ಹಳೆಯದು ಮತ್ತು ಹೊಸದು, ಆಧುನಿಕ–ಪುರಾತನ ಇವುಗಳ ಸಂಘರ್ಷ ಹೊಸದೇನಲ್ಲ. ಯಾವುದೇ ಒಂದು ಕ್ಷೇತ್ರ ಅಂತಲ್ಲ, ಎಲ್ಲ ವಲಯದಲ್ಲಿಯೂ ಈ ತಿಕ್ಕಾಟ ಇರುವುದೇ. ಈ ವೈರುಧ್ಯ ಸಿನಿಮಾವೊಂದಕ್ಕೆ ವಸ್ತುವಾಗಬಹುದೇ? ಇದೇ ವಸ್ತುವನ್ನಿಟ್ಟುಕೊಂಡ ‘ಕೋಮಾ’ ಎಂಬ ಹೆಸರಿನ ಸಿನಿಮಾವೊಂದು ತಯಾರಾಗುತ್ತಿದೆ.
ಸಿನಿಮಾ ಕ್ಷೇತ್ರದ ಅಂದಿನ ಮತ್ತು ಇಂದಿನ ತತ್ವಗಳ ನಡುವಿನ ಪೈಟೋಟಿಯನ್ನೇ ಭಿತ್ತಿಯಾಗಿಸಿಕೊಂಡು ರೂಪಿಸಲಾಗಿರುವ ಚಿತ್ರವಿದು. ಇಲ್ಲಿ ಹಿರಿಯ ನಿರ್ದೇಶಕ ಭಗವಾನ್ ಮತ್ತು ಯುವ ನಿರ್ದೇಶಕ ಗುರುಪ್ರಸಾದ್ ಹಳೆ ಬೇರು ಹೊಸ ಚಿಗುರಾಗಿ ಕಾಣಿಸಿಕೊಳ್ಳಲಿರುವುದು ವಿಶೇಷ.
‘ಇದು ಭಗವಾನ್ ಮತ್ತು ಗುರುಪ್ರಸಾದ್ ಅವರ ಜುಗಲ್‌ಬಂದಿ’ ಎನ್ನುತ್ತಾರೆ ನಿರ್ದೇಶಕ ಚೇತನ್. ಚೇತನ್ ಮತ್ತು ರವಿ ಎಂಬ ಹೊಸ ಹುಡುಗರು ಸೇರಿ ನಿರ್ದೇಶಿಸಿರುವ ಈ ಸಿನಿಮಾ ತಂಡದಲ್ಲಿನ ಬಹುತೇಕರು ಐಟಿ ಕ್ಷೇತ್ರದವರು.
‘ನಮ್ಮ ತಂಡದಲ್ಲಿನ ಬಹುತೇಕರು ಐಟಿ ಕ್ಷೇತ್ರದಲ್ಲಿ ಕೈತುಂಬ ಸಂಬಳದ ಕೆಲಸದಲ್ಲಿದ್ದವರು. ಈ ಸಿನಿಮಾಕ್ಕಾಗಿಯೇ ಕೆಲಸವನ್ನು ಬಿಟ್ಟು ಬಂದವರು. ನಾನು ಮತ್ತು ರವಿ ಕೂಡ ಐಟಿ ಉದ್ಯೋಗಿಗಳೇ. ಸಿನಿಮಾ ಮಾಡುವ ವ್ಯಾಮೋಹದಿಂದ ಕೆಲಸ ಬಿಟ್ಟು ಬಂದೆವು. ಈಗಾಗಲೇ ಕೆಲವು ಕಿರುಚಿತ್ರಗಳನ್ನು ಮಾಡಿ, ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದೇವೆ. ಆದರೆ ಸಿನಿಮಾಕ್ಕಾಗಿ ಕೆಲಸವನ್ನು ಬಿಟ್ಟು ಬರುವುದು ಸುಲಭದ ನಿರ್ಧಾರವಾಗಿರಲಿಲ್ಲ. ಮನೆಯವರನ್ನು ಇದಕ್ಕೆ ಒಪ್ಪಿಸಲು ಹರಸಾಹಸ ಮಾಡಬೇಕಾಯಿತು. ಆದರೆ ಈ ಕ್ಷೇತ್ರದಲ್ಲಿಯೇ ಏನಾದರೂ ಸಾಧಿಸಬೇಕು ಎಂಬ ಉದ್ದೇಶದಿಂದ ಗಟ್ಟಿ ನಿರ್ಧಾರ ಮಾಡಿದೆವು’ ಎಂದು ಚಿತ್ರರಂಗಕ್ಕೆ ಪ್ರವೇಶಿಸಿದ ಹಿಂದಿನ ಉದ್ದೇಶದ ಕುರಿತು ಹೇಳುತ್ತಾರೆ ಚೇತನ್.
ಇಂಥದ್ದೊಂದು ವಿಷಯವನ್ನು ಯಾಕೆ ಆಯ್ಕೆ ಮಾಡಿಕೊಂಡಿರಿ ಎಂದು ಕೇಳಿದರೆ ‘ಅದು ನಮಗೆ ಅನಿವಾರ್ಯವಾಗಿತ್ತು’ ಎಂದು ನಗುತ್ತಾರೆ.
‘ಒಮ್ಮೆ ಬಿಟ್ಟು ಬಂದ ನಂತರ ನಾವು ವಾಪಸ್ ಐಟಿ ಉದ್ಯೋಗಕ್ಕೆ ಹೋಗುವುದು ಅಷ್ಟು ಸುಲಭವಲ್ಲ. ಅದು ಸರಿಯೂ ಅಲ್ಲ. ಇಲ್ಲಿಯೇ ಇದ್ದು ಏನಾದರೂ ಸಾಧಿಸಬೇಕಾದದ್ದು ಅನಿವಾರ್ಯ. ಆದ್ದರಿಂದ ಭಿನ್ನವಾಗಿ ಏನಾದರೂ ಮಾಡಬೇಕಾಗಿತ್ತು. ಅದಕ್ಕೇ ಈ ವಿಷಯವನ್ನು ಆಯ್ದುಕೊಂಡೆವು. ನಮ್ಮಲ್ಲಿ ಇಂದು ಹಳೆಯ ಸಿನಿಮಾಗಳ ಸತ್ವ ನಶಿಸಿ ಹೋಗುತ್ತಿದೆ. ಹೊಸ ಹೊಸ ಟ್ರೆಂಡ್‌ಗಳು ಬರುತ್ತಿವೆ. ಅರ್ಥವಿಲ್ಲದ ಕ್ಲೈಮಾಕ್ಸ್, ಡಬ್ಬಲ್ ಮೀನಿಂಗ್ ಡೈಲಾಗ್ಸ್ ಇವೇ ಸಿನಿಮಾಗಳು ಎಂಬಂತಾಗಿವೆ. ಈ ಸಿದ್ಧ ಮಾದರಿಯನ್ನು ಮುರಿಯಬೇಕು ಎಂಬುದು ನಮ್ಮ ಗುರಿಯಾಗಿತ್ತು’ ಎಂದು ವಿವರಿಸುವ ಚೇತನ್ ಮತ್ತು ರವಿ ಈ ಚಿತ್ರದ ಸ್ಕ್ರಿಪ್ಟ್ ರೂಪಿಸಲು ಐದು ತಿಂಗಳು ಶ್ರಮಿಸಿದ್ದಾರೆ.
ಕಥೆ ರೂಪಿಸಿದ ಮೇಲೆ ಆಯಾ ಪಾತ್ರಗಳಿಗೆ ಯಾರನ್ನು ಆಯ್ದುಕೊಳ್ಳಬೇಕು ಎಂಬ ಪ್ರಶ್ನೆಗೆ ಅವರ ಮುಂದೆ ಮೊದಲು ಕಂಡಿದ್ದು ಹಿರಿಯ ನಿರ್ದೇಶಕ ಭಗವಾನ್. ‘ಭಗವಾನ್ ತುಂಬ ಹಿರಿಯರು ಮತ್ತು ಅಷ್ಟೇ ಅನುಭವವ ಇರುವವರು. ರಾಜಕುಮಾರ್, ಶಂಕರ್‌ನಾಗ್ ಅವರಂಥವರಿಗೆ ಸಿನಿಮಾ ಮಾಡಿದವರು. ಹಳೆಯ ಸಿನಿಮಾಗಳಲ್ಲಿನ ಸತ್ವವನ್ನು ಚೆನ್ನಾಗಿ ಬಲ್ಲವರು. ಅದಕ್ಕೇ ಅವರನ್ನು ಆಯ್ದುಕೊಂಡೆವು. 83 ವರ್ಷ ವಯಸ್ಸಾಗಿದ್ದರೂ ತುಂಬ ಚೆನ್ನಾಗಿ ಅಭಿನಯಿಸಿದ್ದಾರೆ. ತಾವು ಅಭಿನಯಿಸಿದ ದೃಶ್ಯ ತುಣುಕುಗಳನ್ನು ನೋಡಿ ಖುಷಿಪಟ್ಟಿದ್ದಾರೆ’ ಎಂದು ಭಗವಾನ್ ಅವರನ್ನು ಆಯ್ಕೆ ಮಾಡಿದ್ದಕ್ಕೆ ಕಾರಣವನ್ನು ವಿವರಿಸುವ ಚೇತನ್, ಗುರುಪ್ರಸಾದ್ ಆಯ್ಕೆಗೂ ಕಾರಣವನ್ನು ನೀಡುತ್ತಾರೆ.
‘‘ಹೊಸ ಸಿನಿಮಾಗಳ ಕಾಲದಲ್ಲಿ ನಿರ್ದೇಶಕರಿಗೆ ಸ್ಟಾರ್‌ಗಿರಿ ತಂದುಕೊಟ್ಟವರಲ್ಲಿ ಗುರುಪ್ರಸಾದ್ ಪ್ರಮುಖರು. ಸಾಮಾನ್ಯವಾಗಿ ಸಿನಿಮಾ ಬಿಡುಗಡೆಯಾದಾಗ ನಾಯಕ–ನಾಯಕಿಯ ಕಟೌಟ್ ಹಾಕುತ್ತಾರೆ. ಆದರೆ ‘ಡೈರೆಕ್ಟರ್ ಸ್ಪೆಷಲ್’ ಚಿತ್ರ ಬಿಡುಗಡೆಯಾದಾಗ ನಿರ್ದೇಶಕ ಗುರುಪ್ರಸಾದ್ ಕಟೌಟ್ ಹಾಕಿದ್ದರು. ಇದು ಅವರ ವರ್ಚಸ್ಸನ್ನು ತೋರಿಸುತ್ತದೆ. ಆದ್ದರಿಂದ ಹೊಸ ಸಿನಿಮಾಗಳ ತತ್ವಗಳನ್ನು ಪ್ರತಿಪಾದಿಸುವ ನಿರ್ದೇಶಕರ ಪ್ರತಿನಿಧಿಯಾಗಿ ಗುರುಪ್ರಸಾದ್ ಅವರಿಗಿಂತ ಒಳ್ಳೆಯ ಆಯ್ಕೆ ಇರಲಿಲ್ಲ’’ ಎಂದು ಚೇತನ್ ಪಾತ್ರ ಆಯ್ಕೆಯ ಪ್ರಕ್ರಿಯೆಯನ್ನು ವಿವರಿಸುತ್ತಾರೆ.
ಐಟಿ ಹುಡುಗರ ತಂಡವೇ ರೂಪಿಸಿರುವ ಈ ಸಿನಿಮಾದ ಶೇ 70ರಷ್ಟು ಭಾಗವನ್ನು ಕರ್ನಾಟಕದಲ್ಲಿ ಇದುವರೆಗೆ ಯಾವ ಸಿನಿಮಾಗಳಲ್ಲಿಯೂ ಬಳಕೆಯಾಗಿರದ ಹೊಸ ಸ್ಥಳಗಳಲ್ಲಿಯೇ ಚಿತ್ರೀಕರಿಸಲಾಗಿದೆ. ಈ ಚಿತ್ರಕ್ಕೆ ಹಣವನ್ನೂ ತಂಡದವರೇ ಸೇರಿ ಹೊಂಚಿದ್ದಾರೆ. ‘ಸೌಂದರ್ಯ ಕ್ರಿಯೇಷನ್ಸ್’ನ ಸುಧಾಕರ್ ಕೂಡ ಈ ಹೊಸ ಹುಡುಗರ ಸಾಹಸಕ್ಕೆ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ.
‘ಸಾಮಾನ್ಯವಾಗಿ ಎಲ್ಲ ಸಿನಿಮಾಗಳೂ ಒಂದೋ ಸುಖಾಂತ್ಯ ಹೊಂದಿರುತ್ತವೆ, ಇಲ್ಲವೇ ದುಃಖಾಂತ್ಯ ಹೊಂದಿರುತ್ತವೆ. ಆದರೆ ಇವೆರಡೂ ಸಾಧ್ಯತೆಗಳನ್ನು ಬಿಟ್ಟೂ ಬೇರೆ ಸಾಧ್ಯತೆ ಇರಬಹುದಾ ಎಂಬ ಪ್ರಶ್ನೆಗೆ ಈ ಸಿನಿಮಾದ ಅಂತ್ಯದಲ್ಲಿ ಉತ್ತರ ಸಿಗುತ್ತದೆ’ ಎಂದು ಭಿನ್ನ ಕ್ಲೈಮಾಕ್ಸ್‌ನ ಸೂಚನೆ ನೀಡುವ ಚೇತನ್ ಅವರಿಗೆ ‘ಕೋಮಾ’ ಪ್ರೇಕ್ಷಕರನ್ನು ಆವರಿಸಿಕೊಳ್ಳುವ ಕುರಿತು ವಿಶ್ವಾಸವಿದೆ.
‘ನಾವು ಮಾಡಿದ ಸಿನಿಮಾ ನಮಗೆ ಯಾವಾಗಲೂ ಸುಂದರವಾಗಿಯೇ ಕಾಣುತ್ತದೆ. ಆದರೆ ಈ ಸಿನಿಮಾದಲ್ಲಿ ಅನೇಕ ಹೊಸ ಹೊಸ ಅಂಶಗಳಿವೆ. ನಮ್ಮ ಪರಿಶ್ರಮವಿದೆ. ನಾವು ಬಿಡುಗಡೆ ಮಾಡಿರುವ ಈ ಸಿನಿಮಾದ ಪೋಸ್ಟರ್‌ಗಳು, ಟೀಸರ್‌ಗೆ ತುಂಬ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಆದ್ದರಿಂದ ಈ ಚಿತ್ರ ಗೆಲ್ಲುತ್ತದೆ ಎಂಬ ಅಂಧ ವಿಶ್ವಾಸದಲ್ಲಿದ್ದೇವೆ’ ಎನ್ನುತ್ತಾರೆ ಚೇತನ್.
‘ಕೋಮಾ’ ಈಗ ಚಿತ್ರೀಕರಣದ ಹಂತವನ್ನು ಮುಗಿಸಿ ಡಬ್ಬಿಂಗ್ ಕಾರ್ಯದಲ್ಲಿ ನಿರತವಾಗಿದೆ. ಮಾರ್ಚ್ ಮೊದಲ ಅಥವಾ ಎರಡನೇ ವಾರದಲ್ಲಿ ತೆರೆಗೆ ತರುವ ಯೋಚನೆ ತಂಡಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.