ADVERTISEMENT

ಹೆಸರು ಸೌಂದರ್ಯ ಸಂಗೀತದ ಮಾಧುರ್ಯ

ರೋಹಿಣಿ ಮುಂಡಾಜೆ
Published 3 ಡಿಸೆಂಬರ್ 2013, 19:30 IST
Last Updated 3 ಡಿಸೆಂಬರ್ 2013, 19:30 IST

ಈ  ಹುಡುಗಿಗೆ ಸಂಗೀತವೆಂದರೆ ಆತ್ಮಾನುಸಂಧಾನವಂತೆ. ಸಂಗೀತವಿಲ್ಲದ ಬದುಕನ್ನು ಊಹಿಸಲೂ ಸಾಧ್ಯವಿಲ್ಲ ಎನ್ನುವ ಈಕೆ ಇನ್ನೂ ಪದವಿಯನ್ನೂ ಮುಗಿಸಿಲ್ಲ. ಆದರೆ ಆಗಲೇ ಹೊರತಂದಿರುವ ಆಲ್ಬಂ ರಾಕ್ ಮತ್ತು ಪಾಪ್ ಸಂಗೀತಪ್ರಿಯರ ಮನಗೆದ್ದಿದೆ. ಇದು ಸೌಂದರ್ಯ ಜಯಚಂದ್ರನ್ ಎಂಬ ಸಂಗೀತಾರಾಧಕಿಯನ್ನು ಹೀಗಂತ ಪರಿಚಯಿಸಬಹುದು.

ಹುಟ್ಟಿ ಬೆಳೆದದ್ದು ಮಸ್ಕತ್. ಎರಡು ವರ್ಷಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದ ಸೌಂದರ್ಯ, ಇಲ್ಲಿ ಪ್ರತಿದಿನವೆಂಬಂತೆ ನಡೆಯುವ ಸಂಗೀತ ಕಾರ್ಯಕ್ರಮಗಳನ್ನು ಕಂಡು ಕೇಳಿ ನಿಬ್ಬೆರಗಾಗಿದ್ದಾರೆ.

‘ಕರ್ನಾಟಕ ಸಂಗೀತದ ಕಡೆಗೆ ನನಗೆ ಒಲವಿತ್ತು. ಆದರೆ ಅಲ್ಲಿ ಅಷ್ಟೊಂದು ಅವಕಾಶಗಳು ಸಿಗಲಿಲ್ಲ. ನನ್ನ ಪಪ್ಪನ ಬಳಿ ಗಿಟಾರ್ ಇದೆ. ಚಿಕ್ಕಪ್ಪ–ದೊಡ್ಡಪ್ಪನ ಮಕ್ಕಳು ಪ್ರತಿಯೊಬ್ಬರೂ ಯಾವುದಾದರೊಂದು ಸಂಗೀತೋಪಕರಣ ಹೊಂದಿದ್ದಾರೆ. ಪಪ್ಪ ಗಿಟಾರ್ ಖರೀದಿಸುವಾಗ ನನಗೂ ಒಂದು ಇದ್ದರೆ ಚೆನ್ನಾಗಿತ್ತು ಅನಿಸಿತು. ಪಪ್ಪ ಕೊಡಿಸಿಯೇಬಿಟ್ಟರು.

ನಾನು ಹತ್ತನೇ ವಯಸ್ಸಿಗೆ ಗಿಟಾರ್ ಕಲಿಯತೊಡಗಿದೆ. ಜೊತೆಗೆ ಹಾಡುಗಾರಿಕೆಯೂ ನಡೆದಿತ್ತೆನ್ನಿ. ಆದರೆ ಹೆಣ್ಣು ಮಕ್ಕಳಿಗೆ ಮಸ್ಕತ್ತಲ್ಲಿ ಬೇಕೆಂದಾಗ ಸುತ್ತಾಡುವುದು ಕಷ್ಟ. ಹಾಗಿರುವಾಗ ಒಬ್ಬಳೇ ಸಂಗೀತ ಕಾರ್ಯಕ್ರಮ ಕೊಡುತ್ತೇನೆಂದು ಕನಸು ಕಾಣಲು ಸಾಧ್ಯವೇ? ನನ್ನ ಸಂಗೀತದ ಕನಸು ನನಸಾಗಿದ್ದೇ ಬೆಂಗಳೂರಿಗೆ ಬಂದ ಮೇಲೆ’ ಎಂದು ಮಸ್ಕತ್ ಮತ್ತು ಬೆಂಗಳೂರಿನ ಕಣ್ಣೊಳಗೆ ಸಂಗೀತ ಯಾನವನ್ನು ವಿಶ್ಲೇಷಿಸುತ್ತಾರೆ.

ಓದಿನೊಂದಿಗೆ ಸಂಗೀತ ಕಲಿಯುವುದು ಓಕೆ. ಆದರೆ 19ರಲ್ಲೇ ಆಲ್ಬಂ ಹೊರತರುವ ಸಾಹಸ ಮಾಡಿದ್ದೀರಲ್ಲ? ಓದಿಗೆ ತೊಂದರೆಯಾಗಲಿಲ್ಲವೇ ಎಂದು ಕೇಳಿದರೆ ನಗುತ್ತಾರೆ ಸೌಂದರ್ಯ.

‘ಏನಾದರೂ ಮಾಡಬೇಕು, ಸಾಧಿಸಬೇಕು ಅಂತ ಹೊರಟವರಿಗೆ ವಯಸ್ಸು ನಗಣ್ಯ. ನನ್ನ ವಯಸ್ಸಿಗೆ ಆಲ್ಬಂ ತರುವುದು ಕಷ್ಟದ ವಿಚಾರವೇನಲ್ಲ. ಪಪ್ಪ ಜಯಚಂದ್ರನ್, ಅಮ್ಮ ಗೀತಾ ಆಲ್ಬಂ ಹೊರತರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸು. ನೀನು ಮಾಡಬಲ್ಲೆ ಎಂದು ಆತ್ಮವಿಶ್ವಾಸ ತುಂಬುತ್ತಿದ್ದರು. ನನ್ನ ಸಂಗೀತ ನಿರ್ದೇಶಕರು ಚೆನ್ನೈನಲ್ಲಿದ್ದುದರಿಂದ ಅಲ್ಲಿಯೇ ಆಲ್ಬಂ ಬಿಡುಗಡೆ ಮಾಡಬೇಕಾಯಿತು. ಆದರೆ ಯೂಟ್ಯೂಬ್, ಐಟ್ಯೂನ್ಸ್ ಜಾಲಗಳಲ್ಲಿ ನನಗೆ ಸಿಕ್ಕಿರುವ ಶ್ರೋತೃಗಳ ಮೆಚ್ಚುಗೆ ನಂಬಲಿಕ್ಕೇ ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ.

ಎಲ್ಲೆಲ್ಲೂ ಸಂಗೀತವೇ!
ಬೆಂಗಳೂರು ಸಂಗೀತಪ್ರಿಯರಿಗೆ ಮತ್ತು ಸಂಗೀತ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕು ಅನ್ನುವವರಿಗೆ ಹೇಳಿಮಾಡಿಸಿದ ನಗರ ಎಂಬುದು ಸೌಂದರ್ಯ ಅಭಿಪ್ರಾಯ.

ಇಲ್ಲಿನ ಜನರು ಸಾಂಪ್ರದಾಯಿಕ ಮತ್ತು ಆಧುನಿಕ ಸಂಗೀತ ಪ್ರಕಾರಗಳನ್ನು ಆಸ್ವಾದಿಸುವ ರೀತಿ ಇಲ್ಲಿನ ವಾತಾವರಣದಷ್ಟೇ ಆಪ್ಯಾಯವಾಗಿದೆ. ನಾನು ಎರಡು ವರ್ಷದ ಹಿಂದೆಯಷ್ಟೇ ಇಲ್ಲಿಗೆ ಬಂದೆ. ಇನ್ನೂ ಸ್ವಲ್ಪ ಮುಂಚೆಯೇ ಬಂದಿದ್ದರೆ ಚೆನ್ನಾಗಿತ್ತಲ್ಲ ಅಂತ ಅನ್ನಿಸಿದ್ದೂ ಉಂಟು ಎನ್ನುವ ಸೌಂದರ್ಯ ಮೊನ್ನೆ ಶನಿವಾರವಷ್ಟೇ ವೈಟ್ ಫೀಲ್ಡ್ ರಸ್ತೆಯ ಫೀನಿಕ್ಸ್ ಮಾರ್ಕೆಟ್ ಸಿಟಿ ಮಾಲ್ ನಲ್ಲಿ ಕಾರ್ಯಕ್ರಮ ನೀಡಿದ ಖುಷಿಯಲ್ಲಿದ್ದಾರೆ.

ಶಾಪಿಂಗ್ ತಾಣವಾದ ಮಾಲ್, ಸಂಗೀತ ಕಾರ್ಯಕ್ರಮ ಆಯೋಜಿಸುವ ಮೂಲಕ ಸಂಗೀತಕ್ಕೂ ಮಾಲ್ ಸಂಸ್ಕೃತಿಗೂ ಹೊಸ ಆಯಾಮ ನೀಡಿದೆ ಎಂಬುದು ಅವರ ವಿಶ್ಲೇಷಣೆ.

ಅಂದ ಹಾಗೆ, ಚೆನ್ನೈನಲ್ಲಿ ಬಿಡುಗಡೆಯಾದ ಸೌಂದರ್ಯ ಅವರ ಆಲ್ಬಂ ಹೆಸರು ‘ಶೆಡ್ಸ್ ಆಫ್ ರಿವೈವಲ್’. ಚೆನ್ನೈನ ಅಮರಾಂತ ಎಂಟರ್ಟೈನ್ಮೆಂಟ್ ಸಂಸ್ಥೆ ಏರ್ಪಡಿಸಿದ್ದ ಆಲ್ಬಂ ಬಿಡುಗಡೆ ಕಾರ್ಯಕ್ರಮದಲ್ಲಿ ಸೌಂದರ್ಯ ಅವರ ಕಛೇರಿಯೂ ನಡೆದಿತ್ತು. ಪಾಶ್ಚಿಮಾತ್ಯ ಸಂಗೀತ ಕ್ಷೇತ್ರದಲ್ಲಿ ದಕ್ಷಿಣ ಭಾರತದಲ್ಲಿ ಹೆಸರು ಮಾಡಿರುವ ಬೇಸ್ ಗಿಟಾರಿಸ್ಟ್ ಕೊನಾರ್ಡ್ ಸೈಮನ್ಸ್, ಗಿಟಾರಿಸ್ಟ್ ವಿಕ್ರಂ ವಿವೇಕಾನಂದ, ಕೀಬೋರ್ಡ್ ಮಾಂತ್ರಿಕ ಎಂದೇ ಗುರುತಿಸಿಕೊಂಡಿರುವ ವಿವಿಯನ್ ಕುರುವಿಲ್ಲ ಹಾಗೂ ವಿನಯ್ ರಾಮಕೃಷ್ಣ ಡ್ರಮ್ಸ್ ಬಾರಿಸಿ ಸಾಥ್ ನೀಡಿದರು.

ಓದು ಮೊದಲು...
‘ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವುದು ಒಳ್ಳೆಯದು. ಅದಕ್ಕೆ ಮನೆಮಂದಿಯ ಪ್ರೋತ್ಸಾಹ ಖಂಡಿತಾ ಬೇಕು. ಶಾಲೆ/ಕಾಲೇಜುಗಳೂ ಪ್ರತಿಭೆಗಳನ್ನು ಪೋಷಿಸಬೇಕು. ಮೌಂಟ್ ಕಾರ್ಮೆಲ್ ಕಾಲೇಜು ಈ ನಿಟ್ಟಿನಲ್ಲಿ ಆದರ್ಶವಾಗಿ ಕಂಡುಬರುತ್ತದೆ. ನನ್ನ ಮೊದಲ ಆದ್ಯತೆ ಶಿಕ್ಷಣವೇ ಆದರೂ ಸಂಗೀತವೇ ನನ್ನ ಉಸಿರು.

ಓದಲು, ಬರೆಯಲು, ಅಭ್ಯಾಸ ಮಾಡಲು ದಿನದಲ್ಲಿ ಏಳರಿಂದ ಎಂಟು ಗಂಟೆ ಸಾಕು. ಅದರಲ್ಲೇ ಮುಳುಗಿರುವವಳು ನಾನಲ್ಲ. ಉಳಿದ ಸಮಯದಲ್ಲಿ ಸಂಗೀತದ ಆರಾಧನೆ ಮಾಡುತ್ತೇನೆ. ನನಗೆ ಅದುವೇ ದೇವರು. ಸಂಗೀತ ಕೇಳುವುದು, ಹಾಡುವುದು, ಕಲಿಯುವುದೆಂದರೆ ನನ್ನ ದೃಷ್ಟಿಯಲ್ಲಿ ಪೂಜೆಗೆ ಸಮಾನ’ ಎಂದು ಹಿರಿಯರಂತೆ ಮಾತಾಡುತ್ತಾರೆ.

ಕ್ರಿಸ್ಮಸ್ ಮತ್ತು ಹೊಸ ವರ್ಷ ಆಚರಣೆಗೆ ಕಾಲೇಜಿನ ಸಂಗೀತ ಮತ್ತು ಸಾಂಸ್ಕೃತಿಕ ಸಂಘದಲ್ಲಿ ತಯಾರಿ ನಡೆಯುತ್ತಿದೆ. ಹಬ್ಬದ ಹಿನ್ನೆಲೆಯಲ್ಲಿ ಒಂದಷ್ಟು ಹಾಡುಗಳನ್ನು ಹಾಡುತ್ತೇವೆ ಎಂದು ಉತ್ಸಾಹದ ಬುಗ್ಗೆಯಾಗುವ ಸೌಂದರ್ಯ ಅವರ ಸಂಗೀತ ಪಯಣಕ್ಕೆ ಬೆಂಗಳೂರು ಅತ್ಯುತ್ತಮ ನಿಲ್ದಾಣವಾಗಲಿದೆಯಂತೆ.

ಸೌಂದರ್ಯ ಅವರ ಆಲ್ಬಂನ ಹಾಡುಗಳು ಐಟ್ಯೂನ್ಸ್‌ನಲ್ಲಿಯೂ ಲಭ್ಯ.ಉಳಿದಂತೆ https://www.facebook.com/ soundarya.jayachandran.official www.youtube.com/user/avrillova94 ರಲ್ಲಿ ಕೇಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.