ADVERTISEMENT

ಹಬ್ಬಕ್ಕೆ ಖರೀದಿ ಭರಾಟೆ

ಇ.ಎಸ್.ಸುಧೀಂದ್ರ ಪ್ರಸಾದ್
Published 24 ಅಕ್ಟೋಬರ್ 2011, 19:30 IST
Last Updated 24 ಅಕ್ಟೋಬರ್ 2011, 19:30 IST

ಬೆಲೆ ಏರಿಕೆಯ ಬಿಸಿ ಪ್ರತಿಯೊಬ್ಬರ ಬದುಕಿನ ಮೇಲೆ ಬರೆ ಹಾಕಿದೆ. ಆದರೂ ದೀಪಾವಳಿ ಎಂಬ ಸಂಭ್ರಮದ ಮುಲಾಮು ಗಾಯದ ಉರಿಯನ್ನು ಮರೆಮಾಚಿದೆ. ಹೀಗಾಗಿ ಹಬ್ಬದ ಖರೀದಿಗೆ ಒಂದಿಷ್ಟು ಕಳೆ ಬಂದಿದೆ. ಮಾರುಕಟ್ಟೆಯ್ಲ್ಲಲಂತೂ ಖರೀದಿಯ ಭರಾಟೆ. ಗ್ರಾಹಕರನ್ನು ಸೆಳೆಯಲು ದೀಪಾಲಂಕೃತ ಮಳಿಗೆಗಳು ಝಗಮಗಿಸುತ್ತಿವೆ.

ಬೇರೆ ಎಲ್ಲಾ ಹಬ್ಬಗಳಿಗೆ ಹೋಲಿಸಿದಲ್ಲಿ ದೀಪಾವಳಿಯ ಸಂಭ್ರಮ, ಸಡಗರವೇ ಬೇರೆ. ಎಲ್ಲೆಡೆ ಚೆಂಡು ಹೂವಿನ ಗಾಢ ಬಣ್ಣ, ಬಾಳೆ, ಮಾವಿನೆಲೆಯ ತೋರಣ, ಮಕ್ಕಳ ಪಟಾಕಿಯ ಮೋಜು, ದೊಡ್ಡವರಿಗೆ ಪೂಜೆ, ಮಹಿಳೆಯರ ಹೋಳಿಗೆ, ಪಾಯಸದೊಂದಿಗೆ ಹೊಸ ರುಚಿಯ ಪರಿಚಯ ಜತಗೆ ಮಕ್ಕಳ ಮೋಜಿನ ಖುಷಿ. ಹೀಗೆ ಪ್ರತಿಯೊಬ್ಬರಿಗೂ ಖುಷಿ ತರುವ ಈ ಹಬ್ಬ ಹಲವು ಹೊಸತನಕ್ಕೆ ನಾಂದಿ.

 ಹಬ್ಬದ ಈ ಸಂದರ್ಭವನ್ನೇ ಕಾಯುವ ಮಾರಾಟ ಕಂಪೆನಿಗಳು, ಹಬ್ಬಕ್ಕಾಗಿ ಹೊಸ ಹೊಸ ವಸ್ತುಗಳನ್ನು ಪರಿಚಯಿಸುವ ತಂತ್ರ ಇಂದು ನಿನ್ನೆಯದಲ್ಲ. ಆದರೆ ಕಾಲ ಬದಲಾದಂತೆ ಬೇಕೆನಿಸುವ ವಸ್ತುಗಳ ಸಂಖ್ಯೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಲೇ ಇವೆ. ಹೀಗಾಗಿ ಕಲರ್ ಟಿವಿ ಇದ್ದವರು, ಹೊಸ ಎಲ್‌ಸಿಡಿ, ಎಲ್‌ಇಡಿ ಖರೀದಿಗೆ ಮುಂದಾಗುವುದು ಇದೇ ಹಬ್ಬದಲ್ಲಿ.

ಹಬ್ಬಕ್ಕೆ ಮಾಡಿದ ಹೋಳಿಗೆ ಸಾರನ್ನಿಡಲು ಹಳೆಯದನ್ನು ಮಾರಿ ಹೊಸ ಫ್ರಿಜ್ ಸಹ ಇದೇ ಹಬ್ಬದಲ್ಲಿ ಖರೀದಿಸುವವರ ಸಂಖ್ಯೆ ಏನೂ ಕಮ್ಮಿ ಇಲ್ಲ. ಇನ್ನು ಸ್ಥಿತಿವಂತರು ಲಕ್ಷ್ಮಿ ಪೂಜೆಗೆ ಹೊಸ ಕಾರನ್ನೇ ಖರೀದಿಸಿದರೆ ವ್ಯವಹಾರಸ್ಥರು ಹೊಸ ಯಂತ್ರವನ್ನೋ, ವಾಹನವನ್ನೋ ಖರೀದಿಸಲು ಆಯ್ಕೆ ಮಾಡಿಕೊಳ್ಳುವುದೂ ಸಹ ಹಬ್ಬದ ಈ ಸುಮುಹೂರ್ತವನ್ನೇ.

ಹೀಗೆ ಹಬ್ಬದ ಖರೀದಿಯ ಜಾಡು ಹಿಡಿದು ಹೊರಟರೆ ಅನೇಕ ಸಂಗತಿಗಳು ಗಮನ ಸೆಳೆಯುತ್ತವೆ. ಕೆಲವು ವರ್ಷಗಳ ಹಿಂದೆ ವರ್ಷಕ್ಕೆರಡು ಹಬ್ಬಗಳಿಗೆ ಹೊಸ ಬಟ್ಟೆ ಕೊಡಿಸುವುದು ವಾಡಿಕೆಯಾಗಿತ್ತು. ಅದರಲ್ಲಿ ದೀಪಾವಳಿಗಂತೂ ಬಟ್ಟೆ ಇರಲೇಬೇಕಿತ್ತು. ಆದರೆ ಕಾಲ ಬದಲಾಗಿದೆ. ಬಟ್ಟೆಗಳ ಖರೀದಿಗೆ ಹಬ್ಬವೇ ಬೇಕೆಂದೇನೂ ಇಲ್ಲ.

ಆದರೆ ಅದರ ಬದಲಾಗಿ ಗೃಹಿಣಿಯರಿಗೆ ಚಿನ್ನ ಅಥವಾ ಗೃಹೋಪಯೋಗಿ ವಸ್ತುಗಳು, ಮಕ್ಕಳಿಗೆ ಸೈಕಲ್ ಅಥವಾ ವಾಹನ ಹೀಗೆ ಇತ್ಯಾದಿ ವಸ್ತುಗಳ ಖರೀದಯತ್ತ ನಗರದ ಮಂದಿ ಆಸಕ್ತಿ ವಹಿಸಿದ್ದಾರೆ.
 
ಚಿನ್ನ ಎಷ್ಟೇ ದುಬಾರಿಯಾದರೂ ಹಬ್ಬದ ಸಂದರ್ಭದಲ್ಲಿ ಹೊಸ ವಿನ್ಯಾಸದ ಕನಿಷ್ಠ ಒಂದು ಜೊತೆ ಓಲೆಯ ಬೇಡಿಕೆಯನ್ನಾದರೂ ಗೃಹಿಣಿಯರು ಮುಂದಿಡುತ್ತಾರೆ. ಹೀಗಾಗಿ ದೊಡ್ಡ ಮೊತ್ತದ ಖರೀದಿಯ ಗ್ರಾಹಕರೇ ಇಂದು ಹೆಚ್ಚಾಗಿದ್ದಾರೆ. ಹೀಗಾಗಿ ಕಾಲ ಬದಲಾದಂತೆ ಗ್ರಾಹಕರ ಅಭಿರುಚಿಗಳು ಹಾಗೂ ಅಪೇಕ್ಷೆಗಳೂ ಬದಲಾಗಿವೆ.

ಆರಂಭದಲ್ಲಿ ಸಿದ್ಧ ಉಡುಪು ಮಾರಾಟ ಆರಂಭದಲ್ಲಿ ತುಸು ನಿರಾಸೆಯಿಂದಿದ್ದರೂ ಕಳೆದ ವಾರದಿಂದ ಚೇತರಿಕೆ ಕಂಡಿದೆ. ಅದರಂತೆ ಹೊಸ ಆಯಾಮದ ಎಲೆಕ್ಟ್ರಾನಿಕ್ ಗೃಹೋಪಯೋಗಿ ಯಂತ್ರೋಪಕರಣಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
 
ವಾಹನಗಳ ಮಾರಾಟದಲ್ಲಿ ಇಳಿಕೆ ಕಂಡರೂ ಕಂಪೆನಿಗಳು ನೀಡುತ್ತಿರುವ ಪೈಪೋಟಿ ದರ ಗ್ರಾಹಕರನ್ನು ಆಯಸ್ಕಾಂತದಂತೆ ಸೆಳೆಯುತ್ತಿವೆ. ಇನ್ನು ಮೊಬೈಲ್‌ಗಳ ಖರೀದಿಯಲ್ಲಿ ಭಾರೀ ಪೈಪೋಟಿ ಕಂಡುಬರುತ್ತಿದೆ. ಚಿನ್ನಾಭರಣ ಮಳಿಗೆಗಳು ತುಂಬಿ ತುಳುಕುತ್ತಿವೆ. 

 ಹೀಗಾಗಿ ಬೆಂಗಳೂರಿಗೆ ಬೆಂಗಳೂರೇ ಹಬ್ಬಕ್ಕೆ ಸಿದ್ಧಗೊಂಡಿದೆ. ದೀಪಾಲಂಕೃತ ಮಳಿಗೆಗಳು, ರಿಯಾಯ್ತಿ ದರ ಕಣ್ಮನ ಸೆಳೆಯುತ್ತವೆ. ಹೀಗೆ ಗ್ರಾಹಕನ ಮುಂದೆ ಸಾವಿರಾರು ಆಯ್ಕೆಗಳಿವೆ.

ಜೇಬು, ಅಪೇಕ್ಷೆಗಳಿಗೆ ತಕ್ಕಂತೆ ಮಾರುಕಟ್ಟೆಯಲ್ಲಿ ವಸ್ತುಗಳು ಲಭ್ಯ. ಹೀಗಾಗಿ ದೀಪಾವಳಿ ಉಳ್ಳವರಿಗಷ್ಟೇ ಅಲ್ಲ,  ಪ್ರತಿಯೊಬ್ಬರ ಮನೆಯಲ್ಲೂ ದೀಪ ಬೆಳಗುವುದರಲ್ಲಿ ಯಾವ ಅನುಮಾನವೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT