ADVERTISEMENT

ಹೆಣ್ಮಕ್ಕಳ ಸ್ಫೂರ್ತಿ ಪಡೆದು...

ಪ್ರಜಾವಾಣಿ ವಿಶೇಷ
Published 14 ಮೇ 2012, 19:30 IST
Last Updated 14 ಮೇ 2012, 19:30 IST
ಹೆಣ್ಮಕ್ಕಳ ಸ್ಫೂರ್ತಿ ಪಡೆದು...
ಹೆಣ್ಮಕ್ಕಳ ಸ್ಫೂರ್ತಿ ಪಡೆದು...   

ಸದಾ ತುಂಟಾಟ, ನಗು ಬರಿಸುವ ಪೋಲಿ ಮಿಶ್ರಿತ ಮಾತು, ಕಾಲೆಳೆಯುತ್ತಲೇ ಕೇಳುಗರಿಗೆ ಮೋಡಿ ಮಾಡುತ್ತೇನೆ. ಕೇಳುಗರನ್ನು ಕುರಿ ಮಾಡಿ ನಗಿಸುವುದು ನನ್ನ ಶೈಲಿ.
 
ಇಂತಹ ಶೈಲಿಯನ್ನು ಯುವ ಕೇಳುಗ ವರ್ಗವೊಂದು ಇಷ್ಟಪಡುತ್ತದೆಂದೇ ಭಾವಿಸಿದ್ದೇನೆ. ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಸ್ಪಾನಿಷ್ ಹೀಗೆ ಯಾವ ಭಾಷೆಯಾದರೂ ಸೈ. ಆ ಭಾಷೆಯಲ್ಲಿ ರಂಜಿಸಿ ಕೇಳುಗರ ಹೃದಯ ಕದಿಯುವ ಶೈಲಿ ನನಗೆ ಕರಗತ.

ಮಾತಿನಿಂದ ಎದುರುಗಿರುವ ವ್ಯಕ್ತಿಯನ್ನು ಸದಾ ಖುಷಿಯಲ್ಲಿ ಇಡಲು ಸಾಧ್ಯ ವಾಗದಿದ್ದರೂ, ಸ್ವಲ್ಪಮಟ್ಟಿನ ನಗು ತರಿಸಿದರೆ ಮಾತನಾಡಿದವನ ಮಾತಿಗೊಂದು ಸಾರ್ಥಕತೆ ಒದಗಿಬಿಡುತ್ತದೆ. ಆ ಒಂದು ಉದ್ದೇಶ ಇಟ್ಟುಕೊಂಡೇ ಕಾರ್ಯಕ್ರಮವನ್ನು ಆರಂಭಿಸುತ್ತೇನೆ. ನಿರೂಪಣೆ ಸೇರಿದಂತೆ ಒಟ್ಟು ಸಮೂಹ ಮಾಧ್ಯಮದಲ್ಲಿರುವವರಿಗೆ ಮಾತು ಒಂದು ತೆರನಾದ ಬಂಡವಾಳ. ಈ ಬಂಡವಾಳವನ್ನು ಸಮರ್ಪಕವಾಗಿ ಹೂಡಲು ಎಡವಿದರೆ ನಿಮಗೆ ಅಭಿಮಾನವೆಂಬ ಲಾಭ ದೊರಕುವುದು ತುಸು ಕಷ್ಟ.

ಮೂಲತಃ ಚಿತ್ರದುರ್ಗದವನಾಗಿದ್ದರೂ ಹುಟ್ಟಿ ಬೆಳೆದಿದ್ದೆಲ್ಲ ಉದ್ಯಾನ ನಗರಿಯಲ್ಲೇ. ಪ್ರಾಥಮಿಕ, ಪ್ರೌಢ ಶಿಕ್ಷಣ, ಮೆಕ್ಯಾನಿಕ್‌ನಲ್ಲಿ ಎಂಜಿನಿಯರಿಂಗ್ ಸಹ ಇದೇ ನಗರಿಯಲ್ಲಿಯೇ ಮುಗಿಸಿದೆ. ಇದಾಗಿ ಆರು ತಿಂಗಳ ಕಾಲ ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಕಾರ್ಯನಿರ್ವಹಿಸಿದ್ದೆ. ಆದರೆ ಯಾಂತ್ರಿಕತೆ ಮತ್ತು ಶುಷ್ಕ ಜೀವನವು ನನ್ನನ್ನು ಆ ಕೆಲಸ ಬಿಡುವಂತೆ ಮಾಡಿತ್ತು. ಸಮಾಜಕ್ಕೆ ಏನಾದರೂ ಕೊಡುಗೆ ಕೊಡುವಂತಹ ವೃತ್ತಿಯಲ್ಲಿ ತೊಡಗಿಕೊಳ್ಳಬೇಕು ಎಂಬ ಆಸೆಯಿಂದಲೇ ಆರ್‌ಜೆ ಆದೆ. ಇದಾಗಿಲ್ಲ ಅಂದಿದ್ದರೆ ಯುವ ರಾಜಕೀಯ ನೇತಾರನಾಗಿ ಸಮಾಜಸೇವೆಯಲ್ಲಿ ತೊಡುಗುತ್ತಿದ್ದೆ. ಅದು ನನ್ನ ಕನಸು ಕೂಡ.

ಎಫ್‌ಎಂ ಗೆ ಬರುವ ಮುಂಚೆ ನನಗೆ ಯಾವುದೇ ಹಿನ್ನೆಲೆಯಿರಲಿಲ್ಲ. ಸಾಫ್ಟ್‌ವೇರ್ ಕೆಲಸ ಬಿಟ್ಟು ಹಲವು ಎಫ್‌ಎಂ ಕಂಪೆನಿಗಳ ಬಾಗಿಲು ತಟ್ಟಿದ್ದೆ. ಆದರೆ ಸಮಾಜ ಗುರುತಿಸುವಂತಹ ವೃತ್ತಿ ಮಾಡಬೇಕು ಮತ್ತು ನನ್ನಿಂದ ಈ ಸಮಾಜಕ್ಕೆ ಏನಾದರೂ ಸಹಾಯ ಮಾಡಬೇಕು ಎಂಬ ಗುರಿಯೇ ನನ್ನನ್ನು ಬಿಗ್ ಎಫ್‌ಎಂ ನ ಮೈಕ್ರೋಫೋನ್‌ವರೆಗೆ ತಂದು ನಿಲ್ಲಿಸಿತು.

ನಾಲ್ಕು ಗಂಟೆಯ ಅವಧಿಯಲ್ಲಿ ನಗು, ಹಾಸ್ಯ, ಜಾಲಿ ಮತ್ತು ಪೋಲಿ ಮಾತುಗಳೇ ತುಂಬಿದ್ದರೂ ಕೇಳುಗರ ತುಟಿಯಂಚಿನಲ್ಲಿ ನಗು ಖಂಡಿತ ಮಿಂಚುತ್ತದೆ. ಜನರನ್ನು ರಂಜಿಸಿ ಖುಷಿ ಪಡುವಾಗಲೇ ಒಂದು ರೀತಿಯ ಸಾರ್ಥಕ ಭಾವ. ಜೊತೆಗೆ, ಹುಡುಗಿಯರನ್ನು `ಡಾರ್ಲಿಂಗ್ ಡಾರ್ಲಿಂಗ್~ ಅಂತ ಕರೆದು ಅವರ ಮುಖ ಕೆಂಪಾಗಿಸುವುದು ನನ್ನ ಸ್ಟೈಲ್.
ನನ್ನ ಪ್ರಕಾರ ಪ್ರೀತಿ ಎಂದರೆ ಅಪ್ಪಟ ಕೊಡು-ಕೊಳ್ಳುವ ಕೆಲಸ.

ಸುಖಾಸುಮ್ಮನೆ ಯಾವುದೇ ಭ್ರಮೆಗೆ ಬಿದ್ದು ತ್ಯಾಗ ಎಂದು ಮಾತನಾಡಲು ಸಾಧ್ಯವಿಲ್ಲ. ವೇಗದ ಬದುಕಿನಲ್ಲಿ ಪ್ರಾಮಾಣಿಕವಾಗಿ, ಅಷ್ಟೇ ಪ್ರಾಯೋಗಿಕವಾಗಿ ಯೋಚಿಸುವುದು ಅಗತ್ಯ. ಇನ್ನು ಸ್ನೇಹವೆಂದರೆ ಅದೊಂದು ಮಧುರವಾದ ಪ್ರೀತಿಯ ಹಾಗೆ. ನಾನು ಎರಡನೆಯ ಕ್ಲಾಸಿನಲ್ಲಿರುವಾಗ ಮೊದಲ ಪ್ರೇಮಪತ್ರವನ್ನು ಬರೆದಿದ್ದೆ. ಆಕೆಗೀಗ ಮದುವೆಯಾಗಿದೆ. ಹಾಗಾಗಿ ಹೆಸರು ಹೇಳಲಾರೆ.

ರಾಕ್‌ಸ್ಟಾರ್ ರೋಹಿತ್ ಆಗಿ ನಾಲ್ಕೂವರೆ ವರ್ಷ ದುಡಿದಿದ್ದೇನೆ. ನನ್ನ ಕಾರ್ಯಕ್ರಮದ ನಿರೂಪಣೆ ಮಾತ್ರವಲ್ಲ, ಅದರ ನಿರ್ಮಾಪಕನೂ ನಾನೇ ಆಗಿದ್ದೇನೆ. ಹೊಸ ಆಲೋಚನೆ ಹಾಗೂ ಕಲ್ಪನೆಗಳಿಗೆ ಬಣ್ಣ ತುಂಬುವ ಕೆಲಸ ಆಗಾಗ ನಡೆಯುತ್ತಿರುತ್ತದೆ. ಉದಾಹರಣೆಗೆ `ಹೊಟ್ಟೆಗೆ ಹಿಟ್ಟಿಲ್ಲ  ಜುಟ್ಟಿಗೆ ಮಲ್ಲಿಗೆ ಹೂವು~ ಎಂಬ ಹಳೆ ಗಾದೆಯನ್ನು ಗಂಡ ಹೆಂಡತಿಗೆ ಅನ್ವಯಿಸಿ, `ಗಂಡನಿಗೆ ನಿಕ್ಕರ್ ಇಲ್ಲ ಅಂದರೂ ಹೆಂಡತಿಗೆ ಕುಕ್ಕರ್ ಬೇಕು~ ಎನ್ನುವ ಹೊಸ ಗಾದೆ ಹುಟ್ಟುಹಾಕಿ ಪ್ರೇಕ್ಷಕ ವರ್ಗವನ್ನು ನಗಿಸಲು ಪ್ರಯತ್ನಿಸುತ್ತೇನೆ.

ನನ್ನ ಕಾರ್ಯಕ್ರಮದಲ್ಲಿ ನಟಿಯರಾದ ರಮ್ಯಾ, ಪ್ರಿಯಾಮಣಿ ಜತೆ ಮಾಡಿದ ವಿಭಿನ್ನ ಸಂದರ್ಶನವು ಒಂದು ಹೊಸ ಕಲ್ಪನೆ. ಸಾಮಾನ್ಯವಾಗಿ ನಟನಟಿಯರ ಇಷ್ಟಕಷ್ಟಗಳನ್ನು ಆಧರಿಸಿ ಸಂದರ್ಶನದ ಪ್ರಶ್ನೆಯನ್ನು ಸಿದ್ದಪಡಿಸಲಾಗುತ್ತದೆ. ಆದಕ್ಕೆ ಭಿನ್ನವಾಗಿ ಅನೌಪಚಾರಿಕ ಮಾತಿನಲ್ಲೇ ಕಾಲೆಳೆಯುವ ಸಂದರ್ಶನ ನಡೆಸಿದ್ದೇನೆ.

ಅದರ ಉದ್ದೇಶವೇ ಅವರೂ ನಮ್ಮ ಹಾಗೇ ಎಂಬುದನ್ನು ತೋರಿಸುವುದು ಮತ್ತು ಅಭಿಮಾನಿಗಳು ಎಂದೂ ಕೇಳಲಾಗದ ಪ್ರಶ್ನೆಗಳನ್ನು ಕೇಳಬಹುದು ಎಂಬುದನ್ನು ಸಾಬೀತುಪಡಿಸುವುದು. ಯಾವಾಗಲೂ ಹೆಣ್ಣು ಮಕ್ಕಳನ್ನು ರೇಗಿಸುತ್ತಿರುತ್ತೇನೆ. ಈ ಜೀವನಕ್ಕೆ ಸ್ಫೂರ್ತಿಯೇ ಹೆಣ್ಣುಮಕ್ಕಳಲ್ಲವೇ?

ವಿದೇಶಿ ಎಫ್‌ಎಂ ಚಾನೆಲ್‌ಗಳನ್ನು ಆಲಿಸುವ ಮೂಲಕ ಹೊಸತನ್ನು ಕೊಡಲು ಪ್ರಯತ್ನಿಸುತ್ತಿರುತ್ತೇನೆ. ಇದರೊಂದಿಗೆ ವರ್ಷಕ್ಕೊಮ್ಮೆ ವಿದೇಶಗಳನ್ನು ಸುತ್ತುತ್ತೇನೆ. ಈಗಾಗಲೇ ಯುರೋಪ್ ಖಂಡದ ಬಹುತೇಕ ನಗರಗಳನ್ನು ನೋಡಿಯಾಗಿದೆ. ಇಲ್ಲಿನ ಅನುಭವಗಳು ಸಹ ನನ್ನ ವೃತ್ತಿ ಜೀವನಕ್ಕೆ ಬಹಳ ಪ್ರಯೋಜನಕಾರಿಯಾಗಿದೆ.

ಈ ಸಮಾಜಕ್ಕೆ ಏನಾದರೂ ಮಾಡಬೇಕು ಎಂಬ ತುಡಿತ ಜಾಸ್ತಿಯಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಎಫ್‌ಎಂ ಮೂಲಕ ಸಮಾನಾಸಕ್ತರನ್ನು ಸೇರಿಸಿ ಅನಾಥಶ್ರಮದ ಮಕ್ಕಳಿಗೆ ಸಹಾಯ ಮಾಡಬೇಕೆಂದಿದ್ದೇನೆ.

ಸದ್ಯಕ್ಕೆ ನನ್ನ ಮಾತಿಗೆ ಬ್ರೇಕ್ ಹಾಕಿದ್ದೇನೆ.. ಈಚೆಗೆಷ್ಟೆ ಬಿಡುಗಡೆಯಾದ ಹೊಚ್ಚ ಹೊಸ ಚಿತ್ರದ ಹಾಡು ಕೇಳ್ಕೊಂಡು ಬನ್ನಿ.. ಅಲ್ಲಿವರೆಗೆ... ಕೇಳ್ತಾನೆ ಇರಿ ನೋ ಟೆನ್ಷನ್... ರಾಕ್‌ಸ್ಟಾರ್ ರೋಹಿತ್ ಬಂದಿದ್ದಾನೆ...
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.