ADVERTISEMENT

ಹೀಗೂ ಎಳ್ಳು ಬೀರಬಹುದು

ಶಾರದಾ ಶಾಮಣ್ಣ
Published 6 ನವೆಂಬರ್ 2012, 19:30 IST
Last Updated 6 ನವೆಂಬರ್ 2012, 19:30 IST

ಕಳೆದ ಸಲ ನಾನು ಎಳ್ಳು ಬೀರಿದ್ದು ಆಟೊರಿಕ್ಷಾದಲ್ಲೇ. ದೂರದೂರವಿರುವ ನಾಲ್ಕೈದು ಮನೆಗಳಿಗೆ ಎಳ್ಳು ಬೀರಬೇಕಾಗಿತ್ತು. ಇಲ್ಲಿ ಟ್ರಾಫಿಕ್ ಜಾಮ್ ಫಜೀತಿ. ಒಂದು ಆಟೊ ಮಾಡಿಕೊಂಡು, ಎಳ್ಳುಬೀರುವ ಮನೆಗಳಿಗೆ ಹೊರಟೆ. ಸಕ್ಕರೆ ಅಚ್ಚು, ಬಾಳೆಹಣ್ಣು, ಎಳ್ಳು ಎಲ್ಲವನ್ನೂ ಪ್ಯಾಕೆಟ್‌ನಲ್ಲಿ ಇಟ್ಟುಕೊಂಡು ಬೀರಿದ್ದಾಯಿತು. ಇನ್ನು ಮನೆ ಸೇರುವ ಧಾವಂತ.

ಮನೆ ಸೇರಲು ಆಟೊ ಹತ್ತಿದೆ. ಆಟೊದವನು ಬಹಳ ಸಹನಾಮಯಿ. ನನ್ನೊಡನೆ ಚೆನ್ನಾಗಿ ಸಹಕರಿಸಿದ. ಆದರೆ ಈಗೊಂದು ಹೊಸ ಸಮಸ್ಯೆ ಎದುರಾಯಿತು. ನಾನು ಎಳ್ಳು ಬೀರಿದ ಮನೆಯವರೆಲ್ಲಾ ನನಗೂ ಬೀರಿದ್ದರು. ನಾಲ್ಕೈದು ಪ್ಯಾಕೆಟ್‌ಗಳಿದ್ದವು. ಇದನ್ನು ಹೇಗೆ ವಿಲೇವಾರಿ ಮಾಡುವುದು?

ಅಷ್ಟರಲ್ಲಿ ನನ್ನ ಆಟೊ ಸಿಗ್ನಲ್ ಒಂದರಲ್ಲಿ ನಿಂತಿತು. ಪಕ್ಕದಲ್ಲಿಯೇ ಸ್ಕೂಟರ್ ಒಂದು ಬಂದು ನಿಂತಿತು. ದಂಪತಿ ಅದರಲ್ಲಿದ್ದರು. ಅದೃಷ್ಟವಶಾತ್ ಸ್ಕೂಟರ್‌ನಲ್ಲಿ ಕೂತಿದ್ದ ಮಹಿಳೆ ಹೆಂಡತಿ ನನಗೆ ಅಭಿಮುಖವಾಗಿಯೇ ಕುಳಿತಿದ್ದಳು. ಥಟ್ಟನೆ ನನಗೆ ಎಳ್ಳಿನ ಪ್ಯಾಕೆಟ್ ವಿಲೇವಾರಿ ಮಾಡುವ ಆಲೋಚನೆಯೊಂದು ಹೊಳೆದು ಎಳ್ಳಿನ ಪ್ಯಾಕೆಟ್ಟನ್ನು ಅವಳ ಕೈಯಲ್ಲೇ ಇಟ್ಟುಬಿಟ್ಟೆ.

ಸ್ವಲ್ಪವೇ ಮುಂದೆ ನಿಂತಿದ್ದ ಸ್ಕೂಟರ್ ಹತ್ತಿರ ತನ್ನ ಆಟೊ ನಿಲ್ಲಿಸಿ, ನಾನು ಎಳ್ಳು ಬೀರಲು ಸಹಕರಿಸಿದ. ನನಗೆ ತುಂಬಾ ಸಂತೋಷವಾಯಿತು. ಸ್ಕೂಟರ್‌ನಲ್ಲಿ ಕುಳಿತಿದ್ದ ಯುವತಿಯೂ ಸಂತೋಷವಾಗಿಯೇ ಸ್ವೀಕರಿಸಿ ಕೈಬೀಸಿದಳು. ನಾನು ಕೈಬೀಸುವ ಹೊತ್ತಿಗೆ ಸ್ಕೂಟರ್ ಚಾಲನೆಯಾಯಿತು.

ನನ್ನ ಕೈಯಲ್ಲಿ ಇನ್ನೂ ಎರಡು ಮೂರು ಪ್ಯಾಕೆಟ್‌ಗಳು ಉಳಿದಿದ್ದವು. ಏನು ಮಾಡುವುದು ಎಂದು ಯೋಚಿಸುವಷ್ಟರಲ್ಲಿ ಮತ್ತೊಂದು ವೃತ್ತ ಸಿಕ್ಕಿತು. ಅದೇನೂ ಅಷ್ಟು ದೊಡ್ಡದಾಗಿರಲಿಲ್ಲ. ಅಲ್ಲಿ ಒಬ್ಬ ಪೊಲೀಸ್ ಕಾರ್ಯನಿರತನಾಗಿದ್ದ. ಎಳ್ಳು ಬಾಗಿನ ಕೊಡುವ ವಿಷಯವನ್ನು ಆಟೊದವನಿಗೆ ತಿಳಿಸಿದೆ.
 
ಆಟೊದವನು ಸರ್ಕಲ್‌ನಲ್ಲಿ ತನ್ನ ಆಟೊ ವೇಗವನ್ನು ತುಸು ಕಡಿಮೆ ಮಾಡಿದ. ಪೊಲೀಸ್ ಕೂಡ ಆಟೊ ಹತ್ತಿರಕ್ಕೆ ಬಂದರು. ಕೂಡಲೇ ನಾನು ಕೈಲಿದ್ದ ಎಳ್ಳಿನ ಪ್ಯಾಕೆಟನ್ನು ಅವರ ಕೈಲಿಟ್ಟೆ. ಅವನೂ ತಬ್ಬಿಬ್ಬು. ನಾನು ಒಳಗಿನಿಂದಲೇ ಅದನ್ನು ಬಿಚ್ಚಿ ತಿನ್ನುವಂತೆ ಕೈಸನ್ನೆ ಮಾಡಿದೆ. ಆಟೊ ಮುಂದೆ ಓಡಿತು.

ಇಷ್ಟರಲ್ಲಿ ನನ್ನ ಮನೆ ಬಂದಿತ್ತು. ಇಳಿದೆ. ಉಳಿದ ಪ್ಯಾಕೆಟ್‌ಗಳ ಮೇಲೆ ದಕ್ಷಿಣೆಯನ್ನೂ ಧಾರಾಳವಾಗಿಯೇ ಇಟ್ಟು ಬೀಳ್ಕೊಟ್ಟೆ. ಅಪರೂಪದ ಎಳ್ಳು ಬೀರುವಿಕೆಗೆ ಅನುವು ಮಾಡಿಕೊಟ್ಟ ಆಟೊದವನನ್ನು ಮನಸ್ಸಿನಲ್ಲೇ ವಂದಿಸಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.