ADVERTISEMENT

ಹುಡುಗಿಯರ ತಲೆ ಮೇಲೆ ಕಡ್ಡಿ?

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2018, 19:30 IST
Last Updated 28 ಮಾರ್ಚ್ 2018, 19:30 IST
ಹುಡುಗಿಯರ  ತಲೆ ಮೇಲೆ ಕಡ್ಡಿ?
ಹುಡುಗಿಯರ ತಲೆ ಮೇಲೆ ಕಡ್ಡಿ?   

* ಪ್ರಭಾ ಹೆಗಡೆ ಭರಣಿ

‘ಕಾಲ’ಗಳ ವಾತಾವರಣಗಳಿಗೆ ಮೂಗು ಮುರಿಯುತ್ತೇವೆ ನಾವು. ಅದರಲ್ಲೂ ಬೇಸಿಗೆ ಎಂದರೆ ಇನ್ನೂ ಬೇಸರ. ಸೆಕೆಯ ಉರಿಯ ಜೊತೆಗೆ ಬೆವರಿನ ವಾಸನೆ. ಬೇಸಿಗೆ ಅಂದರೇನೆ ಅಲವರಿಕೆ ಪಡುವ ಮಂದಿಯನ್ನು ನಾವು ನೋಡುತ್ತೇವೆ.

ಈ ಬೇಸಿಗೆಯನ್ನು ಎಲ್ಲ ಕೃತಕ ಗಾಳಿಯ ಮೂಲಗಳನ್ನು(ಫ್ಯಾನ್, ಎ.ಸಿ.) ಸ್ವಾಗತಿಸುತ್ತಿವೆ. ಬೇಸಿಗೆ ಪ್ರಾರಂಭವಾಗಿರುವ ಈ ಹಂತದಲ್ಲಿ ಹತ್ತಿಯ ಉಡುಗೆಗಳಿಗೆ ಎಲ್ಲಿಲ್ಲದ ಬೇಡಿಕೆ. ಬೇಸಿಗೆಯು ಎಲ್ಲರನ್ನೂ ಸುಸ್ತಾಗಿಸುವುದು ಸುಳ್ಳಲ್ಲ. ಈ ಬೇಸಿಗೆಯ ಕಿರಿಕಿರಿ ಹುಡುಗರಿಗಿಂತ ಹುಡುಗಿಯರಿಗೆ ಜಾಸ್ತಿ. ಉಡುಗೆಯಿಂದ ಹಿಡಿದು ಮುಡಿಯವರೆಗೂ ಅವರಿಗೆ ಸಂಭಾಳಿಸುವುದು ಕಷ್ಟವೇ ಸರಿ.

ADVERTISEMENT

ಹುಡುಗಿಯರಿಗೆ ಇತ್ತೀಚಿಗೆ ಕೂದಲಿನ ಮೇಲೆ ಲಕ್ಷ್ಯ- ನಿರ್ಲಕ್ಷ್ಯಗಳ ಮಿಶ್ರ ಭಾವವಿದೆ. ಜಡೆಯ ಕಾಲ ಯಾವಾಗಲೋ ಹೋಗಿದೆ. ಆದರೂ ಕೂದಲಿನ ವ್ಯಾಮೋಹ ಇದ್ದೇ ಇದೆ. ಆದರೆ ಈ ಸೆಕೆಯ ಕಾಲದಲ್ಲಿ ಕೂದಲು ಮಾತ್ರ ತಲೆ ನೋವು. ಯಾವಾಗಲೂ ಸುಮಾರು ಹುಡುಗಿಯರ ಕೇಶವು ಬಗೆ ಬಗೆಯ ಕೇಶ ವಿನ್ಯಾಸಗಳಲ್ಲಿ ತೊಡಗಿರುತ್ತದೆ. ಆದರೆ ಈ ಬೇಸಿಗೆ ಕಾಲದಲ್ಲಿ ಹಾಗಿಲ್ಲ. ಕೂದಲನ್ನು ಇಳಿ ಬಿಡಲೇ ಹೆದರುತ್ತಾರೆ. ಆದ್ದರಿಂದಲೇ ಚೀನಾದ ಸಾಂಪ್ರದಾಯಿಕ ‘ಸ್ಟಿಕ್’ (ಕಡ್ಡಿ) ಹುಡುಗಿಯರ ಮುಡಿಗೆ ಸಹಕರಿಸುತ್ತದೆ. ಹೌದು, ಬೇಸಿಗೆಯಲ್ಲಿ ಹುಡುಗಿಯರು ಕೇಶವಿನ್ಯಾಸಕ್ಕೆ ಹೆಚ್ಚಾಗಿ ಬಳಸುವುದೇ ಈ ಹೇರ್ ಸ್ಟಿಕ್ ಗಳನ್ನು. ಸಾಮಾನ್ಯ ಕಡ್ಡಿಯಂತೆ ಇರದ ಹೇರ್ ಸ್ಟಿಕ್ ಇತರ ಕಡ್ಡಿಗಳಿಗಿಂತ ಭಿನ್ನ. ತುದಿ ಚೂಪಾಗಿ ಬುಡ ಅದಕ್ಕಿಂತ ಸ್ವಲ್ಪ ದೊಡ್ಡದಾಗಿ, ಗೋಲಾಕಾರದ ಸುತ್ತಳತೆ ಇರುತ್ತದೆ.

ಶಾಂಪೂ ಜಾಹೀರಾತಿಗಾಗಿ ಈ ಸ್ಟಿಕ್‌ನ ಬಳಕೆ ಆದ ಮೇಲೆ ಆ ಶ್ಯಾಂಪೂವಿನಷ್ಟೇ ಸ್ಟಿಕ್ ಸಹಿತ ಪ್ರಚಾರ ಪಡೆದುಕೊಂಡಿತು. ಉದ್ದ ಕೂದಲಿನ ಹುಡುಗಿಯು ತನ್ನ ಕೂದಲಿನ ಅಳತೆಯನ್ನು ಈ ಸ್ಟಿಕ್‌ನಲ್ಲಿ ಮರೆ ಮಾಚುತ್ತಾಳೆ. ಈ ಸ್ಟಿಕ್‌ಗೆ ಕೂದಲು ಉದ್ದವೋ, ಸಣ್ಣವೋ, ದಪ್ಪವೋ, ಚಿಕ್ಕದೋ ಎಲ್ಲದಕ್ಕೂ ಹೊಂದಿಸಿಕೊಳ್ಳಬಹುದು. ಆದರೆ ಒಂದು ಸುತ್ತು ಹೊಡೆಸಲಾಗದ ಕೂದಲಿರುವವರಿಗೆ ಈ ಸ್ಟಿಕ್ ಹೊಂದಿಕೊಳ್ಳುವುದಿಲ್ಲ. ಆದರೆ ಅವರಿಗೆ ಈ ಸ್ಟಿಕ್‌ನ ಅಗತ್ಯವೂ ಇರುವುದಿಲ್ಲವೆನ್ನಿ.

ಒಮ್ಮೊಮ್ಮೆ ಕೆಲ ಮಂದಿ ಉದ್ದದ ಪೆನ್ಸಿಲನ್ನು ಸ್ಟಿಕ್‌ನ ಪರ್ಯಾಯವಾಗಿ ಬಳಸುತ್ತಾರೆ. ಆದರೆ ಪೆನ್ಸಿಲ್ ಸ್ಟಿಕ್‌ನ ಹಾಗೆ ಕೂದಲನ್ನು ಬಿಗಿಯಾಗಿ ಹಿಡಿದುಕೊಳ್ಳುವುದಿಲ್ಲ. ಸುಲಭವಾಗಿ ಕಳಚುತ್ತದೆ. ಆದ್ದರಿಂದಲೇ ಸ್ಟಿಕ್ ನ ಬಳಕೆಯೇ ಉತ್ತಮ. ಆದರೆ ತೀರಾ ನೇರ ಕೂದಲಿದ್ದು, ನೈಸಾಗಿದ್ದರೆ ಸ್ಟಿಕ್ ಕೂಡ ನಿಲ್ಲುವುದು ಕಷ್ಟವೇ. ಸ್ಟಿಕ್‌ನ ರಚನೆಯಲ್ಲಿ‌ ಸ್ವಲ್ಪ ವ್ಯತ್ಯಾಸವಿದ್ದರೂ ಕೂದಲನ್ನು ಎಳೆದು ನೋವುಂಟು ಮಾಡುತ್ತದೆ. ಆದರಿಂದ ನುಣುಪಾದ ಮೇಲ್ಮೈ ಹೇರ್ ಸ್ಟಿಕ್‌ನ ಸೌಂದರ್ಯವಲ್ಲ ಅದು ಅವಶ್ಯ. ಕೊಳ್ಳುವಾಗಲೂ ಇದರ ಗಮನವಿರಲೇಬೇಕು.

ಕೇಶ ವಿನ್ಯಾಸದಂತೆ ಈ ಸ್ಟಿಕ್ ಕೂಡ ಬಗೆ ಬಗೆಯ ವಿನ್ಯಾಸದ್ದಿರುತ್ತದೆ. ನಾನಾ ಬಗೆಯ ವಿನ್ಯಾಸದ ಈ ಹೇರ್ ಸ್ಟಿಕ್ ನ ಬೆಲೆಯಲ್ಲಿಯೂ ವೈವಿಧ್ಯತೆ ಇದೆ. ಕಡಿಮೆ ಬೆಲೆಯಿಂದ ಹೆಚ್ಚಿನ ದರದವರೆಗಿನ ಸ್ಟಿಕ್ ಅನ್ನು ನಾವು ಕಾಣುತ್ತೇವೆ. ಕೇಶ ವಿನ್ಯಾಸವಿಲ್ಲದಿದ್ದರೂ ಕೆಲ ಮಂದಿ ಈ ಸ್ಟಿಕ್‌ನಲ್ಲಿಯೇ ತಮ್ಮ ವಿಭಿನ್ನತೆ ತೋರಿಸುತ್ತಾರೆ. ಕೆಲವರಿಗೆ ಇದು ಕೇವಲ ಒಂದು ಅಗತ್ಯ ವಸ್ತುವಾದರೂ ಅದು ಒಂದು ಇಂದಿನ ಟ್ರೆಂಡ್ ಎಂದೇ ಹೇಳಬಹುದು.

ಹೇರ್ ಸ್ಟಿಕ್‌ನ ಬಳಕೆಯೂ ಅತೀ ಸುಲಭವಾಗಿದೆ. ಸಮಯವನ್ನೂ ಉಳಿಸುವ ಸ್ತ್ರೀ ಸ್ನೇಹಿ ಈ ಸ್ಟಿಕ್. ಗ್ರ್ಯಾಂಡ್ ಸ್ಟಿಕ್ ಒಂದು ಗ್ರ್ಯಾಂಡ್ ಲುಕ್ ಕೊಟ್ಟರೆ, ಸಾಮಾನ್ಯ ಸ್ಟಿಕ್ ಒಂದು ಆಕರ್ಷಣೆ ಕೊಡುತ್ತದೆ. ಬೇಸಿಗೆ ಆಗಲೇ ಲಗ್ಗೆ ಇಟ್ಟಾಗಿದೆ. ಈ ಸೆಕೆಯಿಂದ ಪಾರಾಗಲು ನಾವು ಏನೇನೋ ಪಾಡು ಪಡುತ್ತಿದ್ದೇವೆ. ಬೇಸಿಗೆಯಲ್ಲಿ ಈ ಹೇರ್ ಸ್ಟಿಕ್ ಫ್ಯಾಷನ್ ಜೊತೆಗೆ ಅನುಕೂಲವೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.