ADVERTISEMENT

‘ಹೆಮ್ಮೆಯ ಕನ್ನಡಿಗರು’ ಮತ್ತು ಸಿನಿಮಾ ಪ್ರೀತಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2018, 19:30 IST
Last Updated 25 ಮಾರ್ಚ್ 2018, 19:30 IST
‘ರತ್ನಮಂಜರಿ’ ಚಿತ್ರದಲ್ಲಿ ರಾಜ್‌ಚರಣ್‌ ಮತ್ತು ಅಖಿಲಾ ಪ್ರಕಾಶ್‌
‘ರತ್ನಮಂಜರಿ’ ಚಿತ್ರದಲ್ಲಿ ರಾಜ್‌ಚರಣ್‌ ಮತ್ತು ಅಖಿಲಾ ಪ್ರಕಾಶ್‌   

ಕರ್ನಾಟಕದಲ್ಲಿ ಸಿದ್ಧವಾದ ಚಿತ್ರಗಳು ವಿದೇಶದಲ್ಲಿ ಬಿಡುಗಡೆಯಾಗುವುದು, ಅಲ್ಲಿ ಉತ್ತಮ ಗಳಿಕೆ ಕಾಣುವುದು ಇವೆಲ್ಲವೂ ಇತ್ತೀಚೆಗೆ ಸಾಮಾನ್ಯ. ಆದರೆ ವಿದೇಶದಲ್ಲಿನ ಕನ್ನಡಿಗರೇ ಸೇರಿಕೊಂಡು ಒಂದು ಸಿನಿಮಾ ಮಾಡುತ್ತಿರುವುದು ಹೊಸ ವಿದ್ಯಮಾನ.

‘ರತ್ನಮಂಜರಿ’ಯ ನಿರ್ಮಾಪಕ ನಟರಾಜ್ ಹಳೆಬೀಡು 18 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದಾರೆ. ಈ ಚಿತ್ರದ ಕಥೆ ಬರೆದು ನಿರ್ದೇಶಿಸುತ್ತಿರುವ ಪ್ರಸಿದ್ಧ್ ಅವರು ಡೆನ್ಮಾರ್ಕ್ ನಿವಾಸಿ. ಅಷ್ಟೇ ಅಲ್ಲ, ರತ್ನಮಂಜರಿಯ ಮೊದಲರ್ಧ ಬರುವ ಪಾತ್ರಗಳಿಗೆಲ್ಲ ಅಮೆರಿಕದಲ್ಲಿನ ಅನಿವಾಸಿ ಕನ್ನಡಿಗರೇ ಜೀವ ತುಂಬಿದ್ದಾರೆ. ಈ ಎಲ್ಲರನ್ನೂ ಒಟ್ಟಾಗಿ ಸೇರಿಸಿದ ಒಂದು ಎಳೆ ಕನ್ನಡ!

ಇದು ಎನ್.ಆರ್.ಐಗಳ ಪ್ರಾಮಾಣಿಕ ಪ್ರಯತ್ನ ಎಂದು ಚಿತ್ರತಂಡವೇ ಹೇಳಿಕೊಂಡಿದೆ. ಚಿತ್ರದ ಟೀಸರ್ ಬಿಡುಗಡೆ ಸಂದರ್ಭದಲ್ಲಿ ತಂಡ ಪತ್ರಕರ್ತರ ಮುಂದೆ ಹಾಜರಾಗಿತ್ತು.

ADVERTISEMENT

‘ನಾವು ಪ್ರಪಂಚದ ಯಾವುದೇ ಭಾಗದಲ್ಲಿದ್ದರೂ ಕನ್ನಡಿಗರೇ ಆಗಿರುತ್ತೇವೆ. ಅಮೆರಿಕದಲ್ಲಿಯೂ ಸಾಕಷ್ಟು ಕನ್ನಡ ಚಟುವಟಿಕೆಗಳನ್ನು ನಡೆಸುತ್ತಿದ್ದೇವೆ. ಆದ್ದರಿಂದ ನಾವು ಹೆಮ್ಮೆಯ ಕನ್ನಡಿಗರು’ ಎಂದು ಹೇಳಿಕೊಂಡರು ನಿರ್ಮಾಪಕ ನಟರಾಜ್ ಹಳೆಬೀಡು.

2007-08ರಲ್ಲಿ ಅಮೆರಿಕದಲ್ಲಿ ನಡೆದ ಭಾರತೀಯನೊಬ್ಬನ ಕೊಲೆ ಪ್ರಕರಣವನ್ನು ಅವರು ನಿರ್ದೇಶಕರಿಗೆ ಹೇಳಿದ್ದರಂತೆ. ಅದನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಪ್ರಸಿದ್ಧ್ ಅಚ್ಚುಕಟ್ಟಾಗಿ ಚಿತ್ರಕಥೆ ಬರೆದಿದ್ದಾರೆ.

‘ಇದೊಂದು ಮರ್ಡರ್ ಮಿಸ್ಟರಿ. ಮೊದಲ ಸಿನಿಮಾವಾದ್ದರಿಂದ ಕನ್ನಡದ ಶೀರ್ಷಿಕೆಯೇ ಇರಬೇಕು ಎಂದುಕೊಂಡು ಈ ಹೆಸರಿಟ್ಟಿದ್ದೇವೆ. ದೇವರು- ದೆವ್ವ- ಅಪರಾಧ ಈ ಮೂರು ಅಂಶಗಳ ಸುತ್ತ ಕಥೆ ಹೆಣೆದಿದ್ದೇವೆ. ನೈಜ ಘಟನೆ ಒಂದು ಸ್ಫೂರ್ತಿ ಮಾತ್ರ. ಅದರಾಚೆ ಎಲ್ಲವೂ ಕಲ್ಪನೆ. ಅಮೆರಿಕದಲ್ಲಿ ಶುರುವಾದ ಕಥೆ ಕರ್ನಾಟಕದ ಕೂರ್ಗ್‌ಲ್ಲಿ ಕೊನೆಯಾಗುತ್ತದೆ. ಆದ್ದರಿಂದ ಅಮೆರಿಕದಲ್ಲಿ ಮೂರು ವಾರ ಮತ್ತು ಕೊಡಗಿನಲ್ಲಿ ಒಂದು ತಿಂಗಳು ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ' ಎಂದರು ಪ್ರಸಿದ್ಧ್.

ಹರ್ಷವರ್ಧನ್ ರಾಜ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರೀತಮ್ ತೆಗ್ಗಿನಮನೆ ಛಾಯಾಗ್ರಹಣವಿದೆ. ವಸಿಷ್ಠ ಸಿಂಹ ಚಿತ್ರದ ನಾಯಕ ರಾಜ್ ಚರಣ್ ಅವರನ್ನು ಪರಿಚಯಿಸಿದರೆ, ಕೆ. ಕಲ್ಯಾಣ್ ನಾಯಕಿ ಅಖಿಲಾ ಪ್ರಕಾಶ್ ಅವರನ್ನು ಪರಿಚಯಿಸಿದರು.

ರಾಜ್ ಚರಣ್, ನಾಗತಿಹಳ್ಳಿ ಅವರ ಟೆಂಟ್ ಸಿನಿಮಾದಲ್ಲಿ ನಟನೆಯ ತರಬೇತಿ ಪಡೆದವರು. ಅಖಿಲಾಗೆ ಇದು ನಾಯಕಿಯಾಗಿ ಎರಡನೇ ಸಿನಿಮಾ.

ಇನ್ನೊಬ್ಬ ನಿರ್ಮಾಪಕ ಸಂದೀಪ್ ಕುಮಾರ್ ಎಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.