ADVERTISEMENT

ಹಬ್ಬಲಿ ನಗೆಯ ರಸಬಳ್ಳಿ

ಸಾಕ್ಷಿ
Published 28 ಜೂನ್ 2012, 19:30 IST
Last Updated 28 ಜೂನ್ 2012, 19:30 IST
ಹಬ್ಬಲಿ ನಗೆಯ ರಸಬಳ್ಳಿ
ಹಬ್ಬಲಿ ನಗೆಯ ರಸಬಳ್ಳಿ   

`ನಗು ಎನ್ನುವುದು ಈಗಿನ ದಿಢೀರ್ ದೋಸೆಯ ಕಾಲದಲ್ಲಿ ಆರೋಗ್ಯವರ್ಧಕ ಬಹೂಪಯೋಗಿ ವಸ್ತುವಾಗಿದೆ. ಆದರೆ ನಿಜಕ್ಕೂ ನಗು ಎನ್ನುವುದು ಒಂದು ಮನೋಧರ್ಮ. ಅದು ಒಂದು ಚಿಂತನ ಕ್ರಮ. ತನ್ನಷ್ಟಕ್ಕೆ ತಾನೇ ಅದೊಂದು ಸ್ವತಂತ್ರವಾದ ತತ್ವಶಾಸ್ತ್ರ~.

ಇಂತಹ ಒಂದು ಜೀವನ ದೃಷ್ಟಿಯ, ಚಿಂತನ ಕ್ರಮದ ಅನ್ವೇಷಣೆಯಲ್ಲಿ ಸಾಗುವ ಮಹದಾಸೆಯಿರುವ, ಬುದ್ಧಿವಂತಿಕೆಯನ್ನು ಬಳಸಿ ಬುದ್ಧಿವಂತಿಕೆಯನ್ನೇ ಲೇವಡಿ ಮಾಡುತ್ತಾ ಬುದ್ಧಿವಂತರಾದವರನ್ನು ವ್ಯಂಗ್ಯಕ್ಕೆ ಈಡುಮಾಡಿ ಬುದ್ಧಿವಂತರಾಗುವ ಹುಚ್ಚುತನಕ್ಕೆ ಬೀಳುವ ನಾವುಗಳು ನಗೆಯ ನಗಾರಿಯನ್ನು ಬಾರಿಸುತ್ತಿದ್ದೇವೆ.

ನಮ್ಮ ತಂಡ ಹೀಗಿದೆ: ಸಾಮ್ರೋಟ್, ಕುಚೇಲ, ಶ್ರೀ ತೊಣಚಪ್ಪ, ಶ್ರೀ ಶ್ರೀ ಶ್ರೀ ಅಧ್ಯಾತ್ಮಾನಂದ ಮತ್ತು ಕೋಮಲ್. ಈ ನಮ್ಮ ಹುಚ್ಚಾಟದಲ್ಲಿ ಭಾಗಿಯಾಗುವುದಕ್ಕೆ ಆಸಕ್ತಿಯಿದ್ದರೆ ನೀವು ಎರಡು ಕೆಲಸ ಮಾಡಬಹುದು. ನಮ್ಮ ಬ್ಲಾಗಿಗೆ ಚಂದಾದಾರರಾಗಬಹುದು (ಚಂದಾ ಇಲ್ಲದೆ!) ಜೊತೆಗೆ ನಮ್ಮ ತಾಣಕ್ಕೆ ನೀವೂ ಬರೆಯಬಹುದು (ಸಂಭಾವನೆ ಇಲ್ಲದೆ)”.

`ನಗೆ ನಗಾರಿ~
(nagenagaaridotcom.wordpress.com) ಬ್ಲಾಗಿನ ಗೆಳೆಯರು ತಮ್ಮನ್ನು ಪರಿಚಯಿಸಿಕೊಂಡಿರುವ ರೀತಿಯಿದು. ಅವರ ಉದ್ದೇಶ ನಗೆ ಹಂಚುವುದು. ಹಾಗಾಗಿ, ಒಂದು ನಗೆ ತುಣುಕುಗಳ ಮೂಲಕವೇ ಬ್ಲಾಗನ್ನು ಪರಿಚಯ ಮಾಡಿಕೊಳ್ಳೋಣ.

*
ಹಂದಿಜ್ವರ, ಚಿಕೂನ್ ಗುನ್ಯಾ ಜ್ವರಗಳ ಪ್ರಮುಖ ಲಕ್ಷಣವಾಗಿರುವ ಮಂದಿ ಜ್ವರದ ಪರಿಣಾಮ ಎಸ್.ಎಂ.ಎಸ್ ಹಾಗೂ ಇ-ಮೇಲುಗಳ ಮುಖಾಂತರ ವ್ಯಾಪಕವಾಗಿ ಹರಡುತ್ತಿರುವ ನಗೆ ಜ್ವರವನ್ನು ಅಳೆಯುವ ಮೀಟರ್ ಹಿಡಿದು ನಗೆ ಸಾಮ್ರೋಟರು ಸಂಚಾರ ಹೊರಟಾಗ ದಕ್ಕಿದ ಕೀಟಾಣುಗಳು ಇವು:

1. ಒಂದು ಕಾಲ್ ಇಲ್ಲ, ಕನಿಷ್ಠ ಪಕ್ಷ ಮಿಸ್ ಕಾಲೂ ಇಲ್ಲ, ಒಂದೇ ಒಂದು ಮೆಸೇಜ್ ಕೂಡ ಇಲ್ಲ? ನಂಗೆ ಭಯ ಆಗಿದೆ ಹಂದಿ ಜ್ವರ ತಗುಲಿದೆಯಾ ಎಂದು? ನಿನ್ನ ಮೊಬೈಲಿಗೆ!

2. ಜಿಂಕೆ ಹಾಗೂ ಸೊಳ್ಳೆ ಇಬ್ಬರೂ ಒಳ್ಳೆಯ ಗೆಳೆಯರು.
ಜಿಂಕೆ `ಒಂದು ಹಾಡು ಹೇಳು~ ಎಂದು ಸೊಳ್ಳೆಯನ್ನು ಕೇಳಿತು.
ಸೊಳ್ಳೆ ಶುರು ಮಾಡಿತು, `ನೀ ಜಿಂಕೆ ಮರೀನಾ, ನೀ ಜಿಂಕೆ ಮರೀನಾ, ನೀ ಜಿಂಕೆ ಜಿಂಕೆ ಮರೀನಾ?~
ತಾನೇನು ಕಡಿಮೆ ಎಂದು ಜಿಂಕೆ ಹಾಡಿತು, `ನಿನ್ನಿಂದಲೇ, ನಿನ್ನಿಂದಲೇ ಚಿಕೂನ್ ಗುನ್ಯಾ ಶುರುವಾಗಿದೆ?~ (ಕಳಿಸಿದವರು: ಸಿಂಧು)

3. `ಎಚ್1ಎನ್1 ಎಂದರೇನು?~
`ಹಂದಿ ಒಂದೇ ನೀನೂ ಒಂದೇ!~

4. ಅದೇನು ಜನವೋ, ತೊಂಬತ್ತು ಮಂದಿಗೆ ಹಂದಿಜ್ವರ ತಗುಲಿತು ಅಂದರೆ ಇಡೀ ಜಗತ್ತೇ ಮಾಸ್ಕ್ ತೊಡಲು ಸಿದ್ಧವಾಗುತ್ತೆ.
ಇಪ್ಪತ್ತು ಮಿಲಿಯನ್ ಮಂದಿಗೆ ಏಡ್ಸ್ ತಗುಲಿದ್ದರೂ ಎಲ್ಲರೂ ಕಾಂಡೋಮ್ ಧರಿಸಲೊಲ್ಲರು!

**
ಮಾಧ್ಯಮದವರು ತಮ್ಮ ಧರ್ಮ ಮರೆಯುತ್ತಿರುವುದರ ವಿರುದ್ಧ ಆಕ್ರೋಶ
ಬೆಂಗಳೂರು, ಮಾ 3: ಕಳೆದ ಕೆಲವು ವರ್ಷಗಳಿಂದ ರಾಜ್ಯದ ಹಾಗೂ ದೇಶದ ಮಾಧ್ಯಮಗಳಲ್ಲಿ ಜನರ ಭಾವನೆ ಕೆರಳಿಸುವ ವರದಿಗಳು ಪ್ರಕಟವಾಗಿಲ್ಲದಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸುವುದಾಗಿ `ಅಖಿಲ ಭಾರತ ಅಬ್ಬೇಪಾರಿಗಳ ಪರಿಷತ್~ (ಎಬಿಎಪಿ) ರಾಜ್ಯಾಧ್ಯಕ್ಷ ಮುಸ್ತಫಾ ಠಾಕರೋಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

`ಮಾಧ್ಯಮಗಳು ಆಗಾಗ ಧಾರ್ಮಿಕ ಭಾವನೆ ಕೆರಳಿಸುತ್ತಿದ್ದರೆ ಅಲ್ಲವೇ, ತಮ್ಮಲ್ಲೂ ಧಾರ್ಮಿಕ ಭಾವನೆ ಇದೆ ಎಂದು ಜನರಿಗೆ ಮನವರಿಕೆಯಾಗುವುದು? ರೋಗ ಬಂದಾಗಲೇ ಅಲ್ಲವೇ ತನ್ನಲ್ಲಿ ಆರೋಗ್ಯವಿತ್ತು ಎಂದು ನೆನಪಾಗುವುದು?
 
ಹೆಂಡತಿ ಬಂದಮೇಲೆ ತಾನೆ ತನ್ನ ಜೇಬಲ್ಲೂ ದುಡ್ಡು ಉಳಿಯುತ್ತಿತ್ತು ಎಂಬ ಅರಿವಾಗುವುದು? ಇತಿಹಾಸಕಾರರು ಹೊಸ ಹೊಸ ವ್ಯಾಖ್ಯಾನ ಕೊಟ್ಟು ಜನರನ್ನು ರೊಚ್ಚಿಗೆಬ್ಬಿಸದಿದ್ದರೆ ನಮ್ಮ ಪರಿಷತ್ತಿನ ಸದಸ್ಯರಿಗೆ ನೌಕರಿ ಯಾರು ಕೊಡುವವರು?
 
ರಸ್ತೆಯಲ್ಲಿ ದಾಂಧಲೆಯೆಬ್ಬಿಸಿ, ಸರ್ಕಾರಿ ಬಸ್ಸುಗಳಿಗೆ ಕಲ್ಲು ಎಸೆದು, ಅಂಗಡಿಗಳ ಗಾಜು ಒಡೆದು, ಲೈಟು ಕಂಬಗಳ ಬಲ್ಬು ಒಡೆದು, ಕೈಗೆ ಸಿಕ್ಕಿದ್ದನ್ನು ದೋಚಿ ಆರ್ಥಿಕತೆಯ ಗಾಲಿಗಳು ತಿರುಗುವಂತೆ ಮಾಡುವವರು ಯಾರು?

ಪತ್ರಿಕೆಗಳು ಹೀಗೆ ಮೌನವಾದರೆ  ತಲೆಮಾರುಗಳಿಂದ ದಾಂಧಲೆಯೆಬ್ಬಿಸುವ ವೃತ್ತಿಯನ್ನು ಪಾಲಿಸುತ್ತಾ ಬಂದಿರುವವರ ಗತಿಯೇನು? ನಮ್ಮ ಹೊಟ್ಟೆ ಮೇಲೆ ಹೊಡೆಯುವ ಈ ಕೆಟ್ಟ ಸಂಪ್ರದಾಯಕ್ಕೆ ಹೊಣೆ ಯಾರು?....

ಸರ್ಕಾರ ಈ ಕೂಡಲೇ ನಮ್ಮ ನೆರವಿಗೆ ಬರಬೇಕು. ವಿವಾದಾತ್ಮಕ ಪುಸ್ತಕಗಳಿಗೆ ವಿಶೇಷ ಪ್ರಶಸ್ತಿ ಘೋಷಿಸಬೇಕು. ರೊಚ್ಚಿಗೆಬ್ಬಿಸುವ ಕಾದಂಬರಿ ಬರೆದವರಿಗೆ ಪ್ರೋತ್ಸಾಹ ನೀಡಬೇಕು. ಆರ್ಟ್ ಗ್ಯಾಲರಿಗಳಲ್ಲಿ ನಗ್ನ ಕಲಾಕೃತಿಗಳಿಗೆ ಶಿಷ್ಯವೇತನ ನೀಡಬೇಕು.

ಕೋಮು ಭಾವನೆ ಕೆರಳಿಸುವ ಚಿತ್ರಗಳಿಗೆ ಮನರಂಜನಾ ತೆರಿಗೆ ವಿನಾಯಿತಿಯನ್ನೂ, ವಿಶೇಷ ಸಬ್ಸಿಡಿಯನ್ನೂ ಸರಕಾರ ನೀಡಬೇಕು. ಇಲ್ಲದಿದ್ದರೆ ರಾಷ್ಟ್ರಾದ್ಯಂತ ಉಗ್ರ  ರೂಪದ ಪ್ರತಿಭಟನೆ ನಡೆಸಲಾಗುವುದು. ಈ ಸಂದರ್ಭದಲ್ಲಿ ಆಗುವ ಪ್ರಾಣ ಹಾನಿ, ಆಸ್ತಿನಾಶಕ್ಕೆ ಸರ್ಕಾರ, ಮಾಧ್ಯಮಗಳೇ ಹೊಣೆ~...

***
`ನಗೆ ನಗಾರಿ~ಯ ಸ್ವರೂಪ ಇಷ್ಟೇ ಅಲ್ಲ. ಸಿನಿಮಾ, ರಾಜಕೀಯ, ಮಾಧ್ಯಮ ಸೇರಿದಂತೆ ಅನೇಕ ಕ್ಷೇತ್ರಗಳ ಅಣಕ ಇಲ್ಲಿದೆ. ಪದ್ಯರೂಪಿ ಅಣಕವೂ ಇದೆ. ಕಾರ್ಟೂನ್‌ಗಳು ಕೂಡ ನಗೆಸಂಪುಟದಲ್ಲಿವೆ.

ಅವರಿವರ ಭಯಾಗ್ರಫಿಗಳು, ಅಂಕಣಕೋರರ ಹಾವಳಿಯು ಹಾಗೂ ನಗಾರಿ ವಿಶೇಷಾಂಕವೂ ಇಲ್ಲಿದೆ. `ಒಮ್ಮೆ ಹೇಳಿ ನಮಗೆ ಬಹು ಪರಾಕ್~ ಎಂದು ಕೋರುವ ಸ್ವಯಂ ಘೋಷಿತ ನಗೆ ಸಾಮ್ರಾಟರು ಭರ್ಜರಿ ಸಾಮ್ರಾಜ್ಯವನ್ನೇ ಕಟ್ಟಿದ್ದಾರೆ. ಸಾಮ್ರಾಜ್ಯದುದ್ದಕ್ಕೂ ನಗು ನಗು ನಗು.

ಈಚೆಗೆ, `ನಗೆ ನಗಾರಿ~ ಸದ್ದು ಕ್ಷೀಣಿಸಿದಂತಿದೆ. ಆದರೆ, ಈಗಾಗಲೇ ಕಟ್ಟಿರುವ ಸಾಮ್ರಾಜ್ಯ ಇದೆಯಲ್ಲ, ಅದರ ವಿಸ್ತಾರವೇ ಸಾಕಷ್ಟಿದೆ. ಆ ಸಾಮ್ರಾಜ್ಯದಲ್ಲಿ ವಿಹರಿಸುತ್ತ, ಮುಂದುವರೆಯಲಿ ನಗೆಯ ರಸಬಳ್ಳಿ ಎಂದು ಸಹೃದಯರು ಹಾರೈಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.