ADVERTISEMENT

ಹಂಸಧ್ವನಿ ಸಂಗೀತೋತ್ಸವ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2011, 19:30 IST
Last Updated 26 ಅಕ್ಟೋಬರ್ 2011, 19:30 IST

ಹಂಸಧ್ವನಿ ಕ್ರಿಯೇಶನ್ಸ್ ನಾಡಿನ ಹೆಮ್ಮೆಯ ಗಾಯಕಿ ಗಾನಕಲಾಶ್ರೀ ವಿದುಷಿ ಎಂ. ಎಸ್. ಶೀಲಾ ಮತ್ತು ಅವರ ಪತಿ ಪ್ರೊ. ಬಿ.ಕೆ. ರಾಮಸ್ವಾಮಿ ಅವರ ಕಲ್ಪನೆಯ ಕೂಸು. 12 ವಸಂತಗಳನ್ನು ಪೂರೈಸುತ್ತಿದ್ದು, ಶಾಸ್ತ್ರೀಯ ಸಂಗೀತದ ಚೌಕಟ್ಟಿನಲ್ಲಿ ಹತ್ತು ಹಲವು ಸೃಜನಾತ್ಮಕ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ.

`ಕೃಷ್ಣಾನುಭವ~, `ದೇವೀಕೃತಿ ವೈಭವ~, `ನಾದಸುಧಾ ರಸ~ ಮುಂತಾದ ವಿಷಯಾಧಾರಿತ ಕಛೇರಿಗಳು ಹಂಸಧ್ವನಿಯ ವೈಶಿಷ್ಟ್ಯ. ಕರ್ನಾಟಕದ ಹರಿದಾಸ ಸಾಹಿತ್ಯದ ಶ್ರೀಮಂತಿಕೆಯನ್ನು ಶ್ರೋತೃಗಳ ಮುಂದೆ ಇಟ್ಟ `ಹರಿದಾಸ ನಮನ~ ಸರಣಿ, ವಾದ್ಯ ಸಂಗೀತಕ್ಕೆ ಮೀಸಲಿಟ್ಟ `ವಾದ್ಯ ವೈಭವ~, ಕರ್ನಾಟಕದ ವಾಗ್ಗೇಯಕಾರರ ರಚನೆಯ `ವಾಗ್ಗೇಯ ವೈಭವ~, ಮುತ್ತಯ್ಯ ಭಾಗವತರ ಚಾಮುಂಡೇಶ್ವರಿ ಅಷ್ಟೋತ್ತರ ಶತನಾಮ ಕೀರ್ತನೆಗಳ ಸಂಗ್ರಹ `ನಾದರೂಪಿಣಿ ಶ್ರೀ ಚಾಮುಂಡೇಶ್ವರಿ~ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಸಂಗೀತ ವಿದ್ಯಾರ್ಥಿಗಳಿಗಾಗಿ ವಿಶೇಷ ಕಾರ್ಯಾಗಾರ ಹಾಗೂ ಸ್ಪರ್ಧೆಗಳನ್ನು ಏರ್ಪಡಿಸುತ್ತದೆ.

12ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶುಕ್ರವಾರದಿಂದ ಮೂರು ದಿನ (ಅ. 28, 29, 30)  ಸಂಗೀತೋತ್ಸವ ಹಮ್ಮಿಕೊಂಡಿದೆ. ಧ್ವನಿಸುರಳಿ ಲೋಕಾರ್ಪಣೆ, ಯುವ ಪ್ರತಿಭೆಗಳ ಸಂಗೀತ ಕಛೇರಿ, ವಾದ್ಯ ಕಛೇರಿ, ಗೋಷ್ಠಿ ಗಾಯನ ಇತ್ಯಾದಿ ಕಾರ್ಯಕ್ರಮಗಳು ಇರುತ್ತವೆ.

ಶುಕ್ರವಾರ ಸಂಜೆ 5.30ಕ್ಕೆ ಸಂಗೀತೋತ್ಸವ ಉದ್ಘಾಟನೆ. ಡಾ. ರಾ. ಸತ್ಯನಾರಾಯಣ ಹಾಗೂ ಮೃದಂಗ ವಿದ್ವಾಂಸ ಟಿ.ಎ.ಎಸ್. ಮಣಿ ಅವರಿಗೆ ಹಂಸಧ್ವನಿ ಪುರಸ್ಕಾರ, ಇಸ್ಕಾನ್‌ನ ತಿರುದಾಸ ಮತ್ತು ಅಮೆರಿಕದ ಉಷಾಚಾರ್ ಅವರಿಗೆ ವಿಶೇಷ ಪುರಸ್ಕಾರ ಪ್ರದಾನ, ವಿದುಷಿ ಎಂ. ಎಸ್. ಶೀಲಾ ಹಾಡಿರುವ `ವಾಗ್ಗೇಯ ವೈಭವ~ ಹಾಗೂ `ಕ್ಷೇತ್ರ ದರ್ಶನ~ ಸೀಡಿ ಲೋಕಾರ್ಪಣೆ.

ಡಾ. ಆರ್. ಕೆ. ಶ್ರೀಕಂಠನ್ ಅವರಿಂದ ಗಾಯನ ಕಛೇರಿ (ಸಹಗಾಯನ: ಆರ್. ಎಸ್. ರಮಾಕಾಂತ. ಪಿಟೀಲು: ನಳಿನಾ ಮೋಹನ್. ಮೃದಂಗ: ಟಿ.ಎ.ಎಸ್. ಮಣಿ. ಘಟ: ಜಿ. ಓಂಕಾರ್). ಉಪಸ್ಥಿತಿ: ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ, ಗಾನಕಲಾಶ್ರೀ ಆನೂರು ಅನಂತಕೃಷ್ಣ ಶರ್ಮ.
ಸ್ಥಳ: ಸೇವಾ ಸದನ, 14ನೇ ಅಡ್ಡರಸ್ತೆ ಮಲ್ಲೇಶ್ವರ.

ವಿದ್ವಾಂಸರು, ಕಲಾಪೋಷಕರು
ಈ ವರ್ಷದ ಹಂಸಧ್ವನಿ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಡಾ. ರಾ. ಸತ್ಯನಾರಾಯಣ ಭಾರತೀಯ ಸಂಗೀತ ಹಾಗೂ ನೃತ್ಯಕ್ಷೇತ್ರಗಳ ಸಂಶೋಧನಾ ವಿಧಿ, ವಿಧಾನಗಳಲ್ಲಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿಯೂ ಗೌರವಕ್ಕೆ ಪಾತ್ರರಾದ ಮಹಾ ವಿದ್ವಾಂಸರು. ಅಧ್ಯಯನ, ಸಂಶೋಧನೆ, ಅಧ್ಯಾಪನ, ಪ್ರಯೋಗ, ಪ್ರಕ್ರಿಯೆಗಳಲ್ಲಿ ಸದಾ ತೊಡಗಿಸಿಕೊಂಡಿರುತ್ತಾರೆ. ಅನೇಕ ಉದ್ಗ್ರಂಥಗಳ ಕರ್ತೃ.

ಈ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಮತ್ತೊಬ್ಬ ಸಂಗೀತಗಾರ ಟಿ.ಎ.ಎಸ್. ಮಣಿ ದೇಶ, ವಿದೇಶಗಳಲ್ಲಿ ತಮ್ಮ ಲಯವಾದನ ಪ್ರಾವೀಣ್ಯದಿಂದ ಹೆಸರು ಮಾಡಿರುವ ಹಿರಿಯ ಮೃದಂಗ ವಿದ್ವಾಂಸ.
 
ಕರ್ನಾಟಕ ಕಾಲೇಜ್ ಆಫ್ ಪರ್ಕಶನ್ ಮೂಲಕ ಬೋಧಕರಾಗಿ ಹಲವು ಪ್ರತಿಭಾವಂತ ಸಂಗೀತ ವಿದ್ಯಾರ್ಥಿಗಳನ್ನು ತಯಾರು ಮಾಡಿದ್ದಾರೆ. ಪಾಶ್ಚಿಮಾತ್ಯ ಸಂಗೀತಗಾರರ ಸಹಯೋಗದಲ್ಲಿ ಹಲವು ಕಾರ್ಯಕ್ರಮ ನೀಡಿರುವುದಲ್ಲದೇ ಮೃದಂಗ ವಾದನದ ಸೂಕ್ಷ್ಮತೆ ಕುರಿತು ಪುಸ್ತಕ ಬರೆದಿದ್ದಾರೆ.

ಸಂಗೀತ ಪೋಷಕರಾಗಿರುವ ಇಸ್ಕಾನ್ ಶ್ರೀಕೃಷ್ಣ ಕಲಾಕ್ಷೇತ್ರದ ನಿರ್ದೇಶಕ ತಿರು ದಾಸ ಅವರು ಸಂಗೀತ ಕ್ಷೇತ್ರಕ್ಕೆ ಸಲ್ಲಿಸುತ್ತಿರುವ ಸೇವೆ ಅಪಾರ. ಕಲಾಕ್ಷೇತ್ರದ ಮೂಲಕ ಹೊಸ ಸಾಂಸ್ಕೃತಿಕ ಕ್ರಾಂತಿಯನ್ನೇ ಹುಟ್ಟುಹಾಕಿದ್ದು, `ಪರೋಪಕಾರಾರ್ಥಂ ಇದಂ ಶರೀರಂ~ ಎಂಬ ಧ್ಯೇಯವಾಕ್ಯದಂತೆ ಸಮಾಜಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.

ಉಷಾ ಚಾರ್ ಅನೇಕ ವರ್ಷಗಳಿಂದ ನಮ್ಮ ಶಾಸ್ತ್ರೀಯ ಸಂಗೀತದ ಕಂಪನ್ನು ದೂರದ ಅಮೆರಿಕೆಯಲ್ಲಿ ಹರಡುತ್ತಿದ್ದಾರೆ. ಗಾಯಕಿಯಾಗಿ, ಬೋಧಕಿಯಾಗಿ, ಸಂಘಟಕಿಯಾಗಿ ಹೊರನಾಡಿನಲ್ಲಿ ಶ್ರಮಿಸುತ್ತಿದ್ದಾರೆ. ಭಾರತದಿಂದ ಅಮೆರಿಕೆಗೆ ಹೋಗಿ ಕಾರ್ಯಕ್ರಮ ನೀಡುವ ಕಲಾವಿದರಿಗೆ ಅವರು ನೀಡುವ ಸಹಕಾರ ಕೃತಜ್ಞತೆಯಿಂದ ನೆನೆಸಿಕೊಳ್ಳುವ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT