ADVERTISEMENT

ಹೀಗೊಂದು ಹವ್ಯಾಸದ ಕವಲು...

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST

ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಹವ್ಯಾಸವಿರುತ್ತದೆ. ಅದರಲ್ಲೂ ಸ್ವಲ್ಪ ವಿಭಿನ್ನ ಎನ್ನುವಂಥದ್ದೇನನ್ನಾದರೂ ಮಾಡಿದಲ್ಲಿ ಚಿಕ್ಕಚಿಕ್ಕ ವಸ್ತುವಿನಲ್ಲೂ ಹೊಸತೇನೋ ಕಾಣುತ್ತದೆ. ನಾಣ್ಯಗಳ ಸಂಗ್ರಹಣೆಯನ್ನು ಎಲ್ಲರೂ ಮಾಡುತ್ತಾರೆ. ಆದರೆ ಇವರ ಕೈಯಲ್ಲಿರುವ ನಾಣ್ಯಗಳು ವಿಭಿನ್ನ. ಬಾಲಚಂದ್ರ ಕುಪ್ಪಾಸ್ವಾಮಿ ಇಂಥ ಹವ್ಯಾಸ ರೂಢಿಸಿಕೊಂಡಿದ್ದಾರೆ. ಅವರ ಸಂಗ್ರಹದಲ್ಲಿರುವುದು ಬರೀ ಸ್ಮಾರಕ ನಾಣ್ಯಗಳು.

  ಈ ಹವ್ಯಾಸಕ್ಕಿಳಿಯುವಾಗ ಅವರ ಕೈಯಲ್ಲಿದ್ದದ್ದು ಕೆಲವೇ ನಾಣ್ಯಗಳು. ಅವೆಲ್ಲವೂ ಅಜ್ಜಿ, ತಾಯಿಯಿಂದ ಬಳುವಳಿಯಾಗಿ ಬಂದದ್ದು. ಈಗ ಅವರಲ್ಲಿ ಬೇರೆ ಬೇರೆ ಬಣ್ಣ, ವಿನ್ಯಾಸದ ಅಂದಾಜು 60ಕ್ಕೂ ಹೆಚ್ಚು ನಾಣ್ಯಗಳಿವೆ. 1950ನೇ ಇಸವಿಯ ಹಳೆಯ ಒಂದು ರೂಪಾಯಿ ನಾಣ್ಯ, 20 ಪೈಸೆ, 10 ಪೈಸೆ, 5 ಪೈಸೆ, 1 ಪೈಸೆ ಜೊತೆಗೆ ಕೆಲವು 10, 25 ಪೈಸೆಯ ಸ್ಟೀಲ್ ನಾಣ್ಯಗಳು ಅವರಲ್ಲಿ ಇವೆ.

ಇತ್ತೀಚೆಗೆ ಅಮೆರಿಕಕ್ಕೆ ಹೋದಾಗ ಅಲ್ಲಿನ 12 ನಾಣ್ಯಗಳನ್ನು ಸಂಗ್ರಹಿಸಿರುವ ಅವರಿಗೆ ಸ್ನೇಹಿತ 38 ನಾಣ್ಯಗಳನ್ನು ಕೊಟ್ಟಿದ್ದಾರೆ. ಅದರಿಂದ ತಮ್ಮ ಸಂಗ್ರಹ ಬೆಳೆದ ಸಾರ್ಥಕ್ಯ ಅವರದ್ದು.

`1999ರಲ್ಲಿ ಅಮೆರಿಕ `50 ಸ್ಟೇಟ್ ಕ್ವಾಟರ್~ ಕಾರ್ಯಕ್ರಮದಲ್ಲಿ  ಸ್ಮಾರಕ ನಾಣ್ಯಗಳನ್ನು ಬಿಡುಗಡೆ ಮಾಡಿತು. ಈಗ ನನ್ನ ಬಳಿ ಆ 50 ನಾಣ್ಯಗಳೂ ಇವೆ. ಇದಲ್ಲದೆ 2009ರಲ್ಲಿ ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ ಮತ್ತು ಅಮೆರಿಕಾ ಗಡಿಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಿರುವ ನಾಣ್ಯಗಳೂ ಉಂಟು. ಕೇವಲ ನಾಣ್ಯ ಸಂಗ್ರಹ ಮಾತ್ರವಲ್ಲದೆ ಅದರ ಇತಿಹಾಸ, ಮೂಲದ ಬಗ್ಗೆಯೂ ಬಾಲಚಂದ್ರ ಅವರಲ್ಲಿ ಮಾಹಿತಿ ಇದೆ.

ರವೀಂದ್ರನಾಥ್ ಟ್ಯಾಗೋರ್ ಅವರ 150ನೇ ವರ್ಷದ ಹುಟ್ಟುಹಬ್ಬದ ಸಂದರ್ಭದ ನಾಣ್ಯ, ಲಾಲ್ ಬಹುದ್ದೂರ್ ಶಾಸ್ತ್ರಿ ಶತಮಾನೋತ್ಸವ,  ಐಎಲ್‌ಓ ವರ್ಲ್ಡ್ ಆಫ್ ವರ್ಕ್, ಸೆಲ್ಯುಲಾರ್ ಜೈಲ್, ಪೋರ್ಟ್ ಬ್ಲೇರ್, 25ನೇ ವರ್ಷದ ಸ್ವಾತಂತ್ರ್ಯ ಜಯಂತಿ, 89ನೆಯ ಪಾರ್ಲಿಮೆಂಟರಿ ಯೂನಿಯನ್ ಕಾನ್ಫರೆನ್ಸ್ ಸಂದರ್ಭದ ನಾಣ್ಯಗಳು ಬಾಲಚಂದ್ರ ಅವರ ಸಂಗ್ರಹದ ಪೆಟ್ಟಿಗೆಯಲ್ಲಿದೆ.

ತಮ್ಮಲ್ಲಿರುವ ಪ್ರತಿಭೆಯ ಬಗ್ಗೆ ಎಲ್ಲರಿಗೂ ಒಂದು ರೀತಿಯ ಹೆಮ್ಮೆ ಇರುತ್ತದೆ. ಹಾಗೇ ಬಾಲಚಂದ್ರ ಅವರಿಗೂ ತಮ್ಮ  ಹವ್ಯಾಸದ ಬಗ್ಗೆ ಹೆಮ್ಮೆ ಇದೆ.  `ನನ್ನ ಅಜ್ಜಿ, ತಾಯಿ ಅವರ ಸಂಗ್ರಹದಲ್ಲಿರುವ ನಾಣ್ಯವನ್ನು ನನಗೆ ಹಸ್ತಾಂತರ ಮಾಡಿದರು. ನಾನೂ ಇದನ್ನು ನನ್ನ ಮಕ್ಕಳಿಗೆ ನೀಡುತ್ತೇನೆ~ ಎಂದು ಖುಷಿಯಿಂದ ಹೇಳಿದರು.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.