ ನಾನು ಊರ ಹೊರಭಾಗದಲ್ಲಿ ಇದ್ದೆ. ನಗರದಲ್ಲೂ ಬೇಕಾದಷ್ಟು ಕೆರೆಗಳು ಇದ್ದವು. ಹೀಗಾಗಿ ನನ್ನಲ್ಲಿದ್ದ ನೀರು ಅಷ್ಟಾಗಿ ಕುಡಿಯುವ ಉದ್ದೇಶಕ್ಕೆ ಬಳಕೆ ಆಗುತ್ತಿರಲಿಲ್ಲ. ಇದರಿಂದ ನನಗೇನೂ ಬೇಜಾರು ಇರಲಿಲ್ಲ. ದನ-ಕರುಗಳಿಗೆ, ದಂಡಿನ ಕುದುರೆಗಳಿಗೆ, ಗುಬ್ಬಚ್ಚಿ, ಹಕ್ಕಿ-ಪಾರಿವಾಳಗಳಿಗೆ ನಾನು ನೀರನ್ನು ಮೊಗೆದು ಕೊಡುತ್ತಿದ್ದೆ. ಇಂದಿನ ಸ್ಥಿತಿ ನೆನಪಿಸಿಕೊಂಡರೆ ಕಣ್ಣೀರು ಕೋಡಿಯಾಗಿ ಹರಿಯುತ್ತದೆ. ಹಳೆಯ ಭಾಗ್ಯವನ್ನು ನೆನಪಿಸಿಕೊಳ್ಳುವುದಷ್ಟೇ ಕಾಯಕವಾಗಿದೆ.

ಛೇ, ಹೇಳಲು ನಾಚಿಕೆ ಆಗುತ್ತದೆ. ಆದರೆ, ಹೇಳದೆ ವಿಧಿ ಇಲ್ಲ. ನೀವು ಮನೆಯಲ್ಲಿ ಮಾಡುವ ಒಂದು, ಎರಡು, ಮೂರರ ಗಲೀಜು ಎಲ್ಲವೂ ಬಂದು ನನ್ನ ಒಡಲಿನಲ್ಲಿ ಒಕ್ಕರಿಸಿಬಿಟ್ಟಿದೆ. ಚರಂಡಿಗಳು ಸೋರಿಕೆಯಾಗಿ ಕೊಳಚೆ ನನ್ನನ್ನು ಹುಡುಕಿಕೊಂಡು ಓಡೋಡಿ ಬರುತ್ತಿದೆ.

ದುರ್ಗಂಧವನ್ನು ತಡೆಯಲು ಎಷ್ಟು ಹೊತ್ತು ಮೂಗು ಮುಚ್ಚಿಕೊಂಡು ಕೂರುವುದು?
ಗಣೇಶನ ಹಬ್ಬ ಬಂದರೆ ನಿಮಗೆಲ್ಲ ಖುಷಿ. ನೀವು ನನಗೆ `ನಾಸ್ತಿಕ' ಎನ್ನುವ ಪಟ್ಟ ಕಟ್ಟಿದರೂ ಅಡ್ಡಿಯಿಲ್ಲ; ಗಣೇಶನ ಹಬ್ಬ ಯಾಕಾದರೂ ಬಂತು ಎನ್ನುವ ವೇದನೆ ನನ್ನನ್ನು ಆವರಿಸುತ್ತದೆ. ಗಣೇಶನ ಮೂರ್ತಿಗಳನ್ನು ತಂದು ನನ್ನ ಒಡಲಲ್ಲಿ ಹಾಕುತ್ತೀರಲ್ಲ, ಅದರ ಪರಿಣಾಮ ಏನೆಂಬುದು ನಿಮಗೆ ಗೊತ್ತೆ? ಈಗೀಗ ಗಣೇಶನನ್ನು ಡುಮಕಿ ಹೊಡೆಸಲು ನನ್ನ ದಂಡೆಯ ಮೇಲೆ ಒಂದು ಕಲ್ಯಾಣಿ ಮಾಡಲಾಗಿದೆ. ಕೊಳೆಯಾದ ಬಟ್ಟೆ, ವಿಷಯುಕ್ತ ನೀರು, ಗಬ್ಬುನಾರುವ ಘನತ್ಯಾಜ್ಯವೆಲ್ಲ ನನ್ನ ಒಡಲು ಸೇರುವಂತೆ ಮಾಡುತ್ತೀರಲ್ಲ, ಯಾವ ತಪ್ಪಿಗೆ ನನಗೆ ಈ ಶಿಕ್ಷೆ?

ಘನಘೋರ ಪಾಪ ಕಾರ್ಯ ಇದು ಅನಿಸುವುದಿಲ್ಲವೆ? ನನ್ನ ಆಳೆತ್ತರ ಹಣ ಸುರಿದರೂ ನಾನು ಮೊದಲಿನಂತೆ ಆಗುವುದು ಸಾಧ್ಯವೆ? ಈ ದುರ್ಗತಿ ನೆನಪು ಮಾಡಿಕೊಂಡರೆ ಮನಸ್ಸು ವಿಲವಿಲ ಒದ್ದಾಡುತ್ತದೆ. ನೀವೆಲ್ಲ ಕುಡಿಯುವ ನೀರಿನಲ್ಲಿ `...' ಮಾಡುವ ಮಂದಿ ಎನ್ನುವ ನೇರ ಆರೋಪವನ್ನೇ ನಾನು ಮಾಡುತ್ತೇನೆ.

ನನ್ನ ಒಂದು ದಂಡೆಯ ಮೇಲೆ ಮಲ್ಲೇಶ್ವರದಿಂದ ಸದಾಶಿವನಗರದ ಕಡೆಗೆ ಹೋಗುವ ರಸ್ತೆ ಇದೆ. ಕಣ್ಣು ಕುಕ್ಕಿಸುವಂತೆ ಬೆಳಕು ಕಾರುತ್ತಾ ರಾತ್ರಿ ಇಡೀ ವಾಹನಗಳು ಓಡಾಡುತ್ತವೆ. ರಾತ್ರಿಯಲ್ಲಿ ಕತ್ತಲಿನ ಪ್ರಶಾಂತ ವಾತಾವರಣ ಬಯಸಿದ್ದ ನನಗೆ ವಾಹನಗಳ ಭರಾಟೆ ಕಿರಿಕಿರಿ ಉಂಟುಮಾಡಿದೆ. ನೆಮ್ಮದಿಯನ್ನು ಅಳಿಸಿಹಾಕಿದೆ. ರಾತ್ರಿಯೂ ಪುರುಸೊತ್ತು ಇಲ್ಲದಂತೆ ಓಡಾಡುವ ಅದೆಂತಹ ಜೀವನಶೈಲಿ ನಿಮ್ಮದು. ಇಷ್ಟೊಂದು ಧಾವಂತಕ್ಕೆ ಬಿದ್ದವರು ಏನಾದರೂ ವಿಪತ್ತು ತಂದುಕೊಳ್ಳುತ್ತಾರೆ ಎನ್ನುವ ವೇದನೆ ಕೂಡ ಕಾಡುತ್ತದೆ.

ನನ್ನ ದಂಡೆಯಲ್ಲಿ ಇರುವ ಮರಗಳಲ್ಲಿ ಇನ್ನೂ ಅಳಿಲುಗಳಿವೆ. ಪಕ್ಷಿಗಳಿವೆ. ಗಿಳಿಗಳ ಹಿಂಡಿದೆ. ಮೊದಮೊದಲು ಆ ಬೆಳಕಿನ ಮಳೆ, ವಾಹನದ ಗುಡುಗಿನ ಶಬ್ದಕ್ಕೆ ನಿದ್ದೆಯಿಲ್ಲದೆ ಒದ್ದಾಡುತ್ತಿದ್ದವು. ಆಗ ಅವುಗಳು ಸಹ ಪರಿಸ್ಥಿತಿಗೆ ಹೊಂದಾಣಿಕೆ ಮಾಡಿಕೊಂಡಿವೆ. ಮುಂಜಾನೆ ವಾಕಿಂಗ್, ಇಲ್ಲವೆ ಸಂಜೆ ವಿಹಾರಕ್ಕೆ ಬರುವವರ ತರಹೇವಾರಿ ನಡವಳಿಕೆಗಳು ನನಗೆ ಕಚಗುಳಿ ಇಟ್ಟಿವೆ.

ಕಿವಿಯಲ್ಲಿ ಫೋನ್ ಇಟ್ಟುಕೊಂಡು ಒಬ್ಬರೇ ನಗುತ್ತಾ ಹೋಗುವುದು, ಹಿಂಬದಿಯಲ್ಲಿ ಓಡುವುದು, ದಢೂತಿಗಳು ಬಿರುಸಾಗಿ ನಡೆಯುತ್ತಾ ಹೊಟ್ಟೆಯನ್ನು ಕುಣಿಸುವುದು, ಚರ್ಮದ ಜತೆ ಒರಗಿಕೊಳ್ಳುವಂತಹ ಬಟ್ಟೆ ಹಾಕಿಕೊಂಡು ಬಂದವರು ಸರ್ಕಸ್ ಮಾಡುವುದು.. ಒಮ್ಮಮ್ಮೆ ನನ್ನ ದಂಡೆ ಏನು ಹುಚ್ಚಾಸ್ಪತ್ರೆಯೇ ಅನಿಸುತ್ತದೆ. ಹೋಟೆಲ್‌ನಲ್ಲಿ ಅಷ್ಟು ತಿನ್ನುವ ಅಗತ್ಯವಾದರೂ ಏನು, ಅದನ್ನು ಇಲ್ಲಿ ಕರಗಿಸಲು ಒದ್ದಾಡುವುದಾದರೂ ಏಕೆ?

ಹುಡುಗ-ಹುಡುಗಿಯರ ಪ್ರೇಮ ಸಲ್ಲಾಪದ ಪಿಸುಮಾತುಗಳು ಕಿವಿಯ ಮೇಲೆ ಬಿದ್ದಾಗ ಕೆ.ಎಸ್. ನರಸಿಂಹಸ್ವಾಮಿ ಅವರ ಪದ್ಯವನ್ನು ಮೆಲುಕು ಹಾಕುವ ಮನಸ್ಸಾಗುತ್ತದೆ. ಅದೇ ಸಲ್ಲದ ಸಲ್ಲಾಪದಲ್ಲಿ ತೊಡಗಿದಾಗ `ಇದೇನ ಸಂಸ್ಕೃತಿ, ಇದೇನ ಸಭ್ಯತೆ' ಎಂದುಕೊಂಡು ಕಣ್ಣು-ಕಿವಿ ಮುಚ್ಚಿಕೊಳ್ಳುತ್ತೇನೆ.

ಅಮ್ಮಗಳಿರಾ, ಅಕ್ಕಗಳಿರಾ, ನಿಮಗೆ ಆತ್ಮಹತ್ಯೆ ಮಾಡಿಕೊಳ್ಳುವ ಹುಚ್ಚೇಕೆ? ಅದಕ್ಕೆ ನನ್ನ ಒಡಲೇ ಬೇಕಾದ್ದಾದರೂ ಏಕೆ? ನಿಮ್ಮನ್ನು ದ್ವೇಷ ಮಾಡುವವರ ಬಗೆಗೆ ತಲೆ ಕೆಡಿಸಿಕೊಳ್ಳದೆ ಪ್ರೀತಿಸುವವರನ್ನು ನೆನಪು ಮಾಡಿಕೊಳ್ಳಬೇಕು. ಧೈರ್ಯದಿಂದ ಬದುಕು ಸಾಧಿಸಬೇಕು. ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರ ಅಲ್ಲ, ಪಲಾಯನ ವಾದ. ಮೋಡಗಳು ಕರಗಿ ಹೋಗುವಂತೆ ಇಂದಲ್ಲ ನಾಳೆ ಸಮಸ್ಯೆಗಳು ಕರಗಿ ಹೋಗುತ್ತವೆ. ಒತ್ತುವರಿ, ಚರಂಡಿ ನೀರಿನ ಹರಿವು ಸೇರಿದಂತೆ ಏನೆಲ್ಲ ಅತ್ಯಾಚಾರಗಳು ನಡೆದರೂ ನಾನು ಸಹಿಸಿಕೊಂಡು ಬದುಕಿಲ್ಲವೆ?

ನೀವು ಓಡಾಡಲು ನಮ್ಮ ದಂಡೆಯನ್ನು ಅಂದವಾಗಿ ಅಲಂಕರಿಸಲಾಗಿದೆ. ಆದರೆ, ನಮ್ಮ ಅಸ್ಮಿತೆಯಾದ ನೀರಿನ ಕಡೆಗೆ ನಿಮಗೆ ಲಕ್ಷ್ಯವೇ ಇಲ್ಲವಾಗಿದೆ. ಮಾನವರಾದ ನಿಮಗೆ ಮಾನವೀಯತೆ ಹೇಳಿಕೊಡಬೇಕೆ? ಹೃದಯದ ಮಾತು ಕೇಳಿಸಿಕೊಳ್ಳದಷ್ಟು ಮನಸ್ಸು ಜಡವಾಗಿದೆಯೇ? ನಮ್ಮ ಒಬ್ಬೊಬ್ಬರ ಸಾವೂ ನಿಮ್ಮ ಆಯುಸ್ಸಿನಲ್ಲಿ ವರ್ಷಗಟ್ಟಲೆ ಇಳಿಕೆ ಆಗುತ್ತದೆ ಎನ್ನುವುದನ್ನು ನೆನಪಿಟ್ಟರೆ ಚೆನ್ನ. ನಮ್ಮ ಸಂಕುಲದ ಉಳಿದ ಕೆರೆಗಳ ಸ್ಥಿತಿ ನನ್ನ ಹೃದಯಕ್ಕೆ ಅರ್ಥವಾಗದೆ ಉಳಿದಿಲ್ಲ.

ನಮಗೆ ಮಾಡಿದ ಅನ್ಯಾಯದಿಂದ ನಿಮ್ಮ ಮೇಲಿನ ಪ್ರೀತಿಯೇನೂ ಕಡಿಮೆ ಆಗಿಲ್ಲ. ನಮ್ಮ ಹೃದಯದ ಸಾಕ್ಷಿಯಾಗಿ ಹೇಳುತ್ತೇವೆ, ನಿಮ್ಮ ಬಗೆಗೆ ನಮಗೆ ಕಳಕಳಿ ಇದೆ. ಆ ಕಳಕಳಿಯೇ ನನ್ನನ್ನು ಈ ಪತ್ರ ಬರೆಯುವಂತೆ ಪ್ರೇರೇಪಿಸಿದೆ.
ನಿಮ್ಮ ವರ್ತನೆಯಲ್ಲಿ ಬದಲಾವಣೆ ಅಪೇಕ್ಷಿಸುತ್ತಾ,

-ಗಂಧದ ಕೋಟೆ ಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT