‘ಅನನ್ಯ’ದ ವಾರ್ಷಿಕ ನೃತ್ಯ ನೀರಾಂಜನದಲ್ಲಿ (ಡಿ. 4ರಿಂದ 6) ಇಬ್ಬರು ಹಿರಿಯ ಕಲಾವಿದರಿಗೆ ಪುರಸ್ಕಾರ ಸಲ್ಲಲಿದೆ. ಒಬ್ಬರು ಜೇಷ್ಠ ಕಲಾವಿದೆಯಾದರೆ, ಇನ್ನೊಬ್ಬರು ಹಿರಿಯ ನೃತ್ಯ ಗಾಯಕಿ.
ಮೈಸೂರಿನ ದಕ್ಷ ನೃತ್ಯ ಬೋಧಕಿಯರಲ್ಲಿ ನಂದಿನಿ ಈಶ್ವರ್ ಸಹ ಒಬ್ಬರು. ಬೋಧಕಿಯಾಗಿ-ನೃತ್ಯ ಸಂಯೋಜಕಿಯಾಗಿ ಅವರ ಸೇವೆ ಅನೇಕ ದಶಕಗಳಿಂದ ಮುಂದುವರೆದಿದೆ. ಅವರು ಭರತನಾಟ್ಯದ ಬೋಧಕಿಯಾಗಿ ಜನಪ್ರಿಯರಾದರೂ, ಅವರ ಕಲಿಕೆಯ ಮೊದಲ ಹೆಜ್ಜೆ ಬಿದ್ದದ್ದು ಕಥಕ್‌ನಲ್ಲಿ. ನಂತರ ಸ್ವಲ್ಪ ಕಾಲ ಡಾ. ಕೆ. ವೆಂಕಟಲಕ್ಷಮ್ಮ ಅವರಲ್ಲಿ ಕಲಿತರೂ, ದೀರ್ಘ ಕಾಲ ಕಲಿತ ನಂದಿನಿ ಅವರ ನೃತ್ಯ ರೂಪುಗೊಂಡದ್ದು ಲಲಿತ ದೊರೆ ಅವರಲ್ಲಿ. ಮೈಸೂರಿನಿಂದ ಬೆಂಗಳೂರಿಗೆ ಮನೆಯವರ ನೆರವಿನಿಂದ ಪ್ರಯಾಣಿಸುತ್ತಾ ಕಲಿಕೆಯನ್ನು ಮುಂದುವರೆಸಿದರು.
ಗುರುಗಳ ಕೊನೆಗಾಲದವರೆಗೂ ಸಂಪರ್ಕವಿಟ್ಟುಕೊಂಡು ನಿಷ್ಠೆಯಿಂದ ಕಲಿತರು. ಹೀಗಾಗಿ ತಂಜಾವೂರು ಬಾನಿಯ ಉತ್ತಮ ಅಂಶಗಳನ್ನೆಲ್ಲಾ ನಂದಿನಿ ಗ್ರಹಿಸಿದರು. ಹಾಗೆ ನೋಡಿದರೆ ನಂದಿನಿ ಅವರ ನೃತ್ಯಾಸಕ್ತಿಗೆ ನೀರೆರೆದವರು ಅವರ ಅಜ್ಜ (ಶಾಮಾಶಾಸ್ತ್ರಿ) ಮತ್ತು ಅಜ್ಜಿ. ಮುಂದೆ ಡಾ. ಕೂಡ್ಲಿ ಆರ್. ಈಶ್ವರ್ ಅವರೊಂದಿಗೆ ವಿವಾಹ. ದಾಂಪತ್ಯ ಜೀವನ ನೃತ್ಯಾಸಕ್ತಿಗೆ ಅಡ್ಡಿ ಬರಲಿಲ್ಲ. ಆದರೆ 1998ರಲ್ಲೇ ಪತಿ ವಿಯೋಗ. ನೃತ್ಯ ಶಿಕ್ಷಣದಲ್ಲಿ ಜೀವನದ ನೋವನ್ನು ಮರೆತರು! ಮೂವರು ಮಕ್ಕಳಲ್ಲಿ ರೋಹಿತ್ ಈಶ್ವರ್ ನೃತ್ಯ ಕ್ಷೇತ್ರದಲ್ಲೇ ಮುಂದುವರೆಯುತ್ತಿದ್ದಾರೆ.
ರಾಸ ವೃಂದ
1980ರಲ್ಲಿ ತಮ್ಮ ನೃತ್ಯ ಶಾಲೆ ರಾಸವೃಂದವನ್ನು ಪ್ರಾರಂಭಿಸಿದ್ದು, ಮೈಸೂರಿನ ನೃತ್ಯಾಸಕ್ತರಿಗೆ ಬಹು ಅನುಕೂಲವಾಯಿತು. ನೂರಾರು ಆಸಕ್ತರಿಗೆ ನಿರಂತರ ಶಿಕ್ಷಣ. ನೃತ್ಯ ಕ್ಷೇತ್ರದ ನಾಳೆಗಳ ನಿರ್ಮಾಪಕರಿಗೆ ಭದ್ರಬುನಾದಿ. ನೃತ್ಯದ ಜೊತೆಗೆ ಶಾಸ್ತ್ರಭಾಗವೂ ಬೋಧನೆ. ನೃತ್ಯ ಗ್ರಂಥಗಳ ಕಡೆ ವಿದ್ಯಾರ್ಥಿಗಳ ಗಮನ ಸೆಳೆಯುವ ಪ್ರಯತ್ನ. ಕಾರ್ಯಕ್ರಮಕ್ಕಿಂತ ವಿದ್ಯೆಯ ಬೆಳವಣಿಗೆ; ನೃತ್ಯದ ಆಧ್ಯಾತ್ಮಿಕತೆ-ಪಾವಿತ್ರ್ಯಗಳ ಕಡೆ ಲಕ್ಷ್ಯ. ಹೀಗಾಗಿ ರಂಗಪ್ರವೇಶದ ಕಡೆ ಅನವಶ್ಯಕ ಗಮನವಿಲ್ಲ.
ದೇವರ ಮುಂದೆ ನರ್ತಿಸಿ ಆಶೀರ್ವಾದ ಪಡೆದರೆ ಸಾಲದೇ? ಎಂಬ ಭಿನ್ನ ನಿಲುವು. ದಕ್ಷ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಸಾಧನೆ-ಸ್ವಪ್ರಯತ್ನದ ಕಡೆಯೂ ಲಕ್ಷಿಸಬೇಕು. ನೃತ್ಯವನ್ನು ವೃತ್ತಿಗಿಂತ ಹೆಚ್ಚಾಗಿ ಆರಾಧನೆಯಂತೆ ಪೋಷಿಸಬೇಕು ಎಂಬ ದೃಷ್ಟಿ ಅವರದು. ನಂದಿನಿ ಅವರ ಶಿಷ್ಯರಲ್ಲಿ ಅನೇಕರು ಸಂಗೀತ ಪರೀಕ್ಷೆಗಳಲ್ಲಿ ರ್‍ಯಾಂಕ್ ಗಳಿಸಿರುವುದು ಅವರ ದಕ್ಷ ಶಿಕ್ಷಣಕ್ಕೆ ಸಾಕ್ಷಿ.
ಕನ್ನಡದ ಅನೇಕ ಕಾವ್ಯಗಳು ನಂದಿನಿ ಈಶ್ವರ್ ಅವರ ನೃತ್ಯ ಸಂಯೋಜನೆಯಲ್ಲಿ ರಂಗವೇರಿವೆ. ಕುವೆಂಪು (ರಾಮಾಯಣ ದರ್ಶನ), ಪು.ತಿ.ನ. (ಗೋಕುಲ ನಿರ್ಗಮನ), ಶಿವರಾಮ ಕಾರಂತ (ಸತ್ಯವಾನ್ ಸಾವಿತ್ರಿ), ವಿ.ಕೃ. ಗೋಕಾಕ್ (ಭಾರತ ಸಿಂಧು ರಶ್ಮಿ) ಮುಂತಾದ ಕನ್ನಡದ ಪ್ರತಿಷ್ಠಿತ ಲೇಖಕರ ಕಾವ್ಯಗಳು ನಂದಿನಿಯವರ ಪ್ರತಿಭಾ ಮೂಸೆಯಿಂದ ವೇದಿಕೆಯ ಮೇಲೆ ದೃಶ್ಯ ಕಾವ್ಯದಂತೆ ಚಲಿಸತೊಡಗಿತು.
ಹಾಗೆಯೇ ತ್ಯಾಗರಾಜರ ‘ನೌಕಾ ಚರಿತ್ರೆ’, ತುಳಸೀದಾಸರ ‘ರಾಮಚರಿತ ಮಾನಸ’, ‘ಸೀತಾ ಸ್ವಯಂವರ’ ಮತ್ತು ‘ತಿರುವೈಯಾರಿನಲ್ಲಿ ಒಂದು ದಿನ’ ಹಾಗೂ ‘ಕೃಷ್ಣಲೀಲಾತರಂಗ’ ಮುಂತಾದವುಗಳು ನಂದಿನಿ ಅವರ ಪ್ರತಿಭೆ-ಅನುಭವಗಳಿಂದ ನೃತ್ಯರೂಪಕಗಳಾಗಿ ಮೂಡಿವೆ.
ನಮ್ಮ ಚಿಂತನಶೀಲ ನೃತ್ಯ ಕಲಾವಿದರಲ್ಲಿ ಒಬ್ಬರಾದ ನಂದಿನಿ ಈಶ್ವರ್ ಕೆಲ ಪುಸ್ತಕಗಳ ಮೂಲಕವೂ ತಮ್ಮ ಚಿಂತನೆಯನ್ನು ಹರಿದು ಬಿಟ್ಟಿದ್ದಾರೆ. ‘ಈವತ್ತಿನ ನೃತ್ಯ ಪ್ರಯೋಗ-ಪ್ರದರ್ಶನಗಳು ಇಂಪ್ರೂವ್ ಆಗ್ತಿವೆ. ಫ್ಯೂಷನ್, ಕಾಂಟೆಂಪರರಿ ನೃತ್ಯಗಳಿಗಿಂತ ಪರಂಪರಾಗತ ನೃತ್ಯ ನೆಮ್ಮದಿ, ಶಾಂತಿ ಕೊಡುತ್ತವೆ. ಅವು ದೈವತ್ವದ ಕಡೆಗೆ ಕೊಂಡೊಯ್ಯುವ ಸಾಧನವಾಗಿವೆ’ ಎನ್ನುವ ನಂದಿನಿ ಈಶ್ವರ್ ಅವರಿಗೆ ಸಹಜವಾಗೇ ಕೆಲ ಪ್ರಶಸ್ತಿ-ಗೌರವಗಳು ಸಂದಿವೆ. ಅವುಗಳಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಯ ಜೊತೆ ಕರ್ನಾಟಕ ಕಲಾಶ್ರೀ ಬಿರುದು ಕೆಲವು ಮಾತ್ರ. ಭಾನುವಾರ (ಡಿಸೆಂಬರ್ 5) ಅವರು ಸ್ವೀಕರಿಸಲಿರುವ ಅನನ್ಯ ಪ್ರಶಸ್ತಿಯು ಗುರು ನಂದಿನಿ ಈಶ್ವರ್ ಅವರ ಬೋಧನೆ, ಹಿರಿತನಕ್ಕೆ ಸಲ್ಲುತ್ತಿರುವ ಇನ್ನೊಂದು ಗೌರವ.
ಹಿರಿಯ ನೃತ್ಯ ಗಾಯಕಿ
ಈ ವರ್ಷದ ಅನನ್ಯ ಪ್ರಶಸ್ತಿ ಸ್ವೀಕರಿಸಲಿರುವ ಇನ್ನೊಬ್ಬ ಕಲಾವಿದೆ ಪುಸ್ತಕಂ ರಮಾ. ಅವರು ಶಾಸ್ತ್ರೀಯ ಗಾಯನದಲ್ಲಿದ್ದರೂ, ನೃತ್ಯ ಸಂಗೀತದಲ್ಲಿ ಅಂತರರಾಷ್ಟ್ರೀಯ ಖ್ಯಾತಿ ಪಡೆದವರು.
ಇಪ್ಪತ್ತನೇ ಶತಮಾನದ ಪ್ರಾರಂಭಕ್ಕೆ ಸ್ವಲ್ಪ ಮೊದಲು ಮೈಸೂರಿನ ಹಳೆಯ ಅರಮನೆ ಬೆಂಕಿಗೆ ಆಹುತಿಯಾಯಿತು! ಅರಮನೆಯ ಸಿಬ್ಬಂದಿ ಆಗಿದ್ದ ತಿರುಮಲಾಚಾರ್ ಅವರು ಗ್ರಂಥ ಭಂಡಾರವನ್ನು ಪ್ರಾಣದ ಹಂಗು ತೊರೆದು ಸ್ಥಳಾಂತರ ಮಾಡಿ, ಅಮೂಲ್ಯ ಪುಸ್ತಕಗಳನ್ನು ರಕ್ಷಿಸಿದರು. ರಾಜರ ವಿಶೇಷ ಕೃಪೆಗೂ ಒಳಗಾದರು. ಅಂದಿನಿಂದ ಈ ಮನೆತನದವರಿಗೆ ಪುಸ್ತಕಂ ಉಪಾಧಿ ದಕ್ಕಿತು!
ಬಾಲ್ಯದಲ್ಲೇ ಸಂಗೀತದ ಗೀಳು ಹತ್ತಿಸಿಕೊಂಡ ರಮಾ, ಮಾಧ್ಯಮಿಕ-ಪ್ರೌಢಶಾಲೆಗಳಲ್ಲಿ ಗಳಿಸಿದ ಬಹುಮಾನಗಳಿಗೆ ಲೆಕ್ಕವೇ ಇಲ್ಲ. ಮುಂದೆ ಎಂ.ಕೆ. ಸರಸ್ವತಿ, ನಾಗಮಣಿ ಶ್ರೀನಾಥ್ ಹಾಗೂ ಡಾ. ಆರ್.ಕೆ. ಶ್ರೀಕಂಠನ್ ಅವರಲ್ಲಿ ಪ್ರೌಢ ಶಿಕ್ಷಣ; ಜೊತೆಗೆ ಸ್ನಾತಕೋತ್ತರ ಪದವಿಯಲ್ಲಿ ಹೆಗ್ಗಳಿಕೆಯ ತೇರ್ಗಡೆ.
ಪ್ರಾಯದಲ್ಲೇ ನೃತ್ಯಕ್ಕೆ ಹಾಡತೊಡಗಿ ವಸುಂಧರಾ ದೊರೆಸ್ವಾಮಿ, ಪ್ರತಿಭಾ ಪ್ರಹ್ಲಾದ್, ಹೇಮಾಮಾಲಿನಿ, ಸ್ವಪ್ನ ಸುಂದರಿ, ದೀಪಕ್ ಮಜುಂದಾರ್, ಗ್ರೇಸಿ ಸಿಂಗ್ ಮುಂತಾದ ಪ್ರತಿಷ್ಠಿತ ನೃತ್ಯಗಾರರಿಗೆ ಹಿನ್ನೆಲೆಯಲ್ಲಿ ಹಾಡಿ ಪ್ರತಿಷ್ಠಿತ ಸ್ಥಾನ ಗಳಿಸಿದ್ದಾರೆ. ನೃತ್ಯದಲ್ಲಿ ಸಂಗೀತದಿಂದಲೇ ಅರ್ಧ ಯಶಸ್ಸು! ಇದನ್ನು ಅರ್ಥ ಮಾಡಿಕೊಂಡಿರುವ ರಮಾ ಅವರ ಹಾಡಿಕೆ ಅರ್ಥಗರ್ಭಿತ. ಭಾವಪೂರ್ಣ ಸ್ಪಷ್ಟ ಉಚ್ಚಾರಣೆ, ವಿವಿಧ ಭಾಷೆಗಳ ಪರಿಚಯ, ಕೃತಿಗಳ ಮನನದಿಂದ ನೃತ್ಯದ ಸೊಬಗು ಇಮ್ಮಡಿಸುವಂತೆ ಹಾಡಿ, ಕಾರ್ಯಕ್ರಮದ ಯಶಸ್ಸಿನಲ್ಲಿ ಪಾಲ್ಗೊಳ್ಳುತ್ತಾರೆ.
ಶಾಸ್ತ್ರೀಯ, ಲಲಿತ ಹಾಗೂ ಸುಗಮ ಸಂಗೀತ ಮೂರರಲ್ಲೂ ಬಾನುಲಿಯ ಎ ಗ್ರೇಡ್ ಕಲಾವಿದೆಯಾದ ರಮಾ ಬೆಂಗಳೂರು ನಿಲಯದ ಕಲಾವಿದೆಯಾಗಿ ಅನೇಕ ಸಂಗೀತ ಕಾರ್ಯಕ್ರಮಗಳಿಗೆ ದನಿಗೂಡಿಸಿದ್ದಾರೆ. ಸಭೆ-ಸಮ್ಮೇಳನಗಳಲ್ಲಿ ಪ್ರಾತ್ಯಕ್ಷಿಕೆಗಳನ್ನೂ ನೀಡಿದ್ದಾರೆ.
ಸಂಗೀತ ಸಂಭ್ರಮ
ಪ್ರತಿ ವರ್ಷ ವಿದೇಶಗಳಿಗೆ ಸಾಂಸ್ಕೃತಿಕ ರಾಯಭಾರಿಯಾಗಿ ಹೋಗುವ ರಮಾ ನೃತ್ಯ ಕಾರ್ಯಕ್ರಮಗಳಿಗೆ ಅಲ್ಲಿ ಹಾಡುವುದಲ್ಲದೆ, ಹೊಸ ಹೊಸ ರಚನೆಗಳಿಗೆ ಸಂಗೀತ ಸಂಯೋಜನೆಯನ್ನೂ ಮಾಡುತ್ತಾರೆ. ಈ ಬಗೆಗೆ ರಮಾ ಅವರಿಗೆ ಬಹು ಬೇಡಿಕೆ ಇರುವುದು ಸಹಜವೇ. ವೈಣಿಕರೂ ಆದ ರಮಾ ಜನಪ್ರಿಯ ಶಿಕ್ಷಕಿಯೂ ಹೌದು.
ಅಲ್ಲದೆ ಆರು ವರ್ಷಗಳ ಹಿಂದೆ ಸ್ಥಾಪಿಸಿದ ಸಂಗೀತ ಸಂಭ್ರಮದ ಮೂಲಕ ಯುವ ಪ್ರತಿಭೆಗಳಿಗೆ ವೇದಿಕೆ ನೀಡುತ್ತಿದ್ದಾರೆ. ಈ ವರ್ಷವಂತೂ ಒಂದು ಬಹು ಅಪರೂಪ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಾವಿರಕ್ಕೂ ಮೇಲ್ಪಟ್ಟ ಸಂಗೀತ ವಿದ್ವಾಂಸರು-ವಿದ್ಯಾರ್ಥಿಗಳು ಹಾಡಿದ ಪುರಂದರ ದಾಸರ ನವರತ್ನ ಮಾಲಿಕೆ ನಭೋಮಂಡಲವನ್ನು ಮುಟ್ಟಿತು.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ, ಎಂ.ಎ. ನರಸಿಂಹಾಚಾರ್ ಫೌಂಡೇಷನ್‌ನಿಂದ ಗಾನವಾರಿಧಿಗಳಲ್ಲದೆ ಅಮೆರಿಕಾದ ಕೆಂಟುಕಿಯ ಲೂಸ್ವಿಲ್ಲೆ ಮೇಯರ್ ಅವರಿಂದ ಜೀವಮಾನ ಸಾಧನೆಗಾಗಿ ಪ್ರಶಸ್ತಿಗಳನ್ನು ಸ್ವೀಕರಿಸಿರುವ ಅಪರೂಪದ ಕನ್ನಡಿತಿ ರಮಾ. ಹೀಗೆ ಗಾಯಕಿ, ಬೋಧಕಿ, ವ್ಯವಸ್ಥಾಪಕಿಯಾಗಿ ಬಹುಮುಖ ಸೇವೆ ಸಲ್ಲಿಸುತ್ತಿರುವ ಪುಸ್ತಕಂ ರಮಾ ಅವರಿಗೆ ಭಾನುವಾರ (ಡಿ. 5) ಮಲ್ಲೇಶ್ವರದ ಸೇವಾಸದನದಲ್ಲಿ ಅನನ್ಯ ಪುರಸ್ಕಾರ ಪ್ರದಾನವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.