ADVERTISEMENT

ಹಿರಿಯ ನಾಗರಿಕರ ನೆನೆಯುತ್ತ...

ಯು.ಪಿ.ಪುರಾಣಿಕ್
Published 30 ಸೆಪ್ಟೆಂಬರ್ 2011, 19:30 IST
Last Updated 30 ಸೆಪ್ಟೆಂಬರ್ 2011, 19:30 IST
ಹಿರಿಯ ನಾಗರಿಕರ ನೆನೆಯುತ್ತ...
ಹಿರಿಯ ನಾಗರಿಕರ ನೆನೆಯುತ್ತ...   

ಇಂದು ಶನಿವಾರ. ಹಿರಿಯ ನಾಗರಿಕರ ದಿನ. 60 ವರ್ಷ ದಾಟಿದ ವ್ಯಕ್ತಿಗಳನ್ನು ಹಿರಿಯ ನಾಗರಿಕರೆಂದು ಪರಿಗಣಿಸಲಾಗುತ್ತಿದೆ. ಇತ್ತೀಚಿನ ಜನಗಣತಿ ವರದಿ ಪ್ರಕಾರ ಭಾರತದ ಒಟ್ಟು ಜನಸಂಖ್ಯೆಯಲ್ಲಿ 63 ಕೋಟಿ ಪುರುಷರು, ಹಾಗೂ 58 ಕೋಟಿ ಮಹಿಳೆಯರಿದ್ದಾರೆ. ಅವರಲ್ಲಿ 15 ಕೋಟಿ ಹಿರಿಯ ನಾಗರಿಕರು.

ಇತ್ತೀಚಿನ ದಿವಸಗಳಲ್ಲಿ ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುತ್ತಿರುವುದರಿಂದ, ಇವರಿಗೆ ತಂದೆ ತಾಯಿ ಅತ್ತೆ ಮಾವಂದಿರನ್ನು ನೋಡಿಕೊಳ್ಳಲು ಸಮಯವೇ ಸಿಗುತ್ತಿಲ್ಲ. ಇದರಿಂದಾಗಿ ಅಲ್ಲಲ್ಲಿ ವೃದ್ಧಾಶ್ರಮಗಳು ತಲೆ ಎತ್ತುತ್ತಿವೆ. ವೃದ್ಧಾಶ್ರಮಗಳಲ್ಲಿ, ಊಟ, ವಸತಿ, ಮನೋರಂಜನೆ ಕಾರ್ಯಕ್ರಮಗಳು, ಔಷಧೋಪಚಾರ ಇತ್ಯಾದಿ ಎಲ್ಲಾ ಸೌಕರ್ಯಗಳು ದೊರಕಿದರೂ `ಮನಶ್ಯಾಂತಿ~ ದೊರೆಯುವುದಿಲ್ಲ.  

 ಕಾಲಚಕ್ರಕ್ಕೆ ಅಪವಾದವಾಗಿ ಉಳಿಯಲು ಯಾರಿಂದಲೂ ಸಾಧ್ಯವಾಗಿಲ್ಲ. ಎಳೆ ವಯಸ್ಸಿನಲ್ಲಿ ಆರೋಗ್ಯ ಹಾಗೂ ಆರ್ಥಿಕ ಶಿಸ್ತನ್ನು ಅಕ್ಷರಶಃ ಪರಿಪಾಲಿಸಿದಲ್ಲಿ ವಯಸ್ಸು ಮೀರುತ್ತಿದ್ದಂತೆ, ಉಳಿಸಿದ ಹಣ ನಿಮ್ಮನ್ನು ಉಳಿಸುತ್ತದೆ.

ಹಿರಿಯ ನಾಗರಿಕರಿಗಾಗಿ ಸರ್ಕಾರ ಹಲವು ಸೌಲಭ್ಯ, ಸವಲತ್ತುಗಳನ್ನು  ಜಾರಿಯಲ್ಲಿ ತಂದಿದೆ. ಬ್ಯಾಂಕ್ ಠೇವಣಿಯ ಮೇಲೆ, ವಿಮಾನ, ರೈಲು ಹಾಗೂ ಬಸ್ಸುಗಳಲ್ಲಿ ಪ್ರಯಾಣಿಸುವಾಗ, ಔಷಧ ಖರೀದಿಸುವಾಗ, ಸಾಲ ಪಡೆಯುವಾಗ ಮತ್ತು ಇಳಿವಯಸ್ಸಿನ ಪಿಂಚಣಿ ಇವೇ ಮೊದಲಾದ ವಿಚಾರಗಳಲ್ಲಿ ಕೆಲವು ಮಾಹಿತಿ ಇಲ್ಲಿದೆ.

65 ವರ್ಷಗಳು ಮುಗಿದಿರುವ, ವಾರ್ಷಿಕ ಆದಾಯ ರೂ. 20,000 ರೊಳಗಿರುವ, ಬೇರಾವ ಸ್ಥಿರ ಆಸ್ತಿ ಹೊಂದದ, ಹಿರಿಯ ನಾಗರಿಕರಿಗೆ ಕರ್ನಾಟಕ ಸರಕಾರ ಪಿಂಚಣಿ ರೂಪದಲ್ಲಿ ಪ್ರತಿ ತಿಂಗಳೂ ರೂ. 400 ವಿತರಿಸುತ್ತದೆ.  ಈ ಹಣಕಾಸು ವರ್ಷದಿಂದ 60 ವರ್ಷ ದಾಟಿದ ವ್ಯಕ್ತಿಗಳು ರೂ. 2.5 ಲಕ್ಷ ತನಕ ಆದಾಯವಿದ್ದರೂ, ಆದಾಯ ತೆರಿಗೆ ಕೊಡುವ ಅವಶ್ಯವಿಲ್ಲ, ಜತೆಗೆ 80 ವರ್ಷ ದಾಟಿದಲ್ಲಿ ರೂ. 5 ಲಕ್ಷ ಆದಾಯವಿದ್ದರೂ ಆದಾಯ ತೆರಿಗೆ ಸಲ್ಲಿಸುವ ಅವಶ್ಯವಿಲ್ಲ. ಆದಾಯ ತೆರಿಗೆ ಸೆಕ್ಷನ್ 80ಡಿ. ಅನ್ವಯ ಆರೋಗ್ಯವಿಮೆ ಮಾಡಿದಲ್ಲಿ ರೂ. 20,000 ತನಕ ಕಟ್ಟಿದ ಪ್ರೀಮಿಯಮ್ ಆದಾಯದಿಂದ ವಜಾ ಮಾಡಿ ತೆರಿಗೆ ಸಲ್ಲಿಸಬಹುದು.

ಹಿರಿಯ ನಾಗರಿಕರಿಗೆ ಎಲ್ಲಾ ಬ್ಯಾಂಕುಗಳಲ್ಲಿ ಸಾಮಾನ್ಯ ಠೇವಣಿದಾರರಿಗಿಂತ ಶೇ 1/2 ದಿಂದ ಶೇ ಒಂದರ ತನಕ ಹೆಚ್ಚಿನ ಬಡ್ಡಿ ಠೇವಣಿಯ ಮೇಲೆ ದೊರೆಯುತ್ತದೆ.
ಸರ್ಕಾರಿ ಬಸ್ಸುಗಳಲ್ಲಿ 65 ದಾಟಿದ ವ್ಯಕ್ತಿಗಳಿಗೆ ಟಿಕೆಟ್‌ನ ದರದಲ್ಲಿ ಶೇ 25, ರೈಲು ಪ್ರಯಾಣದಲ್ಲಿ 58 ವರ್ಷ ದಾಟಿದ ಮಹಿಳೆಯರು ಹಾಗೂ 60 ವರ್ಷ ಮೇಲ್ಪಟ್ಟ ಪುರುಷರಿಗೆ  ಕ್ರಮವಾಗಿ ಶೇ 50 ಹಾಗೂ ಶೇ 40 ರಷ್ಟು ರಿಯಾಯ್ತಿ ದೊರೆಯುತ್ತದೆ. ಅದೇ ರೀತಿ ವಿಮಾನದಲ್ಲಿ ಪ್ರಯಾಣಿಸುವಾಗಲೂ ಆಯಾ ಕಂಪೆನಿಗಳ ನಿಯಮದಂತೆ ರಿಯಾಯ್ತಿ ಲಭ್ಯ.

ಹಿರಿಯ ನಾಗರಿಕರು ಸ್ವಂತ ಮನೆ ಹೊಂದಿದಲ್ಲಿ, ತಮ್ಮ ಇಳಿವಯಸ್ಸಿನಲ್ಲಿ, ಆರ್ಥಿಕ ಸಂಕಷ್ಟಕ್ಕೊಳಗಾದರೆ,  `ರಿವರ್ಸ್ ಮಾರ್ಟ್‌ಗೇಜ್~ ಮೊರೆ ಹೋಗಬಹುದು. ಈ ರೀತಿ ಪಡೆದ ಸಾಲ ಅಥವಾ ಸಾಲದ ಮೇಲಿನ ಬಡ್ಡಿಯನ್ನು ತಮ್ಮ ಜೀವಿತಕಾಲದಲ್ಲಿ ಬ್ಯಾಂಕುಗಳಿಗೆ ಮರುಪಾವತಿ ಮಾಡುವ ಅವಶ್ಯವಿರುವುದಿಲ್ಲ. ಇವರ ಕಾಲಾನಂತರ ಅಡಮಾನ ಮಾಡಿದ ಮನೆಯನ್ನು ಬಹಿರಂಗವಾಗಿ ಬ್ಯಾಂಕಿನವರು ಮಾರಾಟ ಮಾಡಿ ತಮ್ಮ ಅಸಲು ಬಡ್ಡಿಯನ್ನು ಭರಿಸಿಕೊಳ್ಳುತ್ತಾರೆ. ಮನೆ ಹಿರಿಯ ನಾಗರಿಕರ ಹೆಸರಿನಲ್ಲಿದ್ದು ಪತಿ ಅಥವಾ ಪತ್ನಿ 60 ವರ್ಷ ದಾಟಿದವರಾಗಿರಬೇಕು. ಇದೇ ಮನೆಯಲ್ಲಿ ಅವರು ವಾಸಿಸುತ್ತ ಇರಬೇಕು. ಸಾಲದ ಮೊತ್ತ ಆಸ್ತಿಯ ಮಾರುಕಟ್ಟೆಯ ಶೇ 75 ಇರುತ್ತದೆ.

ಜೀವನದ ಸಂಜೆ ಸುಖಮಯವಾಗಲು ಇಳಿವಯಸ್ಸಿನ ಉಳಿತಾಯ ಸಹಾಯವಾಗುತ್ತದೆ. ಮುಪ್ಪಿನಲ್ಲಿ ಯಾರ ಬಳಿಗೂ ಕೈ ಚಾಚದಂತೆ ಇರಬೇಕು. ಜತೆಗೆ ಸರ್ಕಾದಿಂದ ಸಿಗುವ ಸೌಲತ್ತುಗಳನ್ನು ಪಡೆಯಲು ಮರೆಯಬಾರದು.
 

ಹಿರಿಯ ನಾಗರಿಕರಿಗೆ ಪ್ರಶಸ್ತಿ
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ: ಶನಿವಾರ ವಿಶ್ವ ಹಿರಿಯ ನಾಗರಿಕರ ದಿನಾಚರಣೆ, ಹಿರಿಯ ನಾಗರಿಕರ ಆರೋಗ್ಯ ರಕ್ಷಣೆ ಕಾರ್ಯಕ್ರಮ. ಸಚಿವ  ಸಿ.ಸಿ. ಪಾಟೀಲ್ ಅವರಿಂದ ಹಿರಿಯ ನಾಗರಿಕರಿಗೆ ಪ್ರಶಸ್ತಿ ಪ್ರದಾನ. ನಂತರ ಸಾಂಸ್ಕೃತಿಕ ಕಾರ್ಯಕ್ರಮ. ಉದ್ಘಾಟನೆ: ಡಿ.ವಿ.ಸದಾನಂದಗೌಡ. ಅತಿಥಿಗಳು: ಆರ್.ಅಶೋಕ್, ಡಾ.ವಿ.ಎಸ್. ಮಳೀಮಠ್, ಎಂ.ಚಂದ್ರಪ್ಪ, ಸುಧಾಕರ್ ಚತುರ್ವೇದಿ. ಅಧ್ಯಕ್ಷತೆ: ಡಾ.ಡಿ. ಹೇಮಚಂದ್ರ ಸಾಗರ್.
ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಬೆಳಿಗ್ಗೆ 11.

 ಸನ್ಮಾನ
ಕರ್ನಾಟಕ ಹಿರಿಯ ನಾಗರಿಕ ವೇದಿಕೆಗಳ ಒಕ್ಕೂಟ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ: ಶನಿವಾರ ವಿಶ್ವ ಹಿರಿಯ ನಾಗರಿಕರ ದಿನಾಚರಣೆ. ಅತಿಥಿಗಳು: ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಡಾ.ಎಂ.ಕೆ. ಪಾಂಡುರಂಗಶೆಟ್ಟಿ, ಎ.ಎಸ್. ಸದಾಶಿವಯ್ಯ, ಎಂ.ಜೆ. ಸುರೇಂದ್ರಕುಮಾರ್. ಅಧ್ಯಕ್ಷತೆ: ಧರ್ಮಸ್ಥಳ ಸುರೇಂದ್ರಕುಮಾರ್.
ಸ್ಥಳ: ವಾಸವಿ ಟ್ರಸ್ಟ್ ಸಭಾಂಗಣ, ವಾಣಿವಿಲಾಸ ರಸ್ತೆ, ಬಸವನಗುಡಿ. ಬೆಳಿಗ್ಗೆ 11.

ಹಿರಿಯರ ಮೇಳ
ಮನಃಶಾಂತಿ ಟ್ರಸ್ಟ್ ಹಿರಿಯ ನಾಗರಿಕರ ಸೇವೆಯಲ್ಲಿ ತನ್ನನ್ನು ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದೆ. ವಿಶ್ವ ಹಿರಿಯರ ದಿನ ಹಾಗೂ ಗಾಂಧಿ ಜಯಂತಿ ಅಂಗವಾಗಿ ಟ್ರಸ್ಟ್ ಶನಿವಾರ ಮತ್ತು ಭಾನುವಾರ ಹಿರಿಯ ನಾಗರಿಕರ ಮೇಳ ಆಯೋಜಿಸಿದೆ.
ಮೇಳದಲ್ಲಿ ಹಿರಿಯರು ಸ್ವತಂತ್ರ ಜೀವನ ನಡೆಸಲು ಉಪಕರಣಗಳು, ಬ್ಯಾಂಕ್, ಸಾಂತ್ವನ ಸಲಹಾ/ಸೇವಾ ಕೇಂದ್ರಗಳು, ಆರೋಗ್ಯ ಸೇವೆ, ಕಾನೂನು ಸಲಹೆ,  ಪ್ರಯಾಣ ಸಲಹೆ ಮತ್ತಿತರ ಸೇವೆ ಲಭ್ಯ. 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಉಚಿತ ಆರೋಗ್ಯ ತಪಾಸಣೆ, ನೇತ್ರ, ಕಿವಿ, ಹಾಗೂ ದಂತ ಪರೀಕ್ಷೆ ಸೌಲಭ್ಯ. ಸ್ಥಳ: ಮರಾಠ ವಿದ್ಯಾರ್ಥಿ ನಿಲಯ ಛತ್ರ, ನಂ.4/1, ಬಸವನಗುಡಿ ರಸ್ತೆ. ಬೆಳಿಗ್ಗೆ 10ರಿಂದ ರಾತ್ರಿ 8.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.